ಗುರುವಾರ , ನವೆಂಬರ್ 14, 2019
18 °C

ಮನ್ನಣೆಯ ದಾಹ

ಗುರುರಾಜ ಕರಜಗಿ
Published:
Updated:

ಇದೊಂದು ಪುಟ್ಟ ಕಥೆ.

ಹಿಂದೆ ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ವರ್ತಕರ ವಂಶದಲ್ಲಿ ಹುಟ್ಟಿ ಬೆಳೆದು ಬಹುದೊಡ್ಡ ವ್ಯಾಪಾರಿಯಾಗಿದ್ದ. ಅವನ ಅಂಗಡಿ ನಗರ ಮಧ್ಯದಲ್ಲೇ ಇದ್ದು ಅದರ ಮುಂದೆ ವಿಶಾಲವಾದ ಪ್ರದೇಶವಿತ್ತು. ಅಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಒಂದು ದಿನ ಬೋಧಿಸತ್ವನ ಅಂಗಡಿಯ ಮುಂದೆ ಒಂದು ಟಗರಿನ ಕಾಳಗ ನಡೆದಿತ್ತು. ಅವೆರಡೂ ಅತ್ಯಂತ ಬಲಿಷ್ಠವಾದ ಟಗರುಗಳು. ಬಹಳ ಕೋಪದಿಂದ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತಿದ್ದವು. ತಿರುಗಿ ತಿರುಗಿ ಬಂದು ತಲೆಗಳನ್ನು ಅಪ್ಪಳಿಸುತ್ತಿದ್ದವು. ಆ ಸಮಯಕ್ಕೆ ಅಲ್ಲಿಗೆ ಒಬ್ಬ ಸನ್ಯಾಸಿ ಬಂದ. ಕುತೂಹಲದಿಂದ ಟಗರು ಕಾಳಗವನ್ನು ನೋಡಲು ನಿಂತ. ಒಂದು ಹಂತದಲ್ಲಿ ಎರಡು ಟಗರುಗಳು ಹಿಂದೆ ಸರಿಯತೊಡಗಿದವು. ಸನ್ಯಾಸಿಗೆ ಬಹಳ ಸಂತೋಷವಾಯಿತು. ಇಷ್ಟು ಮಂದಿ ಇಲ್ಲಿ ನೆರೆದಿದ್ದಾರೆ, ಅವರಲ್ಲಿ ಯಾರಿಗೂ ನನ್ನ ಮಹಿಮೆ ಗೊತ್ತಾಗಲಿಲ್ಲ. ಆದರೆ ಪ್ರಾಣಿಗಳಾದ ಟಗರುಗಳಿಗೆ ನನ್ನ ಮಹಾತ್ಮೆ ತಿಳಿದಿದೆ. ಅವು ಹೇಗೆ ನನ್ನನ್ನು ನೋಡಿ ಗೌರವದಿಂದ ಹಿಂದೆ ಸರಿಯುತ್ತಿವೆ ಎಂದುಕೊಂಡು ಸಂತೋಷದಿಂದ ಅಲ್ಲಿಯೇ ಕಣ್ಣುಮುಚ್ಚಿಕೊಂಡು ನಿಂತುಕೊಂಡ. ಉಳಿದ ಜನ, ‘ಸ್ವಾಮೀ, ಬೇಗನೇ ಹಿಂದೆ ಸರಿಯಿರಿ’ ಎಂದು ಕೂಗಿಕೊಂಡರೂ ಕೇಳಿಸದಂತೆ ಹಾಗೆಯೇ ನಿಂತ.

ಬೋಧಿಸತ್ವನೂ ಕೂಗಿದ, ‘ಏ ಬ್ರಾಹ್ಮಣ, ಕ್ಷಣಮಾತ್ರದ ನಡೆಯಿಂದ ಈ ಪ್ರಾಣಿಗಳನ್ನು ನಂಬಬೇಡ. ಅವು ಓಡಿ ಬಂದು ನಿನ್ನನ್ನು ಗುದ್ದುವುದಕ್ಕೇ ಹಿಂದಕ್ಕೆ ಸರಿಯುತ್ತಿವೆ’ ಅವನು ಹೇಳುತ್ತಿರುವಂತೆಯೇ ಎರಡೂ ಟಗರುಗಳು ಅವನೆಡೆಗೆ ರಭಸದಿಂದ ನುಗ್ಗಿ ಬಂದು ತೊಡೆಗೆ ಗುದ್ದಿದವು. ಆತ ಕೆಳಗೆ ಬಿದ್ದು ನೋವಿನಿಂದ ಕಿರುಚಿಕೊಳ್ಳತೊಡಗಿದ. ಬ್ರಾಹ್ಮಣನ ತೊಡೆ ಮುರಿಯಿತು. ಅವನು ಹೊತ್ತು ತಂದಿದ್ದ ಪಾತ್ರೆ ಪಗಡಗಳು ಒಡೆದವು. ‘ನನಗೆ ಏಕೆ ಹೀಗೆ ಆಯಿತು?’ ಎಂದು ಕೇಳುತ್ತ ಅಳತೊಡಗಿದ.

ಬೋಧಿಸತ್ವ ಹೇಳಿದ, ‘ನಿಜವಾಗಿ ಬುದ್ಧಿವಂತನಾದವನು ಎಲ್ಲರಿಂದ ಮನ್ನಣೆಯನ್ನು ಅಪೇಕ್ಷಿಸುವುದಿಲ್ಲ. ಹಾಗೆ ಸಿಕ್ಕಸಿಕ್ಕವರಿಂದ ಗೌರವವನ್ನು ಅಪೇಕ್ಷಿಸುತ್ತ ಹೊರಟರೆ ದೊರೆಯುವುದು ಇಂತಹ ಆಘಾತವೇ’

ಈ ಮಾತು ನೆನಪಿದ್ದರೆ ಗೌರವದ, ಮನ್ನಣೆಯ ಅಪೇಕ್ಷೆ ಕಡಿಮೆಯಾದೀತು.

ಪ್ರತಿಕ್ರಿಯಿಸಿ (+)