ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ರಾಜ-ಯೋಗ

Last Updated 7 ಜನವರಿ 2021, 21:05 IST
ಅಕ್ಷರ ಗಾತ್ರ

ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ |
ಭೋಜನವ ನೀಡೆನೆನೆ ಮನ ಸುಮ್ಮನಿಹುದೆ ? ||
ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ |
ರಾಜಯೋಗದುಪಾಯ – ಮಂಕುತಿಮ್ಮ ||373 ||

ಪದ-ಅರ್ಥ: ಪರಿಪರಿ=ವಿಧವಿಧವಾಗಿ, ನೀಡೆನೆನೆ=ನೀಡೆನು+ಎನೆ, ಸಾಜ=ಸಹಜ, ರಾಜಯೋಗದುಪಾಯ=ರಾಜಯೋಗದ+ಉಪಾಯ.

ವಾಚ್ಯಾರ್ಥ: ಈ ಪ್ರಪಂಚದ ಸೆಳೆತ ಇಷ್ಟೊಂದು ಬಲವಾಗಿ ಕೆಣುಕುತ್ತಿದ್ದಾಗ, ಆ ಆಕರ್ಷಣೆಗಳಿಗೆ ಮನ ಸೆಳೆದಾಗ ತೃಪ್ತಿಪಡಿಸದಿದ್ದರೆ ಆದೀತೇ? ಸಹಜವಾದ ಪ್ರವೃತ್ತಿಗಳನ್ನು ಕೊಂದು ನಿಗ್ರಹಿಸಬೇಕೆನ್ನುವ ಹಠಯೋಗದ ಮಾರ್ಗಕ್ಕಿಂತ ಅವುಗಳ ಮಿತವಾದ ಬಳಕೆಯೊಂದಿಗೆ ತೃಪ್ತಿಪಡುವ ರಾಜಯೋಗದ ಉಪಾಯ ಒಳ್ಳೆಯದು.

ವಿವರಣೆ: ಪ್ರತಿಯೊಬ್ಬ ಜೀವಿಗೆ ಪ್ರಪಂಚದ ಆಕರ್ಷಣೆ ಅಯಸ್ಕಾಂತದಂತೆ ಸೆಳೆಯುತ್ತದೆ. ಅದು ಅವನನ್ನು ಸದಾಕಾಲ ಬಹಿರ್ಮುಖನನ್ನಾಗಿ ಮಾಡುತ್ತದೆ. ಹೊರಗಿನ ಸೆಳೆತ ಹೆಚ್ಚಾದಷ್ಟೂ, ಅಂತರ್ಮುಖಿಯಾಗುವ, ಅಂತರೀಕ್ಷಣೆ ಮಾಡಿಕೊಳ್ಳುವ ಅವಕಾಶಗಳು ಕಡಿಮೆಯಾಗುತ್ತವೆ. ಈ ಮಾಯಾಪ್ರಪಂಚದ ವಸ್ತುಗಳು, ವಿಷಯಗಳು, ಭೋಗಸಾಧನಗಳು, ತನ್ನ ಪರಿವಾರದ ಜನರ ಬಗೆಗಿನ ಮೋಹ ಇವೆಲ್ಲವೂ ಆತನನ್ನು ಕಟ್ಟಿ ಹಾಕುತ್ತವೆ. ಹೀಗೆ ಅಪೇಕ್ಷೆಗಳ ಮೃಗಜಲದ ಬೆನ್ನಟ್ಟಿ ಹೋಗುವ ಜೀವಕ್ಕೆ ತೃಪ್ತಿಯ ಅವಕಾಶ ಕೊಡುವುದಿಲ್ಲವೆಂದರೆ ಸುಮ್ಮನಿದ್ದೀತೇ? ಹಾಗಾದರೆ ಅದನ್ನು ಆಕರ್ಷಣೆಯಿಂದ ವಿಮುಖ ಮಾಡಲು ಬಿಗಿಯಾಗಿ ಕಟ್ಟಿ ಹಾಕಲಾದೀತೇ?

ಜಗತ್ತಿನ ಈ ಯಂತ್ರವನ್ನು ಅರಿಯುವುದೇ ಕಷ್ಟ. ಬಸವಣ್ಣನವರ ಮಾತು ತುಂಬ ಸೊಗಸು.

ಜಗತ್ತೆಂಬ ಯಂತ್ರದ ಹಾಹೆ ಹೇಗೆಂದರಿಯಲು
ಅಜ್ಞಾನವೆಂಬ ತುಷದ ಚೋಹವ ತೊಡಿಸಿ,
ಅಹಂಮಮತೆಯೆಂಬ ಸೊಕ್ಕನಿಕ್ಕಿ,
ಬಾರದ ಭವದ ಬಟ್ಟೆಯಲ್ಲಿ ಬರಿಸಿ,
ಕಾಣದ ಕರ್ಮ ದುಃಖವ ಕಾಣಿಸಿ,
ಉಣ್ಣದ ಅಪೇಯವನುಣಿಸಿ,
ಮಾರಾರಿ ವಿನೋದಿಸಿದೆಯಯ್ಯಾ, ಕೂಡಲಸಂಗಮದೇವಾ

ಜಗತ್ತೆಂಬ ಯಂತ್ರದ ಗೊಂಬೆಯನ್ನರಿಯಲು, ಅಜ್ಞಾನವೆಂಬ ಹೊದಿಕೆಯ ಮುಸುಕನ್ನು ತೊಡಿಸಿ, ಅಹಂಕಾರ, ಮಮತೆಯೆಂಬ ಅಮಲನ್ನೇರಿಸಿಕೊಂಡಿದ್ದೇವೆ, ಅದರ ಎಳೆತಕ್ಕೆ ಸಿಕ್ಕಿಬಿದ್ದಿದ್ದೇವೆ. ಆಕರ್ಷಣೆಗೆ ವಿರುದ್ಧವಾಗಿ ಮನಸ್ಸನ್ನು ಕಟ್ಟುವಂತೆ ಪ್ರೇರೇಪಿಸುವುದು ಹಠಯೋಗ. ಅದು ಇಡಾ-ಪ್ರಾಣಶಕ್ತಿ ಮತ್ತು ಪಿಂಗಲಾಗಳ ಒಕ್ಕೂಟ. ಅದರ ಮೂಲ ಗುರಿ ಮನಸ್ಸಿನ ನಿಗ್ರಹ. ಕಗ್ಗದ ಒತ್ತಾಸೆ ಇಷ್ಟೇ. ಮನಸ್ಸನ್ನು ಕಟ್ಟಿ ಹಾಕಿ ಅದನ್ನು ಉಪವಾಸ ಕೆಡುವುದಕ್ಕಿಂತ ಮಿತವಾದ ತೃಪ್ತಿ ನೀಡುವ ರಾಜಯೋಗ ಒಳ್ಳೆಯದು. ಮಗುವನ್ನು ಜಾತ್ರೆಗೆ ಕರೆದೊಯ್ದು, ಅತ್ತಿತ್ತ ನೋಡಬೇಡವೆಂದು ಹೊಡೆದು, ಬಡಿದು ಸುಮ್ಮನಾಗಿಸುವುದು ಸರಿಯಲ್ಲ. ಅಂತೆಯೇ ಕೇಳಿದ್ದನ್ನೆಲ್ಲ ಕೊಡಿಸಿ ಮೆಚ್ಚಿಸುವುದೂ ಸರಿಯಲ್ಲ. ಬದಲಿಗೆ, ಮನಸ್ಸಿಗೆ ಒಂದಿಷ್ಟು ಕೊಟ್ಟು, ಮಿತದಲ್ಲಿಯೇ ತೃಪ್ತಿ ಪಡುವ ತರಬೇತಿ ಕೊಡುವುದು ಸರಿಯಾದದ್ದು. ಯಮ, ನಿಯಮಾದಿಗಳಿಂದ, ಧ್ಯಾನದಿಂದ ಇಂದ್ರಿಯ ಮನಸ್ಸುಗಳನ್ನು ಒಲಿಸಿ ಹದಗೊಳಿಸುವುದು ರಾಜಯೋಗ. ಬಸವಣ್ಣ ವಚನದಲ್ಲಿ ಸೂಚಿಸಿದಂತೆ ಅಜ್ಞಾನದ ಮುಸುಕನ್ನು ಸರಿಸಿ, ಅಹಂಕಾರ, ಮಮತೆಗಳನ್ನು ಕಡಿಮೆ ಮಾಡಿದಾಗ ಈ ಜಗದ ಗಂಧ ನಮ್ಮನ್ನು ಅಷ್ಟಾಗಿ ಕಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT