ಮಂಗಳವಾರ, ಜನವರಿ 28, 2020
23 °C

ಪರರ ಕೃಪೆ ಇಲ್ಲದ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೋಧಿಸತ್ವ ಒಂದು ಸ್ವರ್ಣಹಂಸೆಯಾಗಿ ಹುಟ್ಟಿದ್ದ. ಆತನಿಗೆ ತಮ್ಮನೊಬ್ಬನಿದ್ದ. ಇಬ್ಬರೂ ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದರು. ಅವರು ಬದುಕಿದ್ದು ಚಿತ್ರಕೂಟದ ಪರ್ವತ ಪ್ರದೇಶದಲ್ಲಿ. ಆದರೆ, ದಿನವೂ ಹಿಮಾಲಯದ ಪರ್ವತಗಳಿಗೆ ಹಾರಿ ಹೋಗಿ ಅಲ್ಲಿ ದೊರೆಯುವ ಅತ್ಯುತ್ತಮ ಕಾಳುಗಳನ್ನು ತಿಂದು ಬರುತ್ತಿದ್ದರು.

ಒಂದು ದಿನ ಹೀಗೆ ಕಾಳುಗಳನ್ನು ತಿಂದು ಹಾರಿಬರುವಾಗ ಮತ್ತೊಂದು ದಾರಿಯನ್ನು ಹಿಡಿದು ಬಂದರು. ದಾರಿಯಲ್ಲಿ ಒಂದು ಹೊಳೆ ಹೊಳೆವ ಪರ್ವತವನ್ನು ಕಂಡವು. ಕುತೂಹಲದಿಂದ ಆ ಪರ್ವತದ ಶಿಖರಗಳ ಮೇಲೆ ಇಳಿದು ನೋಡಿದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಅದೊಂದು ಕಂಚಿನ ಪರ್ವತ. ಅದರ ಹೆಸರು ನೆರು. ಈ ನೆರು ಪರ್ವತದ ಮೇಲೆ ವಾಸ ಮಾಡುತ್ತಿದ್ದ ಎಲ್ಲ ಪಕ್ಷಿ, ಪ್ರಾಣಿಗಳು ಬಂಗಾರದ ಬಣ್ಣದಾಗಿದ್ದವು. ಇದರ ವಿಷಯವಾಗಿ ವಿಚಾರಿಸಿದಾಗ ತಿಳಿದು ಬಂದದ್ದಿಷ್ಟು. ಇವೆಲ್ಲ ಸಾಮಾನ್ಯವಾದ ಪಶು-ಪಕ್ಷಿಗಳು. ಬೇರೆ ಪರ್ವತಗಳಲ್ಲಿದ್ದಾಗ ಅವು ತಮ್ಮ ತಮ್ಮ ನೈಸರ್ಗಿಕ ಬಣ್ಣಗಳಲ್ಲೇ ಇರುತ್ತವೆ. ಆದರೆ, ಈ ಕಂಚಿನ ಪರ್ವತದ ಮೇಲೆ ಬಂದೊಡನೆ ಅವು ಸ್ವರ್ಣದ ಬಣ್ಣವನ್ನು ತಳೆಯುತ್ತವೆ.

ಅಲ್ಲಿ ಹಾರಾಡುತ್ತಿದ್ದ ಗರುಡನನ್ನು ಈ ವಿಷಯದ ಬಗ್ಗೆ ಕೇಳಿದಾಗ ಅದು ಹೇಳಿತು, ’ಈ ಪರ್ವತಕ್ಕೆ ಬಂದೊಡನೆ ಎಲ್ಲರೂ ಸಮಾನರೇ ಆಗಿಬಿಡುತ್ತಾರೆ. ಇಲ್ಲಿ ಕಾಡು ಕಾಗೆ, ಸಾಮಾನ್ಯ ಕಾಗೆ ಹಾಗೂ ಪಕ್ಷಿಗಳಲ್ಲಿ ಅತ್ಯಂತ ಶ್ರೇಷ್ಠರಾದ ನಾವು ಗರುಡರು ಎಲ್ಲರೂ ಸ್ವರ್ಣಪಕ್ಷಿಗಳೇ ಆಗಿಬಿಡುತ್ತೇವೆ. ಇಲ್ಲಿ, ನರಿ, ಸಿಂಹ, ಹುಲಿ ಎಲ್ಲರೂ ಒಂದೇ. ಸಮಾನತೆ ಈ ಪರ್ವತ ವೈಶಿಷ್ಠ್ಯ‘.

ಈ ಮಾತನ್ನು ಕೇಳಿ ಬೋಧಿಸತ್ವನ ತಮ್ಮನಿಗೆ ತುಂಬ ಸಂತೋಷವಾಯಿತು. ಖುಷಿಯಿಂದ ಅಣ್ಣನಿಗೆ ಹೇಳಿದ, “ಅಣ್ಣಾ, ಇದೆಂಥ ಸುಂದರ ಪರ್ವತ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರಿಗೂ ಒಂದೇ ಶಕ್ತಿ, ಒಂದೇ ಸ್ವರ್ಣದ ಬಣ್ಣ. ಈ ಸಮಾನತೆ ಎಷ್ಟು ಸಂತೋಷ ತರುತ್ತದೆ. ಅಣ್ಣಾ, ನಾವೂ ಇಲ್ಲಿಯೇ ಉಳಿದುಬಿಡೋಣವೇ?”

ಅಣ್ಣ ಬೋಧಿಸತ್ವ ತಲೆ ಅಲ್ಲಾಡಿಸಿ ಹೇಳಿದ, ‘ತಮ್ಮಾ, ನಾವು ಈ ಪರ್ವತದಲ್ಲಿ ಒಂದು ಕ್ಷಣವೂ ಇರಬಾರದು. ಇಲ್ಲಿಂದ ಬೇಗನೇ ಹಾರಿ ಹೋಗಿ ಬಿಡೋಣ‘ “ಯಾಕಣ್ಣಾ, ಇಷ್ಟು ಸುಂದರವಾದ ಪರ್ವತವನ್ನು ಬಿಟ್ಟು ಹೋಗುವುದೇಕೆ?” ಎಂದು ಕೇಳಿದ ತಮ್ಮ. ಅದಕ್ಕೆ ಬೋಧಿಸತ್ವ ಹೇಳಿದ, ‘ತಮ್ಮಾ, ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸು. ಇಲ್ಲಿ ಇರುವ ಪಕ್ಷಿ, ಪ್ರಾಣಿಗಳು ತಮ್ಮ ಗುಣಗಳಿಂದ, ಪರಿಶ್ರಮದಿಂದ ದೊಡ್ಡವರಾಗಿಲ್ಲ, ಸಮಾನರಾಗಿಲ್ಲ. ಈ ಪರ್ವತದ ಮಹಿಮೆಯಿಂದ ಸಮಾನ ವರ್ಣದವರಾಗಿದ್ದಾರೆ. ನಿಜವಾಗಿಯೂ ಶಕ್ತಿಶಾಲಿಗಳು, ಸೋಮಾರಿಗಳೊಡನೆ ಸಮಾನರಾಗಿದ್ದಾರೆ. ಯಾವುದೇ ವಿಶೇಷ ಶಕ್ತಿಯಿಲ್ಲದೆ, ಸೋಮಾರಿಗಳು, ಅಂಜುಬುರುಕರು ದೊಡ್ಡವರಂತೆ ತೋರುವ ಸ್ಥಳದಲ್ಲಿ ನಿಜವಾಗಿಯೂ ವೀರರಾದವರು, ಪಂಡಿತರಾದವರು ಇರುವುದಿಲ್ಲ. ಮತ್ತೊಬ್ಬರ ಕೃಪೆಯಿಂದ ನಾವು ದೊಡ್ಡವರಾಗಬಾರದು, ಸ್ವಪ್ರಯತ್ನದಿಂದ ದೊಡ್ಡವರಾಗುವುದೇ ಸಾಧನೆ. ಅಣ್ಣ–ತಮ್ಮ ತಕ್ಷಣವೇ ಪರ್ವತ ಶಿಖರದಿಂದ ಹಾರಿ ಹೋಗಿಬಿಟ್ಟರು. ಮತ್ತೆಂದೂ ಕಂಚಿನ ಪರ್ವತದ ಕಡೆಗೆ ಹೋಗಲಿಲ್ಲ.

ನಮ್ಮ ಸಾಧನೆಗೆ ನಮ್ಮ ಪ್ರಯತ್ನವೇ ಮುಖ್ಯವಾಗಬೇಕಲ್ಲದೆ ಮತ್ತೊಬ್ಬರ ಕೃಪೆಯಲ್ಲ.

ಪ್ರತಿಕ್ರಿಯಿಸಿ (+)