ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಋಣಭಾರ ಕರಗುವಿಕೆ

Last Updated 17 ಅಕ್ಟೋಬರ್ 2022, 23:30 IST
ಅಕ್ಷರ ಗಾತ್ರ

ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ |

ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ||
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ |
ಹೊಂದು ವಿಶ್ವಾತ್ಮತೆಯ – ಮಂಕುತಿಮ್ಮ || 737 |

ಪದ-ಅರ್ಥ: ಎಂದಿಗಾನುಂ=ಎಂದಿಗಾದರೂ, ಲೆಕ್ಕನೊಂದಬೇಕೆಂದಿರ್ದೊಡೆಂದ=ಲೆಕ್ಕನು
+ಒಂದಬೇಕೆಂದಿರ್ದೊಡೆ(ಮುಗಿಸಬೇಕೆಂದಿದ್ದರೆ)+ಇಂದೆ, ಅಂದಿಸಿಕೊ=ಜೋಡಿಸಿಕೊ, ಹೆರರೆನಿಪರನು=ಹೆರರು(ಪರಕೀಯರು)+ಎನಿಪರನು(ಎನ್ನುವ ವರನ್ನು), ಹೃದಯವಿಸ್ತರದೆ=ಹೃದಯವೈಶಾಲ್ಯದಿಂದ.

ವಾಚ್ಯಾರ್ಥ: ಎಂದಿಗಾದರೂ ನಿನಗೆ ಪೂರ್ವಕರ್ಮಗಳ ಲೆಕ್ಕವನ್ನು ಮುಗಿಸಬೇಕು ಎಂದುಕೊAಡಿದ್ದರೆ, ಇಂದೇ ಮೊದಲ ಹೆಜ್ಜೆ ಇಡು. ಪರಕೀಯರು ಎನ್ನುವವರನ್ನೆಲ್ಲ ನಿನ್ನ ಬದುಕಿಗೆ ಹೊಂದಿಸಿಕೋ. ವಿಶ್ವಾತ್ಮತೆಯನ್ನು ಪಡೆ.

ವಿವರಣೆ: ನಮ್ಮೆಲ್ಲ ಶಾಸ್ತ್ರಗಳ ಸಾರಂಶವನ್ನು ಗಮನಿಸಿದರೆ, ಅವುಗಳ ಧ್ಯೇಯದ ಅಥವಾ ಗುರಿಯ ಮಾತನ್ನು ಹೀಗೆಂದು ಹೇಳಬಹುದು. “ಯಾವ ಮನುಷ್ಯನು ಸಮಸ್ತ ಜೀವಜಂತುಗಳೂ ತನ್ನೊಳಗೇ, ತನ್ನ ಅಂಶವಾಗಿಯೇ, ಸೇರಿಕೊಂಡಿವೆಯೆಂಬಂತೆ, ಅಭೇದ ಬುದ್ಧಿಯಿಂದ ನಡೆದುಕೊಳ್ಳುತ್ತಾನೋ ಮತ್ತು ಯಾರು ತನ್ನ ಒಳಗಿರುವ ಆತ್ಮವನ್ನೇ ಸಮಸ್ತ ಜೀವಜಂತುಗಳಲ್ಲಿಯೂ ಕಾಣುತ್ತ ಅವುಗಳ ಅನುಭವದಲ್ಲಿ ಸಹಭಾಗಿಯಾಗಿರುತ್ತಾನೋ, ಅವನಿಗೆ ಶೋಕವಿರದು, ಅವನನ್ನು ಪಾಪ ಸೋಕದು”. ಯಾಕೆ ಶಾಸ್ತ್ರಗಳು ಹೀಗೆ ಹೇಳುತ್ತವೆ? ನಮ್ಮ ಪರಂಪರೆಯಲ್ಲಿ ಒಂದು ನಂಬಿಕೆ ಇದೆ. ಅದೆಂದರೆ ಪ್ರತಿಯೊಬ್ಬ ಮನುಷ್ಯ ಒಂದು ಋಣದ ಹೊರೆಯನ್ನೇ ಹೊತ್ತು ಬಂದಿರುತ್ತಾನೆ. ಅದು ಪೂರ್ವಜನ್ಮದ ಕರ್ಮಫಲವೋ, ಈ ಜನ್ಮದಲ್ಲಿ ತಿಳಿದೋ, ತಿಳಿಯದೆಯೋ ಮಾಡಿದ ಕರ್ಮಫಲವೋ ಆಗಿದ್ದೀತು. ನಾವು ಆ ಋಣಭಾರವನ್ನು ಕಡಿಮೆಮಾಡಿಕೊಂಡಷ್ಟೂ ನಮಗೇ ಕ್ಷೇಮ. ಇದಕ್ಕಾಗಿ ಕಗ್ಗ ಒಂದು ಸೂತ್ರವನ್ನು ಹೇಳುತ್ತದೆ. ಋಣವನ್ನು ಕಳೆದುಕೊಳ್ಳುವ ಮೊದಲ ಹೆಜ್ಜೆಯೆಂದರೆ, ಹೃದಯ ವೈಶ್ಯಾಲತೆಯಿಂದ, ಬೇರೆಯವರು ಎನ್ನಿಸಿಕೊಳ್ಳುವ ಎಲ್ಲರನ್ನೂ, ನನ್ನವರೆಂದು ತಿಳಿದು ಸರ್ವಾತ್ಮತೆಯನ್ನು ಹೊಂದಬೇಕು. ನಮಗೆ ಇಂದು ಲಭ್ಯವಿರುವ ಜಲಮೂಲ, ಹಿರಿಯರು ಹುಡುಕಿದ್ದು, ನಮ್ಮ ಆಹಾರ ವಿಧಾನಗಳು, ಕೃಷಿಪದ್ಧತಿಗಳು, ಹಿಂದಿನಿಂದ ಬಂದವುಗಳು, ನಮಗೆ ದೊರಕಿದ ಜ್ಞಾನ ಹಿಂದಿನವರು, ಹಿರಿಯರು, ಜ್ಞಾನಿಗಳು ನೀಡಿದ ದಾನ. ಅಂದರೆ, ಇಂದು ನಾವು ನಮ್ಮದು ಎನ್ನುವುದೆಲ್ಲ ಬೇರೆಯವರ ಕೃಪೆ, ಕರುಣೆಯಿಂದ ದಕ್ಕಿದ್ದು. ಆ ಋಣ ನಮ್ಮ ಮೇಲೆ ಸದಾಕಾಲ ಇರುತ್ತದೆ.

ಅದನ್ನು ತೀರಿಸುವುದಕ್ಕೆ ಒಂದೇ ಹಾದಿಯೆಂದರೆ, ನಮಗೆ ದಕ್ಕಿದ್ದನ್ನು, ಪ್ರೀತಿಯಿಂದ, ಉದಾರತೆಯಿಂದ ಎಲ್ಲರಿಗೂ ಹಂಚಿಬಿಡುವುದು. ಅಗತ್ಯವಿರುವವರಿಗೆ ತನು, ಮನ, ಧನಗಳಿಂದ ನೀಡುತ್ತ ಬರಬೇಕು. ಅದಕ್ಕೆ, ಎಲ್ಲರೂ ನಮ್ಮವರೇ ಎಂಬ ವಿಶ್ವಾತ್ಮತೆಯ ಭಾವ ಬರಬೇಕು. ಹಾಗಾಗುವುದಕ್ಕೆ ಹೃದಯ ವಿಸ್ತಾರವಾಗಬೇಕು. ಹಾಗೆ ಸದಾಕಾಲ ಪ್ರಪಂಚಕ್ಕಾಗಿ ದುಡಿದ ಜನ ಋಣಕ್ಷಯಕ್ಕೆ ಮಾರ್ಗದರ್ಶಿಯಾಗಿದ್ದಾರೆ ವಿಜ್ಞಾನಿಗಳು, ಶ್ರೇಷ್ಠ ಎಂಜಿನಿಯರ್‌ಗಳು, ಸಂತರು, ಪ್ರಾಮಾಣಿಕ ರಾಜಕಾರಣಿಗಳು, ಸಮಾಜಸೇವಕರು, ಕಲಾವಿದರು ಇವರೆಲ್ಲ ಕೇವಲ ತಮ್ಮ ಸ್ವಾರ್ಥವನ್ನು ಗಮನಿಸದೆ ಪ್ರಪಂಚಕ್ಕೆ ಒಳ್ಳೆಯದಾಗಲಿ ಎಂದುದುಡಿದದ್ದು ಅವರ ಋಣಗಳ ಲೆಕ್ಕವನ್ನು ಕರಗಿಸುವ ಪ್ರಯತ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT