ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಿತವಾದ ಮನಸ್ಸಿನ ಪಾಕ

Last Updated 14 ನವೆಂಬರ್ 2021, 15:29 IST
ಅಕ್ಷರ ಗಾತ್ರ

ಸುತೆಯ ಪೋಷಿಸಿ ಬೆಳಸಿ,
ಧನಕನಕದೊಡನವಳನ್|
ಇತರಗೃಹಕಿತ್ತು ನೀಂ ಕೇಳ್ಪ ಮುಯ್ಯೇನು?||
ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ|
ಹಿತಮನದ ಪಾಕಕದು – ಮಂಕುತಿಮ್ಮ ||497||

ಪದ-ಅರ್ಥ: ಧನಕನಕದೊಡನವಳನ್= ಧನ+ ಕನಕದೊಡನೆ+ ಅವಳನ್ (ಅವಳನ್ನು), ಮುಯ್ಯಿ= ಪ್ರತಿಫಲ, ಕಾಣಿಕೆ, ಪಾಕಕದು= ಪಾಕಕ್ಕೆ (ಹದಕ್ಕೆ)+ ಅದು

ವಾಚ್ಯಾರ್ಥ: ಮಗಳನ್ನು ಸಲಹಿ, ಬೆಳಸಿ ಮದುವೆಯಲ್ಲಿ ಹಣ, ಚಿನ್ನಗಳೊಡನೆ ಅವಳನ್ನು ಮತ್ತೊಂದು ಮನೆಗೆ ಕಳುಹಿಸಿ ನೀನು ಕೇಳುವ ಪ್ರತಿಫಲವೇನು? ಮಾಡಿದ ಒಳ್ಳೆಯ ಕೆಲಸವೆ ಫಲ. ಇದು ಹಿತವಾದ ಮನಸ್ಸಿನ ಪಾಕಕ್ಕೆ ಬೇಕಾದದ್ದು.

ವಿವರಣೆ: ಅವನೊಬ್ಬ ಝೆನ್ ಸಂತ. ಆತ ಊರೂರು ಅಲೆದು ಹಣ ಸಂಗ್ರಹ ಮಾಡಿ ಝೆನ್ ಸೂತ್ರಗಳನ್ನು ಮುದ್ರಿಸಲು ಶ್ರಮಿಸಿದ. ಸಾಕಷ್ಟು ದುಡ್ಡು ಸೇರಿ ಪ್ರಕಟಣೆಯ ಕಾರ್ಯ ಪ್ರಾರಂಭವಾಗುವಾಗ ಹತ್ತಿರದ ನದಿಯಲ್ಲಿ ಪ್ರವಾಹ ಬಂದು, ನೀರು ಉಕ್ಕಿ ಸಾವಿರಾರು ಜನ ಮನೆ-ಮಠ ಕಳೆದುಕೊಂಡರು. ಸಂತ ತಾನು ಕೂಡಿಟ್ಟಿದ್ದ ಹಣವನ್ನೆಲ್ಲ ಅವರಲ್ಲಿ ಹಂಚಿ ನೆರವಾದ. ಮತ್ತೆ ಹತ್ತು ವರ್ಷ ಅಲೆದು ಹಣ ಕೂಡಿಸಿದ. ಮುದ್ರಿಸುವ ಕಾರ್ಯ ಶುರುವಾಗುವ ಮುನ್ನ ಹಳದಿ ಜ್ವರ ದೇಶದಲ್ಲಿ ಹರಡಿ ಹಾಹಾಕಾರವಾಯಿತು. ಎಲ್ಲಿ ನೋಡಿದಲ್ಲಿ ಸಾಲುಸಾಲು ಹೆಣಗಳು. ಸಂತ ಶಿಷ್ಯರನ್ನು ಸೇರಿಸಿಕೊಂಡು, ತನ್ನ ಬಳಿಯಿದ್ದ ಹಣದಿಂದ ಜನರಿಗೆ ವಸತಿ, ಊಟದ ವ್ಯವಸ್ಥೆ ಮಾಡಿದ. ನಂತರ ತನ್ನ ವಯಸ್ಸನ್ನು ಗಮನಿಸದೆ ಮತ್ತೆ ಹನ್ನೆರಡು ವರ್ಷ ಊರೂರು ತಿರುಗಿ ಹಣ ಸೇರಿಸಿ, ಝೆನ್ ಸೂತ್ರಗಳನ್ನು ಮುದ್ರಿಸಿದ. ಅವು ಇನ್ನೂ ಜಪಾನಿನ ಕ್ಯೋಟೋ ಸಂಗ್ರಹಾಲಯದಲ್ಲಿವೆ. ಮುದ್ರಣ ಮುಗಿದ ಮೇಲೆ ಆತ ಎಲ್ಲರನ್ನು ತೊರೆದು ಪರ್ವತಗಳ ಕಡೆಗೆ ಹೊರಟ. ಯಾರೋ ಕೇಳಿದರು, ‘ನೀನು ಇಷ್ಟು ಕಷ್ಟಪಟ್ಟೆಯಲ್ಲ, ಸೂತ್ರಗಳನ್ನು ಮುದ್ರಿಸಲು, ನಿನಗೆ ಏನು ದೊರಕಿತು?’ ಆತ ನಿರಾಳವಾಗಿ ನಕ್ಕು ಹೇಳಿದ, ‘ನನಗೋ, ಆತ್ಮ ಸಂತೋಷ’. ನಂತರ ಯಾರೂ ಆ ಸಂತನನ್ನು ಮರಳಿ ಕಾಣಲಿಲ್ಲ. ತನಗೆ ಸಾರ್ಥಕತೆಯನ್ನು ಕೊಟ್ಟ ಕಾರ್ಯವನ್ನು ಸಂತೋಷದಿಂದ ಮುಗಿಸಿ ಆತ ನಿರ್ಗಮಿಸಿದ್ದ. ಅವನ ಕಾರ್ಯಕ್ಕೆ ದೊರೆತ ಪ್ರತಿಫಲ - ಧನ್ಯತೆ ಮತ್ತು ಸಂತೋಷ.

ಹೀಗೆಯೇ ಜನರು ತಮ್ಮ ಮನಕೊಪ್ಪಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ ಧನ್ಯತೆಯನ್ನು ಪಡೆದಿದ್ದಾರೆ. ಕೆಲವರು ಸಮಾಜಸೇವೆಯಲ್ಲಿ, ರಾಷ್ಟ್ರರಕ್ಷಣೆಯಲ್ಲಿ, ಕೃಷಿಯಲ್ಲಿ, ವಿಜ್ಞಾನದ ಆವಿಷ್ಕಾರಗಳಲ್ಲಿ, ಆಟದಲ್ಲಿ, ಕಲೆಯಲ್ಲಿ ಸಾರ್ಥಕತೆಯನ್ನು ಅನುಭವಿಸಿದ್ದಾರೆ. ಸಾಮಾನ್ಯ ಜನರು ತಮ್ಮ ಪುಟ್ಟ ಮಗಳನ್ನು ಲಾಲಿಸಿ, ಪೋಷಿಸಿ, ಸರಿಯಾದ ಸಂಸ್ಕಾರಗಳನ್ನು ನೀಡಿ, ಪ್ರಾಪ್ತವಯಸ್ಕಳಾದಾಗ, ಅನುರೂಪನಾದ ವರನನ್ನು ನೋಡಿ, ಯೋಗ್ಯತಾನುಸಾರ ಮದುವೆಯನ್ನು ಮಾಡಿ, ಬೇರೆ ಮನೆಗೆ ಕಳುಹಿಸಿದಾಗ ಅವರಿಗೆ ಯಾವ ಪ್ರತಿಫಲದ ಅಪೇಕ್ಷೆ ಇರುತ್ತದೆ? ಸುಸಂಸ್ಕೃತಳಾದ ಮಗಳು ಮತ್ತೊಂದು ಮನೆಯಲ್ಲೂ ಆ ಸಂಸ್ಕೃತಿಯ ಬೆಳಕನ್ನು ಪಸರಿಸುತ್ತಾಳೆಂಬ ಸಂತೃಪ್ತಿ ಸಾಲದೆ? ತಾನು ಮಾಡಿದ ಆ ಸುಕೃತಕೆ ಸಂತೋಷ, ತೃಪ್ತಿಯೇ ಫಲ. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲವೇ ದೊರೆಯುತ್ತದೆ. ಹಿತವಾದ ಮನಸ್ಸಿನ ಪಾಕಕ್ಕೆ ಆ ಸಂತೃಪ್ತಿಯೇ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT