ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಗು | ತಿರುಗು ಬಾಣ

Last Updated 27 ಜುಲೈ 2020, 20:48 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನಿಗೊಬ್ಬ ಪುರೋಹಿತನಿದ್ದ. ಆತ ಕಪ್ಪು ಬಣ್ಣದವನಾಗಿದ್ದ. ಅವನ ಮುಂದಿನ ಎರಡು ಹಲ್ಲುಗಳು ತುಟಿ ಮೀರಿ ಮುಂದೆ ಚಾಚಿದ್ದವು. ಅವನ ಹೆಂಡತಿ ಅನಾಚಾರಿ. ಆಕೆ ಮತ್ತೊಬ್ಬ ಬ್ರಾಹ್ಮಣನೊಡನೆ ಅನಾಚಾರ ಮಾಡಿದಳು. ಅವನೂ ಕೂಡ ಆಕೆಯ ಗಂಡನಂತೆ ಕಪ್ಪು ಬಣ್ಣದವ ಮತ್ತು ಅವನ ಎರಡು ಹಲ್ಲುಗಳು ಮುಂದೆ ಚಾಚಿಕೊಂಡಿದ್ದವು. ಹೆಂಡತಿಯ ನಡತೆಯನ್ನು ತಡೆಯಲಾರದೆ ಆತ ತನ್ನ ಶತ್ರುವಾದ ಇನ್ನೊಬ್ಬ ಬ್ರಾಹ್ಮಣನನ್ನು ಕೊಲ್ಲಿಸಬೇಕೆಂದು ಯೋಜನೆ ಮಾಡಿದ.

ಮರುದಿನ ರಾಜನ ಬಳಿಗೆ ಹೋಗಿ, ‘ರಾಜಾ, ತಾವು ಅತ್ಯಂತ ಸಮರ್ಥರು. ತಮ್ಮ ಸಾಮರ್ಥ್ಯದಂತೆ ಇಡೀ ಭೂಮಂಡಲವನ್ನೇ ಅಳಬೇಕು. ಆದರೆ ನಮ್ಮ ನಗರದ ದಕ್ಷಿಣದ ದ್ವಾರದ ವಾಸ್ತು ಸರಿಯಾಗಿಲ್ಲ. ಅದನ್ನು ಸರಿ ಮಾಡಿದರೆ ತಮ್ಮ ಏಳ್ಗೆ ತುಂಬ ಹೆಚ್ಚಾಗುತ್ತದೆ’ ಎಂದು ಹೇಳಿದ. ‘ಹಾಗಾದರೆ ನಾನು ಏನು ಮಾಡಬೇಕು?’ ಎಂದು ರಾಜ ಕೇಳಿದ. ಪುರೋಹಿತ, ‘ಸ್ವಾಮೀ, ಹಳೆಯ ದ್ವಾರವನ್ನು ಕೀಳಿಸಬೇಕು. ನಂತರ ಮಂಗಳಕರವಾದ ಮರದಿಂದ ಹೊಸ ದ್ವಾರವನ್ನು ನಿರ್ಮಿಸಿ, ಭೂತಬಲಿ ಕೊಟ್ಟು, ಮಂಗಳ ನಕ್ಷತ್ರದಲ್ಲಿ ಅದನ್ನು ಕೂಡ್ರಿಸಬೇಕು’ ಎಂದು ಸಲಹೆ ಕೊಟ್ಟ. ರಾಜ ಅದರಂತೆಯೇ ಆಗಲಿ ಎಂದು ಅಪ್ಪಣೆ ಮಾಡಿದ. ಕಾರ್ಯ ನಡೆಯಿತು. ಪುರೋಹಿತನೇ ಸರಿಯಾದ ಮುಹೂರ್ತವನ್ನಿಟ್ಟ. ಅದು ಮರುದಿನವೇ ಬೆಳಿಗ್ಗೆ ಹತ್ತು ಗಂಟೆಗೆ ಎಂದು ತೀರ್ಮಾನವಾಯಿತು.

ಅಂದು ಮನೆಯಲ್ಲಿ ಹೆಂಡತಿಯೊಂದಿಗೆ ಜಗಳವಾಡಿದ ಪುರೋಹಿತ, ‘ನಾಳೆ ನೋಡು ಏನಾಗುತ್ತದೆ. ನಿನ್ನ ಗೆಳೆಯ ಇದ್ದಾನಲ್ಲ ಅವನನ್ನು ಕೊಲ್ಲಿಸಿ ಬಲಿಕೊಟ್ಟು ಬಿಡುತ್ತೇನೆ’ ಎಂದ. ‘ಬಲಿ ಯಾರನ್ನಾದರೂ ಕೊಡಬಹುದಲ್ಲ, ಅವನೇ ಏಕೆ?’ ಎಂದು ಕೇಳಿದಳು ಹೆಂಡತಿ. ಪುರೋಹಿತ ಬಡಬಡಿಸಿದ, ‘ನಾಳೆ ಒಬ್ಬ ಕಪ್ಪು ಬಣ್ಣದ, ಹಲ್ಲು ಮುಂದೆ ಚಾಚಿರುವ ಬ್ರಾಹ್ಮಣನನ್ನೇ ಬಲಿ ಕೊಡಬೇಕೆಂದು ರಾಜನಿಗೆ ಸೂಚಿಸಿದ್ದೇನೆ. ಅದರಂತೆ ನಿನ್ನ ವಿಟಿನ್ನು ಬಲಿ ಹಾಕಿಬಿಡುತ್ತೇನೆ’. ಹೆಂಡತಿ ಬುದ್ಧಿವಂತೆ. ಅಂದೆಯೇ ತನ್ನ ಗೆಳೆಯನ ಬಳಿಗೆ ಹೋಗಿ, ‘ರಾಜ ನಾಳೆ ಕಪ್ಪು ಬಣ್ಣದ, ಹಲ್ಲು ಮುಂದೆ ಚಾಚಿರುವ ಬ್ರಾಹ್ಮಣನನ್ನು ಬಲಿ ಕೊಡುತ್ತಾರಂತೆ. ಓಡಿಹೋಗಿ ತಪ್ಪಿಸಿಕೋ’ ಎಂದು ಹೇಳಿ ಬಂದಳು.

ಪುರೋಹಿತನ ಸಲಹೆಯಂತೆ ರಾಜ ತನ್ನ ನಾಡಿನಲ್ಲಿ ಈ ಲಕ್ಷಣಗಳನ್ನುಳ್ಳ ಬ್ರಾಹ್ಮಣನನ್ನು ಬಲಿಗಾಗಿ ಹಿಡಿದುಕೊಂಡು ಬರಲು ಆಜ್ಞೆ ಮಾಡಿದ. ಆದರೆ ಅಂಥವರು ಒಬ್ಬರೂ ಸಿಗಲಿಲ್ಲ. ಎಲ್ಲರೂ ಹಿಂದಿನ ರಾತ್ರಿಯೇ ನಗರವನ್ನು ಬಿಟ್ಟು ಓಡಿ ಹೋಗಿದ್ದರು. ಏನು ಮಾಡುವುದೆಂಬ ಚಿಂತೆಯಲ್ಲಿದ್ದಾಗ ಮಂತ್ರಿಗಳು ಹೇಳಿದರು, ‘ಸ್ವಾಮಿ, ಮುಹೂರ್ತವನ್ನು ಮೀರಲಾಗುವುದಿಲ್ಲ. ಈಗ ನಮ್ಮ ನಾಡಿನಲ್ಲಿ ಈ ಲಕ್ಷಣಗಳನ್ನುಳ್ಳವರು ಪುರೋಹಿತರು ಮಾತ್ರ. ಅವರನ್ನೇ ಬಲಿ ಕೊಡಬೇಕಾಗುತ್ತದೆ‘. ರಾಜ, ‘ಹಾಗಾದರೆ ನಮಗೆ ಪುರೋಹಿತರು ಯಾರು?’ ಎಂದು ಕೇಳಿದ. ‘ಸ್ವಾಮಿ, ಪುರೋಹಿತರ ಶಿಷ್ಯ ಸಕಲ ವಿದ್ಯಾಪಾರಂಗತನಾಗಿದ್ದಾನೆ. ಅವನನ್ನೇ ಪುರೋಹಿತನನ್ನಾಗಿ ಮಾಡಿಕೊಳ್ಳಬಹುದು’ ಎಂದು ಸಲಹೆ ನೀಡಿದರು. ರಾಜ ಅನುಮತಿ ಕೊಟ್ಟ. ಸರಿಯಾದ ಮುಹೂರ್ತದಲ್ಲಿ ಪುರೋಹಿತನ ಬಲಿಕೊಟ್ಟು ದಕ್ಷಿಣದ ದ್ವಾರವನ್ನು ಕೂಡ್ರಿಸಿದರು.

ಮತ್ತೊಬ್ಬರನ್ನು ಬಲಿ ಹಾಕಲು ಮಾಡಿದ ಕಪಟ ಯೋಜನೆ ತಮ್ಮ ಬುಡಕ್ಕೇ ನೀರು ತರುತ್ತದೆಂಬುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT