ಶುಕ್ರವಾರ, ಡಿಸೆಂಬರ್ 13, 2019
26 °C

ಮಂಕುತಿಮ್ಮನ ಕಗ್ಗ | ಜನ್ಮ ಸಾಫಲ್ಯತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ದಿನದಿನವು ಹಳಸುವುವು, ದಿನದಿನವು ಕೊಳೆಯುವುವು
ಮನುಜಕುಲದೆಲ್ಲ ಕೃತಿ ವಿಜಯ ವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ – ಮಂಕುತಿಮ್ಮ || 212 ||

ಪದ-ಅರ್ಥ: ಮನುಜಕುಲದೆಲ್ಲ=ಮನುಜಕುಲದ+ಎಲ್ಲ, ಕೃತಿ=ಕಾರ್ಯಗಳು, ವಿಭವ=ಹೊಂದಿದ ಸಂಪತ್ತು, ಅನುದಿನವು=ಪ್ರತಿದಿನವು

ವಾಚ್ಯಾರ್ಥ: ಪ್ರತಿದಿನವು ಮನುಷ್ಯನ ಕೆಲಸಗಳು, ಸಾಧಿಸಿದ ವಿಜಯಗಳು, ಹೊಂದಿದ ಸಂಪತ್ತುಗಳು ಹಳಸುತ್ತವೆ, ಕೊಳೆಯುತ್ತವೆ. ಪ್ರತಿದಿನವು ಮತ್ತೆ ಅದನ್ನು ತೊಳೆದು ಹೊಸದೆನ್ನುವಂತೆ ಮಾಡುವುದೆ ಬದುಕಿನ ಸಫಲತೆ.

ವಿವರಣೆ: ಚಕ್ರೇಶ ಭರತನಿಗೆ ತನ್ನ ಬಗ್ಗೆಯೇ ಹೆಮ್ಮೆಯಾಯಿತು. ತನ್ನಂತಹ ಪರಾಕ್ರಮಶಾಲಿಯಾದ ಚಕ್ರವರ್ತಿ ಹಿಂದೆಂದೂ ಇದ್ದಿರಲಾರ ಎನ್ನಿಸಿತು. ಈ ಸಾಧನೆಯನ್ನು ಶಾಶ್ವತವಾಗಿರುವಂತೆ ಮಾಡಬೇಕೆಂದುಕೊಂಡು ಕುಶಲ ಶಿಲ್ಪಿಗಳನ್ನು ಕರೆದುಕೊಂಡು ಪರ್ವತದ ಶಿಖರಗಳೆಡೆಗೆ ನಡೆದ. ಅಲ್ಲಿ ಎತ್ತರದಲ್ಲಿರುವ ದೊಡ್ಡ ಬಂಡೆಗಲ್ಲಿನ ಮೇಲೆ ತನ್ನ ಕೀರ್ತಿಯನ್ನು ಬರೆಸಬೇಕೆಂಬುದು ಅವನ ಉದ್ದೇಶ. ಆಗ ಮುಂಬರುವ ತಲೆಮಾರುಗಳಿಗೆ ತನ್ನ ಸಾಧನೆಯ ಅರಿವಾದೀತು ಎಂದುಕೊಂಡು ಪರ್ವತದ ತುದಿಯನ್ನು ತಲುಪಿದ. ಬಂಡೆಯನ್ನು ಕಂಡಾಗ ಅವನಿಗೆ ಆಘಾತವಾಯಿತು. ಬಂಡೆಯ ಮೇಲೆ ಒಂದು ಇಂಚೂ ಸ್ಥಳ ಇಲ್ಲದ ಹಾಗೆ ಹಿಂದೆ ಆಗಿ ಹೋದ ಚಕ್ರವರ್ತಿಗಳು ತಮ್ಮ ಕೀರ್ತಿಯನ್ನು ಕೆತ್ತಿಸಿದ್ದಾರೆ. ಭರತ ನಾಚಿಕೆಯಿಂದ ಮುದುರಿಹೋದ. ತನ್ನ ಸಾಧನೆ ಅನನ್ಯವಾದದ್ದು ಎಂದು ನಂಬಿದ ಅವನಿಗೆ ತನಗಿಂತ ಹೆಚ್ಚು ಸಾಧನೆ ಮಾಡಿದವರು ಹೆಸರಿಲ್ಲದೆ ಹೋಗಿದ್ದಾರೆ, ಕಲ್ಲಿನ ಮೇಲೆ ಕೀರ್ತಿಯನ್ನು ಕೆತ್ತಿಸಿದವರೂ ಮರೆಯಾಗಿ ಹೋಗಿದ್ದಾರೆ. ಆದ್ದರಿಂದ ತನ್ನ ಸಾಧನೆ ಕೂಡ ಬಹಳ ದಿನ ಉಳಿಯಲಾರದು ಎಂಬ ಸತ್ಯದ ಅರಿವಾಯಿತು.

ಈ ಪ್ರಪಂಚ ಇರುವುದೇ ಹೀಗೆ. ಇಲ್ಲಿ ಯಾವುದೂ ಶಾಶ್ವತ ಎನ್ನುವುದಿಲ್ಲ. ಒಂದು ಕಾಲಕ್ಕೆ ಯಾರೂ ಎದುರಿಸಲಾಗದ ಶಕ್ತಿ ಎಂದು ಪರಿಗಣಿತವಾಗಿ ರೋಮ್ ಸಾಮ್ರಾಜ್ಯ ಕುಸಿದು ಸಂಪೂರ್ಣ ಮರೆಯಾಗಿ ಹೋದರೂ ಹೊಸ ರೋಮ್ ಅದೇ ಸ್ಥಳದಲ್ಲಿ ಎದ್ದು ನಿಂತಿದೆ. ಶ್ರೀ ಕೃಷ್ಣ ಕಟ್ಟಿದ ಅಭೇದ್ಯವಾದ ದ್ವಾರಕೆ ಸಮುದ್ರದಲ್ಲಿ ಮುಳುಗಿಹೋಯಿತು. ಅದರ ಮೇಲೆ ಮತ್ತೆರಡು ಬಾರಿ ದ್ವಾರಕೆಯ ಸೃಷ್ಟಿಯಾಯಿತು. ಇಂದಿರುವ ದ್ವಾರಕೆ, ನೀರಿನಲ್ಲಿ ಮುಳುಗಿ ಹೋಗಿರುವ ಹಳೆಯ ದ್ವಾರಕೆಯ ಮೇಲೆ ತಲೆಯೆತ್ತಿ ನಿಂತಿದೆ. ರಾಮರಾಜ್ಯದ ಕೇಂದ್ರಬಿಂದುವಾಗಿದ್ದ ಅಯೋಧ್ಯೆ ಅನೇಕ ಅವಸ್ಥಾಂತರಗಳನ್ನು ಕಂಡು ಮತ್ತೊಮ್ಮೆ ಸಂಭ್ರಮದ ರೂಪವನ್ನು ತಾಳಲಿದೆ.

ಹೀಗೆ ಹಿಂದೆ ಮನುಜಕುಲ ಸಾಧಿಸಿದ ಕಾರ್ಯಗಳು, ವಿಜಯಗಳು, ಸಂಪತ್ತುಗಳು ಕಾಲಕಳೆದಂತೆ ಹಳಸಿಹೋಗುತ್ತವೆ, ಕೊಳೆತುಹೋಗುತ್ತವೆ, ಹೇಳಹೆಸರಿಲ್ಲದಂತೆ ಕರಗಿಹೋಗುತ್ತವೆ. ಆದರೆ ಪ್ರಪಂಚ ಇಂದಿಗೂ ಸಂಭ್ರಮದಲ್ಲಿದೆ, ಹೊಸಹೊಸತಾಗಿ ಹೊಳೆಯುತ್ತಿದೆ. ಹಿಂದೆ ಮನುಷ್ಯ ವಾಸಿಸುತ್ತಿದ್ದ ಗುಹೆಗಳಿರುವ ಸ್ಥಳಗಳಲ್ಲಿ ಇಂದು ಗಗನಚುಂಬಿ ಕಟ್ಟಡಗಳಿವೆ, ಕುದುರೆಲಾಯಗಳು ಕಾರುಗಳನ್ನಿಡುವ ಗ್ಯಾರೇಜ್‍ಗಳಾಗಿವೆ, ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ, ಆಶ್ರಮಗಳು ಸಂಶೋಧನಾ ಕೇಂದ್ರಗಳಾಗಿವೆ. ಇದು ಮನುಷ್ಯನ ಬದುಕಿನ ಸಫಲತೆ. ಹಿಂದೆ ಇದ್ದು ಹಳಸಿಹೋದ, ಕೊಳೆತುಹೋದವುಗಳನ್ನೆಲ್ಲ ತೆಗೆದುಹಾಕಿ, ತೊಳೆದು, ಶುದ್ಧಗೊಳಿಸಿ ಮತ್ತೆ ಹೊಸದೆನ್ನಿಸುವಂತೆ ಮಾಡುವುದೆ ಮನುಷ್ಯನ ಜನ್ಮ ಸಾಫಲ್ಯತೆಯ ಕುರುಹು.

ಪ್ರತಿಕ್ರಿಯಿಸಿ (+)