ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಧರ್ಮ ನಿರ್ಣಯ

Last Updated 8 ಮೇ 2022, 18:36 IST
ಅಕ್ಷರ ಗಾತ್ರ

ಧರ್ಮ ನಿರ್ಣಯ ನಿನಗೆ ಜನ್ಮಜನ್ಮಾಂತರದ |
ಕರ್ಮಸಂದರ್ಭದಿಂದೊಗೆವುದದನರಿತು ||
ನಿರ್ಮಮದ ನಿರ್ಮಲೋತ್ಸಹದೆ ನೀನಾಚರಿಸೆ |
ಬ್ರಹ್ಮಸಾಮೀಪ್ಯವೆಲೊ – ಮಂಕುತಿಮ್ಮ || 622 ||

ಪದ-ಅರ್ಥ: ಕರ್ಮಸಂದರ್ಭದಿಂದೊಗೆವುದ
ನರಿತು=ಕರ್ಮ+ಸಂದರ್ಭದಿಂದ+ಒಗೆವುದು
=ಬರುವುದು+ಅದನು+ಅರಿತು, ನಿರ್ಮ
ಮದ=ಮೋಹರಹಿತವಾದ, ನಿರ್ಮಲೋತ್ಸಹದೆ=
ನಿರ್ಮಲ+ಉತ್ಸಹದೆ(ಉತ್ಸಾಹದಿಂದ), ನೀನಾಚರಿಸೆ=ನೀನು+ಆಚರಿಸೆ.

ವಾಚ್ಯಾರ್ಥ: ನಿನಗೆ ಜನ್ಮಜನ್ಮಾಂತರದ ಕರ್ಮ ಮತ್ತು ಸಂಬಂಧಗಳಿಂದ ಧರ್ಮನಿರ್ಣಯ ದೊರೆಯುತ್ತದೆ. ಅದನ್ನು ನೀನು ಅರಿತು, ಮೋಹರಹಿತವಾದ ಆದರೆ ನಿರ್ಮಲವಾದ ಉತ್ಸಾಹದಿಂದ ಕರ್ಮಮಾಡಿದರೆ ಬ್ರಹ್ಮ ಸಾಮಿಪ್ಯ ದೊರೆಯತ್ತದೆ.

ವಿವರಣೆ: ‘ಧರ್ಮ’, ‘ಧಾರ್ಮಿಕ’ ಪದಗಳು ಸ್ವಯಂವೇದ್ಯವೆನ್ನಿಸಿದರೂ, ಖಚಿತವಾಗಿ ಅವುಗಳ ಅರ್ಥವನ್ನು ಹೀಗೆಯೇ ಎಂದು ನಿರೂಪಿಸುವುದು ಕಷ್ಟ. ಯಾಕೆಂದರೆ ಅವು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಅರ್ಥಗಳನ್ನೇ ಕೊಡಬಹುದು. ಧರ್ಮ ಎಂದರೆ ಒಳ್ಳೆಯ ನಡವಳಿಕೆ. ಅದು ಆತ್ಮದ ಮೊಗ್ಗಿನ ಅರಳುವಿಕೆ. ಯಾವ ನಡವಳಿಕೆಯಿಂದ ಸಮಾಜಕ್ಕೂ, ನಮಗೂ ಒಳ್ಳೆಯದಾಗುತ್ತದೋ, ಅದು ಧರ್ಮ ಎಂಬ ಸರಳ ವ್ಯಾಖ್ಯೆಯನ್ನು ಇಟ್ಟುಕೊಂಡರೆ, ಪ್ರತಿಯೊಬ್ಬರಿಗೂ ಅವರದೇ ಆದ ಧರ್ಮವಿದೆ. ಸೈನಿಕರಿಗೆ ಸೈನ್ಯದ ಧರ್ಮ, ರಾಜಕಾರಣಿಗೆ ರಾಜಧರ್ಮ, ಸಾಹಿತಿಗಳಿಗೆ ಸಾಹಿತ್ಯಧರ್ಮ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಧರ್ಮ ಹೀಗೆ ಎಲ್ಲ ವ್ಯಕ್ತಿಗಳಿಗೆ ವಿಶೇಷ ವೃತ್ತಿಧರ್ಮಗಳಿವೆ.

ಒಂದೊಂದು ಜೀವನದ ಸ್ವಭಾವರಚನೆಯೂ, ಸಂದರ್ಭ ಸನ್ನಿವೇಶವೂ ಒಂದೊಂದು ರೀತಿಯದ್ದಾಗಿರುತ್ತದೆ. ಆದ್ದರಿಂದ ಧರ್ಮನಿರ್ಣಯ ಮಾಡುವುದೂ ಬೇರೆ ಬೇರೆಯಾಗಿ. ಅವರವರ ಧರ್ಮ, ಕರ್ಮ ಏನು ಎನ್ನುವುದನ್ನು ಅವರವರೇ ಕಂಡುಕೊಳ್ಳಬೇಕು. ಉದಾಹರಣೆಗೆ ಧರ್ಮಪ್ರಸಕ್ತವಾದ ಯುದ್ಧದಲ್ಲಿ ನಿಂತು ಹೋರಾಡುವುದು ಕ್ಷತ್ರಿಯ ಧರ್ಮ. ಆದ್ದರಿಂದ ಅದು ಅರ್ಜುನನಿಗೆ ಕರ್ತವ್ಯವಾಯಿತು, ವೇದವ್ಯಾಸರಿಗಲ್ಲ. ಯುದ್ಧ ಮಾಡಬೇಕಾದ ಅರ್ಜುನ ಯುದ್ಧದಿಂದ ವಿಮುಖನಾಗಲು ಹೊರಟಾಗ, ಅವನನ್ನು ಕೃಷ್ಣ ಎಚ್ಚರಿಸಬೇಕಾಯಿತು. ದ್ರೋಣಾಚಾರ್ಯರು ಬ್ರಾಹ್ಮಣರು, ಗುರುಗಳು. ಅವರು ಘನಘೋರ ಯುದ್ಧ ಮಾಡಬೇಕಿರಲಿಲ್ಲ. ಆದರೂ ಮಾಡಿದರು. ಅದಕ್ಕೇ ಅವರ ತಂದೆ ಭಾರದ್ವಾಜರು ಉಳಿದ ಮಹರ್ಷಿಗಳ ಜೊತೆಗೆ ಬಂದು, ಧರ್ಮವಲ್ಲದ ಯುದ್ಧವನ್ನು ಮಾಡತಕ್ಕದ್ದಲ್ಲ ಎಂದು ತಿಳಿಸಿ ಹೋದರು. ಪಂಚಪತಿ ಸ್ವೀಕಾರ ದ್ರೌಪದಿಗೆ ಕರ್ತವ್ಯವಾಯಿತು, ಉಳಿದ ಸ್ತ್ರೀಯರಿಗಲ್ಲ. ಭರತನಿಗೆ ಯುದ್ಧ ಮಾರ್ಗವಾದರೆ ಬಾಹುಬಲಿಗೆ ತ್ಯಾಗ ಮಾರ್ಗವಾಯಿತು.

ಧರ್ಮನಿರ್ಣಯವೆನ್ನುವುದು ಜನ್ಮ ಜನ್ಮಾಂತರ ಗಳಿಂದ ಬಂದ ಕರ್ಮದ ವಾಸನೆಗಳು ಮತ್ತು ಸಂದರ್ಭದ ಮೇಲೆ ತೀರ್ಮಾನವಾಗುತ್ತದೆ ಎಂಬುದನ್ನು ನಾವು ಅರಿಯಬೇಕು. ಹಾಗಾದರೆ ನಮ್ಮ ಜವಾಬ್ದಾರಿ ಏನೂ ಇಲ್ಲವೆ? ಇದೆ. ನಿರ್ಮಲವಾದ ಉತ್ಸಾಹದಿಂದ, ನಮಗೆ, ನಮ್ಮ ಯೋಗ್ಯತೆಗೆ ತಕ್ಕಂತೆ ಕರ್ಮಕ್ಕೆ ಸರಿಯಾಗುವಂತೆ ದೊರೆತ ಕಾರ್ಯವನ್ನು ಬಿಡದೆ ಮಾಡುವುದು. ಇದಕ್ಕೆ ಇನ್ನೊಂದು ಷರತ್ತಿದೆ. ಅದೆಂದರೆ ಮಾಡುವ ಕಾರ್ಯದಲ್ಲಿ ಮಮಕಾರವಿರಬಾರದು. ಇದು ನನ್ನದು, ನನಗಾಗಿ ಎಂದು ಮಾಡಿದ ಕೆಲಸ ಸ್ವಾರ್ಥವಾಗುತ್ತದೆ. ಹೀಗೆ ನಿರ್ಮಮತೆಯಿಂದ, ನಿರ್ಮಲ ಉತ್ಸಾಹದಿಂದ ಮಾಡಿದ ಕಾರ್ಯವೇ ನಮ್ಮ ಬ್ರಹ್ಮದ ಸಮೀಪಕ್ಕೆ ಕರೆದೊಯ್ಯುತ್ತದೆ.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT