ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಾರ್ಥಕ ಬದುಕಿನ ಲಕ್ಷಣ

Last Updated 6 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಇರುವ ಕೆಲಸವ ಮಾಡು ಕಿರಿದೆನದೆ ಮನಸಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ⇒||601||

ಪದ-ಅರ್ಥ: ಕಿರಿದೆನದೆ=ಕಿರಿದು+ಎನದೆ, ದೊರೆತುದ=ದೊರೆತದ್ದು, ಹಸಾದವೆಂದುಣ್ಣು=ಹಸಾದವೆಂದು(ಪ್ರಸಾದವೆಂದು)+ಉಣ್ಣು, ಗೊಣಗಿಡದೆ=ಗೊಡಗಾಡದೆ. ಭರವ=ಭಾರವನ್ನು, ಬರಲ್=ಬರಲು.

ವಾಚ್ಯಾರ್ಥ: ನಿನಗೆ ದೊರೆತಿರುವ ಕೆಲಸವನ್ನು, ಸಣ್ಣದೆನದೆ ಮನಸ್ಸಿಟ್ಟು ಮಾಡು. ದೊರೆತದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸು, ಗೊಣಗಾಟ ಬೇಡ. ಜಗತ್ತಿನಲ್ಲಿ ಕೆಲಸದ ಭಾರವನ್ನು ಹೊತ್ತು ನಡೆ ಆದರೆ ಪರಮಾರ್ಥವನ್ನು ಮರೆಯಬೇಡ. ಕೊನೆಗೆ ‘ಸಾಕು ಬಾ’ ಎಂದು ಆತ ಕರೆ ನೀಡಿದಾಗ ಅಳದೆ, ಕೊರಗದೆ ಹೊರಟು ಬಿಡು.

ವಿವರಣೆ: ಆಶಾ ಕಂದಾರಾ ರಾಜಸ್ಥಾನದ ಜೋಧಪುರದಲ್ಲಿ ಹುಟ್ಟಿ ಬೆಳೆದ ಹುಡುಗಿ, ಮನೆಯಲ್ಲಿ ಬಡತನ. ಆಕೆಯ ಶಾಲೆಯ ಶಿಕ್ಷಣ ಮುಗಿದ ನಂತರ ಮದುವೆ ಮಾಡಿದರು. ಗಂಡ ಬೇಜವಾಬ್ದಾರಿ ಮನುಷ್ಯ. ಬೇಗ ಬೇಗನೆ ಎರಡು ಮಕ್ಕಳಾದವು. ಅವರನ್ನು ನೋಡಿಕೊಂಡು ಮನೆಯನ್ನು ನಡೆಸುವುದು ಕಷ್ಟವೆನ್ನಿಸಿತು ಆತನಿಗೆ. ಹೆಂಡತಿ ಮತ್ತು ಎರಡು ಮಕ್ಕಳನ್ನು ಬಿಟ್ಟು ಓಡಿಹೋದ. ಎಲ್ಲಿಗೆ ಹೋದನೋ? ಮನೆ ನಡೆಯಬೇಕಲ್ಲ? ಮಕ್ಕಳನ್ನು ಸಾಕುವುದಕ್ಕಾಗಿ ಆಶಾ ಕೆಲಸ ಮಾಡತೊಡಗಿದಳು. ಆಕೆಯ ಶಿಕ್ಷಣಕ್ಕೆ ಯಾವ ಕೆಲಸ ದೊರೆತೀತು? ಜೋಧಪುರ ನಗರಸಭೆಯಲ್ಲಿ ಸಫಾಯಿ ಕರ್ಮಾಚಾರಿಯಾಗಿ ಸೇರಿದಳು. ಕೈಯಲ್ಲಿ ಪೊರಕೆ ಹಿಡಿದು ದಿನನಿತ್ಯ ಜೋಧಪುರದ ರಸ್ತೆಗಳನ್ನು ಗುಡಿಸುವ ಕೆಲಸ. ಆಕೆಯ ತಂದೆಗೆ ಶಿಕ್ಷಣದ ಮಹತ್ವ ಗೊತ್ತು. ಆಕೆಯನ್ನು ಪ್ರೇರೇಪಿಸಿ ಸಂಜೆಯ ಕಾಲೇಜಿನಲ್ಲಿ ಪದವಿಯನ್ನು ಪಡೆದು, ರಾಜಸ್ಥಾನದ ಆಡಳಿತಾತ್ಮಕ ಪರೀಕ್ಷೆಯನ್ನು ಬರೆದು ಆಯ್ಕೆಯಾಗಿ, ಈಗ ಅದೇ ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾಳೆ. ಈಗ ನಿಮಗೆ ಹೇಗೆನ್ನಿಸುತ್ತದೆ ಎಂದು ಪರ್ತಕರ್ತರು ಕೇಳಿದಾಗ ಆಶಾಳ ಉತ್ತರ ಮನನೀಯವಾದದ್ದು. ‘ಯಾವ ಕೆಲಸವೂ ನೀಚವಲ್ಲ, ಯಾವ ಕೆಲಸವೂ ಉಚ್ಚವಲ್ಲ. ನಮ್ಮ ವಿದ್ಯಾರ್ಹತೆಗೆ, ಶಕ್ತಿಗೆ ತಕ್ಕಂಥ ಕೆಲಸಗಳು ದೊರೆಯುತ್ತವೆ. ಅವುಗಳನ್ನು ಏಕಮನಸ್ಸಿನಿಂದ, ಶ್ರದ್ಧೆಯಿಂದ ಮಾಡಿದರೆ ಹೆಚ್ಚಿನ ಅವಕಾಶಗಳು ದೊರೆತೇ ತೀರುತ್ತವೆ. ನನಗೆ ಮೊದಲು ವಿದ್ಯಾರ್ಹತೆ ಇರಲಿಲ್ಲ, ಕಸಗುಡಿಸುತ್ತಿದ್ದೆ. ಈಗ ಅದನ್ನು ಪಡೆದಿದ್ದೇನೆ. ಈ ಕೆಲಸವನ್ನೂ ಅಷ್ಟೇ ಆಸಕ್ತಿಯಿಂದ ಮಾಡುತ್ತೇನೆ’.

ಶ್ರದ್ದೆಯಿಂದ ದುಡಿಯಬೇಕು ದೊರೆತ ಕೆಲಸ ಚಿಕ್ಕದೆನ್ನದೆ ಶ್ರಮಿಸಬೇಕು. ಅದರ ಫಲವಾಗಿ ಬಂದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸಬೇಕು. ಅದರಲ್ಲಿ ಗೊಣಗಾಟ ಬೇಡ. ಹೆಚ್ಚಿನ ಫಲ ಬೇಕು ಎನ್ನುವುದಾದರೆ ಹೆಚ್ಚಿನ ಪರಿಶ್ರಮಕ್ಕೆ, ಸಾಧನೆಗೆ ಸಿದ್ಧರಿರಬೇಕು. ಕರ್ತವ್ಯವನ್ನು ನಡೆಸುತ್ತ, ಆಗ ಬಂದ ಕರ್ತವ್ಯಭಾರವನ್ನು ನಗುನಗುತ್ತ ಹೊರಬೇಕು. ಜೀವನದ ಭಾರವನ್ನು ಹೊರುತ್ತ ಕಳೆದುಹೋಗದೆ, ಪರಮಾರ್ಥವನ್ನು ನೆನೆಯಬೇಕು. ಈ ಬದುಕಿನಾಚೆನೂ ಒಂದು ಪ್ರಪಂಚವಿದೆ. ಇಲ್ಲಿ ಮಾಡಿದ ಒಳ್ಳೆಯ ಕಾರ್ಯ ಮುಂದೆ ಒಳ್ಳೆಯ ನೆಲೆಯನ್ನು ಕಲ್ಪಿಸುತ್ತದೆ. ಅದನ್ನೇ ಬಸವಣ್ಣನವರು, ‘ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು’ ಎಂದರು. ಕಗ್ಗ ಹೇಳುತ್ತದೆ, ಇಲ್ಲಿಯ ಬದುಕಿನ ಭರಾಟೆಯಲ್ಲಿ ಅಲ್ಲಿಗೆ ಸಲ್ಲುವುದರ ಬಗೆಗಿನ ಯೋಚನೆ ಮರೆಯದಿರಲಿ. ಪ್ರಪಂಚದಲ್ಲಿ ಸದಾ ಕಾಲ ದುಡಿಯುತ್ತಲೇ, ಅದಕ್ಕೆ ಅಂಟದಂತಿರಬೇಕು. ಪ್ರಪಂಚದ ಯಜಮಾನ ‘ಸಾಕು, ಬಾ ಇನ್ನು’ ಎಂದೊಡನೆ ಕೊರಗದೆ, ಅಳದೆ ಹೊರಡಲು ಸಿದ್ಧನಾಗಿರಬೇಕು. ದೊರೆತ ಕೆಲಸವನ್ನು ಮಾಡಿ, ಬಂದದ್ದನ್ನು ಪ್ರಸಾದವೆಂದು ಸ್ವೀಕರಿಸಿ, ಲೋಕದಲ್ಲಿ ಮತ್ತು ಪರಮಾರ್ಥದಲ್ಲಿ ಸಲ್ಲುವವರಾಗಿ, ನಗುನಗುತ್ತ ಪ್ರಪಂಚದಿಂದ ತೆರಳುವುದು ಸಾರ್ಥಕ ಬದುಕಿನ ಲಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT