ಗುರುವಾರ , ನವೆಂಬರ್ 14, 2019
22 °C

ನಮ್ಮೊಳಗೆ ವಿಶಾಲತತ್ವದ ಹರಡಿಕೆ

ಗುರುರಾಜ ಕರಜಗಿ
Published:
Updated:

ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು |
ತುಸಿರಾಗಿ ನಮ್ಮೊಳಾವಗಮಾಡುವಂತೆ ||
ವಿಸದಸತ್ತ್ವಮದೊಂದದೆತ್ತಣಿನೊ ಬಂದು ನ |
ಮ್ಮಸುಗಳೊಳವೊಗುತಿಹುದು – ಮಂಕುತಿಮ್ಮ || 155 ||

ಪದ=ಅರ್ಥ: ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯುತುಸಿರಾಗಿ=ಶ್ವಸನ(ಗಾಳಿ)+ಆಗಸದಿಂ+ಇಳಿದು+ಅದ್ರಿ(ಬೆಟ್ಟ)+ಗುಹೆಗಳೊಳು+ಅಲೆಯುತ+ಉಸಿರಾಗಿ, ನಮ್ಮೊಳಾವಗಮಾಡುವಂತೆ=ನಮ್ಮೊಳು+ಆವಗಂ (ಯಾವಾಗಲೂ)+ಆಡುವಂತೆ, ವಿಸದಸತ್ತ್ವಮದೊಂದದೆತ್ತಣಿನೊ=ವಿಸದ(ವಿಶಾಲವಾದ)+ಸತ್ತ್ವಂ+ಅದೊಂದು+ಎತ್ತಣಿನೊ (ಎತ್ತಲಿಂದಲೋ), ನಮ್ಮಸುಗಳೊಳವೊಗುತಿಹುದು=ನಮ್ಮ+ಅಸುಗಳೊಳು (ಪ್ರಾಣಗಳಲ್ಲಿ)+ವೊಗುತಿಹುದು(ಸೇರಿಕೊಳ್ಳುತ್ತಿಹುದು)

ವಾಚ್ಯಾರ್ಥ:ಆಕಾಶದಿಂದ ಗಾಳಿ ಕೆಳಗಿಳಿದು ಬೆಟ್ಟ, ಗುಹೆಗಳಲ್ಲಿ ಅಲೆಯುತ್ತ, ನಮ್ಮ ಉಸಿರಾಗಿ ನಮ್ಮೊಳಗೆ ಯಾವಾಗಲೂಆಡುವಂತೆ ವಿಶಾಲವಾದಯಾವುದೋ ಸತ್ತ್ವಎತ್ತಲಿಂದಲೋ ಬಂದು ನಮ್ಮ ಪ್ರಾಣಗಳಲ್ಲಿ ಸೇರಿಕೊಳ್ಳುತ್ತಿದೆ.

ವಿವರಣೆ: ನೀವು ತಿರುಗಾಡಲುಯಾವುದೋಒಂದುಉದ್ಯಾನವನಕ್ಕೆ ಹೋಗಿದ್ದೀರಿ. ಸ್ವಲ್ಪ ಆಯಾಸವೆನ್ನಿಸಿದಾಗ ಅಲ್ಲಿದ್ದಕಲ್ಲುಬೆಂಚಿನ ಮೇಲೆ ವಿಶ್ರಾಂತಿಗೆಂದುಕಣ್ಣುಮುಚ್ಚಿಕ್ಷಣಕಾಲ ಕುಳಿತಿದ್ದೀರಿ. ಆಗ ತಂಪುಗಾಳಿ ಬೀಸಿ ಬಂದು ನಿಮ್ಮ ಮೈಯನ್ನುತಡವುತ್ತದೆ. ಆ ಗಾಳಿಯ ತಂಪು, ಶುದ್ಧತೆ ನಿಮಗೆ ತುಂಬ ಹಿತ ನೀಡುತ್ತದೆ. ಆಗ ನೀವೇನು ಮಾಡುತ್ತೀರಿ? ಬಹುಶ: ದೀರ್ಘಶ್ವಾಸತೆಗೆದುಕೊಂಡು ಆ ಶುದ್ಧ ಗಾಳಿಯನ್ನು ನಿಮ್ಮ ಪುಪ್ಪುಸಗಳಲ್ಲಿ ತುಂಬಿಕೊಂಡು ಸಂತೋಷಪಡುತ್ತೀರಿ. ಒಂದುಕ್ಷಣ ಯೋಚಿಸಿ. ಈ ತಂಪು ಗಾಳಿ ಬಂದದ್ದುಎಲ್ಲಿಂದ? ಅದುಎಲ್ಲಿಯೋಆಕಾಶದಲ್ಲಿ ಹುಟ್ಟಿತಿರುತಿರುಗಿ ಬೆಟ್ಟಗಳ ಮೇಲೆ, ಗುಹೆಗಳೊಳಗೆ, ಸುಳಿದಾಡಿ ನೆಲಕ್ಕಿಳಿದು ನೀವಿದ್ದಲ್ಲಿಗೆ ಬಂದಿದೆ. ಈಗ ಅದು ನಿಮ್ಮ ಉಸಿರಾಗಿದೆ. ಎಲ್ಲಿಯ ಗಾಳಿ? ಎಲ್ಲಿಯ ನೀವು? ಆ ಗಾಳಿ ಬಂದು ನಿಮ್ಮ ಪುಪ್ಪುಸಗಳನ್ನು ತುಂಬಿಕೊಂಡದ್ದು ನಿಮ್ಮ ಭಾಗ್ಯ. ಅದೊಂದು ನಿಸರ್ಗದಋಣ ನಮ್ಮ ಮೇಲೆ.

ಇದೇಚಿಂತನೆಯನ್ನು ಮುಂದುವರೆಸಿದರೆ, ನಮ್ಮ ಉಸಿರಿಗೆ ಈ ಗಾಳಿ ಕಾರಣವಾದರೆ ನಮ್ಮ ಬದುಕಿಗೆಯಾರುಕಾರಣ? ಗಾಳಿ ನಮ್ಮ ಮೈಯನ್ನು ಸ್ಪರ್ಶ ಮಾಡುತ್ತದೆ, ನಮಗೆ ಅದರಅರಿವಿದೆ. ಆದರೆ ಪ್ರಾಣ ಬಂದದ್ದು ಹೇಗೆ? ಎಲ್ಲಿಂದ? ನನ್ನೊಬ್ಬನದಲ್ಲ, ಪ್ರಪಂಚದ ಸರ್ವಪ್ರಾಣಿಗಳಲ್ಲಿ ಜೀವಸಂಚಾರವನ್ನು ಮಾಡಿದ್ದುಯಾರು? ಹಾಗಾದರೆಯಾವುದೋಒಂದು ಶಕ್ತಿ ಈ ಜಗತ್ತುಸೃಷ್ಟಿಯಾಗುವ ಮೊದಲೇಇದ್ದು, ಇದನ್ನು ಸೃಷ್ಟಿಮಾಡಿ ಪ್ರತಿಯೊಂದುಜೀವದಲ್ಲಿ ಪ್ರಾಣಶಕ್ತಿಯನ್ನುಊದಿರಬಹುದುಎಂದು ತತ್ವದರ್ಶಿಗಳು ಯೋಚಿಸಿದರು. ಭಾಗವತ ಹೇಳುತ್ತದೆ:

ಏತಾವದೇವಜಿಜ್ಞಾಸ್ಯಂತತ್ವಜಿಜ್ಞಾಸುನಾssತ್ಮನ: |
ಅನ್ವಯವ್ಯತಿರೇಕಾಭ್ಯಾಂಯತ್ ಸ್ಯಾತ್ ಸರ್ವತ್ರ ಸರ್ವದಾ ||

“ಆತ್ಮತತ್ವದ ಬಗೆಗೆ ಜಿಜ್ಞಾಸೆಗೆ ಒಳಗಾದ ಸಾಧಕಅತ್ಯಂತಜರೂರಾಗಿ ತಿಳಿದುಕೊಳ್ಳಬೇಕಾದ ವಿಷಯಇದು. ಈ ಪ್ರಪಂಚಇದ್ದಾಗಲೂ, ಇರದಿದ್ದಾಗಲೂಯಾವ ಸತ್ವಎಂದೆಂದೂಇದೆಯೋಅದೇ ಪರಮತತ್ವ”.

ಈ ಪರಮತತ್ವ ದೇಹಗಳನ್ನು ಸೃಷ್ಟಿಸಿತು. ಬೆಟ್ಟಗುಹೆಗಳ ಗಾಳಿ ಹೇಗೆ ಕೆಳಗೆ ಬಂದು ನಮ್ಮ ಉಸಿರಾಯಿತೋ, ಅಂತೆಯೇ ವಿಶಾಲವಾದ ಪರಮಸತ್ವ ದೇಹಗಳೊಳಗೆ ಪ್ರಾಣವಾಗಿ ನೆಲೆಸಿತು, ಬದುಕು ಬೆಳೆಸಿತು.

ಇಂತಹ ವಿಸ್ತಾರವಾದ ಚಿಂತನೆಯನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಕಟ್ಟಿಕೊಡುವ ಕಗ್ಗಕ್ಕೆ ನಮ್ಮ ಪ್ರಣಾಮಗಳು.

 

ಪ್ರತಿಕ್ರಿಯಿಸಿ (+)