ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಜೀರ್ಣಿಸಲಾಗದ ಋಣ

Last Updated 5 ನವೆಂಬರ್ 2022, 6:20 IST
ಅಕ್ಷರ ಗಾತ್ರ

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |
ನಿನ್ನ ದುಡಿತದ ಬೆಮರೊ, ಪರರ ಕಣ್ಣೀರೋ? ||
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |
ಜೀರ್ಣಿಸದ ಋಣಶೇಷ – ಮಂಕುತಿಮ್ಮ || 748 ||

ಪದ-ಅರ್ಥ: ಅನ್ನುವುಣು ವಂದು=ಅನ್ನವ+ಉಣುವಂದು, ನೀರ್=ನೀರು, ತಿನಲಿತ್ತನಿತ=ತಿನಲು+ಇತ್ತ+ಅನಿತ (ಅಷ್ಟುಮಾತ್ರ), ಮಿಕ್ಕೂಟ=ಮಿಕ್ಕ+ಊಟ, ಜೀರ್ಣಿಸದ=ಜೀರ್ಣಿಸಿಕೊಳ್ಳಲಾಗದ.
ವಾಚ್ಯಾರ್ಥ: ಊಟ ಮಾಡುವಾಗ ಕೇಳಿಕೋ, ಆಹಾರವನ್ನು ಬೇಯಿಸಿದ ನೀರು ನಿನ್ನ ಬೆಮರಿನ ಫಲವೋ ಅಥವಾ ಪರರ ಕಣ್ಣೀರಿನಿಂದ ಬಂದದ್ದೋ. ನೀನು ಜಗತ್ತಿಗೆ ಎಷ್ಟು ನೀಡುತ್ತೀಯೋ ಅಷ್ಟನ್ನು ಮಾತ್ರ ತಿನ್ನಲು ಅರ್ಹನಾಗಿರುತ್ತೀ. ಹಾಗಲ್ಲದೆ ಪಡೆದ ಆಹಾರ ಎಂದೆಂದಿಗೂ ಜೀರ್ಣವಾಗದೆ ಉಳಿಯುವ ಋಣ.

ವಿವರಣೆ: ನನ್ನ ತಂದೆ ಸರ್ಕಾರಿ ಕೆಲಸದಿಂದ ನಿವೃತ್ತರಾಗುವ ಹೊತ್ತಿಗೆ ಇಲಾಖೆಯ ಅತ್ಯುನ್ನತ ಸ್ಥಾನದಲ್ಲಿದ್ದರು. ಆದರೂ ಕಚೇರಿಗೆ ತಮ್ಮ ಹಳೆಯ ಸ್ಕೂಟರ್‌ನಲ್ಲಿಯೇ ಹೋಗುತ್ತಿದ್ದರು. ಒಂದು ಬಾರಿ ಮುಖ್ಯ ಕಾರ್ಯದರ್ಶಿಯವರು ಫೋನ್ ಮಾಡಿ, ‘ಏನು? ನೀವು ನಿತ್ಯ ಸ್ಕೂಟರಿನಲ್ಲಿಯೇ ಆಫೀಸಿಗೆ ಹೋಗುತ್ತೀರಂತೆ? ಯಾಕೆ, ನಿಮಗೆ ಮೂರು ಕಾರುಗಳಿವೆಯಲ್ಲ?’ ಎಂದು ಕೇಳಿದಾಗ ನನ್ನ ತಂದೆ, ‘ಸರ್, ಆ ಕಾರುಗಳನ್ನು ಕರ್ತವ್ಯದ ಮೇಲೆ ಪ್ರವಾಸ ಮಾಡುವುದಕ್ಕೆ ಕೊಟ್ಟದ್ದು, ನಾನು ಮನೆಯಿಂದ ಆಫೀಸಿಗೆ ಹೋಗಿ ಬರಲು ನನಗೆ ಸರ್ಕಾರ ಸಂಬಳ ಕೊಟ್ಟಿದೆ. ಅಷ್ಟು ಸಾಕು’ ಎಂದರು. ಅವರು ನಿವೃತ್ತರಾಗುವವರೆಗೂ ನಮಗೊಂದು ಮನೆಯಾಗಲೀ, ಸೈಟಾಗಲೀ ಇರಲಿಲ್ಲ. ಅದು ಬೇಕು ಎಂದು ನಮಗಾರಿಗೂ ಅನ್ನಿಸಿರಲಿಲ್ಲ. ಅವರು ನಿವೃತ್ತರಾದ ಆರೇಳು ವರ್ಷಗಳ ನಂತರ ಅವರ ಸ್ಥಾನಕ್ಕೆ ಬಂದ ಹಿರಿಯರೊಬ್ಬರು ಕಷ್ಟಪಟ್ಟು, ಹುಡುಕಿಕೊಂಡು, ದೂರದಲ್ಲಿದ್ದ ನಮ್ಮ ಪುಟ್ಟ ಮನೆಗೆ ಬಂದಿದ್ದರು. ‘ಏನು ಸಾರ್, ಇಷ್ಟು ದೂರದಲ್ಲಿ, ಇಷ್ಟು ಸಣ್ಣ ಮನೆ ಕಟ್ಟಿಸಿದ್ದೀರಿ? ಜಯನಗರದಲ್ಲೋ, ರಾಜಾಜಿನಗರದಲ್ಲೋ ದೊಡ್ಡ ಮನೆ ಕಟ್ಟಿಸಬಾರದಿತ್ತೇ?’ ಎಂದು ಕೇಳಿದಾಗ ನನ್ನ ತಂದೆ, ‘ಕಟ್ಟಿಸಬಹುದಿತ್ತಪ್ಪ, ಆದರೆ ನನ್ನ ಬಳಿ ಅಷ್ಟು ಹಣ ಇರಲಿಲ್ಲ’ ಎಂದರು. ಅದಕ್ಕೆ ಆ ಹಿರಿಯರು ಸೂಚ್ಯವಾಗಿ ನಕ್ಕು, ‘ಸರ್, ನೀವು ಮನಸ್ಸು ಮಾಡಿದ್ದರೆ ಎಷ್ಟು ಹಣ ಮಾಡಬಹುದಿತ್ತು! ನೀವು ಮಾಡಿಕೊಳ್ಳಲಿಲ್ಲ ಅಷ್ಟೇ’ ಎಂದು ನುಡಿದರು. ನಮ್ಮ ತಂದೆಯವರು ಏನು ಹೇಳುತ್ತಾರೆ ಎಂಬುದನ್ನು ನಾನು ಕುತೂಹಲದಿಂದ ಕೇಳುತ್ತಿದ್ದೆ. ಒಂದು ಕ್ಷಣವೂ ಯೋಚಿಸದೆ ತಂದೆ ಹೇಳಿದರು, ‘ಮಾಡಬಹುದಿತ್ತಪ್ಪ, ಬೇಕಾದಷ್ಟು ಮಾಡಬಹುದಾಗಿತ್ತು, ಆದರೆ ನನ್ನ ಮಗ ಹುಚ್ಚನಾಗುತ್ತಿದ್ದ!’ ಇದೆಂಥ ಮೌಲ್ಯಪ್ರಜ್ಞೆ! ತಾನು ಮಾಡಿದ ಅನ್ಯಾಯದ ಗಳಿಕೆಗೆ ತಾನು ಮಾತ್ರವಲ್ಲ, ತನ್ನ ಪರಿವಾರ ಕೂಡ ಶಿಕ್ಷೆಪಡಬೇಕಾಗುತ್ತದೆ ಎಂಬ ನಂಬಿಕೆ ಅದು!

ಕಗ್ಗ ಹೇಳುವುದು ಅದನ್ನೇ. ಊಟ ಮಾಡು ವಾಗ ಒಂದು ಕ್ಷಣ ಯೋಚಿಸಬೇಕು. ನನ್ನ ಅನ್ನ ದೊರೆತಿರುವುದು ನನ್ನ ಪ್ರಾಮಾಣಿಕವಾದ ದುಡಿತದ ಫಲವೇ ಅಥವಾ ಪರರಿಗೆ ಅನ್ಯಾಯ ಮಾಡಿ, ಲಂಚದಿಂದ, ಮೋಸದಿಂದ, ಗಳಿಸಿದ ಹಣದಿಂದ ಬಂದದ್ದೇ? ಅನ್ಯಾಯದಿಂದ ಬಂದ ಹಣ ಪರರ ಕಣ್ಣೀರಿನ, ಶಾಪದ ಫಲ. ನಾನು ಜಗತ್ತಿಗೆ ಪ್ರಾಮಾಣಿಕತೆಯಿಂದ ಏನನ್ನು ಕೊಡುತ್ತೇನೋ ಅಷ್ಟನ್ನು ಮಾತ್ರ ಪಡೆಯುವ ಅರ್ಹತೆ ನನಗಿದೆ. ಅದಲ್ಲದೆ ಕುಟಿಲೋಪಾಯಗಳಿಂದ ಬಂದ ಹಣ ವಿಷವಿದ್ದಂತೆ. ಅದು ಜೀರ್ಣಿಸಲಾಗದ ಋಣಶೇಷ. ಲಂಚ ಕೊಡುವವರು ಯಾರಾದರೂ ಶುಭ ಹಾರೈಸಿ ಕೊಡುತ್ತಾರೆಯೆ? ಹಾಳಾಗಿ ಹೋಗು ಎಂದು ಶಾಪ ಹಾಕಿ ಕೊಡುತ್ತಾರೆ. ಪ್ರಾಮಾಣಿಕವಾಗಿ ದುಡಿದ ಹಣವನ್ನೇ ಅರಗಿಸಿಕೊಳ್ಳಲು ಕಷ್ಟವಾಗಿರುವಾಗ ಶಾಪದ ಹಣ ಒಳ್ಳೆಯದನ್ನು ಮಾಡೀತೇ? ತಿಂದ ಪಾಪದ ಹಣ ಅದರ ಅನೇಕ ಪಟ್ಟನ್ನು ಕಕ್ಕಿಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT