ಶನಿವಾರ, ಸೆಪ್ಟೆಂಬರ್ 26, 2020
22 °C

ಬೆರಗಿನ ಬೆಳಕು | ಅಹಿಂಸೆಗೆ ಪ್ರೇರಣೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಮಹಾಕಾಯದ ಮಂಗನಾಗಿ ಜನಿಸಿದ್ದ. ಅವನ ವಾಸ ಕಾಡಿನಲ್ಲೇ. ಒಂದು ಬಾರಿ ರಾಜ ಬೇಟೆಯಾಡಲೆಂದು ಕಾಡಿಗೆ ಬಂದ. ರಾಜ ತಾನು ಬೇಟೆಯಲ್ಲಿ ಯಾವಾಗಲೂ ಯಶಸ್ಸನ್ನು ಪಡೆಯಲೇಬೇಕೆಂಬ ಹಟವಿದ್ದವನು. ಅವನು ತನ್ನ ಜೊತೆಗಾರರಿಗೆ ಶರತ್ತು ಹಾಕಿದ. ಅವರೆಲ್ಲ ಪ್ರಾಣಿಗಳನ್ನು ಅವನಿದ್ದೆಡೆಗೆ ಓಡಿಸಬೇಕು. ಯಾವುದಾದರೂ ಪ್ರಾಣಿ, ಯಾರೊಬ್ಬರ ಬದಿಯಿಂದ ಪಾರಾಗಿ ಹೋದರೆ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ಕೊಟ್ಟ.

ಅವರೆಲ್ಲ ಒಂದು ಪೊದೆಯನ್ನು ಸುತ್ತುವರೆದರು. ಅದರ ಮಧ್ಯದಲ್ಲಿ ಈ ಬೋಧಿಸತ್ವ ಸರಭ (ಮಂಗ) ಕುಳಿತಿತ್ತು. ಸುತ್ತಲಿನವರೆಲ್ಲ ನಗಾರಿ, ಹಲಗೆಗಳನ್ನು ಬಡಿಯುತ್ತ ಕೋಲಾಹಲವನ್ನುಂಟು ಮಾಡಿದರು. ಒಂದು ಕಡೆಗೆ ಮಾತ್ರ ಜಾಗವನ್ನು ತೆರೆದಿಟ್ಟು ಅಲ್ಲಿ ರಾಜನಿರುವಂತೆ ಯೋಜಿಸಿದರು. ಸಪ್ಪಳಕ್ಕೆ ಹೆದರಿ ಬೇರೆಲ್ಲಿಯೂ ಹೋಗಲು ಸ್ಥಾನವಿರದೆ ರಾಜನ ಬಳಿಗೆ ಹೋಗುವುದು ಅನಿವಾರ್ಯ ಮತ್ತು ಆಗ ರಾಜ ಅದನ್ನು ಹೊಡೆದು ಕೊಲ್ಲಬಹುದು ಎಂದು ತೀರ್ಮಾನಿಸಿ ಗದ್ದಲ ಎಬ್ಬಿಸಿದರು. ಮಂಗ ಎದ್ದು ನಿಂತು, ಎಲ್ಲ ಕಡೆಗೂ ಜನರು ಆಯುಧಗಳನ್ನು ಹಿಡಿದು ನಿಂತಿದ್ದನ್ನು ಕಂಡು ಅದು ರಾಜನ ಕಡೆಗೆ ನುಗ್ಗಿತು. ಆತ ಬಾಣ ಹೊಡೆಯುತ್ತಾನೆಂದು ತಿಳಿದಿದ್ದ ಮಂಗ ಓಡದೇ ನೆಲದ ಮೇಲೆ ಗುಡಗುಡನೇ ವೇಗವಾಗಿ ಉರುಳುತ್ತ ಅವನನ್ನು ದಾಟಿ ಹೋಗಿಬಿಟ್ಟಿತು. ಮುಂದೆ ಮೇಲೆದ್ದು ಓಡತೊಡಗಿತು. ರಾಜ ಕತ್ತಿಯನ್ನು ಹಿಡಿದು ಬೆನ್ನತ್ತಿದ. ಒಂದು ಯೋಜನದವರೆಗೆ ಹಾಗೆಯೇ ಓಡಿದ. ಮಂಗ ಮುಂದೆ ಅರವತ್ತು ಕೈಯಳತೆಯ ಗುಂಡಿ ಇದ್ದದ್ದನ್ನು ಕಂಡಿತು. ಅದು ಹುಲ್ಲಿನಿಂದ ಮುಚ್ಚಿದ್ದರಿಂದ ತಕ್ಷಣ ಗೊತ್ತಾಗುತ್ತಿರಲಿಲ್ಲ. ಮಂಗ ಛಂಗನೇ ಗುಂಡಿಯನ್ನು ಹಾರಿ ಆ ಕಡೆಗೆ ಹೋಯಿತು.

ಆದರೆ ಅದನ್ನು ತಿಳಿಯದ ರಾಜ ಗುಂಡಿಯಲ್ಲಿ ಬಿದ್ದು ಮುಳುಗತೊಡಗಿದ. ಕೊಳಚೆಯಲ್ಲಿ ಸಿಕ್ಕಿದ್ದ ಅವನಿಗೆ ಹೊರಗೆ ಬರುವುದು ಅಸಾಧ್ಯವಾಗಿ ಕಂಡಿತು. ತಾನು ಸಾಯುವುದು ಖಚಿತವಾಯಿತು. ಮುಂದೆ ಹೋಗಿ ತಿರುಗಿ ನೋಡಿದ ಮಂಗ, ರಾಜ ಮುಳುಗಿ ಸಾಯುತ್ತಿರುವುದನ್ನು ಕಂಡು ಮರಳಿ ಬಂದು, ತನ್ನ ಬಾಲವನ್ನು ಹತ್ತಿರದ ಮರಕ್ಕೆ ಸುತ್ತಿ, ಎರಡೂ ಕೈಗಳಿಂದ ರಾಜನನ್ನು ಹೊರಗೆ ಎಳೆದು ತೆಗೆಯಿತು. ನಂತರ ಬೆನ್ನ ಮೇಲೆ ಅವನನ್ನು ಹೊತ್ತುಕೊಂಡು ಸೈನ್ಯದ ಹತ್ತಿರ ಬಿಟ್ಟು ಮರಳಿ ಹೋಯಿತು. ಹೋಗುವ ಮುಂದೆ, ‘ರಾಜಾ, ನಾವು ಕಾಡಿನಲ್ಲಿರುವವರು, ನಮಗೆ ಏನೂ ಬೇಕಿಲ್ಲ. ನೀನೂ ಧರ್ಮದಿಂದ, ಅಹಿಂಸೆಯ ಮಾರ್ಗದಲ್ಲಿ ಬದುಕು ಸಾಗಿಸು’ ಎಂದು ಉಪದೇಶ ಮಾಡಿತು. ಇದು ರಾಜನಲ್ಲಿ ನಂಬಲಾರದಂತಹ ಬದಲಾವಣೆಯನ್ನು ತಂದಿತು. ಅವನಿಂದಾಗಿ ಇಡೀ ದೇಶದ ಜನ ಧರ್ಮಿಷ್ಠರಾದರು. ನರಕಕ್ಕೆ ಹೋಗುವವರೇ ಇಲ್ಲದಾಗಿ, ಸ್ವರ್ಗಗಳೆಲ್ಲ ತುಂಬಿ ಹೋದವು. ಇದಕ್ಕೆ ಕಾರಣವೇನು ಎಂದು ನೋಡಲು ಇಂದ್ರ ಭೂಮಿಗೆ ಬಂದ. ರಾಜನನ್ನು ಕರೆದುಕೊಂಡು ಉದ್ಯಾನವನಕ್ಕೆ ಹೋದ. ಅಲ್ಲೊಂದು ಮಾಯಾ ಸರಭವನ್ನು ಬರುವಂತೆ ಮಾಡಿ, ರಾಜನಿಗೆ ಅದನ್ನು ಹೊಡೆಯಲು ಹೇಳಿದ. ನೀನು ಬೇಟೆಯಾಡದಿದ್ದರೆ ನೀನು, ನಿನ್ನ ಹೆಂಡತಿ, ಮಕ್ಕಳು ರಾಜಧರ್ಮದಿಂದ ಹೊರತಾಗಿ ವೈತರಣಿಯ ನರಕದಲ್ಲಿ ಬೀಳುತ್ತೀರಿ ಎಂದು ಹೆದರಿಸಿದ. ನಾವೆಲ್ಲ ನರಕಕ್ಕೆ ಹೋದರೂ ಸರಿಯೆ, ಪ್ರಾಣಿ ಹಿಂಸೆ ಮಾಡಲಾರೆ ಎಂದ ರಾಜ. ಅದನ್ನು ಇಂದ್ರ ಮೆಚ್ಚಿದ.

ಪ್ರಾಣ ಹೋಗುತ್ತದೆ ಎಂಬ ಹೆದರಿಕೆಯ ಸಮಯದಲ್ಲಿ ದೊರೆತ ಬೋಧೆ ಬಹುಕಾಲ ಉಳಿದೀತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.