ಶುಕ್ರವಾರ, ಮಾರ್ಚ್ 31, 2023
22 °C

ಬೆರಗಿನ ಬೆಳಕು: ಸಮತ್ಪತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅಳಬೇಕು ನಗಬೇಕು, ಸಮತೆ ಶಮವಿರಬೇಕು |

ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು ||
ಅಲೆಯಿನಲುಗದ ಬಂಡೆಯೊಲಾತ್ಮವಿರಬೇಕು |
ತಿಳಿದವರ ಚರಿತವದು – ಮಂಕುತಿಮ್ಮ || 812 ||

ಪದ-ಅರ್ಥ: ಶಮವಿರಬೇಕು=ಶಮವು(ನಿಗ್ರಹವು)+ಇರಬೇಕು, ನೆರೆವೊಲು=ನೆರೆ(ಪ್ರವಾಹ)+ ಒಲು, ಅಲೆಯಿನಲುಗದ=ಅಲೆಯಿನ್
(ಅಲೆಯಿಂದ)+ಅಲುಗದ, ಬಂಡೆಯೊಲಾತ್ಮವಿರಬೇಕು=ಬಂಡೆಯ+ಒಲು+ಆತ್ಮವು+ಇರಬೇಕ ತಿಳಿದವರ=ಜ್ಞಾನಿಗಳ.

ವಾಚ್ಯಾರ್ಥ: ಸಮಾಜದಲ್ಲಿ ಬದುಕುವಾಗ ಅಳಬೇಕು, ನಗಬೇಕು ಆದರೆ ಸಮತೆ, ನಿಗ್ರಹವೂ ಇರಬೇಕು. ಹೃದಯದ ಭಾವನೆಗಳು ನದಿಯ ಪ್ರವಾಹದಂತೆ ಹರಿದರೂ, ಆತ್ಮ ಮಾತ್ರಅಲುಗದ ಬಂಡೆಯಂತೆ ಸ್ಥಿರವಾಗಿರಬೇಕು. ಇದು ಜ್ಞಾನಿಗಳ
ನಡೆ.

ವಿವರಣೆ: ಶ್ರೀರಾಮಕೃಷ್ಣರು ತೀರಿಹೋದ ಮೇಲೆ, ವರ್ಷಾಬ್ಧಿಕದ ಕಾರ್ಯ ಮುಗಿದು ಕಾಮಾರಪುಕುರಕ್ಕೆ ಬಂದ ಶ್ರೀಮಾತೆ ಶಾರದಾದೇವಿಯವರಿಗೆ ಕೆಲವು ಕಾಲ ತುಂಬ ಕಷ್ಟ. ದಕ್ಷಿಣೇಶ್ವರ ದೇವಸ್ಥಾನದ ದೀನಾನಾಥ ಎನ್ನುವ ಉಸ್ತುವಾರಿ,
ಶಾರದಾಮಾತೆಯವರಿಗೆ ಕಳುಹಿಸುತ್ತಿದ್ದ ಏಳು ರೂಪಾಯಿಯನ್ನು ನಿಲ್ಲಿಸಿಬಿಟ್ಟ. ಮನೆಯಲ್ಲಿದ್ದ ಬತ್ತವನ್ನು ತಾವೇ ಒನಕೆಯಿಂದ ಕುಟ್ಟಿ ಅಕ್ಕಿ ಮಾಡಿಕೊಳ್ಳುತ್ತಿದ್ದರು. ಉಪ್ಪು ಇಲ್ಲ, ತರಕಾರಿ ಇಲ್ಲ. ಸಪ್ಪೆಯಾದ ಗಂಜಿಯೂಟ. ತಾವೇ ಕಷ್ಟಪಟ್ಟು ಮಣ್ಣು ಅಗೆದು ತರಕಾರಿ, ಸೊಪ್ಪು ಬೆಳೆದುಕೊಳ್ಳಬೇಕು. ಅದೇ ಅವರಿಗೆ ಆಹಾರ. ರಾತ್ರಿ ಹೊತ್ತಿನಲ್ಲಿ ಕೆಲವೊಮ್ಮೆ ದೀಪವಿಲ್ಲ. ಕುಡಿಯಲು ಹಾಲು ಮೊಸರಿಲ್ಲ.

ಉಡುವುದಕ್ಕೆ ಇದ್ದದ್ದು ಎರಡೇ ಸೀರೆ. ಅದೂ ಹರಿದದ್ದು. ಹರಿದ ಭಾಗ ಇನ್ನೂ ಹರಿಯದಂತೆ ತಾವೇ ಹೊಲಿದುಕೊಳ್ಳುತ್ತಿದ್ದರು. ಆದರೆ ಈ ಭೌತಿಕ ಕೊರತೆಗಳಿಂದ ದು:ಖವಿಲ್ಲ. ದಕ್ಷಿಣೇಶ್ವರದಿಂದ ಸಾಧು ಸಂತರು ಬಂದರೆ ಅತ್ಯಂತ ಸಂತೋಷ. ಅವರನ್ನು ಪ್ರೀತಿಯಿಂದ ಆದರಿಸಿ, ತನಗೆ ಮಾಡಿಕೊಂಡಿದ್ದನ್ನೇ ಅವರಿಗೂ ಬಡಿಸುವರು. ತನ್ನ ತಮ್ಮ ಚಿಕ್ಕ ವಯಸ್ಸಿನ ಹೆಂಡತಿಯನ್ನು ಬಿಟ್ಟು ಕಣ್ಣು
ಮುಚ್ಚಿದಾಗ ಅವನ ಹೆಂಡತಿಯ, ಮಗುವಿನ ಭಾರವನ್ನು ಹೊತ್ತರು. ತನ್ನ ಮಗನಂತೆಯೇ ಇದ್ದ ವಿವೇಕಾನಂದರು
ಕಾಲವಾದಾಗ, ಮಗಳಂತೆಯೇ ಭಾವಿಸಿದ್ದ ಸೋದರಿ ನಿವೇದಿತಾ ತಮ್ಮ ಕಣ್ಣ ಮುಂದೆಯೇ ತೀರಿಹೋದಾಗ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಆದರೆ ಕೆಲದಿನಗಳಲ್ಲೇ ಅದು ಶ್ರೀರಾಮಕೃಷ್ಣರ ಲೀಲೆ ಎಂದು ಮತ್ತೆ ಶಾಂತತೆಯನ್ನು ತಳೆದರು. ತಮ್ಮನ ಮಗಳು, ತಾನು ಬೆಳೆಸಿದ ಮಗು, ರಾಧುವಿನ ಮದುವೆಯನ್ನು ಮಾಡುವಾಗ ತೋರಿದ ಉತ್ಸಾಹವನ್ನು ಕಂಡವರು ಶ್ರೀಮಾತೆಗೂ ಇಷ್ಟು ಮೋಹವೇ
ಎಂದುಕೊಂಡರು. ಆದರೆ ಅದೂ ಕೇವಲ ಕೆಲದಿನಗಳು ಮಾತ್ರ. ಅವರ ಮನಸ್ಸಿನ ನಿರಾಳತೆ, ಶಾಂತತೆಯೇ ಅವರ ಸ್ಥಾಯೀ ಭಾವ.
ಕಗ್ಗದ ನಾಲ್ಕು ಸಾಲುಗಳು ಶ್ರೀಮಾತೆಯವರ ಜೀವನಕ್ಕೆ ನಿದರ್ಶನವೆನ್ನುವಂತಿವೆ. ಅವರು ಅಳಲಿಲ್ಲವೆ ನಗಲಿಲ್ಲವೇ?
ಅತ್ತರು, ನಕ್ಕರು. ಆದರೆ ಯಾವುದೂ ಅವರನ್ನು ನಲುಗಿಸಲ್ಲ. ಯಾಕೆಂದರೆ ಮನದಲ್ಲಿ ಆ ನಿಗ್ರಹಶಕ್ತಿಯಿತ್ತು. ದು:ಖಬಂದಾಗ, ಸಂತೋಷ ಕಂಡಾಗ ಹೃದಯದ ಭಾವ, ಪ್ರವಾಹ ಬಂದ ನದಿಯಂತೆ ಹರಿದಿತ್ತು. ಆದರೆ ಒಳಗಡೆ ಎಂದೂ ಅಲುಗದ ಬಂಡೆಯಂತೆ ಆತ್ಮಶಕ್ತಿ ಸ್ಥಿರವಾಗಿತ್ತು. ಇದೇ ಶ್ರೀಮಾತೆಯಂತಹ ಮಹಾತ್ಮರ ಜೀವಿತದ ಲಕ್ಷಣ. ಇದೇ ಸಮತ್ಪತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು