ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆಗಳ ಸರಪಳಿ

Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಅವನ ಮಗನಾಗಿ ಹುಟ್ಟಿದ. ಸಕಲವಿದ್ಯೆಗಳನ್ನು ಪಡೆದು ಬಂದು ತಂದೆಯ ಮರಣಾನಂತರ ತಾನೇ ರಾಜನಾದ. ಅವನ ಹೆಸರು ಉದಯಕುಮಾರ ಎಂದಿತ್ತು.

ಒಂದು ಬಾರಿ ವಾರಾಣಸಿ ಉತ್ಸವ ಬಂದಿತು. ನಗರವೆಲ್ಲ ಸಿದ್ಧವಾಯಿತು. ಜನರು ಉತ್ಸವದ ಆಟ-ಪಾಠಗಳು ಮತ್ತು ಮೋಜಿನಲ್ಲಿ ಭಾಗವಹಿಸಲು ಸಿದ್ಧರಾದರು. ಆಗ ವಾರಾಣಸಿಯ ಉತ್ತರದ್ವಾರದಲ್ಲಿ ಭಿಶ್ತಿ ಎಂಬುವವನೊಬ್ಬ ನೀರು ತುಂಬುವ ಕೂಲಿ ಕೆಲಸ ಮಾಡುತ್ತಿದ್ದ. ಅದರ ಕೂಲಿ ಅರ್ಧ ಮಾಸ ದೊರಕಿತು. ಅವನು ಅದನ್ನು ನಾಲ್ಕು ಗೋಡೆಗಳ ಇಟ್ಟಿಗೆಗಳ ಸಂದಿಯಲ್ಲಿ ಇಟ್ಟುಬಿಟ್ಟ. ಅವನಿಗೆ ದಕ್ಷಿಣದ್ವಾರದಲ್ಲಿ ಕೆಲಸಚ ಮಾಡುವ ಕೂಲಿ ಹೆಂಗಸಿನೊಂದಿಗೆ ಸಹವಾಸವಾಯಿತು. ಆಕೆ, ‘ಸ್ವಾಮಿ, ನಾಳೆ ನಗರದಲ್ಲಿ ಸಂಭ್ರಮ ತುಂಬಿ ತುಳುಕುತ್ತದೆ. ನಾವೂ ಸಂತೋಷವಾಗಿ ರಮಿಸೋಣ. ನನ್ನ ಹತ್ತಿರ ಅರ್ಧಮಾಸ ಹಣವಿದೆ. ನಿಮ್ಮ ಬಳಿ ಎಷ್ಟಿದೆ?’ ಎಂದು ಕೇಳಿದಳು. ಆತ, ‘ನನ್ನ ಬಳಿಯೂ ಅರ್ಧ ಮಾಸವಿದೆ. ಆದರೆ ಅದು ಇಲ್ಲಿಂದ ಹನ್ನೆರಡು ಯೋಜನ ದೂರದ ಉತ್ತರ ದ್ವಾರದಲ್ಲಿದೆ’ ಎಂದ. ಆ ಹೆಂಗಸು, ‘ಅದನ್ನು ತಂದುಬಿಟ್ಟರೆ, ಇಬ್ಬರದೂ ಸೇರಿ ಒಂದು ಮಾಸವಾ
ಗುತ್ತದೆ. ಅದರಲ್ಲಿ ಅರ್ಧಮಾಸಕ್ಕೆ ಸುಗಂಧ ಮತ್ತೆ ಅರ್ಧ ಮಾಸಕ್ಕೆ ಸುರೆಯನ್ನು ಕೊಂಡು ಇಡೀ ದಿನ ರಮಿಸಬಹುದು’ ಎಂದಳು. ಆತ ಅತ್ಯಂತ ಸಂತೋಷದಿಂದ, ‘ಆಯ್ತು, ಹೀಗೆ ಹೋಗಿ ಹಾಗೆ ಬಂದುಬಿಡುತ್ತೇನೆ, ನೋಡುತ್ತಿರು’ ಎಂದು ಉತ್ತರದ್ವಾರದ ಕಡೆಗೆ ಹಾಡುತ್ತ, ಕುಣಿಯುತ್ತ ನಡೆದ. ಕಾಮವಾಸನೆ ಅವನಲ್ಲಿ ಆನೆಯ ಬಲ ತಂದಿತ್ತು.

ಮಧ್ಯಾಹ್ನ ಉರಿಬಿಸಿಲು, ಮರಳು ಕಾಯ್ದು ಕೆಂಡವಾಗಿದೆ. ರಾಜ ಉದಯಕುಮಾರ ಕಿಟಕಿಯಲ್ಲಿ ನೋಡುತ್ತ ನಿಂತಾಗ ಚಿಂದಿಯನ್ನುಟ್ಟು, ಹಾಡುತ್ತ, ಕುಣಿಯುತ್ತ ಬರುತ್ತಿದ್ದ ಭಿಶ್ತಿಯನ್ನು ಕಂಡು ಆಶ್ಚರ್ಯಪಟ್ಟ. ರಾಜದೂತರನ್ನು ಕಳುಹಿಸಿ ಆತನನ್ನು ಕರೆಸಿದ. ‘ಅಲ್ಲಯ್ಯಾ, ಈ ರಣಬಿಸಿಲಿನಲ್ಲಿ ನೀನು ಹಾಡುತ್ತ ಬರುತ್ತಿದ್ದೀಯಲ್ಲ, ಕಾಲು ಸುಡುವುದಿಲ್ಲವೆ? ಏನು ಸಂತೋಷಕ್ಕೆ ಕಾರಣ?’ ಎಂದು ಕೇಳಿದ. ಭಿಶ್ತಿ ಹೇಳಿದ, ‘ಬಿಸಿಲು ಸುಡುವುದಿಲ್ಲ, ಕಾಮ ನನ್ನನ್ನು ಸುಡುತ್ತಿದೆ. ನಾನು ಬೇಗ ಹೋಗಿ ಉತ್ತರದದ್ವಾರದಲ್ಲಿ ನಾನಿಟ್ಟಿರುವ ಅರ್ಧ ಮಾಸವನ್ನು ತಂದು ಆ ಹೆಂಗಸನ್ನು ಕೂಡಬೇಕು’. ರಾಜ ‘ಅರ್ಧಮಾಸಕ್ಕೆ ಇಷ್ಟು ಕಷ್ಟಪಡಬೇಕೆ? ನಾನೇ ನಿನಗೆ ಒಂದು ಮಾಸ ಕೊಟ್ಟರೆ ಮರಳಿ ಹೋಗುತ್ತೀಯಾ?’ ಎಂದು ಕೇಳಿದ. ‘ಅದನ್ನು ಕೊಡಿ, ಆದರೆ ಆ ಅರ್ಧಮಾಸವೂ ಬೇಕು’ ಎಂದ ಭಿಶ್ತಿ. ‘ಹೋಗಲಿ ಎರಡು ಮಾಸ ಕೊಟ್ಟರೆ ಆ ಅರ್ಧಮಾಸ ಬಿಡುತ್ತೀಯಾ?’ ಎಂದು ಕೇಳಿದ್ದಕ್ಕೆ ಆತ ಸಾಧ್ಯವಿಲ್ಲ ಎಂದ. ರಾಜ ಕುತೂಹಲಕ್ಕೆ ಬೆಲೆ ಹೆಚ್ಚಿಸುತ್ತ, ಕೋಟಿ, ಹತ್ತು ಕೋಟಿ ಎನ್ನುತ್ತ ಕೊನೆಗೆ ಅರ್ಧರಾಜ್ಯ ಕೊಡುತ್ತೇನೆ ಎಂದಾಗ ಭಿಶ್ತಿ ಒಪ್ಪಿಬಿಟ್ಟ.

ತಕ್ಷಣ ರಾಜ ಮಂತ್ರಿಗಳನ್ನು ಕರೆಸಿ ರಾಜ್ಯವನ್ನು ಎರಡು ಭಾಗ ಮಾಡಿ ಒಂದಕ್ಕೆ ಭಿಶ್ತಿಯನ್ನು ರಾಜನನ್ನಾಗಿ ಮಾಡಿದ. ಭಿಶ್ತಿ ಹೆಂಗಸನ್ನು ಮದುವೆಯಾಗಿ ರಾಣಿಯನ್ನಾಗಿ ಮಾಡಿದ. ಒಂದು ದಿನ ಇಬ್ಬರೂ ರಾಜರು ಉದ್ಯಾನವನಕ್ಕೆ ತಿರುಗಾಡಲು ಹೋದಾಗ ಉದಯಕುಮಾರ ಕಲ್ಲು ಮಂಚದ ಮೇಲೆ ಮಲಗಿದ. ಆಗ ಭಿಶ್ತಿಯ ಆ ಮನದಲ್ಲಿ ಕೆಟ್ಟ ವಿಚಾರ ಬಂದಿತು. ಈಗ ನನಗೆ ದೊರೆತದ್ದು ಕೇವಲ ಅರ್ಧರಾಜ್ಯ. ಇವನನ್ನು ಕೊಂದರೆ ಪೂರ್ತಿ ರಾಜ್ಯ ನನ್ನದೇ ಆಗುವುದಲ್ಲ, ಎಂದುಕೊಂಡು ಕಠಾರಿಯನ್ನು ತೆಗೆದು ರಾಜನನ್ನು ಇರಿಯಲು ಹೋದಾಗ ಅವನ ಮನಸ್ಸಿನಲ್ಲಿ ಸಂಕಲ್ಪವಾಯಿತು. ಛೇ, ಎಲ್ಲಿಯೋ ಕೂಲಿ ಮಾಡುತ್ತಿದ್ದ ನನ್ನನ್ನು ರಾಜನನ್ನಾಗಿ ಮಾಡಿದ ಈ ಪುಣ್ಯಾತ್ಮನನ್ನು ಕೊಲ್ಲಲು ಹೊರಟಿದ್ದೆನಲ್ಲ. ಮೊದಲು ಹಣದ ಆಸೆ. ನಂತರ ಹೆಣ್ಣಿನ ಆಸೆ, ಈಗ ರಾಜ್ಯದ ಆಸೆ. ಈ ಆಸೆಗಳಿಗೆ ಮುಕ್ತಿಯಿಲ್ಲ. ಆಸೆಯಿಂದ ಆಸೆಯನ್ನು ಗೆಲ್ಲುವುದು ಸಾಧ್ಯವಿಲ್ಲ. ಹೀಗೆಂದುಕೊಂಡು ಆ ಕ್ಷಣದಲ್ಲೇ ಎಲ್ಲವನ್ನೂ ತ್ಯಾಗಮಾಡಿ ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೊರಟುಹೋದ.

ಆಸೆಯನ್ನು, ಆಸೆಯಿಂದ, ತಣಿಸುವುದು ಅಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT