ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಕಿಚ್ಚಿನ ಬವಣೆ

Last Updated 22 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ |
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ||
ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ |
ದಿಟ್ಟಿಸುತ ಕರುಬುವೆಯೋ – ಮಂಕುತಿಮ್ಮ || 200 ||

ಪದ- ಅರ್ಥ: ರಗಳೆ=ಗೋಳಾಟ, ಪೆರರ=ಮತ್ತೊಬ್ಬರ, ಕರುಬು= ಹೊಟ್ಟೆಕಿಚ್ಚು ಪಡು.
ವಾಚ್ಯಾರ್ಥ: ಹೊಟ್ಟೆಯೊಂದರ ಗೊಣಗಾಟ ಸಾಲದು ಎಂದೋ ಏನೋ ವಿಧಿ ನರನಲ್ಲಿ ಹೊಟ್ಟೆಕಿಚ್ಚಿನ ಕಿಡಿಯನ್ನು ನೆಟ್ಟಿದ್ದಾನೆ. ಹೊಟ್ಟೆ ತುಂಬಿದ ನಂತರ ತೋಳ ಮಲಗೀತೋ ಏನೋ ಆದರೆ ನೀನು ಮಾತ್ರ ಮತ್ತೊಬ್ಬರನ್ನು ಗಮನಿಸುತ್ತ ಹೊಟ್ಟೆಕಿಚ್ಚು ಪಡುತ್ತೀ.

ವಿವರಣೆ: ಮನುಷ್ಯನಿಗೆ ಮುಖ್ಯವಾಗಿ ಎರಡು ಸಮಸ್ಯೆಗಳು. ಮೊದಲನೆಯದು ಹೊಟ್ಟೆಯದು. ಹೊಟ್ಟೆಪಾಡಿಗೋಸ್ಕರ ಮನುಷ್ಯ ಮಾಡದ ಕೆಲಸವಿಲ್ಲ, ಪಡದ ಬವಣೆಯಿಲ್ಲ. ಭಾಗವತ ಹೇಳುವಂತೆ ‘ಮೃತವೃತ್ತಿ’ ‘ಪ್ರಮೃತ ವೃತ್ತಿ’, ‘ಸತ್ಯಾನೃತವೃತ್ತಿ’ ಹಾಗೂ ‘ಶ್ಪವೃತ್ತಿ’ಗಳಲ್ಲಿ ಹೊಟ್ಟೆಯನ್ನು ಕಾಪಾಡಿಕೊಳ್ಳುತ್ತೇವೆ. ತಿರಿದು ತಿನ್ನುವುದು, ದೈನ್ಯದ, ಅವಮಾನದ ಬದುಕು. ಅದು ಮೃತ ವೃತ್ತಿ. ಕಷ್ಟಪಟ್ಟು ದುಡಿದು ತಿನ್ನುವುದು ಪ್ರಮೃತ ವೃತ್ತಿ. ಸುಳ್ಳು-ಸತ್ಯಗಳ ಬೆರಕೆ ಮಾಡಿ, ಮೋಸಮಾಡಿ ಬದುಕುವುದು ಸತ್ಯಾನೃತ ವೃತ್ತಿ. ಹೊಟ್ಟೆಪಾಡಿಗಾಗಿ ಅಯೋಗ್ಯರಿಗೆ ಅಡ್ಡಬಿದ್ದು ಬದುಕುವುದು ನೀಚ ಸೇವೆ, ಅದೇ ನಾಯಿಬಾಳು, ಶ್ಪವೃತ್ತಿ.

ಹೇಗಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ ಮನುಷ್ಯ. ಆದರೆ ಇದಕ್ಕಿಂದ ದೊಡ್ಡದಾದ ಸಮಸ್ಯೆಯೊಂದಿದೆ. ಅದು ಹೊಟ್ಟೆಕಿಚ್ಚಿನ ಸಮಸ್ಯೆ. ಹೊಟ್ಟೆ ತುಂಬಿದಾಗ ದೇಹ ಸಾಕು ಎನ್ನುತ್ತದೆ, ಇನ್ನು ತಿನ್ನುವುದು ಅಸಾಧ್ಯ ಎನ್ನುತ್ತದೆ, ಸ್ವಲ್ಪ ಕಾಲವಾದರೂ ಸುಮ್ಮನಿರುತ್ತದೆ. ಆದರೆ ಮನಸ್ಸಿನಲ್ಲಿ ಇದೆಯಲ್ಲ ಆ ಹೊಟ್ಟೆಕಿಚ್ಚು, ಒಂದು ಕ್ಷಣವೂ ಮನುಷ್ಯನನ್ನು ಸುಮ್ಮನಿಡಗೊಡುವುದಿಲ್ಲ. ತನಗೆ ತೃಪ್ತಿಯಿದ್ದರೂ ಮತ್ತೊಬ್ಬರ ಸಂತೋಷವನ್ನು ಕಂಡಾಗ ಕುದಿದು ಹೋಗುತ್ತದೆ. ಪಕ್ಕದ ಮನೆಯ ಕಾರು ಕಂಡಾಗ ತನ್ನ ಕಾರು ಅವರದ್ದಕ್ಕಿಂತ ಎರಡು ಅಡಿ ಹೆಚ್ಚು ಉದ್ದವಿರಬೇಕೆಂದು ಬಯಸುತ್ತದೆ. ತಾನು ಚೆನ್ನಾಗಿದ್ದರೂ ಪಕ್ಕದವರು ಸಂತೋಷವಾಗಿದ್ದರೆ ಈತನ ಹೊಟ್ಟೆ ಉರಿಯುತ್ತದೆ.

ಒಬ್ಬ ದೊಡ್ಡ ರಾಜಕಾರಣಿ. ಆತ ಕಪ್ಪು, ಬಿಳುಪು ಮತ್ತೆಲ್ಲ ಬಣ್ಣದ ಅಪಾರ ಹಣವನ್ನು ಗಳಿಸಿ ಅರಮನೆಯಂಥ ಮನೆಯನ್ನು ಕಟ್ಟಿಕೊಂಡು ಬದುಕಿದ್ದ. ಅವನಿಗೆ ಭೋಗ ಜೀವನದ ಯಾವುದೇ ಕೊರತೆ ಇರಲಿಲ್ಲ. ಆದರೆ ಅವನಿಗಿದ್ದ ವಿಶೇಷ ತೊಂದರೆ ವಿಚಿತ್ರವಾದದ್ದು. ಆತ ತನ್ನ ಮನೆಯ ಮಾಳಿಗೆಯ ಮೇಲೆ ನಿಂತು ನೋಡಿದರೆ ಮನೆಯ ಹಿಂದಿದ್ದ ಸೇವಕರ ಮನೆಗಳು ಕಾಣುತ್ತವೆ. ಅಲ್ಲಿ ಅವನ ತೋಟದ ಕೆಲಸ ಮಾಡುವ ಮಾಲಿ ಮನೆಯ ಮುಂದೆ ಮಲಗಿ ಗೊರಕೆ ಹೊಡೆಯುವುದು ಕಾಣುತ್ತದೆ. ತಾನು ಅಷ್ಟು ಕೋಟಿ, ಕೋಟಿ ಗಳಿಸಿ, ಅಧಿಕಾರ ಪಡೆದು ಮೆರೆದರೂ ಅವನ ಹಾಗೆ ಗಾಢ ನಿದ್ರೆ ತನಗೆಂದೂ ಬಂದಿಲ್ಲ. ಅದು ಅವನ ಹೊಟ್ಟೆಯುರಿಗೆ ಕಾರಣ.

ಅದಕ್ಕೆ ಕಗ್ಗ ಹೇಳುತ್ತದೆ. ತೋಳ ಸದಾಕಾಲ ಆಹಾರವನ್ನು ಹುಡುಕುವ ಪ್ರಾಣಿ, ಹೊಟ್ಟೆ ತುಂಬಿದರೂ ನಾಳೆಗೋಸ್ಕರ ಆಹಾರವನ್ನು ಹುಡುಕಲು ತಡಕಾಡುವ ಪ್ರಾಣಿ. ಅಂಥ ಪ್ರಾಣಿಯೂ ಕೆಲವೊಮ್ಮೆ ತೃಪ್ತಿಯಿಂದಿರಬಹುದೇನೋ, ಆದರೆ ಮನುಷ್ಯ ಮಾತ್ರ ಮತ್ತೊಬ್ಬರನ್ನು ಕಂಡು ತನ್ನಲ್ಲಿರದ್ದನ್ನು ಅವರಲ್ಲಿ ಕಂಡು ಸಂಕಟಪಡುತ್ತಾನೆ.

ಹೊಟ್ಟೆಯ ಕಷ್ಟ ದೊಡ್ಡದು ನಿಜ ಆದರೆ ಹೊಟ್ಟೆಕಿಚ್ಚನ್ನು ನಿಭಾಯಿಸುವುದು, ನಿಗ್ರಹಿಸುವುದು ಇನ್ನೂ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT