ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯೇ ವಿಸ್ಮಯ

Last Updated 4 ಜುಲೈ 2018, 19:27 IST
ಅಕ್ಷರ ಗಾತ್ರ

ಏನು ಭೈರವಲೀಲೆಯೀ ವಿಶ್ವವಿಭ್ರಮಣೆ ! |
ಏನು ಭೂತಗ್ರಾಮನರ್ತನೋನ್ಮಾದ ! ||
ಏನಗ್ನಿ ಗೋಳಗಳು ! ಏನಂತರಾಳಗಳು ! ||
ಏನು ವಿಸ್ಮಯ ಸೃಷ್ಟಿ – ಮಂಕುತಿಮ್ಮ ||2||

ಭೈರವಲೀಲೆಯೀ =ಭೈರವ (ಶಿವ, ರುದ್ರ) + ಲೀಲೆ +ಈ, ಭೂತಗ್ರಾಮನರ್ತನೋನ್ಮಾದ = ಭೂತ + ಗ್ರಾಮ + ನರ್ತನ +ಉನ್ಮಾದ (ಉದ್ವೇಗ, ಆವೇಶ), ಗೋಳ = ಉಂಡೆ, ಚೆಂಡು.

ಏನು ಈ ಭೈರವನಲೀಲೆ, ಈ ವಿಶ್ವದ ಎಡೆಬಿಡದ ತಿರುಗಾಟ? ಈ ವಿಶ್ವವನ್ನು ನಿರ್ಮಿಸಿದ ಪಂಚಭೂತಗಳ ನರ್ತನದ ಆವೇಶ ಎಂತಹದು ? ಏನು ಅಗ್ನಿಯ ಉಂಡೆಗಳು? ಏನಿದರ ಅಂತರಾಳ? ಎಂತಹ ಅದ್ಭುತ, ವಿಸ್ಮಯ ಈ ಸೃಷ್ಟಿ?

ಶಿವನ ನೃತ್ಯದಲ್ಲಿ ಎರಡು ಬಗೆ. ಒಂದು ಸಂತೋಷ ನೀಡುವ, ಕಣ್ಣಿಗೆ ಮುದ ನೀಡುವ ಲಾಸ್ಯ. ಇನ್ನೊಂದು ಭಯ ಹುಟ್ಟಿಸುವ ತಾಂಡವ ನೃತ್ಯ. ಅಸಾಮಾನ್ಯವಾದ, ಕಲ್ಪನಾತೀತವಾದ ಈ ಪ್ರಪಂಚ ತಿರುಗುತ್ತಿರುವ ವೇಗ, ಪಂಚಭೂತಗಳು ಹಲವಾರು ಮುಖಗಳಲ್ಲಿ ಎದ್ದು ಮಹಾಶಕ್ತಿಯಿಂದ, ಉನ್ಮಾದದಿಂದ ನರ್ತಿಸುವುದನ್ನು ಕಂಡಾಗ ಈ ಭೈರವಲೀಲೆ ನಿಜವಾಗಿಯೂ ತಾಂಡವವೇ ಎನ್ನಿಸುವುದು ಸಹಜ.

ಪ್ರಪಂಚದ ಸೃಷ್ಟಿಯೇ ಒಂದು ಅನನ್ಯವಾದ ಒಗಟು. ಅದನ್ನು ಬಿಡಿಸುವುದರಲ್ಲಿ, ತಿಳಿದುಕೊಳ್ಳುವುದರಲ್ಲಿ ತತ್ವಜ್ಞಾನಿಗಳು, ವಿಜ್ಞಾನಿಗಳು ಸತತವಾಗಿ ಶ್ರಮಿಸಿದ್ದಾರೆ. ಆದಿಯಲ್ಲಿ ಏನೂ ಅಲ್ಲದ ಆದರೆ ಎಲ್ಲವೂ ಆಗಿರುವ, ಅನಂತವಾಗಿದ್ದರೂ ಶೂನ್ಯವಾಗಿದ್ದ ಸ್ಥಿತಿಯೊಂದಿತ್ತು. ಅದು ಶಕ್ತಿ, ಶಬ್ದ, ಬೆಳಕು, ಘನ, ದ್ರವ, ಅನಿಲ ಇದಾವುದೂ ಆಗಿರಲಿಲ್ಲ.

ಅದನ್ನು ವಿಜ್ಞಾನಿಗಳು cosmic egg ಎಂದು ಕರೆದರೆ ಉಪನಿಷತ್ತುಗಳು ಅದನ್ನು ‘ತತ್’ ಎಂದು ಕರೆದವು. ತತ್ ಎಂದರೆ ‘ಅದು’ ಎಂದಷ್ಟೇ ಅರ್ಥ. ಮನುಷ್ಯನ ಚಿಂತನೆಯ ಇತಿ-ಮಿತಿಗೆ ನಿಲುಕದೇ ಇರುವುದರಿಂದ ಅದನ್ನು ‘ತತ್‍ತ್ವ’ ಅಥವಾ ‘ತತ್ತ್ವ’ ಎಂದರು.

ನಂತರ ಬಂದ ಪುರಾಣ ಸಾಹಿತ್ಯಗಳು ಆ ತತ್ತ್ವವನ್ನು ಸಾಮಾನ್ಯ ಜನರಿಗೆ ತಿಳಿಸುವುದಕ್ಕಾಗಿ ಅದನ್ನು ಪರಬ್ರಹ್ಮ, ಪರಶಿವ ಅಥವಾ ನಾರಾಯಣ ಎಂದೆಲ್ಲ ತಮ್ಮ ಕಲ್ಪನೆಯ ಆಧಾರದಲ್ಲಿ ವಿವರಿಸಿದರು. ಮಹಾಸ್ಫೋಟದಲ್ಲಿ ಈ ಮೂಲತತ್ವ ಸಿಡಿದು ಬೆಂಕಿಯ ಗೋಳಗಳಾಗಿ ಗರಗರನೇ ತಿರುಗುತ್ತ ಒಂದರಿಂದ ಒಂದು ದೂರ ಹೋಗತೊಡಗಿದವು.

ಇದನ್ನೇ ವಿಜ್ಞಾನಿಗಳು big bang ಎಂದರು. ಕಲ್ಪನಾತೀತವಾದ, ಬೆಂಕಿಯ ಉಂಡೆಗಳು ದಿಕ್ಕು ದಿಕ್ಕಿಗೆ ತಿರುಗುತ್ತ, ಮತ್ತೆ ತಾವೇ ಸಿಡಿದುಕೊಂಡು ಹೊಸ ಬೆಂಕಿಯ ಗೋಳಗಳನ್ನು ಸೃಷ್ಟಿಸುತ್ತ ಸಾಗಿದವು.

ಸಹಸ್ರಾರು ವರ್ಷಗಳ ನಂತರ ಸಾವಿರಾರು ವರ್ಷಗಳ ಕಾಲ ನಿರಂತರವಾಗಿ ಬಂದ ಮಳೆಯಲ್ಲಿ ತಣ್ಣಗಾಗಿ ಗ್ರಹಗಳಾದವು. ದೊಡ್ಡ ಬೆಂಕಿಯ ಉಂಡೆಗಳು ಉರಿಯುತ್ತ ತಣ್ಣಗಾಗದೇ ಬೆಳಕು ಕೊಡುತ್ತ ನಕ್ಷತ್ರಗಳಾದವು. ನಮ್ಮ ಸೂರ್ಯನೂ ಅಂಥ ಬೆಂಕಿಯ ಚೆಂಡೇ.

ಈ ಪ್ರಪಂಚ ಎಷ್ಟು ದೊಡ್ಡದು? ಬೆಳಕಿನ ವೇಗದಲ್ಲಿ ಅಂದರೆ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ವೇಗದಲ್ಲಿ ಹೊರಟರೆ ಶತಕೋಟಿ ವರ್ಷ ಸಾಗಿದರೂ ಈ ಪ್ರಪಂಚದ ಕೊನೆಯನ್ನು ಕಾಣಲಾರೆವು.

ಆ ಅಗ್ನಿಗೋಳಗಳು, ಅವುಗಳ ನಡುವಿನ ಅಂತರಾಳ ಇವುಗಳನ್ನು ಕಲ್ಪಿಸಲೂ ಕಷ್ಟ. ಅಂತೆಯೇ ಈ ವಿಶ್ವ ಅತ್ಯಂತ ಶ್ರೇಷ್ಠ, ಅನೂಹ್ಯವಾದ ವಿಸ್ಮಯ. ಈ ಅಪರಂಪಾರ ವಿಶ್ವದ ಹರಹನ್ನು, ಆಳವನ್ನು, ವೈವಿಧ್ಯವನ್ನು, ಅದರ ಬೆರಗನ್ನು ಬೆಡಗನ್ನು ಕಂಡ ಪ್ರತಿಯೊಬ್ಬ ವ್ಯಕ್ತಿಯೂ ಉದ್ಗರಿಸುವ ಮಾತೇ ಈ ಕಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT