ಶನಿವಾರ, ಜುಲೈ 2, 2022
20 °C

ಬೆರಗಿನ ಬೆಳಕು: ಬಾಳೊಂದು ಕಡೆಗೋಲು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಾಲ ಕಾಯಿಸಿ, ಹೆಪ್ಪನಿಕ್ಕಿ ಕಡೆದೊಡೆ, ಮೊದಲು |
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ||
ಬಾಳನೀ ಜಗದ ಮಂತುವು ಕಡೆಯಲೇಳುವುದು |
ಆಳದಿಂದಾತ್ಮಮತಿ – ಮಂಕುತಿಮ್ಮ || 615 ||

ಪದ-ಅರ್ಥ: ಹೆಪ್ಪನಿಕ್ಕಿ=ಹೆಪ್ಪನ್ನು+ಇಕ್ಕಿ(ಹಾಕಿ), ಮಂತು=ಕಡೆಗೋಲು, ಕಡೆಯಲೇಳುವುದು=
ಕಡೆಯಲು+ಏಳುವುದು, ಆಳದಿಂದಾತ್ಮಮತಿ=ಆಳದಿಂದ+ಆತ್ಮಮತಿ(ಆತ್ಮಪ್ರಜ್ಞೆ).

ವಾಚ್ಯಾರ್ಥ: ಹಾಲನ್ನು ಕಾಯಿಸಿ, ಹೆಪ್ಪು ಹಾಕಿ, ಕಡೆದಾಗ, ಮೊದಲು ಕಾಣದೇ ಇದ್ದ ಬೆಣ್ಣೆ ತೇಲಿ ಬರುತ್ತದೆ. ಅದರಂತೆ ನಮ್ಮ ಬದುಕನ್ನು ಪ್ರಪಂಚದ ಕಡೆಗೋಲು ಕಡೆದಾಗ, ಆಳದಿಂದ ಆತ್ಮಪ್ರಜ್ಞೆ ಎದ್ದು ಬರುತ್ತದೆ.

ವಿವರಣೆ: ಬದುಕಿಗಿಂತ ದೊಡ್ಡ ವಿಶ್ವವಿದ್ಯಾಲಯವಿಲ್ಲ. ಪ್ರತಿಕ್ಷಣ, ಪ್ರತಿ ಸಂದರ್ಭ, ನಮ್ಮ ಜೀವನಕ್ಕೊಂದು ಪಾಠ ಕಲಿಸುತ್ತದೆ. ಹತ್ತಾರು ಸಾವಿರ ಕೋಟಿ ಹಣ ಸಂಪಾದಿಸಿದ ‘ರೇಮಂಡ್ಸ್‌’ ಕಂಪನಿಯ ಮಾಲಿಕ ಈಗ ಒಂದು ಕೋಣೆಯ ಬಾಡಿಗೆಯ ಮನೆಯಲ್ಲಿದ್ದು, ಜೀವನ ನಡೆಸಲೂ ಆಗದಷ್ಟು ಕಡಿಮೆ ಹಣದಲ್ಲಿ ಬದುಕಲು ಒದ್ದಾಡುತ್ತಿದ್ದಾನೆ ಎಂದು ವಾರ್ತೆ ಕೇಳಿದೆವು. ಇದಕ್ಕೆ ಕಾರಣ, ಅವನ ಮಗನೇ ಅವನ ಸಮಸ್ತ ಆಸ್ತಿಯನ್ನು ತೆಗೆದುಕೊಂಡು ಹೊರಗೆ ಹಾಕಿರುವುದು. ಗಟ್ಟಿಯಾದ ಸಂಬಂಧ, ರಕ್ತ ಸಂಬಂಧವೇ ಆಗಬೇಕೆಂದಿಲ್ಲ. ಹಣ ಮುಂದೆ ಬಂದಾಗ ಅಂತಃಕರಣ ಶಿಲೆಯಾಗಿ ಹೋಗುತ್ತದೆ ಎಂದು ಈ ವಾರ್ತೆ ಕಲಿಸುತ್ತದೆ. ಇತ್ತೀಚಿಗೆ ಐಎಎಸ್ ಅಧಿಕಾರಿಯೊಬ್ಬರು ಸಮಸ್ಯೆಗಳ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರು. ಯಾಕೆ? ಅವರಿಗೆ ತರಬೇತಿ ದೊರೆತದ್ದೇ ಒತ್ತಡವನ್ನು ನಿಭಾಯಿಸಲು. ಅಂದರೆ ಎಷ್ಟೇ ತರಬೇತಿ ಸಿಕ್ಕರೂ ಅದು ಸ್ವಂತದ ವಿಷಯ ಬಂದಾಗ ಅರೆದು ಬಿಡುತ್ತದೆ.

ಎಷ್ಟು ಕಠೋರವಾದ ಗುರು ಈ ಬದುಕು! ಶಾಲೆಯಲ್ಲಿ ಗುರುಗಳು, ಕಲಿಯುವುದಿಲ್ಲವೆಂದು ವಿದ್ಯಾರ್ಥಿ ಹಟ ಮಾಡಿದರೆ, ಬಿಟ್ಟು ಬಿಡಬಹುದು. ಆದರೆ ಬದುಕಿನ ಗುರು ಬಿಡಲಾರ. ಹಿಡಿದು, ಎಳೆತಂದು ಪಾಠ ಕಲಿಸುತ್ತಾನೆ. ಶಿಕ್ಷಣದಲ್ಲಿ ಮೊದಲು ಕಲಿಸುತ್ತೇವೆ ಆಮೇಲೆ ಫಲಿತಾಂಶವನ್ನು ಕೊಡುತ್ತೇವೆ. ಆದರೆ ಬದುಕೆಂಬ ಶಿಕ್ಷಕ ಮೊದಲು ಪರಿಣಾಮ ತೋರಿಸಿ ಆಮೇಲೆ ಪಾಠ ಕಲಿಸುತ್ತಾನೆ. ಆತ ಅತ್ಯಂತ ಬೇಜಾರಿಲ್ಲದೆ ಕಲಿಸುತ್ತಾನೆ. ನಮ್ಮನ್ನು ಅಸಹಾಯಕರನ್ನಾಗಿ ಮಾಡಿ, ಮೂಗು ಹಿಡಿದು, ಬಾಯಿ ತೆರೆಸಿ, ತಲೆಗೊಂದು ಪೆಟ್ಟು ಕೊಟ್ಟು, ಕೆಲವೊಮ್ಮೆ ತಲೆ ಸವರಿ, ಮೃದು ಮಾತನ್ನಾಡಿ ಕಲಿಸುವ ಅವನ ಚಾಲಾಕಿತನ ಬೆರಗು ಹುಟ್ಟಿಸುತ್ತದೆ.

ಇವೆಲ್ಲ ಕಲಿಸಿದ ಪಾಠಗಳು, ವ್ಯಕ್ತಿ ಮಾಗುವ ಹೊತ್ತಿಗೆ, ಅವನಲ್ಲಿ ಒಂದಿಷ್ಟು ಮಾನವೀಯತೆ, ಒಂದು ಚೂರು ಪ್ರಬುದ್ಧತೆ, ಕರುಣೆಗಳನ್ನು ಉಕ್ಕಿಸುತ್ತವೆ. ಇನ್ನು ವಿಧೇಯ ವಿದ್ಯಾರ್ಥಿಗಳಿಗೆ ಅದು ಅವರನ್ನು ಅಂತರೀಕ್ಷಣೆ ಮಾಡುವಂತೆ ಹಚ್ಚಿ, ಅಧ್ಯಾತ್ಮಕತೆಯನ್ನು ಚಿಗುರಿಸುತ್ತದೆ, ಆತ್ಮಪ್ರಜ್ಞೆಯನ್ನು ಬೆಳೆಸುತ್ತದೆ. ಸದಾ ಅತೃಪ್ತಿ ಬೋಗಿಯಾಗಿದ್ದ ಯಯಾತಿ, ತನ್ನ ಮಗನಿಂದಲೇ ಯೌವನವನ್ನು ಪಡೆದರೂ ಸುಖಿಯಾಗದೆ, ಕೊನೆಗೆ, ಕಾಮದಿಂದ ಕಾಮವನ್ನು ಗೆಲ್ಲುವುದು ಸಾಧ್ಯವಿಲ್ಲ ಎಂದು ಎಲ್ಲವನ್ನು ತ್ಯಜಿಸಿ ಜ್ಞಾನ ಪಡೆದು, ಮುನಿಯಾದ. ದ್ವೇಷದ ದಳ್ಳುರಿಯಲ್ಲಿ ಬೆಂದ ಕೌಶಿಕ, ವಶಿಷ್ಠರ ಆಶ್ರಮವನ್ನು ಹಾಳು ಮಾಡಿ, ನೂರು ಮಕ್ಕಳನ್ನು ಕೊಂದು ವಿಜೃಂಭಿಸಿದರೂ, ಬದುಕು ನೀಡಿದ ಪಾಠದಿಂದ ತ್ರಿವಿಕ್ರಮನಾಗಿ ಬೆಳೆದು ಬ್ರಹ್ಮರ್ಷಿಯಾದ.

ಕಗ್ಗ ಅದನ್ನು ಚೆಂದನಾಗಿ ಹೇಳುತ್ತದೆ. ಜಗದ ಅನುಭವವೆಂಬ ಕಡೆಗೋಲು ನಮ್ಮ ಮನ, ಬುದ್ಧಿಗಳನ್ನು ಸತತವಾಗಿ ಕಡೆದು, ಆಳದಿಂದ ಆತ್ಮಪ್ರಜ್ಞೆ ಮೂಡುವಂತೆ ಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು