ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವೃಕ್ಷರಕ್ಷಣೆ - ಪರಮಧರ್ಮ

Last Updated 31 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ |
ತಿರೆಯ ಪಯಣದ ಹೊರೆಯನಿನಿತು
ಸುಳುವೆನಿಪಾ ||
ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |
ಪರಮ ಧರ್ಮವದೆಲವೊ –
ಮಂಕುತಿಮ್ಮ || 746 ||

ಪದ-ಅರ್ಥ: ನೆರಳನಿನತನು= ನೆರಳನು+ ಇನಿತನು (ಸ್ವಲ್ಪವನ್ನು), ದಣಿವನಿನಿತನು= ದಣಿವನು+ ಇನಿತನು, ತಿರೆಯ= ಭೂಮಿಯ, ಹೊರೆಯನಿನಿತು+ ಹೊರೆಯನು+ ಇನಿತು, ಸುಳವೆನಿಪಾ= ಸುಳುವು (ಸುಲಭ)+ ಎನಿಪ+ ಆ, ತರುವಾಗಿ= ಮರವಾಗಿ, ಪರಮಧರ್ಮವದೆಲವೊ= ಪರಮಧರ್ಮವು+ ಅದೆ+ ಎಲವೊ

ವಾಚ್ಯಾರ್ಥ: ಕೊಂಚ ನೆರಳನ್ನು ನೀಡುವ, ಸ್ವಲ್ಪ ದಣಿವನ್ನು ಕಳೆವ, ಪ್ರಯಾಣದ ಆಯಾಸವನ್ನು ಸ್ವಲ್ಪ ಕಡಿಮೆ ಮಾಡುವ ಮರದಂತೆ ನೀನು ಮನೆಯಲ್ಲೋ, ಹೊರಗೋ ಬೆಳೆಯುತ್ತಿದ್ದರೆ, ಅದೇ ಪರಮಧರ್ಮ.

ವಿವರಣೆ: ಪ್ರಕೃತಿ ನಮಗೆ ಅನೇಕ ಉಡುಗೊರೆಗಳನ್ನು ನೀಡಿದೆ. ಅವುಗಳಲ್ಲಿ ಮರಗಳು ಮತ್ತು ಸಸ್ಯಗಳು ಅತ್ಯಂತ ಮುಖ್ಯವಾದವುಗಳು. ಅವುಗಳಿಲ್ಲದೆ ಅಸ್ತಿತ್ವವಿಲ್ಲ. ಈ ಕಗ್ಗ ಹೇಳುತ್ತದೆ, ಮರ ನಮಗೆ ನೆರಳು ನೀಡುತ್ತದೆ. ದಣಿವನ್ನು ಹೋಗಲಾಡಿಸುತ್ತದೆ, ಪ್ರಯಾಣದ ಆಯಾಸವನ್ನು ಇಳಿಸುತ್ತದೆ. ಅದಷ್ಟೇ ಇಲ್ಲ, ಇತ್ತೀಚಿನ ವೈಜ್ಞಾನಿಕ ವರದಿಗಳಂತೆ ಅವು ಮನುಷ್ಯನಿಗೆ ಆಮ್ಲಜನಕದ ಸಿಲಿಂಡರ್‍ಗಳಿದ್ದಂತೆ. ಒಂದು ಅರಳಿಮರ ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳ ಕಾಲ ಆಮ್ಲಜನಕ ನೀಡುತ್ತದೆ. ಆಲದ ಮರ ಇಪ್ಪತ್ತು ತಾಸು, ಬೇವಿನ ಮರ ಹದಿನೆಂಟು ತಾಸು ಸತತವಾಗಿ ಆಮ್ಲಜನಕವನ್ನು ಸೂಸುತ್ತ ನಮ್ಮ ಪ್ರಪಂಚ ಸೃಷ್ಟಿಸುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಿ ಕಾಪಾಡುತ್ತವೆ.

ಅದಕ್ಕೇ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಮರವನ್ನು ಒಂದು ದೇವತೆ ಎಂದೂ ಪೂಜಿಸ
ಲಾಗುತ್ತದೆ. ‘ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೀ| ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ||’. ಮೂಲದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು ಮತ್ತು ತುದಿಯಲ್ಲಿ ಶಿವರೂಪವಾಗಿರುವ ವೃಕ್ಷರಾಜನಿಗೆ ನಮಸ್ಕಾರ ಎಂದು ಮರಗಳ ಶ್ರೇಷ್ಠತೆಯನ್ನು ತಿಳಿಸುತ್ತದೆ. ನಮ್ಮ ಬದುಕು ಕೂಡ ಮರಗಳಂತೆ ಪ್ರಯೋಜನಕಾರಿಯಾಗಲಿ ಎಂದು ಅಪೇಕ್ಷೆಪಡಬೇಕು. ಡಿ.ವಿ.ಜಿ ಯವರೇ ತಮ್ಮ ಅತ್ಯಂತ ಪ್ರಖ್ಯಾತವಾದ ‘ವನಸುಮ’ ಎಂಬ ಪದ್ಯದಲ್ಲಿ ಹೇಳುತ್ತಾರೆ,
ಉಪಕಾರಿ ನಾನು, ಎನ್‍ಉಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾದಪದಂತೆ,
ನೈಜಮಾದೊಲ್ಪಿನಿಂ ಬಾಳ್ಪವೊಲು ಮನವನನುಗೊಳಿಸು
ಗುರುವೇ, ಹೇ ದೇವ.

ತಾನು ಉಪಕಾರಿ, ಜಗತ್ತಿಗೆ ನನ್ನ ಉಪಕೃತಿ ಇದೆಯೆಂಬ ಭಾವನೆ ಒಂದು ಚೂರೂ ಇಲ್ಲದೆ ಜನರಿಗೆ ಆಶ್ರ್ರಯವನ್ನಿತ್ತು, ಹಣ್ಣು, ಹೂವುಗಳನ್ನು ಮತ್ತು ಕೊನೆಗೆ ತನ್ನನ್ನೇ ನೀಡುವ ಮರದಂತೆ ನಮ್ಮ ಜೀವನವನ್ನು ಅನುಗೊಳಿಸು ಎಂದು ಬೇಡುತ್ತಾರೆ. ಆ ಮರಗಳ ಹಾಗೆ ಒಳಗೆ ನಮ್ಮ ಸಂಸಾರದಲ್ಲಿ ಮತ್ತು ಹೊರಗೆ ಪ್ರಪಂಚದಲ್ಲಿ ನಾವು ಉಳಿದವರಿಗೆ ಆಶ್ರಯವನ್ನೋ, ಸಹಕಾರವನ್ನೋ, ನೆಮ್ಮದಿಯನ್ನೋ ನೀಡುವುದಾದರೆ, ಅದೇ ಪರಮ ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT