ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಕ್ಲಿಷ್ಟ ಕರ್ಮಿಗಳು

Last Updated 10 ಜುಲೈ 2022, 19:30 IST
ಅಕ್ಷರ ಗಾತ್ರ

ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು |
ಕಡಿದಲ್ಲವರ್ಗೆ ಬಾಳ್ – ಮಂಕುತಿಮ್ಮ || 668 ||

ಪದ-ಅರ್ಥ: ಕರ್ಮಿಗರೇನು=ಕರ್ಮಿಗಳು(ಕುಶಲಕರ್ಮಿಗಳು)+ಏನು, ಮುಡಿಪವರ=ಮುಡಿಪು+ಅವರ, ಬಣಗು=ಬಣ, ವ್ಯರ್ಥವಾದ, ಹಂಗಿರದು=ಹಂಗು+ಇರದು, ಕಡಿದಲ್ಲವರ್ಗೆ=ಕಡಿದಲ್ಲ(ಕಷ್ಟವಲ್ಲ)+ಅವರ್ಗೆ(ಅವರಿಗೆ)

ವಾಚ್ಯಾರ್ಥ: ಬಡಗಿ, ಕೃಷಿಕ, ಕುಶಲಕರ್ಮಿಗಳು ಎಲ್ಲರೂ ಯೋಗಿಗಳೇ? ಅವರ ಮನಸ್ಸು ಪೂರ್ತಿ ಮಾಡುವ ಕೆಲಸಕ್ಕೆ ಮುಡಿಪಾಗಿದೆ. ವ್ಯರ್ಥ ಚಿಂತೆಗಳಿಗೆ ಅವರಲ್ಲಿ ಸಮಯವಿಲ್ಲ. ಅವರ ಊಟಕ್ಕೆ ಯಾರ ಹಂಗೂ ಇರುವುದಿಲ್ಲ. ಅಂಥವರಿಗೆ ಬದುಕು ಕಷ್ಟವಾದದ್ದಲ್ಲ.

ವಿವರಣೆ: ರಷ್ಯಾದ ರಾಜಧಾನಿ ಮಾಸ್ಕೋದ ಹೊರವಲಯದಲ್ಲಿ ಒಂದು ದೊಡ್ಡ ಫ್ಯಾಕ್ಟರಿ. ಅದರ ಸುತ್ತಮುತ್ತ ಅಲ್ಲಿ ಕೆಲಸ ಮಾಡುವ ಕೆಲಸಗಾರರ ಮನೆಗಳು. ಅಲ್ಲೊಬ್ಬ ಚಮ್ಮಾರ. ಆತನಿಗೆ ಬೆಳಗ್ಗಿನಿಂದ ರಾತ್ರಿಯವರೆಗೆ ಕೆಲಸ. ಫ್ಯಾಕ್ಟರಿ ಕೆಲಸಕ್ಕೆ ಹೋಗುವ ಕೆಲಸಗಾರರ ಬೂಟುಗಳನ್ನು ರಿಪೇರಿಮಾಡಬೇಕು. ಬೂಟುಗಳಿಲ್ಲದೆ ಅವರು ಕಾರ್ಖಾನೆಗೆ ಹೋಗುವಂತಿಲ್ಲ. ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿ ಒಲೆ ಹತ್ತುವುದೆಂತು? ಅವರ ಬಳಿ ಎರಡನೆಯ ಜೋಡು ಇಲ್ಲ. ಅವರು ಬಂದು, ‘ಅಣ್ಣಾ, ಇಂದೇ ರಾತ್ರಿ ಅವುಗಳನ್ನು ರಿಪೇರಿ ಮಾಡಿಕೊಡು. ಇಲ್ಲದಿದ್ದರೆ ಬೆಳಿಗ್ಗೆ ಕೆಲಸವಿಲ್ಲ’ ಎನ್ನುತ್ತಿದ್ದರು. ಅವನಿಗೆ ತುಂಬ ಸುಸ್ತಾಗುತ್ತಿದ್ದರೂ ಅವರಿಗೋಸ್ಕರ ರಾತ್ರಿಯೆಲ್ಲ ತಡವಾಗಿ ಕುಳಿತು ಕೆಲಸಮಾಡುತ್ತಿದ್ದ. ಅವನ ಹೆಂಡತಿ ಹೇಳುತ್ತಿದ್ದಳು, ‘ಇಲ್ಲಿಂದ ನೂರು ಮೈಲಿ ದೂರದಲ್ಲಿ ಒಂದು ದೇವಸ್ಥಾನವಿದೆ. ಅದು ತುಂಬ ಜಾಗ್ರತವಾದ ಸ್ಥಳ. ತುಂಬ ಮನೋಹರವೂ ಆಗಿದೆಯಂತೆ. ಹೋಗಿ ಬರೋಣ’. ಆತನಿಗೂ ಅಲ್ಲಿಗೆ ಹೋಗಬೇಕೆಂಬ ತೀವ್ರ ಆಸೆ ಇತ್ತು. ಆದರೆ ಕೆಲಸದ ಒತ್ತಡದಿಂದಾಗಿ ಹೋಗಲಾಗುತ್ತಿರಲಿಲ್ಲ.

ಪ್ರತಿ ಹಗಲು ರಾತ್ರಿ ಆತ ಬೂಟುಗಳನ್ನು ಹೊಲಿಯುವಾಗ, ಮೊಳೆ ಹೊಡೆಯುವಾಗ ನಿಟ್ಟುಸಿರು ಬಿಡುತ್ತಿದ್ದ. ‘ಭಗವಂತಾ, ನಿನ್ನ ದರ್ಶನಕ್ಕೆ ಬರಬೇಕೆಂದು ಹೃದಯ ಬಯಸುತ್ತಿದೆ. ಆದರೇನು ಮಾಡಲಿ? ಒಂದು ದಿನದ ಕೆಲಸ ಬಿಟ್ಟರೆ ಹತ್ತಾರು ಪರಿವಾರಗಳು ಉಪವಾಸ ಇರಬೇಕಾಗುತ್ತದೆ. ಅವರಿಗಾಗಿಯೂ ಹೃದಯ ಮಿಡಿಯುತ್ತದೆ. ನೀನೇ ಪರಿಹಾರ ನೀಡು’. ಒಂದು ದಿನ ರಾತ್ರಿ ದೇವರನ್ನು ಚಿಂತಿಸುತ್ತ ಬೂಟು ರಿಪೇರಿ ಮಾಡುತ್ತಿದ್ದಾಗ, ಕೋಣೆಯಲ್ಲೆಲ್ಲ ಬೆಳಕಾಯಿತು. ದೇವರು ದರ್ಶನ ನೀಡಿದ. ಶರಣಾದ ಭಕ್ತನಿಗೆ ಹೇಳಿದ, ‘ನೀನು ದೇವಸ್ಥಾನಕ್ಕೆ ಬರಬೇಕಿಲ್ಲ. ನೀನು ಬೂಟುಗಳನ್ನು ರಿಪೇರಿ ಮಾಡುವಾಗ ಬಿಟ್ಟ ಪ್ರತಿಯೊಂದು ನಿಟ್ಟಿಸಿರೂ ಪೂಜೆಯೇ. ನಿನ್ನ ಕಾರ್ಯ ದೇವಕಾರ್ಯ. ಅದೊಂದು ಪರಮಯೋಗ. ಅದಕ್ಕಾಗಿ ನಾನೇ ಬರುತ್ತೇನೆ’.

ಕಗ್ಗದ ನಾಲ್ಕು ಸಾಲುಗಳು ಈ ಕಥೆಯನ್ನು ಧ್ವನಿಸುತ್ತವೆ. ಬಡಗಿ, ರೈತ, ಕುಶಲಕರ್ಮಿಗಳು ಶಾಸ್ತ್ರದಲ್ಲಿ ತಿಳಿಸಿದಂತೆ ಯೋಗಿಗಳಲ್ಲ. ಆದರೆ ತಾವು ಒಪ್ಪಿದ ಕರ್ಮಕ್ಕೆ ಬದುಕನ್ನೇ ಮುಡಿಪಾಗಿಟ್ಟವರು. ಆ ತನ್ಮಯತೆಯಲ್ಲಿ ಅವರಿಗೆ ಅನವಶ್ಯಕವಾದ ಚಿಂತೆಗಳನ್ನು ಹಚ್ಚಿಕೊಳ್ಳಲು ಸಮಯವಿಲ್ಲ. ಅವರ ಪರಿಶ್ರಮದಿಂದಲೇ ಅವರಿಗೆ ಊಟ. ಯಾರ ಹಂಗೂ ಅವರಿಗಿಲ್ಲ. ಇಂಥ ಪರಿಶ್ರಮಿಗಳ ಬಾಳು ನೇರ, ಕಷ್ಟವಲ್ಲ. ಕಾರ್ಯ ಕಷ್ಟದ್ದಾಗಿರಬಹುದು ಆದರೆ ನಿಷ್ಕಲ್ಮಷ ಮನಸ್ಸಿನ ಅವರ ಬದುಕು ಕ್ಲಿಷ್ಟವಾದದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT