ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಜೀವ-ಜಗತ್ತು-ದೈವ

Last Updated 5 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ⇒|| 600 ||

ಪದ=ಅರ್ಥ: ವಿಧಿಯದರ=ವಿಧಿ+ಅದರ, ಸಾಹೇಬ=ಯಜಮಾನ, ಪೇಳ್ದಂತೆ=ಹೇಳಿದಂತೆ, ಕಡೆಗೋಡು=ಕಡೆಗೆ+ಓಡು, ಕುಸಿಯೆ=ಕುಸಿದರೆ, ನೆಲವಿಹುದು=ನೆಲವು+ಇಹುದು.

ವಾಚ್ಯಾರ್ಥ: ಬದುಕೊಂದು ಜಟಕಾಬಂಡಿ ಇದ್ದಂತೆ. ವಿಧಿ ಅದರ ಯಜಮಾನ. ನೀನು ಆ ಬಂಡಿಯ ಕುದುರೆ. ಯಜಮಾನ ಹೇಳಿದಂತೆ ಪ್ರಯಾಣಿಕರು ಮದುವೆಗೋ ಮಸಣಕ್ಕೋ ಅವನು ಹೇಳಿದ ಕಡೆಗೆ ಓಡು. ಕಾಲು ಕುಸಿದರೆ ನೆಲವಿದೆ. ಭಯಬೇಡ.

ವಿವರಣೆ: ಇದೊಂದು ಅತ್ಯಂತ ಜನಪ್ರಿಯವಾದ, ಪ್ರಚಲಿತವಾದ ಚೌಪದಿ. ಭಾರತದ ಇಡೀ ಆಧ್ಯಾತ್ಮಿಕತೆಯನ್ನು ಎರಕ ಹೊಯ್ದಿರುವ ಕಗ್ಗ ಇದು.

ಪರಬ್ರಹ್ಮವೆನ್ನುವುದು ಕೇವಲ ಸತ್ವ. ಸತ್ ಎಂದರೆ ಎಂದಿಗೂ ವಿಕಾರವಾಗದೆ, ಸದಾಕಾಲ ಏಕರೂಪವಾಗಿರುವಂಥದ್ದು. ಅದು ಅನಂತವಾದದ್ದು, ಅಪಾರವಾದದ್ದು. ಆದ್ದರಿಂದ ಅದು ‘ಸರ್ವವ್ಯಾಪಿ’. ಈ ಬ್ರಹ್ಮಸತ್ವಕ್ಕೆ ಎರಡು ರೂಪಗಳು. 1.ವ್ಯಕ್ತರೂಪ 2.ಅವ್ಯಕ್ತರೂಪ. ವ್ಯಕ್ತರೂಪವೇ ಪ್ರಕೃತಿ ಅಥವಾ ಕಾರ್ಯಬ್ರಹ್ಮ. ಅವ್ಯಕ್ತರೂಪ ಕಾರಣ ಬ್ರಹ್ಮ. ಅದೇ ಪರಬ್ರಹ್ಮವಸ್ತು. ಅಂದರೆ, ಮೊದಲು ಒಂದೇ ಇದ್ದ ಆ ಪರಬ್ರಹ್ಮವಸ್ತು, ತನ್ನ ಒಂದಂಶವನ್ನು ತೋರಿಕೆಗೆ ಕಾಣುವಂತೆ ಮಾಡಿ ಪ್ರಕೃತಿಯಾಯಿತು. ಪ್ರಕೃತಿ ಎಂದರೆ ಪ್ರಕರ್ಷವಾದ ಕೃತಿ. ಹಾಗೆಂದರೆ ಅತ್ಯಂತ ವಿಸ್ತಾರವಾದ, ಉತ್ತಮವಾದ ಕೃತಿ. ಅದೇ ಜಗತ್ತು.

ಪರಬ್ರಹ್ಮ ಚೈತನ್ಯ ತನ್ನ ಇಚ್ಛೆಯಂತೆ ಕೋಟಿ ಕೋಟಿ ಕಿಡಿಗಳಲ್ಲಿ ಹೊಮ್ಮಿ ಜೀವಾತ್ಮವಾಯಿತು. ಆತ್ಮಕ್ಕೆ ದೇಹ, ಇಂದ್ರಿಯಗಳ ಉಪಾಧಿ ಸೇರಿದಾಗ ಜೀವವಾಗುತ್ತದೆ. ಜೀವದ ಅಂತರ್ಬೀಜ ಆತ್ಮ. ಹಾಗಾದರೆ ಮೂಲದಲ್ಲಿ ಒಂದೇ ಇದ್ದ ಪರಬ್ರಹ್ಮ ವಸ್ತು ಮೂರಾಯಿತು. ಒಂದು ಕಣ್ಣಿಗೆ ಕಾಣುವ ಜಗತ್ತು, ಮತ್ತೊಂದು ದೇಹ, ಇಂದ್ರಿಯಗಳನ್ನು ಹೊಂದಿ ಅನುಭವಿಸುವ ಜೀವ.

ಜೀವದಿಂದ ಜಗತ್ತು. ಜೀವಕ್ಕಾಗಿ ಜಗತ್ತು. ಜೀವವಿಲ್ಲದಿದ್ದರೆ ಜಗತ್ತೇ ಇಲ್ಲ. ಜಗತ್ತಿಲ್ಲದೆ ಜೀವವಿರುವುದು ಹೇಗೆ? ಹೀಗೆ ಜೀವ ಮತ್ತು ಜಗತ್ತುಗಳು ಪರಸ್ಪರ ಅನ್ಯೋನ್ಯಾಪೇಕ್ಷಿಗಳು. ಜೀವ, ಪ್ರಕೃತಿ ಸಾಮ್ರಾಜ್ಯದ ಪ್ರಜೆ. ಜೀವ ಮತ್ತು ಜಗತ್ತು ಎರಡೂ ಪರಬ್ರಹ್ಮ ಅಥವಾ ದೈವದ ಆಧೀನಗಳು. ಯಾಕೆಂದರೆ ಅವೆರಡೂ ಹುಟ್ಟಿದ್ದು ದೈವದಿಂದಲೇ. ಹೀಗೆ ದೈವ-ಜೀವ-ಜಗತ್ತು ಇವುಗಳ ತಿಳಿವಳಿಕೆಯೇ ಅಧ್ಯಾತ್ಮ.

ಈ ಕಗ್ಗ ಮೂರನ್ನು ಸುಂದರವಾಗಿ ಬೆಸೆದು ಹೇಳುತ್ತದೆ. ಜಟಕಾಬಂಡಿ ಜಗತ್ತು, ಜೀವ, ಕುದುರೆ. ಎರಡನ್ನೂ ಪೋಷಿಸುವ, ಅಂತೆಯೇ ನಿಗ್ರಹಿಸುವ ದೈವ, ಸಾಹೇಬ. ಜಟಕಾಬಂಡಿಯ ಪ್ರಯಾಣಿಕರು, ಜೀವನದ ಸುಖ, ದುಃಖಗಳು, ಅವು ಬರುವುದು ವಿಧಿಯ ಸಾಹೇಬನ ಪ್ರೇರಣೆಯಂತೆ. ಅವನು ನೀಡಿದಂತೆ ಸಂತೋಷವೋ (ಮದುವೆಯೋ), ದುಃಖವೋ (ಮಸಣವೋ) ನಮಗೆ ದಕ್ಕುತ್ತವೆ. ಅವುಗಳನ್ನು ಸ್ವೀಕರಿಸದೆ ನಮಗೆ ವಿಧಿಯಿಲ್ಲ.

ಆದರೆ ಕಗ್ಗ ಯಾವತ್ತಿಗೂ ಧನಾತ್ಮಕವಾದದ್ದು. ಜೀವಿ ಅಷ್ಟೆಲ್ಲ ಬಂಡಿಯ, ಬಂಡಿಯ ಯಜಮಾನನ, ನಿಯಂತ್ರಣಕ್ಕೆ ಒಳಪಟ್ಟವನಾದರೂ ಅವನಿಗೆ ತನ್ನ ಆತ್ಮೋದ್ಧಾರ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ‘ಉದ್ಧಕೇದಾತ್ಮನಾತ್ಮಾನಂ’ ವಾಕ್ಯದ ಅಂತರ್ಭಾವ ಅದು. ಮನುಷ್ಯ, ತನ್ನ ಭವಿಷ್ಯಾಧಿಕಾರಿ. ಅದಕ್ಕೇ ಕಾಲು ಕುಸಿದರೆ ಚಿಂತೆ ಬೇಡ; ನೆಲವಿದೆ ಎಂಬ ಧೈರ್ಯವನ್ನೂ ಕಗ್ಗ ನೀಡುತ್ತದೆ. ಯಾಕೆಂದರೆ ಅದು ಆತ್ಮಶಕ್ತಿಯ, ಸ್ವ ಉದ್ಧಾರದ ಸಾಧ್ಯತೆಯ ನೆಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT