ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬೇಡದ ಮನಸ್ಥಿತಿ

Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣ ಮಹಾಕಾಲನ ಮಗನಾಗಿ ಹುಟ್ಟಿದ. ಮಹಾಕಾಲ ಎಂಭತ್ತು ಕೋಟಿ ಐಶ್ವರ್ಯಕ್ಕೆ ಒಡೆಯ. ಬೋಧಿಸತ್ವನಿಗೆ ಅಕೀರ್ತಿ ಎಂದು ಹೆಸರಿಟ್ಟರು. ಮುಂದೆ ಅವನಿಗೊಬ್ಬ ತಂಗಿ ಹುಟ್ಟಿದಳು. ಆಕೆಯ ಹೆಸರು ಯಶವತಿ. ಅಕೀರ್ತಿ ತಕ್ಕಶಿಲೆಗೆ ಹೋಗಿ ಸಕಲವಿದ್ಯೆಗಳನ್ನು ಕಲಿತು ಬಂದ. ಕೆಲದಿನಗಳಲ್ಲಿ ಅವನ ತಂದೆ-ತಾಯಿಯರು ತೀರಿಹೋದರು. ತನ್ನ ಬಳಿಯಿದ್ದ ಐಶ್ವರ್ಯವನ್ನು ನೋಡಿ ಸಂತೋಷವಾಗುವ ಬದಲು ಜಿಗುಪ್ಸೆಯಾಯಿತು. ಹಣ ಗಳಿಸಿದವರು ಬದುಕಿಲ್ಲ. ಅಂತೆಯೇ ನಾನು ಗಳಿಸಿದರೂ ಬಿಟ್ಟೇ ಹೋಗಬೇಕಲ್ಲ, ಆದ್ದರಿಂದ ಇದನ್ನು ದಾನ ಮಾಡಬೇಕೆಂದು ತೀರ್ಮಾನಿಸಿದ. ಹಣಕ್ಕೆ ಒಡತಿಯಾಗಬೇಕೆಂದು ತಂಗಿಗೆ ಕೇಳಿದ. ಆಕೆ ಕೂಡ, ನನಗೆ ಧನ ಬೇಡ, ನಿನ್ನ ಜೊತೆಗೆ ಪ್ರವ್ರಜಿತಳಾಗುತ್ತೇನೆ ಎಂದಳು. ಇಬ್ಬರೂ ಧನ ತುಂಬಿದ ಮನೆಯ ಬಾಗಿಲನ್ನು ತೆರೆದಿಟ್ಟು ನಗರವನ್ನು ಬಿಟ್ಟು ಹೊರಟುಬಿಟ್ಟರು. ಹೋಗಿ ಒಂದು ಆಶ್ರಮ ಕಟ್ಟಿಕೊಂಡು ಬದುಕಿದರು.

ಅಕೀರ್ತಿ ಪ್ರವ್ರಜಿತನಾದ ಸುದ್ದಿ ತಿಳಿದೊಡನೆ ನಗರದ ಬಹಳಷ್ಟು ಜನ ತಾವೂ ಪ್ರವ್ರಜಿತರಾಗಿ ಹೋಗಿ ಅವನನ್ನು ಸೇರಿದರು. ಅವನಿದ್ದ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಯಿತು. ಒಂದು ದಿನ ಇವರಿಂದ ಪಾರಾಗಬೇಕೆಂದು ಒಬ್ಬನೇ ರಾತ್ರಿ ಅಲ್ಲಿಂದ ಹೊರಟು ದಮಿಳ ರಾಷ್ಟ್ರದ ಕಾವೇರಿ ಪಟ್ಟಣಕ್ಕೆ ಬಂದ. ಅಲ್ಲಿ ಧ್ಯಾನ ಮಾಡುತ್ತಿರುವಾಗ ಅವನಿಗೆ ಜ್ಞಾನೋದಯವಾಯಿತು. ಅಲ್ಲಿಯೂ ಅವನನ್ನು ಕಾಣಲು ಜನ ಬರತೊಡಗಿದರು. ಆತ ಬೇಜಾರಾಗಿ ಒಂದು ದಿನ ರಾತ್ರಿ ಆಕಾಶ ಮಾರ್ಗವಾಗಿ ಅಲ್ಲಿಂದ ಹೊರಟು ಕಾರ್ ದ್ವೀಪಕ್ಕೆ ಬಂದ. ಅಲ್ಲಿ ಅವನಿರುವುದು ಯಾರಿಗೂ ಗೊತ್ತಾಗಲಿಲ್ಲ. ಅವನು ಎಷ್ಟು ಅಲ್ಪತೃಪ್ತನಾಗಿದ್ದನೆಂದರೆ ಮರಗಳಲ್ಲಿ ಹಣ್ಣು ಬಿಟ್ಟಾಗ ಅವುಗಳಲ್ಲಿ ಕೇವಲ ಒಂದನ್ನೇ ತಿನ್ನುತ್ತಿದ್ದ. ಹಣ್ಣುಗಳಿಲ್ಲದಾಗ ಮರದ ನಾಲ್ಕು ಎಲೆಗಳನ್ನೇ ನೀರಲ್ಲಿ ನೆನೆಸಿ ತಿನ್ನುತ್ತಿದ್ದ. ಅವನ ಸದಾಚಾರದ ತೇಜಸ್ಸಿನಿಂದಾಗಿ ಶಕ್ರನ ಸಿಂಹಾಸನ ಬಿಸಿಯಾಯಿತು. ಯಾವನೋ ಮಹಾನುಭಾವ ತೀಕ್ಷ್ಣವಾದ ತಪಸ್ಸು ಮಾಡುತ್ತಿದ್ದಾನೆ, ಅವನನ್ನು ಕಾಣಬೇಕು ಎಂದುಕೊಂಡು ಬ್ರಾಹ್ಮಣ ವೇಷ ಹಾಕಿಕೊಂಡು ಬಂದ. ಅಕೀರ್ತಿಯ ಗುಡಿಸಲಿನ ಮುಂದೆ ನಿಂತು ಬೇಡಿದ. ಯಾಚಕನನ್ನು ಕಂಡು ಸಂತೋಷದಿಂದ ತಾನು ನೆನೆಸಿ ಇಟ್ಟಿದ್ದ ನಾಲ್ಕೂ ಎಲೆಗಳನ್ನು ಅವನಿಗೆ ಕೊಟ್ಟು ತಾನು ಉಪವಾಸದಿಂದಿದ್ದ. ಮರುದಿನವೂ ಯಾಚಕ ಬಂದ. ಮತ್ತೆ ಎಲ್ಲ ಎಲೆಗಳನ್ನು ದಾನ ಮಾಡಿ ಉಪವಾಸ ಮಾಡಿದ. ಮೂರನೇ ದಿವಸವೂ ಹಾಗೆಯೇ ಆಯಿತು. ದೇಹದಿಂದ ಅಕೀರ್ತಿ ಸ್ವಲ್ಪ ಅಶಕ್ತನಾಗಿದ್ದರೂ ಅವನ ಮುಖದಲ್ಲಿ ಆನಂದ ತುಂಬಿ ತುಳುಕುತ್ತಿತ್ತು. ಅದನ್ನು ಕಂಡು ಶಕ್ರನಿಗೆ ತುಂಬ ಆಶ್ಚರ್ಯವಾಯಿತು. ಇಂಥ ಮಹಾನುಭಾವನಿಗೆ ತಾನು ವರ ನೀಡಬೇಕೆಂದು ತೀರ್ಮಾನಿಸಿದ. ಮರುದಿನ ಮತ್ತೆ ಅಕೀರ್ತಿಯ ಗುಡಿಸಲಿಗೆ ಹೋಗಿ ‘ಈ ಕಾಡಿನಲ್ಲಿ, ಯಾರೂ ಇಲ್ಲದ ಸ್ಥಳದಲ್ಲಿ ಯಾಕೆ ತಪಸ್ಸು ಮಾಡುತ್ತಿದ್ದೀಯಾ? ನಿನ್ನ ಅಪೇಕ್ಷೆ ಏನು?’ ಎಂದು ಕೇಳಿದ. ಅಕೀರ್ತಿಗೆ ಅವನು ಶಕ್ರ ಎಂಬುದು ತಿಳಿದಿತ್ತು. ಆತ ಹೇಳಿದ, ‘ಎಲೆ ಶಕ್ರ, ದೇಹದಿಂದ ಲೋಕದಲ್ಲಿ ಪುನಃ ಪುನಃ ಹುಟ್ಟುವುದು ಕಷ್ಟದ ಕೆಲಸ, ಸಾಯುವುದು ದುಃಖದ ಸಂಗತಿ. ಆದ್ದರಿಂದ ಈ ಚಕ್ರದಿಂದ ನಾನು ಮುಕ್ತನಾಗ ಬಯಸುತ್ತೇನೆ’, ಶಕ್ರನಿಗೆ ತುಂಬ ಸಮಾಧಾನವಾಗಿ, ‘ನನ್ನಿಂದ ಯಾವ ವರವನ್ನಾದರೂ ಬೇಡು’ ಎಂದ. ಆಗ ಅಕೀರ್ತಿಯ ಮಾತು ಅದ್ಭುತವಾದದ್ದು, ‘ದಯವಿಟ್ಟು ನನ್ನ ಮುಂದೆ ಎಂದಿಗೂ ಬರಬೇಡ, ವರದ ಆಸೆಯನ್ನು ಕೊಡಬೇಡ. ನಿನ್ನಲ್ಲಿ ವರವನ್ನು ಕೇಳಬೇಕು ಎಂಬ ಆಸೆಯೂ ನನಗೆ ಬರದಿರಲಿ’.

ಯಾರನ್ನೂ ಯಾವುದನ್ನೂ ಬೇಡದ ಮನಸ್ಥಿತಿತುಂಬ ಅಪರೂಪದ್ದು ಮತ್ತು ಮೆಚ್ಚತಕ್ಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT