ಗುರುವಾರ , ಮಾರ್ಚ್ 4, 2021
24 °C

ಬೆರಗಿನ ಬೆಳಕು: ದೇಹಕ್ಕೆ ಕೊಡಬೇಕಾದ ನ್ಯಾಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ |
ಹೇಯವೆಂದೆಂದೊಡಾತ್ಮಂಗಪ್ಪುದೇನು? ||
ಆಯುಧವನದನು ತೊರೆದಾತ್ಮನೇಂಗೈದಪನು ? |
ನ್ಯಾಯ ತನುವಿಗಮಿರಲಿ - ಮಂಕುತಿಮ್ಮ || 382 ||

ಪದ-ಅರ್ಥ: ಮೃದ್ಭಾಂಡ=ಮಣ್ಣಿನ ಮಡಕೆ, ಹೇಯವೆಂದೆಂ ದೊಡಾತ್ಮಂಗಪ್ಪು ದೇನು=ಹೇಯವೆಂದು (ಅಸಹ್ಯವಾದದ್ದೆಂದು)+ಎಂದೊಡೆ (ಹೇಳಿದರೆ) +ಆತ್ಮಂಗೆ (ಆತ್ಮನಿಗೆ)+ಅಪ್ಪುದೇನು (ಆಗುವುದೇನು), ಆಯುಧವನದನು= ಆಯುಧವನು+ಅದನು, ತೊರೆದಾತ್ಮನೇಂಗೈದಪನು= ತೊರೆದು+ಆತ್ಮನು+ಏಂಗೈದಪನು (ಏನು ಮಾಡಿಯಾನು), ತನುವಿಗಮಿರಲಿ=ತನುವಿಗಂ (ದೇಹಕ್ಕೆ) +ಇರಲಿ.

ವಾಚ್ಯಾರ್ಥ: ಈ ದೇಹವನ್ನು ಮಣ್ಣಿನ ಮಡಕೆ, ಮಾಂಸದ ಮುದ್ದೆ ಎಂದು ಹೀಯಾಳಿಸುವುದರಿಂದ ಆತ್ಮನಿಗಾಗುವುದೇನು? ಅದರಂತೆ ತನ್ನ ಆಯುಧವಾದ ದೇಹವನ್ನು ತೊರೆದ ಆತ್ಮನಾದರೂ ಏನು ಮಾಡಲು ಸಾಧ್ಯ? ಆದ್ದರಿಂದ ದೇಹಕ್ಕೆ ನ್ಯಾಯ ಸಲ್ಲಬೇಕು.

ವಿವರಣೆ: ಮನುಷ್ಯನ ಬದುಕು ದೇಹವನ್ನು ಬೆಳೆಸುವಲ್ಲಿ, ರಕ್ಷಿಸುವಲ್ಲಿಯೇ ಕಳೆದು ಹೋಗುತ್ತದೆ. ಅದರ ಅವಶ್ಯಕತೆಗಳ ಪಟ್ಟಿ ಮುಗಿಯುವುದೇ ಇಲ್ಲ. ಕೆಲವೊಂದು ಬಾರಿ ಅದರ ಉಪದ್ರವವನ್ನು ತಡೆಯುವುದು ಬಲುಕಷ್ಟ. ಆದರೆ ಅದೊಂದು ಅದ್ಭುತ, ಅಸಾಮಾನ್ಯವಾದ ಉಪಕರಣ. ಇಡೀ ಪ್ರಪಂಚದ ಎಲ್ಲ ಅಂಶಗಳೂ ಸೂಕ್ಷ್ಮಾತಿಸೂಕ್ಷ್ಮ ರೂಪದಲ್ಲಿ ಸೇರಿ ದೇಹವನ್ನುಂಟು ಮಾಡಿವೆ. ಅದ್ದರಿಂದ ದೇಹವೊಂದು ಸೂಕ್ಷ್ಮ ಪ್ರಪಂಚ. ನಿಜ, ಅದರಲ್ಲಿ ಕೊಳಕಿದೆ, ರೋಗವಿದೆ, ಮುಪ್ಪಿದೆ, ಸಾವಿದೆ. ಹಾಗೆಂದರೆ ಅದು ಹೀನವಾದದ್ದೇ? ಅಲ್ಲ. ಆತ್ಮ ಮುಖ್ಯವೆಂದು ಬಗೆಯುವುದಾದರೆ ಅದನ್ನು ಅರಿಯುವುದು ದೇಹದ ಮೂಲಕವೇ ಅಲ್ಲವೇ? ಆತ್ಮದ ಆಯುಧ ದೇಹ. ಆಯುಧವೇ ಇಲ್ಲದೆ ಆತ್ಮ ಏನು ಮಾಡೀತು?

ಅಲ್ಲಮ ಪ್ರಭುವಿನ ಒಂದು ವಚನದ ಮಾತು ಬೆರಗು ಹುಟ್ಟಿಸುತ್ತದೆ. ನೂರು ಪುಟಗಳ ಬರಹ ಮಾಡದ ಪರಿಣಾಮವನ್ನು ವಚನದ ಒಂದು ಸಾಲು ಹೃದಯಕ್ಕೆ ಮುಟ್ಟಿಸುತ್ತದೆ. ‘ಅರಗಿನ ದೇವಾಲಯದಲ್ಲಿ ಒಂದು ಉರಿಯ ಲಿಂಗವ ಕಂಡೆ’ ಎಂಬುದು ಆ ಮಾತು. ದೇಹವೆಂಬುದು ಅರಗಿನ ದೇವಾಲಯ. ಇದೊಂದು ಅದ್ಭುತ ರೂಪಕ. ಅರಗಿನಿಂದ ಕಟ್ಟಡವನ್ನು ತುಂಬ ಆಕರ್ಷಕವಾಗಿ ಮಾಡಬಹುದು. ಅದನ್ನು ಹೇಗಾದರೂ ಮಣಿಸಿ, ಕರಗಿಸಿ ಅಲಂಕಾರವನ್ನಾಗಿ ಮಾಡಿಕೊಳ್ಳಬಹುದು. ಆದರೆ ಅದು ಅರಗಿನದಾದ್ದರಿಂದ ತುಂಬ ನಾಜೂಕು, ಉರಿಗೆ ಸುಟ್ಟು ಹೋಗುವಂಥದ್ದು. ಆದರೆ ಈ ಅರಗಿನ ದೇವಾಲಯದಲ್ಲಿ ಉರಿಯ ಲಿಂಗವಿದೆ. ಉರಿಯ ಲಿಂಗ ಆತ್ಮ. ಅದ್ಭುತವೆಂದರೆ ಎರಡೂ ಜೊತೆ ಜೊತೆಯಾಗಿವೆ. ಅರಗಿಗೆ ಉರಿಯನ್ನು ಎದುರಿಸುವ, ತಡೆಯುವ ಶಕ್ತಿ ಇಲ್ಲ. ಕ್ಷಣದಲ್ಲೇ ಉರಿದು ಭಸ್ಮವಾಗುವುದು ಅದರ ಗತಿ. ಆದರೆ ಅರಗಿನ ದೇವಾಲಯವೆಂಬ ದೇಹ, ಆತ್ಮವೆಂಬ ಉರಿಯನ್ನು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ. ಇದು ಪರಮಾಶ್ಚರ್ಯವಲ್ಲವೇ? ಇದು ದೇಹದ ಶಕ್ತಿಯೂ ಹೌದು, ಆತ್ಮದ ಉರಿಯ ಉದಾರತೆಯೂ ಹೌದು.

ಕಗ್ಗದ ಮಾತೂ ಅದೇ. ದೇಹ ನಿಷ್ಪ್ರಯೋಜಕ ಎನ್ನುವುದಾದರೆ, ಆತ್ಮಕ್ಕೆ ಸ್ಥಾನವೆಲ್ಲಿ? ಮತ್ತು ದೇಹವಿಲ್ಲದೆ ಆತ್ಮ ಏನು ಮಾಡಲು ಸಾಧ್ಯ? ಆದ್ದರಿಂದ ದೇಹಕ್ಕೆ ನೀಡಬೇಕಾದ ಮಹತ್ತನ್ನು, ಗೌರವವನ್ನು, ನ್ಯಾಯವನ್ನು ನೀಡಲೇಬೇಕು. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ⇒v

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು