ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರಜ್ಞೆಯನ್ನು ದಾಟಿದ ಲಕ್ಷ್ಮಿ

Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಿಥಿಲೆಯ ರಾಜ ವಿದೇಹನಿಗೆ ಎರಡು ಕೆಲಸಗಳನ್ನು ಒಮ್ಮೆಗೇ ಮಾಡಬೇಕೆಂಬ ಮನಸ್ಸಾಯಿತು. ಮೊದಲನೆಯದು ತನ್ನ ಅಮಾತ್ಯರು ಎಷ್ಟು ಅಜ್ಞರು ಎಂಬುದನ್ನು ಎಲ್ಲರಿಗೂ ತೋರುವುದು ಮತ್ತು ಮಹೋಷಧಕುಮಾರನ ಬುದ್ಧಿಮತ್ತೆಯನ್ನು ತಿಳಿಯಪಡಿಸುವುದು. ಒಂದು ದಿನ ಪೂರ್ತಿ ದರ್ಬಾರ ನಡೆದಿದ್ದಾಗ ರಾಜ ತನ್ನ ಆಸ್ಥಾನದ ರತ್ನಗಳಾದ ಅಮಾತ್ಯರುಗಳಿಗೆ ಒಂದು ಪ್ರಶ್ನೆ ಕೇಳಿದ. ‘ಇಬ್ಬರು ವ್ಯಕ್ತಿಗಳಿದ್ದಾರೆ. ಒಬ್ಬ ಮನುಷ್ಯ ಪ್ರಜ್ಞಾವಂತ, ವಿನಯಿ ಮತ್ತು ಸದಾಚಾರಿ, ಆದರೆ ಬಡವ. ಮತ್ತೊಬ್ಬ ಅತ್ಯಂತ ಶ್ರೀಮಂತ. ಆದರೆ ಅವನು ಮಹಾಗರ್ವಿ, ಪ್ರಜ್ಞಾರಹಿತ ಮತ್ತು ದುರಾಚಾರಿ. ಇಬ್ಬರಲ್ಲಿ ಯಾರು ಶ್ರೇಷ್ಠರು? ಯಾರನ್ನು ಜನ ಒಪ್ಪುತ್ತಾರೆ?.’

ಅಮಾತ್ಯ ಸೆನೆಕನಿಗೆ ಇದು ತುಂಬ ಸುಲಭದ ಪ್ರಶ್ನೆ. ಆತ ತಕ್ಷಣ ಉತ್ತರಕೊಟ್ಟ. ‘ಇದರಲ್ಲಿ ಚಿಂತಿಸುವಂಥದ್ದೇನಿದೆ ಮಹಾಸ್ವಾಮಿ? ಪ್ರಪಂಚದಲ್ಲಿ ಮೂರ್ಖರು, ವಿದ್ಯೆ ಪಡೆದವರು, ವಿದ್ಯೆ ಇಲ್ಲದವರು, ಉತ್ತಮರು ಎಲ್ಲರೂ ಶ್ರೀಮಂತ ಮನುಷ್ಯನ ನೌಕರರಾಗಿ ಬಿಡುತ್ತಾರೆ. ಹಣಕ್ಕಾಗಿ ದಾಸ್ಯವನ್ನು ಪಡೆಯುತ್ತಾರೆ. ಆದ್ದರಿಂದ ಗುಣಗಳಿಗಿಂತ ಹಣ ಮುಖ್ಯ’. ‘ಈ ಮಾತು ಸರಿಯೇ? ನಿಮಗೆಲ್ಲ ಒಪ್ಪಿತವಿದೆಯೆ?’ ಕೇಳಿದ ರಾಜ. ಅವನ ಪ್ರಶ್ನೆ ಮುಖ್ಯವಾಗಿ ಇದ್ದದ್ದು ಮಹೋಷಧಕುಮಾರನನ್ನು ಉದ್ದೇಶಿಸಿದ್ದು. ಕುಮಾರ ತಕ್ಷಣವೇ ಹೇಳಿದ, ‘ಮಹಾರಾಜ, ಹಣವನ್ನೇ ಶ್ರೇಷ್ಠ ಎಂದುಕೊಳ್ಳುವ ಮೂರ್ಖ ಪಾಪ-ಕರ್ಮ ಮಾಡುತ್ತಾನೆ. ಈ ಲೋಕವನ್ನು ಮಾತ್ರ ಗಮನಿಸುತ್ತ ಪರಲೋಕವನ್ನು ಮರೆಯುವ ಆತ ಎರಡೂ ಕಡೆಗೂ ಪಾಪಕ್ಕೆ ಗುರಿಯಾಗುತ್ತಾನೆ. ಆದ್ದರಿಂದ ಮೂರ್ಖ ಶ್ರೀಮಂತ ಮತ್ತು ಬಡವ ಪಂಡಿತರಲ್ಲಿ, ಬಡವ ಪಂಡಿತನೇ ಶ್ರೇಷ್ಠ’. ಸೆನೆಕ ಹೇಳಿದ, ‘ಮಹಾರಾಜ, ಮಹೋಷಧ ಇನ್ನು ಹುಡುಗ. ಅವನ ಬಾಯಿಯಿಂದ ಕುಡಿದ ಹಾಲಿನ ವಾಸನೆ ಬರುತ್ತದೆ. ಅವನಿಗೆ ಈ ವಿಷಯ ಏನು ಗೊತ್ತು? ಜ್ಞಾನದಿಂದ, ತಿಳವಳಿಕೆಯಿಂದ, ಒಳ್ಳೆಯ ನಡತೆಯಿಂದ ಐಶ್ವರ್ಯ ಪ್ರಾಪ್ತಿಯಾಗುವುದಿಲ್ಲ. ಏನೂ ಓದದ ನಮ್ಮ ಗೋರಿಮಂದನ ಶ್ರೇಷ್ಠಿಯನ್ನು ನೋಡು. ಅವನ ಬಳಿ ಅಪಾರ ಐಶ್ವರ್ಯ, ಅದರಿಂದ ಅವನ ಸುಖ ಭೋಗ. ಆದರೆ ಅಪಾರ ವಿದ್ಯೆ ಪಡೆದ ಬಡ ಬ್ರಾಹ್ಮಣನನ್ನು ನೋಡು. ಅವನು ಬದುಕುವುದು ಭಿಕ್ಷೆಯಿಂದ. ಆದ್ದರಿಂದ ಜ್ಞಾನಕ್ಕಿಂತ ಐಶ್ವರ್ಯವೇ ಶ್ರೇಷ್ಠ’.

‘ಹಣಕ್ಕೂ, ಆನಂದಕ್ಕೂ ಯಾವುದೇ ಸಂಬಂಧವಿಲ್ಲ. ಭಿಕ್ಷೆಯಿಂದ ಬದುಕುವ ಬ್ರಾಹ್ಮಣನಿಗೆ ತೃಪ್ತಿ ಇದೆ, ಯಾಕೆಂದರೆ ಅವನಲ್ಲಿ ಜ್ಞಾನವಿದೆ. ಈ ಶ್ರೀಮಂತನಿಗೆ ತೃಪ್ತಿಯೇ ಇಲ್ಲ. ಸದಾಕಾಲ ಬಿಸಿಲಿನಲ್ಲಿ ಬಿದ್ದ ಮೀನಿನಂತೆ ಒದ್ದಾಡುತ್ತಾನೆ. ಬದುಕಿನಲ್ಲಿ ಸಂತೋಷ ಬರುವುದು ಆನಂದದಿಂದ, ಐಶ್ವರ್ಯದಿಂದಲ್ಲ’ ಎಂದ ಕುಮಾರ. ಸೆನೆಕ ಬಿಟ್ಟಾನೆಯೆ? ‘ಕಾಡಿನಲ್ಲಿ ರುಚಿಯಾದ ಹಣ್ಣುಗಳಿರುವ ಮರವನ್ನೇ ಎಲ್ಲ ಪಕ್ಷಿಗಳು ಮುತ್ತಿಕೊಳ್ಳುವಂತೆ, ಶ್ರೀಮಂತನನ್ನು ಮಾತ್ರ ಜನ ಆದರಿಸುತ್ತಾರೆ’ ಎಂದ. ಅದಕ್ಕೆ ಮಹೋಷಧಕುಮಾರ ಹೇಳಿದ, ‘ಆದರೆ ಹಣ್ಣಿಲ್ಲದಾಗ ಆ ಮರಕ್ಕೆ ಯಾವ ಪಕ್ಷಿಯೂ ಬರದಂತೆ, ಮನುಷ್ಯನ ಶ್ರೀಮಂತಿಕೆ ಕರಗಿದೊಡನೆ ಜನ ದೂರವಾಗುತ್ತಾರೆ. ಪ್ರಪಂಚ ನೆನಪಿನಲ್ಲಿಡುವುದು ಸಾಧಕರನ್ನು, ಜ್ಞಾನಿಗಳನ್ನು, ಬರೀ ಶ್ರೀಮಂತರನ್ನಲ್ಲ. ಭೋಗರತ ಮನುಷ್ಯರಿಗೆ ಮಾತ್ರ ಲಕ್ಷ್ಮಿ ಪ್ರಿಯಳು. ಜ್ಞಾನವೃದ್ಧರ ಜ್ಞಾನವೇ ಅತುಲನೀಯ. ಲಕ್ಷ್ಮಿ ಎಂದಿಗೂ ಪ್ರಜ್ಞೆಯನ್ನು ದಾಟಲಾರಳು’. ಜನ ಸಾಧು, ಸಾಧು ಎಂದು ಕುಮಾರನನ್ನು ಹೊಗಳಿದರು. ಸೆನೆಕ ಸುಮ್ಮನಾದ. ರಾಜನಿಗೆ ಸಂತೋಷವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT