ಮಂಗಳವಾರ, ಜೂನ್ 28, 2022
21 °C

ಬೆರಗಿನ ಬೆಳಕು: ಕರ್ಮಶೇಷನಾಶಕ್ಕೆ ತಾಳ್ಮೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸಾಧ್ಯಪಡದಾರಿಗಂ ನರಭಾಲಪಟ್ಟವನು |
ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ||
ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ |
ಬುದ್ಧಿನುಡಿ ಸೈರಣೆಯೆ – ಮಂಕುತಿಮ್ಮ || 633 ||

ಪದ-ಅರ್ಥ: ಸಾಧ್ಯಪಡದಾರಿಗಂ=ಸಾಧ್ಯಪಡದು(ಸಾಧ್ಯವಾಗದು)+ಆರಿಗಂ(ಯಾರಿಗೂ), ನರಭಾಲಪಟ್ಟವನು=ಮನುಷ್ಯನ ಹಣೆಯಬರಹವನ್ನು, ಪೂರ್ವದೆಲ್ಲವನು=ಪೂರ್ವದ (ಹಿಂದಿನ)+ಎಲ್ಲವನು, ಹೊದ್ದೆ=ಹೊದ್ದುಕೊಂಡೇ, ಕರ್ಮಶೇಷದ=ಕರ್ಮದ ಬಾಕಿ, ಪಟವ=ಬಟ್ಟೆಯನ್ನು, ಸೈರಣೆ=ತಾಳ್ಮೆ.

ವಾಚ್ಯಾರ್ಥ: ಹಣೆಯಬರಹದಲ್ಲಿದ್ದುದನ್ನು ಅಳಿಸಿ ಹಿಂದಿನದೆಲ್ಲವನ್ನು ಶುದ್ಧಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕರ್ಮಶೇಷವೆಂಬ ಬಟ್ಟೆಯನ್ನು ನಾವು ಹೊದ್ದೇ ಹರಿಯಬೇಕು. ಇದನ್ನು ಅನುಭವಿಸಲು ಬೇಕಾದ ಬುದ್ಧಿಯ ಮಾತೆಂದರೆ – ತಾಳ್ಮೆ.

ವಿವರಣೆ: ಕರ್ಮ ಎಂಬುದು ಹಿಂದೂ ಧರ್ಮದ ಒಂದು ಕಲ್ಪನೆ. ಒಳ್ಳೆಯ ಕರ್ಮಕ್ಕೆ ಒಳ್ಳೆಯ ಫಲ, ಕೆಟ್ಟ ಕರ್ಮದಿಂದ ಕೆಟ್ಟ ಫಲ. ಬಿತ್ತಿದಂತೆ ಬೆಳೆ ಎಂಬಂತೆ ಇದು. ಹಿಂದೂ ಧರ್ಮದ ಇನ್ನೊಂದು ಪರಿಕಲ್ಪನೆ ಪುನರ್ಜನ್ಮ. ದೇಹ ನಾಶವಾದರೂ ಅವಿನಾಶಿಯಾದ ಆತ್ಮ ಬಂದು ಶರೀರವನ್ನು ತೊರೆದು ಮತ್ತೊಂದು ಶರೀರವನ್ನು ಪಡೆದುಕೊಳ್ಳುವುದು. ಒಂದು ಜನ್ಮದಲ್ಲಿ ಮಾಡಿದ ಕರ್ಮಕ್ಕೆ ತಕ್ಷಣವೇ ಪ್ರತಿಕ್ರಿಯೆ ದೊರಕಲಿಕ್ಕಿಲ್ಲ. ಆಗ ಸಂಗ್ರಹಗೊಂಡ ಕರ್ಮದ ಬಾಕಿಯನ್ನು ಮುಂದಿನ ಜನ್ಮದಲ್ಲಿ ತೀರಿಸಲೇಬೇಕಾಗುತ್ತದೆಂಬುದು ಕರ್ಮಸಿದ್ಧಾಂತ. ನಮ್ಮ ಕರ್ಮದ ಫಲವನ್ನು ನಾವೇ ತೀರಿಸಬೇಕು. ಅದನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಲಾಗುವುದಿಲ್ಲ. ಹೀಗೆ ಜನ್ಮಜನ್ಮಾಂತರಗಳಲ್ಲಿ ಕರ್ಮ ಬೆಂಬತ್ತಿ ಬರುತ್ತದೆ.

ನಾವು ಕೆಲವು ವಿಶೇಷಗಳನ್ನು ಕಂಡಿದ್ದೇವೆ. ತುಂಬ ಒಳ್ಳೆಯವರಾದವರು ಬದುಕಿನುದ್ದಕ್ಕೂ ಕಷ್ಟವನ್ನು ಅನುಭವಿಸಿದಾಗ, ಅಷ್ಟು ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಯಾಕೆ ಈ ರೀತಿಯ ತೊಂದರೆ ಎನ್ನಿಸಿಲ್ಲವೆ? ಒಂದು ಪುಟ್ಟ ಮಗು ಯಾವುದೋ ವಿಚಿತ್ರವಾದ ರೋಗದಿಂದ ಒದ್ದಾಡುವಾಗ, ಇಷ್ಟು ಚಿಕ್ಕ ಮಗು ಅದಾವ ಪಾಪಕರ್ಮ ಮಾಡಲು ಸಾಧ್ಯ? ಅದಕ್ಕೇಕೆ ಈ ಕಷ್ಟ? ಎಂದು ಮರುಗಿಲ್ಲವೆ? ಅದನ್ನು ಮನಸ್ಸಿಗೆ ಒಪ್ಪಿಸಲು ಈ ಕರ್ಮಸಿದ್ಧಾಂತದ ವಿಚಾರ ಬಂದಿತು ಎನ್ನಿಸುತ್ತದೆ. ಯಾವುದಕ್ಕೆ ವೈಚಾರಿಕವಾಗಿ ಉತ್ತರಿಸಲು ಕಷ್ಟವೋ, ಆಗ ನಂಬಿಕೆ ಮುಂದೆ ತೂರಿ ಬರುತ್ತದೆ. ಈ ಜನ್ಮದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡಿದ್ದರೂ, ಹಿಂದಿನ ಜನ್ಮದಲ್ಲಿ ಏನು ಮಾಡಿದ್ದರೋ? ಅದರ ಫಲವನ್ನು ಈಗ ಅನುಭವಿಸುತ್ತಿದ್ದಾರೆ ಎಂಬುದು ಸಮಜಾಯಿಷಿ. ಇದರಿಂದ ಮುಕ್ತಿ ಇಲ್ಲ. ಇಲ್ಲಿ ಯಾವುದೇ ನ್ಯಾಯಾಧಿಕರಣ, ಶಿಕ್ಷೆ, ತಪ್ಪೊಪ್ಪಿಗೆ, ಪಶ್ಚಾತ್ತಾಪ, ದೈವಾನುಗ್ರಹದಿಂದ ಕ್ಷಮಾದಾನ ಯಾವುದೂ ಇಲ್ಲ. ಅದನ್ನು ಸತ್ಕರ್ಮ ಮಾಡಿಯೇ ಸವೆಸಬೇಕು. ಇದೊಂದು ರೀತಿಯಲ್ಲಿ ಜೀವನವನ್ನು ಸತ್ಕರ್ಮದೆಡೆಗೆ ತಿರುಗಿಸಲು, ಕೆಟ್ಟಕೆಲಸಗಳಿಂದ ವಿಮುಖ ಮಾಡಲು ಮಾಡಿದ ಉಪಾಯವೂ ಇರಬಹುದು.

ಕಗ್ಗ ಅದರ ಬಗ್ಗೆ ಮಾತನಾಡುತ್ತದೆ. ನಮ್ಮ ಪೂರ್ವಕರ್ಮವನ್ನು ಹಣೆಯಬರಹ ಎನ್ನುತ್ತೇವೆ. ಆ ಹಣೆಯಬರಹವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಹಿಂದೆ ಮಾಡಿದ್ದೆಲ್ಲವನ್ನು ಶುದ್ಧಮಾಡಿ ಅಳಿಸಲಾಗುತ್ತದೆಯೆ? ಹಿಂದಿನ ಕರ್ಮ ಸಂಗ್ರಹವೆಂಬ ಬಟ್ಟೆಯನ್ನು ನಾವು ಹೊದ್ದುಕೊಂಡೇ ಸವೆಸಿ ಹರಿಯಬೇಕು. ಅಂದರೆ ಸತ್ಕರ್ಮಗಳಿಂದಲೇ ಹಿಂದಿನ ದುಷ್ಕರ್ಮಗಳ ಬಾಕಿಯನ್ನು ಸವೆಸಬೇಕು. ಸವೆಸುವುದು ದು:ಖದಾಯಕವಾದದ್ದು. ಆ ಸಮಯದಲ್ಲಿ ನಮಗೆ ಸಹಾಯಕವಾಗುವುದು ತಾಳ್ಮೆ ಮಾತ್ರ. ಅದೊಂದೇ ಬುದ್ಧಿಯ ಮಾತು ನಮಗೆ ಬೇಕಾದದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು