ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕಷ್ಟದ ತೀರ್ಮಾನ

Last Updated 21 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ರುಚಿಯೊಪ್ಪೆ ರಸನೆಗದು ಶೂಲವಹುದುದರಕ್ಕೆ |

ತ್ವಚೆ ಬೇಳ್ಪ ತಂಗಾಳಿಯಿಂ ಬೇನೆಯೆದೆಗೆ ||
ರಚಿಸಿದವನಿಂತೊಡಲೊಳಿಡೆ ವಿಷಯ ಕುಟಿಲಗಳ |
ಉಚಿತವಾವುದೊ ನಿನಗೆ – ಮಂಕುತಿಮ್ಮ || 347 ||

ಪದ-ಅರ್ಥ: ರುಚಿಯೊಪ್ಪೆ=ರುಚಿ+ಒಪ್ಪೆ, ರಸನೆಗದು=ರಸನೆಗೆ (ನಾಲಿಗೆಗೆ)+ಅದು, ಶೂಲವಹುದರಕ್ಕೆ=ಶೂಲವಹುದು+ಅದು+ಉದರಕ್ಕೆ, ತ್ವಚೆ=ಚರ್ಮ, ಬೇಳ್ಪ=ಬೇಡುವ, ಬೇನೆಯೆದೆಗೆ=ಬೇನೆ+ಎದೆಗೆ, ರಚಿಸಿದವನಿಂತೊಡಲೊಳಿಡೆ=ರಚಿಸಿದವನು+ಇಂತು+ಒಡಲೊಳು+ಇಡೆ

ವಾಚ್ಯಾರ್ಥ: ಯಾವುದು ನಾಲಿಗೆ ರುಚಿ ಎನ್ನಿಸುತ್ತದೆಯೋ ಅದು ಹೊಟ್ಟೆಗೆ ನೋವನ್ನು ತರುತ್ತದೆ. ಚರ್ಮ ಅಪೇಕ್ಷಿಸುವ ತಂಗಾಳಿಯಿಂದ ಎದೆನೋವು ಬಂದೀತು. ಈ ಪ್ರಪಂಚವನ್ನು ಸೃಷ್ಟಿಸಿದವನೇ ಈ ಅಸಮಾನತೆಯನ್ನು, ಮೋಸವನ್ನು ಇಟ್ಟಿರುವಾಗ ನಮಗೆ ಯಾವುದು ಒಳ್ಳೆಯದು ಎಂಬುದನ್ನು ತಿಳಿಯುವುದು ಹೇಗೆ ?

ವಿವರಣೆ: ನಮ್ಮ ಬದುಕಿಗೆ ಯಾವುದು ಒಳ್ಳೆಯದು ಎಂಬುದನ್ನು ತಿಳಿಯುವುದು ಹೇಗೆ? ಯಾಕೆಂದರೆ ಯಾವುದು ಒಳ್ಳೆಯದೆಂದು ಬಯಸಿ ಬಯಸಿ ಪಡೆಯುತ್ತೇವೆಯೋ ಅದೇ ತೊಂದರೆಗೆ ಕಾರಣವಾಗುತ್ತದೆ. ಗಾಂಧಾರಿ ಮಕ್ಕಳಿಲ್ಲವೆಂದು ಬಯಸಿ, ತನಗಿಂತ ಮೊದಲೇ ಕುಂತಿ ಗಂಡುಮಗುವನ್ನು ಹಡೆದಳೆಂಬ ಕೋಪದಿಂದ ಬಸುರು ಹೊಸೆದುಕೊಂಡು ನಂತರ ವ್ಯಾಸ ಕೃಪೆಯಿಂದ ನೂರು ಮಕ್ಕಳನ್ನು ಪಡೆದಳು. ಬೇಡಿ ಪಡೆದ ನೂರು ಮಕ್ಕಳಿಂದ ದೊರೆತದ್ದೇನು? ಸದಾ ಕಾಲದ ಸಂಕಟ, ಕೊನೆಗೆ ಪುತ್ರರ ಸಾವಿನ ನಿರಂತರ ದು:ಖ. ಕೈಕೇಯಿ ಬಯಸಿದ್ದು ತನ್ನ ಮಗನಿಗೆ ರಾಜ್ಯಪಟ್ಟ ಆದರೆ ದೊರೆತದ್ದು ವೈಧವ್ಯ, ಮಗನಿಂದ ತಿರಸ್ಕಾರ. ಬಂಗಾರದ ಆಸೆಯಿಂದ ಮಿಡಾಸ್ ದೇವತೆಗಳಿಂದ ವರ ಪಡೆದ. ತಾನು ಮುಟ್ಟಿದ್ದೆಲ್ಲ ಬಂಗಾರವಾಗಲಿ ಎಂಬುದು ಅವನ ಅಪೇಕ್ಷೆ. ಮೊದಮೊದಲು ಮುಟ್ಟಿದ್ದೆಲ್ಲ ಬಂಗಾರವಾದಾಗ ಸಂತಸದ ಬುಗ್ಗೆ. ಪ್ರೀತಿಯ ಮಗಳು ಓಡಿಬಂದು ಅಪ್ಪಿದಾಗ ಆಕೆ ಬಂಗಾರದ ಮೂರ್ತಿಯಾಗಿ ನಿಂತಾಗ ತಾನು ಪಡೆದದ್ದು ವರವಲ್ಲ, ಶಾಪ ಎಂಬುದು ತಿಳಿಯಿತು.

ನನ್ನ ಪರಿಚಿತರ ಸಂಬಂಧಿಕರೊಬ್ಬರು ಝಾನ್ಸಿಯಲ್ಲಿ ಒಂದು ದೊಡ್ಡ ಮನೆ ಕಟ್ಟಲು ತೀರ್ಮಾನಿಸಿದರು. ಅವರು ತುಂಬ ಅಪೇಕ್ಷೆಪಟ್ಟು ವಿಮಾನ ನಿಲ್ದಾಣದ ಆವರಣದ ಹೊರಗಡೆಯೇ ಮೂರು ಅಂತಸ್ತಿನ ಮನೆ ಕಟ್ಟಿಸಿದರು. ಅದು ತುಂಬ ಚೆಂದದ ಮನೆ, ಮೂರು ಕೋಟಿ ರೂಪಾಯಿ ಖರ್ಚಾಗಿತ್ತು. ಬಂದವರೆಲ್ಲ ವರ್ಣಿಸಿ, ಹೊಗಳಿದರು. ಒಂದು ವರ್ಷ ಕಳೆಯಿತು. ಒಂದು ದಿನ ಬೆಳಿಗ್ಗೆ ಯುದ್ಧವಿಮಾನವೊಂದು ಮೇಲೆದ್ದು ಹಾರುತ್ತ ಕೆಳಗಿಳಿಯುವಾಗ ಯಾವುದೋ ಯಾಂತ್ರಿಕ ತೊಂದರೆಯಿಂದಾಗಿ ರನ್‍ವೇದ ಮೇಲೆ ಇಳಿಯದೆ ನೇರವಾಗಿ ಈ ಹೊಸ ಕಟ್ಟಡಕ್ಕೆ ಹೊಡೆದು ನುಚ್ಚು ನೂರಾಯಿತು. ಭಯಂಕರವಾದ ಬೆಂಕಿ ಕಟ್ಟಡವನ್ನು ಆವರಿಸಿತು. ಕಟ್ಟಡ ಕುಸಿಯುವುದರೊಂದಿಗೆ ದಂಪತಿಗಳಿಬ್ಬರೂ ಸಜೀವ ದಹನ ಹೊಂದಿದ್ದರು. ಬಯಸಿದ್ದು ಸಂತೋಷ, ಪಡೆದದ್ದು ಸಾವು. ಅದಕ್ಕೇ ದಾಸರು ಕೇಳಿದರು, “ಏನ ಬೇಡಲಿ ನಿನ್ನ ಬಳಿಗೆ ಬಂದು?” ಯಾಕೆಂದರೆ ಏನು ಬೇಡಬೇಕೆಂಬ ತಿಳುವಳಿಕೆ ನಮಗಿಲ್ಲ.

ರುಚಿ ಹತ್ತಿತೆಂದು ಅಪೇಕ್ಷಿಸಿ ತಿಂದ “ಜಂಕ್ ಆಹಾರ” ಹೊಟ್ಟೆನೋವು ತರುತ್ತದೆ. ಶೆಕೆ ಇದೆಯೆಂದು ಏರ್ ಕಂಡೀಶನರ್ ಕೆಳಗೇ ಕುಳಿತವನಿಗೆ ನೆಗಡಿ, ಶೀತ ಮತ್ತು ಎದೆನೋವು ಬರುತ್ತದೆ. ಭಗವಂತ ಅಪೇಕ್ಷೆ ಮತ್ತು ವಿರುದ್ಧ ಪ್ರತಿಕ್ರಿಯೆಗಳನ್ನು ಜೊತೆಯಾಗಿಯೇ ಇಟ್ಟು ಯಾವುದು ಸರಿ ಎಂಬುದರತೀರ್ಮಾನಮಾಡದಂತೆ ಮಾಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT