ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೀರ್ಘಕಾಲದ ಸುಖ

Last Updated 8 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಪುರೋಹಿತನ ಹೆಂಡತಿಯ ಗರ್ಭದಲ್ಲಿ ಜನಿಸಿದ. ಅವನು ಹುಟ್ಟಿದ ಸಮಯಕ್ಕೆ ವಾರಾಣಸಿಯ ಸುತ್ತಮುತ್ತ ಸುಮಾರು ಹನ್ನೆರಡು ಯೋಜನದವರೆಗೆ ಎಲ್ಲ ಆಯುಧಗಳು ಥಳಥಳನೆ ಹೊಳೆಯತೊಡಗಿದವು. ಪುರೋಹಿತ ನಕ್ಷತ್ರಗಳನ್ನು ಗಮನಿಸಿದಾಗ ತನ್ನ ಮಗ ಇಡೀ ಜಂಬೂದ್ವೀಪದಲ್ಲೇ ಅಸಾಮಾನ್ಯ ಧನುರ್ಧಾರನಾಗುತ್ತಾನೆ ಎಂದು ತಿಳಿಯಿತು. ಅರಮನೆಯಲ್ಲಿಯ ಎಲ್ಲ ಆಯುಧಗಳು ಹೊಳೆದದ್ದನ್ನು ಕಂಡು ಗಾಬರಿಯಾದ. ಪುರೋಹಿತನಿಂದ ಅವನ ಮಗನ ವಿಷಯವನ್ನು ತಿಳಿದು, ‘ಆಚಾರ್ಯ, ಮಗನನ್ನು ಚೆನ್ನಾಗಿ ಬೆಳೆಸಿ. ಅವನು ದೊಡ್ಡವನಾದ ಮೇಲೆ ನನ್ನೆಡೆಗೆ ಕರೆ ತನ್ನಿ’ ಎಂದ. ಮಗುವಿನ ಆರೋಗ್ಯಕ್ಕೆಂದು ಅಪಾರ ಹಣವನ್ನು ಕೊಟ್ಟ.

ಮಗನಿಗೆ ಜ್ಯೋತಿಪಾಲ ಎಂದು ಹೆಸರಿಟ್ಟು ಅವನನ್ನು ತಕ್ಷಶಿಲೆಗೆ ವಿದ್ಯೆ ಕಲಿಯಲು ಕಳಿಸಿದ. ಈ ತರುಣ ಒಂದು ವರ್ಷದಲ್ಲೇ ಆಯುಧಗಳನ್ನು ಅದರಲ್ಲೂ ಧನುರ್ವಿದ್ಯೆಯಲ್ಲಿ ಅಪ್ರತಿಮನಾದ, ಗುರುಗಳಿಗೆ ಕಲಿಸುವುದು ಏನೂ ಉಳಿಯಲಿಲ್ಲ. ಗುರುಗಳ ಬಳಿ ಇದ್ದ ಎಲ್ಲ ಶಿಷ್ಯರಿಗೆ ಇವನೇ ಗುರುವಾದ. ನಂತರ ವಾರಾಣಸಿಗೆ ಬಂದು ತಂದೆ-ತಾಯಿಗಳಿಗೆ ನಮಸ್ಕರಿಸಿದ. ಅತ್ಯಂತ ಪರಾಕ್ರಮಶಾಲಿಯಾಗಿ ಬೆಳೆದ ಮಗನನ್ನು ಕಂಡು ಪುರೋಹಿತನಿಗೆ ಅತ್ಯಂತ ಸಂತೋಷವಾಯಿತು. ಮಗನನ್ನು ಕರೆದುಕೊಂಡು ಅರಮನೆಗೆ ಹೋದ. ರಾಜ ಅವನನ್ನು ಪ್ರತಿದಿನ ಸಾವಿರ ಹೊನ್ನಿನ ಸಂಬಳದ ಮೇಲೆ ನಿಯಮಿಸಿಕೊಂಡ.

ಕೆಲದಿನಗಳ ನಂತರ ಆಸ್ಥಾನದ ಕೆಲವು ಮಂತ್ರಿಗಳು, ಅಧಿಕಾರಿಗಳು, ಸಂಶಯದ ಮಾತುಗಳನ್ನು ತೆಗೆದರು. ‘ಈ ತರುಣನ ಸಾಮರ್ಥ್ಯವನ್ನು ಯಾರೂ ಕಂಡಿಲ್ಲ. ಆದರೂ ಅವನಿಗೇಕೆ ಅಷ್ಟು ಸಂಬಳ?’. ಈ ವಿಷಯವನ್ನು ಪುರೋಹಿತ ಮಗನಿಗೆ ಹೇಳಿದಾಗ ಆತ ತನ್ನ ಆಯುಧಗಳನ್ನು ತೆಗೆದುಕೊಂಡು ರಾಜಭವನಕ್ಕೆ ಬಂದ. ರಾಜನಿಗೆ ಹೇಳಿ ಎಲ್ಲರನ್ನೂ ಮೈದಾನಕ್ಕೆ ಬರಹೇಳಿದ. ರಾಜನಿಗೆ ಹೇಳಿ ದೇಶದ ಅತ್ಯಂತ ಶ್ರೇಷ್ಠ ನಾಲ್ಕು ಧನುರ್ಧರರನ್ನು ಕರೆಸಿದ. ಅವರನ್ನು ಒಂದು ದೊಡ್ಡ ಚೌಕದ ನಾಲ್ಕು ಮೂಲೆಗಳಲ್ಲಿ ನಿಲ್ಲಿಸಿ ತಾನು ಮಧ್ಯದಲ್ಲಿ ನಿಂತ. ಪ್ರತಿಯೊಬ್ಬ ಧನುರ್ಧಾರಿಗೂ ಮೂವತ್ತು ಸಾವಿರ ಬಾಣಗಳನ್ನು ಕೊಡಿಸಿದ. ನಂತರ ಗಟ್ಟಿಯಾಗಿ ಕೂಗಿ ಹೇಳಿದ, ‘ನಾಲ್ಕು ಧನುರ್ಧಾರಿಗಳು ನನ್ನೆಡೆಗೆ ಅತ್ಯಂತ ವೇಗವಾಗಿ ಬಾಣಗಳನ್ನು ಬಿಟ್ಟು ನನ್ನನ್ನು ಚಿಂದಿ ಮಾಡಲಿ. ಆದರೆ ಒಂದು ಬಾಣವೂ ನನ್ನನ್ನು ತಾಗದಂತೆ ತಡೆಯುತ್ತೇನೆ’. ಜನರೆಲ್ಲ ಬೆರಗಾಗಿ ನೋಡುತ್ತಿರಲು, ನಾಲ್ಕೂ ಧನುರ್ಧಾರಿಗಳು ಒಂದು ನಿಮಿಷಕ್ಕೆ ಸಾವಿರ ಬಾಣಗಳನ್ನು ಜ್ಯೋತಿಪಾಲನತ್ತ ಬಿಟ್ಟರು. ಯಾರಿಗೂ ಏನು ನಡೆಯುತ್ತಿದೆ ಎಂದು ತಿಳಿಯದಷ್ಟು ವೇಗದಲ್ಲಿ ಬಾಣಗಳು ಹಾರಾಡುತ್ತಿದ್ದವು. ಬಾಣ ಪ್ರಯೋಗ ನಿಂತ ಮೇಲೆ ನೋಡಿದರೆ ಒಂದು ಬಾಣವೂ ಜ್ಯೋತಿಪಾಲನನ್ನು ಮುಟ್ಟಿರಲಿಲ್ಲ. ಅವನ್ನೆಲ್ಲ ಆತ ಒಬ್ಬನೇ ಕತ್ತರಿಸಿ ಬಿಟ್ಟಿದ್ದ. ಈಗ ಯಾರಿಗೂ ಅವನ ಬಿಲ್ಲುವಿದ್ಯೆಯ ಬಗ್ಗೆ ಸಂಶಯ ಉಳಿಯಲಿಲ್ಲ. ರಾಜ ಅವನಿಗೆ ಅಪಾರ ಹಣವನ್ನು ಕೊಟ್ಟು ವಿಶೇಷ ಅಧಿಕಾರ ಕೊಡಲು ತೀರ್ಮಾನಿಸಿದ. ಆದರೆ ಜ್ಯೋತಿಪಾಲ ಮನೆಗೆ ಬಂದು ಚಿಂತಿಸಿದ. ಬಿಲ್ಲುವಿದ್ಯೆಯಿಂದ ಹಣ ಬಂದೀತು, ಮರ್ಯಾದೆ ದೊರೆತೀತು. ಆದರೆ ಇದು ಕೆಲವೇ ಕಾಲದ್ದು. ಶಾಶ್ವತ ಸುಖವನ್ನು ನೀಡುವಂಥದ್ದಲ್ಲ. ಅಧಿಕಾರ ಗೌರವಗಳೇ ಅಹಂಕಾರಕ್ಕೆ ಕಾರಣವಾಗಿ ಬಂಧನಗಳಾಗುತ್ತವೆ. ಇದಾವುದೂ ಬೇಡವೆಂದು ನಗರವನ್ನು ಬಿಟ್ಟು ಗೋದಾವರಿ ತೀರಕ್ಕೆ ಬಂದು ಪ್ರವ್ರಜಿತನಾದ. ದೇಹಶಕ್ತಿ, ಮರ್ಯಾದೆ, ಗೌರವ ಇವೆಲ್ಲ ಕೆಲವೇ ಕಾಲ ಸಂತೋಷ ನೀಡುವಂಥವುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT