ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಶಿವನ ನಿರ್ದ್ವಂದ್ವ

Last Updated 24 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ|
ಲಯವಡಿಸುವುದದೇನು ಶಿವಯೋಗಲೀಲೆ? ||
ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- |
ನ್ವಯಿಸಿಕೊಂಡಿಹುದೇನು? – ಮಂಕುತಿಮ್ಮ

|| 613 ||

ಪದ-ಅರ್ಥ: ನಯನಯುಗದಿಂ=ಎರಡು ಕಣ್ಣುಗಳಿಂದ, ಪೊರೆದು=ರಕ್ಷಿಸಿ, ನಿಟಿಲಾಕ್ಷಿ=ಬೆಂಕಿಯನ್ನು ಬಿಡುವ ಮೂರನೇ ಕಣ್ಣು, ಲಯವಡಿಸುವುದದೇನು=ಲಯವಡಿಸುವುದು(ಲಯವನ್ನುಂಟು ಮಾಡುವುದು)+ಅದೇನು, ಉಮೆಯನನ್ವಯಿಸಿಕೊಂಡಿಹುದೇನು=ಉಮೆಯನು+
ಅನ್ವಯಿಸಿಕೊಂಡಿಹುದು(ಸೇರಿಸಿಕೊಂಡಿಹುದು)+ಏನು.

ವಾಚ್ಯಾರ್ಥ: ಎರಡು ಕಣ್ಣುಗಳಿಂದ ಲೋಕವನ್ನು ರಕ್ಷಿಸುವ ಈಶ್ವರ, ತನ್ನ ಮೂರನೆಯ ಕಣ್ಣಿಂದ ಸುಟ್ಟು ಹಾಕಿ, ಲಯ ಮಾಡುವುದು ಅದೇನು ಶಿವಲೀಲೆ? ಮನ್ಮಥನನ್ನು ಸುಟ್ಟು, ಜಯಿಸಿದ ಬಳಿಕ ಉಮೆಯನ್ನು ತನ್ನ ಶರೀರದಲ್ಲೇ ಸೇರಿಸಿಕೊಂಡು ಅರ್ಧನಾರೀಶ್ವರನಾಗಿರುವುದು ಅದೇನು?

ವಿವರಣೆ: ಮೇಲ್ನೋಟಕ್ಕೆ ವಿರೋಧಾಭಾಸದಂತೆ ತೋರುವುದನ್ನು ಕಗ್ಗ ಕುತೂಹಲದಿಂದ ಕೇಳುತ್ತದೆ. ತನ್ನ ಎರಡು ಕಣ್ಣುಗಳಿಂದ ಜಗತ್ತನ್ನು ರಕ್ಷಿಸುವ ಶಿವ, ತನ್ನ ಮೂರನೆಯ ಕಣ್ಣಿಂದ ಪ್ರಪಂಚವನ್ನು ಲಯಗೊಳಿಸುವುದು ಎಂತಹ ಶಿವಲೀಲೆ? ನಂತರ ಅಪೇಕ್ಷೆ, ಕಾಮದ ಸಂಕೇತವಾದ ಮನ್ಮಥನನ್ನು ಸುಟ್ಟು ಬೂದಿ ಮಾಡಿದ ಮೇಲೆ, ಅಪೇಕ್ಷೆಯಿಂದ, ಪ್ರೇಮದಿಂದ ತನ್ನ ಸತಿ ಉಮೆಯನ್ನು ತನ್ನ ದೇಹದಲ್ಲೇ ಸೇರಿಸಿಕೊಂಡು ಅರ್ಧನಾರೀಶ್ವರನಾದದ್ದೇಕೆ? ಇದುವರೆಗೂ, ಯಾವ ಗಂಡನೂ, ಎಷ್ಟೇ ಪ್ರೀತಿಯ ಹೆಂಡತಿಯಾಗಿದ್ದರೂ, ಇಷ್ಟು ಪರಮಪ್ರೀತಿಯಿಂದ ದೇಹದಲ್ಲೇ ಸೇರಿಸಿಕೊಂಡಿದ್ದಿಲ್ಲ. ಇದೇನು ಶಿವನ ರೀತಿ?

ಇದು ಕುತೂಹಲದ ಪ್ರಶ್ನೆ. ಕಗ್ಗ, ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಪ್ರೇರೇಪಿಸುತ್ತದೆ. ಸರಿಯಾಗಿ ಗಮನಿಸಿದರೆ ಇಲ್ಲಿ ದ್ವಂದ್ವವೇ ಇಲ್ಲ! ತನ್ನ ಎರಡು ಕಣ್ಣುಗಳಿಂದ ಶಿವ ಜಗತ್ತನ್ನು ರಕ್ಷಿಸುತ್ತಾನೆ. ಶಿವ ಶಂಕರನೂ ಹೌದು. ಶಂ-ಕರ ಎಂದರೆ ಶುಭವನ್ನು ಮಾಡುವವನು. ಇಲ್ಲೊಂದು ಸುಂದರ ಸಂಕೇತವಿದೆ. ಶಿವನ ಎರಡು ಕಣ್ಣುಗಳು ಭೌತಿಕ ಪ್ರಪಂಚವನ್ನು ನೋಡಿ ಕಾಪಾಡುತ್ತವೆ. ನಮ್ಮ ಕಣ್ಣುಗಳೂ ಕೇವಲ ಭೌತಿಕ ಪ್ರಪಂಚವನ್ನು ಕಾಣಬಲ್ಲವು. ಭೌತಿಕವಲ್ಲದ ತತ್ವವನ್ನು ಕಾಣುವ ಸಾಮರ್ಥ್ಯ ಈ ಎರಡು ಕಣ್ಣುಗಳಿಗಿಲ್ಲ. ಆದರೆ ಶಿವ ಮಹಾಯೋಗಿ, ಅವನ ಮೂರನೆಯ ಕಣ್ಣು ಜ್ಞಾನಚಕ್ಷು. ಅದು ಜ್ಞಾನದ ಕಣ್ಣು. ಈ ಜ್ಞಾನದ ಕಣ್ಣಿನಿಂದಲೇ ಆತ ಕಾಮವನ್ನು ಸುಟ್ಟ. ಕಾಮವೆಂದರೆ ಆಸೆ, ಅಪೇಕ್ಷೆ. ಕಾಮ ಒಂದು ಹಂತದಲ್ಲಿ ಅಪೇಕ್ಷಿತ ಮತ್ತು ಅವಶ್ಯ. ಆದರೆ ಅದು ಅದರಿಂದ ಮೇಲೆದ್ದಾಗ ಅಪಾಯಕಾರಿಯಾಗುತ್ತದೆ. ಅದನ್ನು ಕರಗಿಸಲು ಜ್ಞಾನವೇ ಬೇಕು. ಅಂದರೆ ತೆರೆದ ಎರಡು ಕಣ್ಣುಗಳಿಂದ ಭೌತಿಕ ಪ್ರಪಂಚವನ್ನು ಕಾಪಾಡುವ ಶಿವ, ತನ್ನ ಮೂರನೆಯ ಜ್ಞಾನಚಕ್ಷುವಿನಿಂದ ಅನಪೇಕ್ಷಿತ, ಅಪಾಯಕಾರಿ ಕಾಮವನ್ನು ಸುಟ್ಟು ಪ್ರಪಂಚವನ್ನು ಕಾಪಾಡುತ್ತಾನೆ. ಶಿವನ ಮೂರೂ ಕಣ್ಣುಗಳ ಉದ್ದೇಶ ಪ್ರಪಂಚದ ರಕ್ಷಣೆ.

ಶಿವ ಕಾಮನನ್ನು ಕೊಂದ, ನಿಜ, ಆದರೆ ಉಮೆಯನ್ನು ತನ್ನ ದೇಹದಲ್ಲೇ ಏಕೆ ಉಳಿಸಿಕೊಂಡ? ಕಾಮಕ್ಕೂ, ಪ್ರೇಮಕ್ಕೂ ತುಂಬ ವ್ಯತ್ಯಾಸವಿದೆ. ಕಾಮ ಕ್ಷಣಿಕ, ಪ್ರೇಮ ಶಾಶ್ವತ. ಕಾಮ ದೈಹಿಕ, ಪ್ರೇಮ ಮಾನಸಿಕ. ಕಾಮವನ್ನು ಒಂದು ಮಟ್ಟಕ್ಕೇ ನಿಲ್ಲಿಸಿ, ಕಟ್ಟಿಹಾಕಿದ ಶಿವ. ಅರ್ಧನಾರೀಶ್ವರ ಕಲ್ಪನೆ, ಶಿವ-ಶಕ್ತಿಯರ ಎರಡು ಆಯಾಮಗಳ ಸಂಯೋಜನೆ. ಪ್ರಕೃತಿ ಎಂದರೆ ಸೃಷ್ಟಿ. ಪುರುಷ ಎನ್ನುವುದು ಸೃಷ್ಟಿಯ ಮೂಲ. ಪ್ರಕೃತಿ ಕಾಣುತ್ತದೆ, ಪುರುಷ ಕಾಣುವುದಿಲ್ಲ. ಸೃಷ್ಟಿಗೆ ಎರಡೂ ಬೇಕು ಮತ್ತು ಎರಡೂ ಅಷ್ಟೇ ಮುಖ್ಯ. ಅದಕ್ಕೇ ಅವನು ಅರ್ಧನಾರೀಶ್ವರ. ಸ್ತ್ರೀಗೆ ಸಮಾನಸ್ಥಾನ ಕೊಡುವುದರೊಂದಿಗೆ, ಮುಖ್ಯವಾದ ಎಡಭಾಗವನ್ನು, ಹೃದಯದ ಭಾಗವನ್ನು ಶಕ್ತಿಯಾಗಿ ತೋರುತ್ತಾರೆ. ಅದಕ್ಕೇ ಅರ್ಧನಾರೀಶ್ವರ ಕಲ್ಪನೆ ಅದ್ಭುತವಾದದ್ದು. ಇದು ಪ್ರೇಮ, ಕಾಮದ ಮೇಲೆ ವಿಜಯ ಸಾಧಿಸಿದ್ದನ್ನು, ಪುರುಷ ಮತ್ತು ಸ್ತ್ರೀ ಇಬ್ಬರೂ ಸಮಾನಾಧಿಕಾರಿಗಳು ಎಂದು ತೋರುವ ಸುಂದರ ಪ್ರತಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT