ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಷಣೆ, ಕನಿಕರ

Last Updated 2 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಜನಕಜೆಯ ದರುಶನದಿನಾಯ್ತು ರಾವಣ ಚಪಲ |
ಕನಕಮೃಗದರುಶನದೆ ಜಾನಕಿಯ ಚಪಲ ||
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ |
ಮನದ ಬಗೆಯರಿಯದದು – ಮಂಕುತಿಮ್ಮ
|| 383 ||

ಪದ-ಅರ್ಥ: ಜನಕಜೆ=ಜನಕರಾಜನ ಪುತ್ರಿ, ಸೀತೆ, ದರುಶನದಿನಾಯ್ತು=ದರುದಶನದಿಂ+ಆಯ್ತು, ಕನಕಮೃಗದರುಶನದೆ=ಕನಕಮೃಗ(ಬಂಗಾರದ ಮೃಗ)+ದರುಶನದೆ, ಜನವವನ=ಜನವು+
ಅವನ, ಕನಿಕರಿಪುದಾಕೆಯಲಿ=ಕನಿಕರಿಪುದು
(ಕನಿಕರ ತೋರುವುದು)+ಆಕೆಯಲಿ, ಬಗೆಯರಿ
ಯದದು=ಬಗೆಯ+ಅರಿಯದು+ಅದು.

ವಾಚ್ಯಾರ್ಥ: ಸೀತೆಯ ದರ್ಶನದಿಂದ ರಾವಣನ ಮನಸ್ಸು ಚಪಲವಾಯಿತು. ಬಂಗಾರದ ಜಿಂಕೆಯನ್ನು ನೋಡಿ ಸೀತೆಯ ಮನಸ್ಸು ಚಪಲವಾಯಿತು. ಆದರೆ ರಾವಣನನ್ನು ನಿಂದಿಸುತ್ತಾರೆ, ಸೀತೆಗೆ ಕನಿಕರ ತೋರುತ್ತಾರೆ. ಮನಸ್ಸಿನ ಬಗೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

ವಿವರಣೆ: ಮನಸ್ಸನ್ನು ಅರಿಯುವುದು ಕಷ್ಟ. ಅದು ಯಾವಾಗ, ಯಾರಿಗೆ ಚಂಚಲತೆಯನ್ನುಂಟು ಮಾಡೀತು ಎಂಬುದನ್ನು ತಿಳಿಯುವುದು ಅಸಾಧ್ಯ. ಈ ಕಗ್ಗ ರಾಮಾಯಣದ ಹಿನ್ನಲೆಯಲ್ಲಿ ಮನುಷ್ಯನ ಮನಸ್ಸಿನ ಬಗೆಗಳನ್ನು ಕುರಿತು ಆಲೋಚಿಸುತ್ತದೆ. ಸೀತೆಯನ್ನು ಕಂಡೊಡನೆ ರಾವಣನ ಮನಸ್ಸು ಚಂಚಲವಾಯಿತು. ಅದು ಮುಂದೆ ಸೀತಾಪಹರಣಕ್ಕೆ ಕಾರಣವಾಯಿತು. ಅದಕ್ಕೂ ಮುಂದೆ ಅವನ ವಿನಾಶಕ್ಕೂ ಅದೇ ಬುನಾದಿಯಾಯಿತು. ಈ ತಪ್ಪಿಗಾಗಿ ಅವನಿಗೆ ಶಿಕ್ಷೆಯಾದದ್ದು ಮಾತ್ರವಲ್ಲ, ಶತಶತಮಾನಗಳಿಂದ ಜನ ರಾವಣನ ನಿಂದೆ ಮಾಡುತ್ತಿದ್ದಾರೆ. ಇದೆಲ್ಲಕ್ಕೆ ಕಾರಣ ರಾವಣನ ಮನಸ್ಸಿನ ಚಪಲತೆ.

ಅದೇ ರೀತಿ ಸೀತೆಯ ಮನಸ್ಸೂ ಚಂಚಲವಾಗಲಿಲ್ಲವೆ? ಆಕೆ ತನ್ನ ಕುಟೀರದ ಸುತ್ತಮುತ್ತ ಸುಳಿದಾಡುತ್ತಿದ್ದ ಬಂಗಾರದ ಜಿಂಕೆಯನ್ನು ಕಂಡು ಚಂಚಲಚಿತ್ತೆಯಾಗಲಿಲ್ಲವೆ? ಅದು ಮಾಯಾಮೃಗ, ಅದರ ಅಪೇಕ್ಷೆ ಬೇಡ ಎಂದು ಹೇಳಿದರೂ ಚಪಲತೆಗೆ ಬಲಿಯಾದ ಸೀತೆ ಮೊಂಡುತನಮಾಡಿ ರಾಮನನ್ನು, ನಂತರ ಹಟಮಾಡಿ ಲಕ್ಷಣನನ್ನು ಕಳುಹಿಸಿ, ತೊಂದರೆಗೆ ಸಿಲುಕಿಕೊಳ್ಳಲಿಲ್ಲವೆ? ಅಪಹರಣಕ್ಕೆ ಕಾರಣವಾಗಲಿಲ್ಲವೆ? ಆದರೆ ಜನ ಆಕೆಯನ್ನು ಚಪಲತೆಗೆ ದೂಷಿಸದೆ ಕನಿಕರ ತೋರುತ್ತಾರೆ.

ಕಗ್ಗದ ಕೊನೆಯ ಸಾಲು ವಿಶೇಷವಾದದ್ದು, ‘ಮನದ ಬಗೆಯರಿಯದದು’, ಎರಡರ್ಥಗಳನ್ನು ಪ್ರಚೋದಿಸುತ್ತದೆ. ಮೊದಲನೆಯದು ರಾವಣ ಹಾಗೂ ಸೀತೆಯರ ಮನಸ್ಸನ್ನು ಕುರಿತದ್ದು. ರಾವಣ ಕೂಡ ಸಾಮಾನ್ಯ ಮನುಷ್ಯನಲ್ಲ. ಈಶ್ವರನನ್ನು ಒಲಿಸಿ ಆತ್ಮಲಿಂಗವನ್ನು ಪಡೆದ ಸಮರ್ಥ. ಸೀತೆಯಂತೂ ಭೂದೇವಿಯ ಮಗಳು, ಸಹನೆಗೆ, ತಾಳ್ಮೆಗೆ ಮತ್ತು ಸ್ಥಿರತೆಗೆ ಮತ್ತೊಂದು ಹೆಸರು. ಅಂಥವರಿಗೂ ಮನದ ಚಂಚಲತೆಯಾಯಿತಲ್ಲ. ಆದ್ದರಿಂದ ಮನಸ್ಸಿನ ಬಗೆಯನ್ನು ಅರಿಯುವುದು ಕಷ್ಟ ಎಂಬ ಭಾವ. ಎರಡನೆಯದು ರಾಮಾಯಣವನ್ನು ಓದುವ, ಕೇಳುವ, ಅದರ ಬಗ್ಗೆ ಮಾತನಾಡುವ ಜನರ ಮನಸ್ಸನ್ನು ಕುರಿತದ್ದು. ರಾವಣ ಮತ್ತು ಸೀತೆ ಇಬ್ಬರೂ ಮನದ ಚಾಂಚಲ್ಯಕ್ಕೆ ಒಳಗಾಗಿದ್ದರೂ ಸೀತೆಗೆ ಕನಿಕರ ತೋರುತ್ತಾರೆ, ರಾವಣನನ್ನು ಹಳಿಯುತ್ತಾರೆ. ಆದ್ದರಿಂದ ಜನ ಹೇಗೆ ಚಿಂತಿಸುತ್ತಾರೆ ಎನ್ನುವುದನ್ನು ಹೇಳುವುದು ಕಷ್ಟ ಎನ್ನುವುದು ಎರಡನೆಯ ಭಾವ.

ಜನರ ಯೋಚನೆಗೆ ಸಕಾರಣವುಂಟು. ಕನಿಕರ ಮತ್ತು ದೂಷಣೆಗೆ, ಆಸೆ, ದುರಾಸೆಗಳ ನಡುವಿನ ವ್ಯತ್ಯಾಸವೇ ಕಾರಣ. ರಾವಣನದು ದುರಾಸೆ. ತನ್ನದಲ್ಲದ, ತನಗೆ ದಕ್ಕದ ವಸ್ತುವನ್ನು ಪಡೆಯುವ ಛಲ, ದುರಾಸೆ. ಅದಕ್ಕೆ ದೂಷಣೆ. ಸೀತೆಗೆ ಜಿಂಕೆಯನ್ನು ಕೊಲ್ಲುವ, ನೋಯಿಸುವ ಇಚ್ಛೆ ಇರಲಿಲ್ಲ. ಅದು ಕೆಡುಕಿಲ್ಲದ ಆಕರ್ಷಣೆ. ಅದಕ್ಕೆ ಕನಿಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT