ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವ್ಯತ್ಯಾಸಗಳ ಗೊಡವೆಯೇಕೆ?

Last Updated 26 ಮೇ 2022, 19:30 IST
ಅಕ್ಷರ ಗಾತ್ರ

ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು |
ಸರಿತಪ್ಪುಗಳಿಗಂತು, ಜಾಣ ಬೆಪ್ಪುಗಳ್ಗಂ ||
ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ |
ಪರವೆಯೆಂತಾದೊಡೇಂ –ಮಂಕುತಿಮ್ಮ || 637 ||

ಪದ-ಅರ್ಥ: ಸಿರಿದರಿದ್ರತೆಗಳ್ಗೆ=ಸಿರಿ(ಶ್ರೀಮಂತಿಕೆ)+ದರಿದ್ರತೆಗಳ್ಗೆ (ಬಡತನಗಳಿಗೆ), ಫಲದೊಳಂತರ=ಫಲದೊಳೆ (ಫಲದಲ್ಲಿ)+ಅಂತರ, ಸರಿತಪ್ಪುಗಳಿಗಂತು=ಸರಿತಪ್ಪುಗಳಿಗೆ+ಅಂತು, ಮರಣವೆಲ್ಲವನೊಂದೆ=ಮರಣವು+ಎಲ್ಲವನು+ಒಂದೆ, ಪರವೆಯೆಂತಾದೊಡೇಂ=ಪರವೆ(ಕಾಳಜಿ, ಗೊಡವೆ)+ಎಂತಾದೊಡೇಂ (ಹೇಗಾದರೇನು).

ವಾಚ್ಯಾರ್ಥ: ಶ್ರೀಮಂತಿಕೆ, ಬಡತನಗಳ ಫಲದಲ್ಲಿ ಅಂತರ ಕಡಿಮೆ. ಅದರಂತೆ ಸರಿ ಮತ್ತು ತಪ್ಪುಗಳ ನಡುವೆ, ಬುದ್ಧಿವಂತಿಕೆ ಮತ್ತು ದಡ್ಡತನಗಳ ನಡುವಿನ ಅಂತರ. ಸಾವು ಎಲ್ಲವನ್ನು ಒಂದೇ ರೀತಿಯಲ್ಲಿ ಮುಸುಕಿಬಿಡುತ್ತದೆ. ಏನಾದರಾಗಲಿ, ನಮಗೆ ಅದರ ಗೊಡವೆಯೇಕೆ?

ವಿವರಣೆ: ಗಂಗೋತ್ರಿಯಲ್ಲಿ ಒಂದು ಸಣ್ಣ ಝರಿಯಾಗಿ ಹುಟ್ಟಿದ ನದಿ ಮುಂದೆ ಮತ್ತೆ ಕೆಲವು ಹಳ್ಳಗಳನ್ನು ಸೇರಿಕೊಳ್ಳುತ್ತ ದೊಡ್ಡದಾಗಿ ಹರಿದು ಗಂಗೆಯಾಗುತ್ತದೆ. ಗಂಗಾನದಿ ಮೊಟ್ಟಮೊದಲ ಬಾರಿಗೆ ಪರ್ವತದ ಶಿಖರಗಳಿಂದ ಇಳಿದು ಬರುವುದನ್ನು ಕಲ್ಪಿಸಿಕೊಳ್ಳಿ. ಅದು ಸಣ್ಣಪುಟ್ಟ ತಗ್ಗು-ದಿನ್ನೆಗಳನ್ನು ಕಷ್ಟಪಟ್ಟು ದಾಟುತ್ತ, ಹತ್ತಾರು ಬಾರಿ ತನ್ನ ದಿಕ್ಕು ದಿಶೆಗಳನ್ನು ಬದಲಾಯಿಸುತ್ತ ನಡೆಯುತ್ತದೆ. ನಡನಡುವೆ ಅದರ ಪಾತ್ರ ಕಿರಿದಾದೀತು ಅಥವಾ ವಿಸ್ತಾರವಾದೀತು. ಅದೇನೇ ಆದರೂ ಅದನ್ನು ಜನ ಗುರುತಿಸುವುದು ಗಂಗೆಯೆಂದೇ. ಅದೇ ರೀತಿಯಲ್ಲಿ ಮನುಷ್ಯನ ಬದುಕು ಕೂಡ ಏರಿಳಿತಗಳಲ್ಲೇ ಸಾಗುತ್ತದೆ. ಏರು ಬಂದಾಗ ಶ್ರೀಮಂತಿಕೆಯೆಂತಲೂ, ಇಳಿಜಾರು ಬಂದಾಗ ಬಡತನವೆಂತಲೂ ಜನ ಗುರುತಿಸುತ್ತಾರೆ. ಆದರೆ ಮೂಲತಃ ವ್ಯಕ್ತಿ ಅದೇ. ಗಂಗೆಯ ಮಗ ಭೀಷ್ಮ. ಅವನಂತಹ ಪರಾಕ್ರಮಶಾಲಿ, ನ್ಯಾಯನಿಷ್ಠುರ ಯಾರೂ ಇಲ್ಲ ಎಂಬ ಪ್ರತೀತಿ. ಅವನ ಪ್ರತಿಜ್ಞೆ ದಂತಕಥೆಯಾಯಿತು. ಆದರೆ ಕೊನೆಗೆ ತನ್ನ ತಮ್ಮನ ಮಗ ದೃತರಾಷ್ಟ್ರನಿಗೆ ಏನೂ ಹೇಳಲು ಆಗದೆ ಅಸಹಾಯಕನಾಗಿ, ಅನ್ಯಾಯದ ಪರ ನಿಂತು ಹೋರಾಡಿ, ಕೊನೆಗೆ ಶರಶಯ್ಯೆಯಲ್ಲಿ ಮಲಗಿ, ರಕ್ತ ಬಸಿದುಕೊಂಡು ಸಾವಿಗಾಗಿ ಉತ್ತರಾಯಣ ಪರ್ವಕಾಲಕ್ಕೆ ಕಾಯಬೇಕಾದ ಪರಿಸ್ಥಿತಿ ತಂದುಕೊಂಡ. ಅವನು ಮಾಡಿದ್ದು ಸರಿಯೋ, ತಪ್ಪೋ? ಅವನು ಜಾಣನೋ, ಬೆಪ್ಪನೋ? ತಿಳಿಯುವುದು ಹೇಗೆ? ಯಾಕೆಂದರೆ ಬದುಕಿನಲ್ಲಿ ಆತ ಎರಡನ್ನೂ ಪ್ರದರ್ಶಿಸಿದವನು. ಸೀತೆ ರಾಮನನ್ನು ಮಾಯಾಜಿಂಕೆಯನ್ನು ಹಿಡಿದುಕೊಂಡು ಬರಲು ಕಳುಹಿಸಿ, ಆತ ಮಾಯಾವಿಯ ಕೂಗನ್ನು ಕೇಳಿ, ಲಕ್ಷ್ಮಣನನ್ನು ಒತ್ತಾಯದಿಂದ ಕಳುಹಿಸಿದ್ದು ಸರಿಯೋ, ತಪ್ಪೋ? ಲಕ್ಷ್ಮಣನನ್ನು ಸಂಶಯಿಸಿ ಕಳುಹಿಸಿದ್ದು ತಪ್ಪು ಎನ್ನುವುದಾದರೆ, ಲಕ್ಷ್ಮಣ ಹೋಗಿರದಿದ್ದರೆ, ಆಕೆಯ ಅಪಹರಣ, ಅದರ ಪರಿಣಾಮವಾಗಿ ರಾವಣನ ವಧೆ ಆಗುತ್ತಿರಲಿಲ್ಲ. ಸದಾಕಾಲದ ಭೋಗದಲ್ಲಿರಬೇಕೆಂದು ಮಗನ ಯೌವನವನ್ನೇ ಪಡೆದು ಸುಖಿಸದ ಯಯಾತಿ ಕೊನೆಗೆ ಎಲ್ಲವನ್ನೂ ತೊರೆದು ಸಂನ್ಯಾಸಿಯಾಗಿ ಸಂತೋಷ ಪಡೆದ. ಹಾಗಾದರೆ ಸಿರಿ, ದಾರಿದ್ರ್ಯಗಳ ವ್ಯತ್ಯಾಸವೇನು? ಯಾವುದು ಸುಖ ಕೊಟ್ಟೀತು?

ಇದನ್ನು ಕಗ್ಗ ಸಂಗ್ರಹರೂಪವಾಗಿ ಹೇಳುತ್ತದೆ. ಶ್ರೀಮಂತಿಕೆ, ಬಡತನಗಳಲ್ಲಿ ಬಹಳ ವ್ಯತ್ಯಾಸವಿಲ್ಲ. ಯಾಕೆಂದರೆ ಅದು ನೋಡುವ ದೃಷ್ಟಿಯಲ್ಲಿದೆ. ಬಡತನದಲ್ಲೂ ಸಂತೋಷಪಡುವವರಿದ್ದಾರೆ, ಶ್ರೀಮಂತಿಕೆಯಲ್ಲಿ ನರಳುವವರೂ ಇದ್ದಾರೆ. ಇದೇ ರೀತಿ ನ್ಯಾಯಾಧೀಶನಂತೆ ತಕ್ಕಡಿ ಹಿಡಿದುಕೊಂಡು, ಯಾವುದು ಸರಿ, ಯಾವುದು ತಪ್ಪು, ಯಾರು ಜಾಣ, ಯಾರು ಬೆಪ್ಪ ಎಂದು ಲೆಕ್ಕ ಹಾಕುವುದು ಬೇಡ. ಸಾವು ಎಂಬ ಸಮದರ್ಶಿ ಎಲ್ಲವನ್ನೂ ಒಂದೇ ರೀತಿ ನೋಡಿ ಮುಸುಕಿಬಿಡುತ್ತಾನೆ. ನಮ್ಮ ಬದುಕನ್ನು ನೇರವಾಗಿ ಮಾಡಿಕೊಳ್ಳೋಣ, ಈ ವ್ಯತ್ಯಾಸಗಳ ಗೊಡವೆ ನಮಗೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT