ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಕರುಣೆ ಅಪೇಕ್ಷಿಸುವ ದೋಷ

Last Updated 28 ಜುಲೈ 2020, 21:25 IST
ಅಕ್ಷರ ಗಾತ್ರ

ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ |

ಮಣ್ಣು ಕರುಳುಗಳೆಸಕವವನ ಮೈದೊಡವು ||
ಬಣ್ಣಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು |
ಕಣ್ಣ ದುರುಗುಟಿಸದಿರು – ಮಂಕುತಿಮ್ಮ || 317 ||

ಪದ-ಅರ್ಥ: ನರಜಂತುವವನ=ನರಜಂತು+
ಅವನ, ನೆಲೆ=ಸ್ಥಿತಿ, ವಾಸ್ತವ, ಕರುಳುಗಳೆಸಕ
ವವನ=ಕರುಳುಗಳು+ಎಸಕ(ಸಂತೋಷ)+
ಅವನ, ಮೈದೊಡವು=ಸ್ವಭಾವ, ಬಿಳ್ಪೊಡನೆ=
ಬಿಳ್ಪು(ಬಿಳುಪು)+ಒಡನೆ(ಜೊತೆಗೆ), ದುರುಗುಟಿಸದಿರು=ದುರುಗಟ್ಟಿ ನೋಡದಿರು, ಕೋಪ ಮಾಡಿಕೊಳ್ಳದಿರು.

ವಾಚ್ಯಾರ್ಥ: ಮನುಷ್ಯ ಪುಣ್ಯಪಾಪಗಳ ಮಿಶ್ರಣ. ಅವನ ಮೂಲನೆಲೆ, ನೆಲ. ಕರುಳ ಸಂಬಂಧಗಳ ಸಂತೋಷವೇ ಅವನ ಸ್ವಭಾವ. ಅವನು ಧರಿಸುವ ಬಣ್ಣ ಬಣ್ಣದ ವಸ್ತ್ರಗಳಲ್ಲಿ ಬಿಳುಪಿನೊಡನೆ ಕಪ್ಪೂ ಇದೆ. ಅದನ್ನು ಕಠಿಣವಾಗಿ ಪರಿಗಣಿಸದಿರು.

ವಿವರಣೆ: ಅಜ್ಜ ತನ್ನ ಮೊಮ್ಮಗನಿಗೆ ಜೀವನದ ಪಾಠ ಹೇಳುತ್ತಿದ್ದ, ಅದು ಕಥೆಯ ರೂಪದಲ್ಲಿ. ‘ಮಗೂ ನನ್ನ ಹೃದಯದಲ್ಲಿ ಎರಡು ತೋಳಗಳಿವೆ. ಅವು ಸದಾ ಕಾಲ ಕಾದಾಡುತ್ತಲೇ ಇರುತ್ತವೆ. ಒಂದು ತೋಳಕ್ಕೆ ಯಾವಾಗಲೂ ಕೋಪ, ಅಸಹನೆ, ಹಿಂಸೆಯ ಗುಣ, ಅತಿಯಾಸೆ, ಕೀಳರಿಮೆ, ಸ್ವಾರ್ಥ, ದ್ವೇಷ, ಸುಳ್ಳು ಹೇಳುವ ಗುಣ, ಅಹಂಕಾರ ತುಂಬಿಕೊಂಡು ಹಲ್ಲು ತೆರೆದುಕೊಂಡೇ ಇರುತ್ತದೆ. ಮತ್ತೊಂದು ತೋಳದಲ್ಲಿ ಯಾವಾಗಲೂ ಶಾಂತಿ, ಸಂತೋಷ, ಸಹನೆ, ಪ್ರೀತಿ, ನೀಡುವ ಗುಣ, ಸತ್ಯ, ಕರುಣೆ, ನಂಬಿಕೆಯ ಗುಣಗಳು ತುಂಬಿಕೊಂಡು ಸದಾ ಶಾಂತವಾಗಿರುತ್ತದೆ’ ಎಂದ ಅಜ್ಜ. ‘ಹೌದಾ ಅಜ್ಜಾ, ನಿನ್ನ ಹೃದಯದಲ್ಲಿ ಎರಡು ತೋಳಗಳು ಇದ್ದಾವಾ?’ ಕಣ್ಣರಳಿಸಿ ಕೇಳಿದ ಮೊಮ್ಮಗ. ‘ಮಗೂ ಆ ಎರಡು ತೋಳಗಳು ಬರೀ ನನ್ನ ಹೃದಯದಲ್ಲಿಲ್ಲ, ಎಲ್ಲರ ಹೃದಯಗಳಲ್ಲಿವೆ, ನಿನ್ನ ಹೃದಯದಲ್ಲೂ ಇವೆ. ಅವು ಸದಾಕಾಲ ಕಾದಾಡುತ್ತವೆ’ ಎಂದ ಅಜ್ಜ. ‘ಹಾಗಾದರೆ ಆ ಎರಡು ತೋಳಗಳಲ್ಲಿ ಗೆಲ್ಲುವುದು ಯಾವುದು ಅಜ್ಜಾ?’ ಬೆರಗಿನಿಂದ ಕೇಳಿದ ಮೊಮ್ಮಗ. ಅಜ್ಜ ನಿಟ್ಟುಸಿರುಬಿಟ್ಟು ಹೇಳಿದ, ‘ಮಗೂ, ಯಾವುದಕ್ಕೆ ನೀನು ಹೆಚ್ಚು ಆಹಾರ ಹಾಕುತ್ತೀಯೋ ಅದು ಗೆಲ್ಲುತ್ತದೆ’.

ಕಗ್ಗದ ಮಾತೇ ಇದು. ನಮ್ಮಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಮಿಶ್ರಣವೇ ಇದೆ. ಅವನಿಗೆ ತಾನು ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗೆ ಪ್ರತಿಫಲವಾಗಿ ಪುಣ್ಯ-ಪಾಪಗಳು ಲಭಿಸುತ್ತವೆ ಎಂಬುದು ನಮ್ಮ ನಂಬಿಕೆ. ಆದ್ದರಿಂದ ಈ ನರ ಮನುಷ್ಯ ಪಾಪಪುಣ್ಯಗಳ ಮಿಶ್ರಣ. ಯಾಕೆಂದರೆ ಮನುಷ್ಯನ ಮೂಲ ನೆಲೆ ಇರುವುದೇ ಈ ಪ್ರಪಂಚದ ನೆಲದಲ್ಲಿ. ಅವನ ಬದುಕಿನ ಸಾಮಗ್ರಿಗಳೆಂದರೆ ತಾನು ಕಟ್ಟಿಕೊಂಡ ಸಂಬಂಧಗಳು ಮತ್ತು ಆ ಸಂಬಂಧಗಳು ತರುವ ಸಂತೋಷ, ಆಮೋದಗಳು. ಮನುಷ್ಯನ ಬದುಕೇ ರಂಗು ರಂಗಿನದು. ಅಲ್ಲಿ ಸಂತೋಷವಿದೆ, ಸಂಭ್ರಮವಿದೆ, ಉನ್ಮಾದವಿದೆ, ದುಃಖವಿದೆ, ಕೊರಗಿದೆ, ಸೋಲಿದೆ, ಹತಾಶೆ ಇದೆ. ಇವೆಲ್ಲವುಗಳೆಲ್ಲ ಸೇರಿ ಅವನ ಬದುಕು.

ಈ ಕಗ್ಗ ತುಂಬ ಹೃದಯಂಗಮವಾಗಿ ನಮ್ಮನ್ನು ತಿಳಿಸುತ್ತದೆ. ಮನುಷ್ಯನ ಜೀವನದಲ್ಲಿ ಬೆಳ್ಳಗಾಗಿದ್ದದ್ದು ಅಂದರೆ ಸುಂದರವಾದದ್ದು, ಆದರ್ಶವಾದದ್ದು ಇದ್ದ ಹಾಗೆ ಕಪ್ಪಾಗಿರುವುದೂ ಇದೆ ಅಂದರೆ ಅಸಹ್ಯ
ವಾದದ್ದು, ಕುಟಿಲವಾದದ್ದೂ ಇದೆ. ಕಪ್ಪು ಇದೆ ಎಂದು ದೂಷಿಸುವುದು, ತಿರಸ್ಕಾರ ಮಾಡುವುದು ಬೇಡ. ಅವನೊಬ್ಬ ಮನುಷ್ಯ, ದೇವರಲ್ಲ. ಆದ್ದರಿಂದ ಅವನ ಕೊರತೆಯನ್ನು ಗಮನಿಸುವಾಗ ಕರುಣೆ ಇರಲಿ, ಅವನನ್ನು ದೋಷಗಳಿಂದಾಗಿ ದುರುಗುಟ್ಟಿಕೊಂಡು ನೋಡುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT