ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸರಿಯ ಸಂಕಟ

Last Updated 23 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ ? !
ನರಕವೆದೆಯಲ್ಲಿ ನೆಲಸೆ ನಿದ್ದೆಗೆಡೆಯೆಲ್ಲಿ ? ||
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ ? |
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ || 201 ||

ಪದ-ಅರ್ಥ: ಹೊಟ್ಟೆಕಿಚ್ಚಾರಿಸಲು=ಹೊಟ್ಟೆಕಿಚ್ಚು+ಆರಿಸಲು, ನರಕವೆದೆಯಲ್ಲಿ=ನರಕ+ಎದೆಯಲ್ಲಿ, ಹರಿಸಲಪ್ಪುದೆ=ಹರಿಸಲು(ಪರಿಹರಿಸಲು, ಬಿಡುಗಡೆ ಮಾಡಲು)+ಅಪ್ಪುದೆ(ಸಾಧ್ಯವೇ), ಮತ್ಸರಿಯ=ಮಾತ್ಸರ್ಯವುಳ್ಳವನ, ಕರುಬಿದನ=ಹೊಟ್ಟೆಕಿಚ್ಚಾದವನ, ಹರಿ=ಭಗವಂತ, ಪೊರೆಗೆ=ರಕ್ಷಿಸಲಿ.

ವಾಚ್ಯಾರ್ಥ: ಹೊಟ್ಟೆಕಿಚ್ಚು ಉರಿಯುತ್ತಿರುವಾಗ ಅದನ್ನು ಆರಿಸಲು ನೀರೆಲ್ಲಿ ಸಿಕ್ಕೀತು ? ಮನುಷ್ಯನ ಎದೆಯಲ್ಲಿ ನರಕವೇ ನಿಂತಾಗ ನಿದ್ದೆ ಬಂದೀತೇ? ಮನುಷ್ಯರು ಮಾತ್ಸರ್ಯ ಉಳ್ಳವನ ಸಂಕಟವನ್ನು ಪರಿಹರಿಸಲು ಶಕ್ತರಾಗುತ್ತಾರೆಯೇ? ಅಂಥ ಮತ್ಸರ ಉಳ್ಳವನನ್ನು ಭಗವಂತನೇ ಕಾಯಬೇಕು.

ವಿವರಣೆ: ಊರಿನಲ್ಲಿ, ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡರೆ ಅದನ್ನು ನೀರು ಹಾಕಿ ಆರಿಸಬಹುದು. ಯಾಕೆಂದರೆ ಬೆಂಕಿ ಕಾಣಿಸುತ್ತದೆ, ಕೆಲವೊಮ್ಮೆ ಬೆಂಕಿಯ ಕಾರಣವೂ ಕಾಣುತ್ತದೆ. ಆದರೆ ಹೊಟ್ಟೆಯಲ್ಲಿರುವ ಮಾತ್ಸರ್ಯವೆಂಬ ಬೆಂಕಿ ಇದೆಯಲ್ಲ, ಇದನ್ನು ಆರಿಸಲು ಯಾವ ನೀರು ಸಾಕಾದೀತು? ಈ ಬೆಂಕಿ ಹೊರಗೆ ಕಂಡೀತೇ? ಮೇಲೆ ನಗುನಗುತ್ತಾ ಇದ್ದಂತೆ ತೋರುವವರು ಒಳಗೆ ಹೊಟ್ಟೆಕಿಚ್ಚಿನ ಬೆಂಕಿಯಲ್ಲಿ ಬೇಯುತ್ತಿದ್ದಾರೆ.

ಅವರಿಬ್ಬರೂ ಅಣ್ಣ ತಮ್ಮಂದಿರು. ಅತ್ಯಂತ ಸುಶಿಕ್ಷಿತ ಮನೆತನದಲ್ಲಿ ಬೆಳೆದವರು. ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದರು.
ಪರದೇಶಗಳಲ್ಲಿ ಅನುಭವ ಪಡೆದವರು. ದೇಶಕ್ಕೆ ಮರಳಿ ಬಂದು ದೊಡ್ಡ ಸಂಸ್ಥೆಯನ್ನು ಒಬ್ಬ ಕಟ್ಟಿದ. ಮತ್ತೊಬ್ಬನೂ ಬಂದು ಸೇರಿಕೊಂಡ. ಸಂಸ್ಥೆ ದೊಡ್ಡದಾಯಿತು. ಇಬ್ಬರ ನಡುವೆ ಹೊಟ್ಟೆಕಿಚ್ಚಿನ ಬೆಂಕಿಯ ಕಿಡಿ ತಗುಲಿಕೊಂಡಿತು. ಮೇಲ್ನೋಟಕ್ಕೆ ಅವರು ಅಣ್ಣ-ತಮ್ಮ, ಆದರೆ ಒಳಗೆ ಅವರು ಶತ್ರುಗಳಿಗಿಂತ ಹೆಚ್ಚು ಉಗ್ರರಾದರು. ಹೃದಯದಲ್ಲಿ ನರಕವೇ ಇಳಿಯಿತು. ಆಗ ಶಾಂತತೆಗೆ, ನಿದ್ರೆಗೆ ಅವಕಾಶವೆಲ್ಲಿ? ಮಾತ್ಸರ್ಯ ನಿಧಾನವಾಗಿ ದ್ವೇಷವಾಯಿತು. ಈ ಪರಿಯ ಮತ್ಸರದ, ದ್ವೇಷದ ಸಂಕಟವನ್ನು ಪರಿಹರಿಸುವುದು ಸುಲಭವೇ? ಒಂದು ದಿನ ಇದು ತಡೆಯಲಾರದ ಮಟ್ಟಕ್ಕೇರಿತು. ತಮ್ಮನೇ ಕೆಲವು ದುಷ್ಟರಿಗೆ ಹಣ ನೀಡಿ ಅಣ್ಣನನ್ನೇ ಕೊಲ್ಲಿಸಿಬಿಟ್ಟ. ಅಪರಾಧಕ್ಕೆ ಭಾಗಿಯಾಗಿ ತಾನೂ ಜೈಲಿಗೆ ಹೋದ. ಮಾತ್ಸರ್ಯ ಯಾರಿಗೆ ಸುಖ ತಂದೀತು? ಕಗ್ಗ ಹೇಳುವುದೂ ಅದನ್ನೇ. ಯಾವ ಮನುಷ್ಯರೂ ಮಾತ್ಸರ್ಯದಿಂದ ಕುದಿಯುವ ವ್ಯಕ್ತಿಯನ್ನು ಪಾರುಮಾಡಲಾರರು. ಅವರನ್ನು ಸಾಧ್ಯವಿದ್ದರೆ ದೇವರೇ ಪಾರುಮಾಡಬೇಕು.

ಇದೊಂದು ಅತ್ಯಂತ ಮಾರ್ಮಿಕವಾದ ಚೌಪದಿ. ಎಲ್ಲವೂ ಚೆಂದವಾಗಿದ್ದಾಗ, ಮನುಷ್ಯ ಸಾಧನೆಯ ತುತ್ತ ತುದಿಯಲ್ಲಿದ್ದಾಗ,
ತೃಪ್ತಿಯ ಶಿಖರದಲ್ಲಿದ್ದಾಗ ಯಾವುದಾದರೂ ಒಂದು ಗುಣ ಅವನನ್ನು ಪ್ರಪಾತಕ್ಕೆ ಎಳೆದು ತರುವುದಾದರೆ ಅದು ಮತ್ಸರವೇ, ಹೊಟ್ಟೆಕಿಚ್ಚೇ. ಈ ಹೊಟ್ಟೆಕಿಚ್ಚೇ ರಾಮನನ್ನು ಕಾಡಿಗೆ ಕಳಿಸಿತು, ಕುರುಕ್ಷೇತ್ರಯುದ್ಧವಾಗುವಂತೆ ಮಾಡಿತು. ಅದರ ಬಗ್ಗೆ ಎಷ್ಟು ಎಚ್ಚರವಾಗಿದ್ದರೆ ಅಷ್ಟು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT