ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳ್ಮೆ ಇಲ್ಲದ ತೀರ್ಮಾನ

Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಹಿಂದೆ ಕೋಸಂಬಿ ನಗರವನ್ನು ಕೊಸಂಬಿಕನೆಂಬ ರಾಜ ಆಳುತ್ತಿದ್ದ. ನಗರದಲ್ಲಿ ಆಗ ಇಬ್ಬರು ಬ್ರಾಹ್ಮಣರಿದ್ದರು. ಇಬ್ಬರೂ ಪರಮ ಸ್ನೇಹಿತರು ಮತ್ತು ಅತ್ಯಂತ ಶ್ರೀಮಂತರು. ಇಬ್ಬರೂ ತುಂಬ ಜ್ಞಾನಿಗಳಾದ್ದರಿಂದ ಕಾಮ ಭೋಗದ ಗೃಹಸ್ಥ ಜೀವನವನ್ನು ಬಿಟ್ಟು ತಮ್ಮ ಧನವನ್ನೆಲ್ಲ ದಾನ ಮಾಡಿ ಹಿಮಾಲಯಕ್ಕೆ ಹೋಗಿ ನೆಲೆಸಿದರು. ಅಲ್ಲಿ ಒಬ್ಬನ ಹೆಸರು ದೀಪಾಯನ ಹಾಗೂ ಮತ್ತೊಬ್ಬ ಮಾಂಡವ್ಯ. ಒಂದು ಪುಟ್ಟ ಆಶ್ರಮವನ್ನು ಕಟ್ಟಿಕೊಂಡು ಧ್ಯಾನದಲ್ಲಿ ಐವತ್ತು ವರ್ಷಗಳನ್ನು ಕಳೆದರು.

ಒಂದು ಬಾರಿ ಪ್ರಪಂಚ ಸುತ್ತಬೇಕೆಂದುಕೊಂಡು ತಿರುಗಾಡುತ್ತ ಕಾಶಿಪಟ್ಟಣಕ್ಕೆ ಬಂದರು. ನಗರದಲ್ಲಿ ಸುತ್ತಾಡುವಾಗ ತಕ್ಕಶಿಲೆಯ ಗುರುಕುಲದಲ್ಲಿ ತಮ್ಮೊಂದಿಗೆ ಓದಿದಂಥ ಗೃಹಸ್ಥನೊಬ್ಬನ ಭೆಟ್ಟಿಯಾಯಿತು. ಆತ ತುಂಬ ಪ್ರೀತಿಯಿಂದ ಅವರನ್ನು ತನ್ನ ಮನೆಗೆ ಕರೆದೊಯ್ದು ಆದರಿಸಿದ. ಅವರಿಗಾಗಿ ಒಂದು ಪರ್ಣಕುಟಿಯನ್ನು ಕಟ್ಟಿಸಿ ಅವರೊಂದಿಗೆ ಧರ್ಮಚಿಂತನೆ ಮಾಡುತ್ತ ಸಂತೋಷಪಟ್ಟ. ಮೂರು-ನಾಲ್ಕು ವರ್ಷ ದೀಪಾಯನ ಹಾಗೂ ಮಾಂಡವ್ಯರು ಅಲ್ಲಿಯೇ ಇದ್ದರು. ಒಂದೊಂದು ಬಾರಿ ಇಬ್ಬರೂ ನಗರದ ಹೊರಗಿನ ಸ್ಮಶಾನಕ್ಕೆ ಹೋಗಿ ಎರಡು, ಮೂರು ದಿನ ಅಲ್ಲಿಯೇ ಧ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಒಂದು ದಿನ ದೀಪಾಯನ ಸ್ಮಶಾನದಿಂದ ಬಂದು ಗೆಳೆಯನ ಮನೆಯಲ್ಲಿದ್ದ. ಆದರೆ ಮಾಂಡವ್ಯ ಮಾತ್ರ ಸ್ಮಶಾನದಲ್ಲೇ ಒಂದು ಮುರುಕು ಮನೆಯಲ್ಲಿ ಉಳಿದ. ಅಂದು ರಾತ್ರಿ ಕೆಲವು ಕಳ್ಳರು ಭಾರೀ ಶ್ರೀಮಂತನ ಮನೆಗೆ ಕನ್ನ ಹಾಕಿ ಐಶ್ವರ್ಯವನ್ನು ಕದ್ದುಕೊಂಡು ಹೋಗುವಾಗ ರಾಜನ ಸೈನಿಕರು ಅವರನ್ನು ಬೆನ್ನತ್ತಿದರು. ಆಗ ಕಳ್ಳರು ಸ್ಮಶಾನಕ್ಕೆ ನುಗ್ಗಿ ಅಲ್ಲಿದ್ದ ಮುರುಕು ಮನೆಯಲ್ಲಿ ತಾವು ತಂದ ವಸ್ತುಗಳನ್ನೆಲ್ಲ ಬಿಸಾಕಿ ಓಡಿ ಹೋದರು. ಅಲ್ಲಿಗೆ ಬಂದ ಸೈನಿಕರು ಧ್ಯಾನದಲ್ಲಿ ಕುಳಿತಿದ್ದ ಮಾಂಡವ್ಯನನ್ನೇ ಕಳ್ಳ ಎಂದು ಭಾವಿಸಿ ಎಳೆದುಕೊಂಡು ರಾಜನ ಕಡೆಗೆ ಕರೆದೊಯ್ದರು. ಈತನೇ ಕಳ್ಳ, ಸಾಧುವಿನಂತೆ ನಟಿಸುತ್ತಿದ್ದಾನೆ ಎಂದು ದೂರಿದರು. ರಾಜನಿಗೆ ಕೋಪ ನೆತ್ತಿಗೇರಿತು. ಮೊದಲೇ ಕಳ್ಳ ಮತ್ತೆ ಸಾಧುವಿನಂತೆ ವೇಷ ಹಾಕುತ್ತಾನೆ, ಇಂಥವನಿಗೆ ಮರಣದಂಡನೆ ಶಿಕ್ಷೆಯೇ ಸರಿ ಎಂದು ತೀರ್ಮಾನಿಸಿ ನಾಳೆ ಬೆಳಿಗ್ಗೆ ಇವನನ್ನು ಶೂಲಕ್ಕೆ ಏರಿಸಿ ಬಿಡಿ ಎಂದು ಆಜ್ಞೆ ಮಾಡಿದ.

ಸೈನಿಕರು ಅವನನ್ನು ಬೇವಿನ ಮರದ ಶೂಲಕ್ಕೇರಿಸಿದರು, ಆದರೆ ಶೂಲ ಅವನ ಕತ್ತಿಗೆ ಚುಚ್ಚಿಕೊಳ್ಳಲಿಲ್ಲ. ನಂತರ ಮಾವಿನ ಮರಕ್ಕೆ ಹಾಕಿದರೂ ಕಚ್ಚಿಕೊಳ್ಳಲಿಲ್ಲ. ಯಾವ ಮರವೂ ಅವನ ಕುತ್ತಿಗೆಯನ್ನು ಇರಿಯಲೇ ಇಲ್ಲ. ಅವರ ಚಿಂತೆಯನ್ನು ಕಂಡು ಮಾಂಡವ್ಯನೇ ಹೇಳಿದ, ‘ನನ್ನನ್ನು ಯಾವ ಮರವೂ ಕೊಲ್ಲಲಾರದು. ಯಾಕೆಂದರೆ ಎಲ್ಲವೂ ನನ್ನ ಪ್ರೀತಿಯಲ್ಲೇ ಇದ್ದವುಗಳು, ನನಗೆ ಹಿಂಸೆ ಮಾಡಲಾರವು. ಆದರೆ ಬಾಲ್ಯದಲ್ಲಿ ನಾನೊಮ್ಮೆ ಅರಳಿ ಮರದ ಕಡ್ಡಿಯಿಂದ ಇರುವೆಯೊಂದನ್ನು ಕೊಂದೆ. ಆದ್ದರಿಂದ ಅರಳಿಮರದ ಶೂಲಕ್ಕೆ ನನ್ನನ್ನು ಏರಿಸಿ. ಸೈನಿಕರಿಗೆ ಆಶ್ಚರ್ಯ! ತನ್ನನ್ನು ಕೊಲ್ಲುವ ವಿಧಾನವನ್ನು ಹೇಳಿ ಕೊಡುವವನು ಕಳ್ಳನಾಗಿರಲಾರ ಎಂದುಕೊಂಡು ಶೂಲಕ್ಕೆ ಹಾಕುವುದನ್ನು ನಿಧಾನ ಮಾಡಿದರು. ಆಗ ದೀಪಾಯನ ರಾಜನ ಬಳಿಗೆ ಹೋಗಿ, ‘ಆ ಸನ್ಯಾಸಿ ನಿಜವಾಗಿಯೂ ತಪ್ಪು ಮಾಡಿದ್ದಾನೆ ಎಂಬುದನ್ನು ಪರೀಕ್ಷಿಸಿ ಶಿಕ್ಷೆ ಕೊಟ್ಟರಾ?’ ಎಂದು ಕೇಳಿದ.

ರಾಜ, ‘ಇಲ್ಲ, ಪರೀಕ್ಷೆ ಮಾಡಿಲ್ಲ’ ಎಂದ. ದೀಪಾಯನ ರಾಜನನ್ನು ದುರುಗುಟ್ಟಿ ನೋಡುತ್ತ, ‘ಪರೀಕ್ಷೆ ಮಾಡದೆ ಶಿಕ್ಷೆ ನೀಡುವವನು ರಾಜನಾಗಲು ಅರ್ಹನಲ್ಲ. ಅವನ ಸಿಂಹಾಸನ ಬರಿದಾಗುತ್ತದೆ’ ಎಂದು ಹೇಳುವ ಹೊತ್ತಿಗೆ ಅವನ ಒಬ್ಬನೇ ಮಗ ಹಾವು ಕಚ್ಚಿ ಸತ್ತ ಎಂಬ ಸುದ್ದಿ ಬರುತ್ತದೆ. ರಾಜ, ಮಾಂಡವ್ಯನ ಕಾಲು ಹಿಡಿದು ಕ್ಷಮೆ ಕೇಳಿದಾಗ, ಆತ ತನ್ನನ್ನು ಶೂಲಕ್ಕೆ ಏರಿಸಲು ತಂದ ಅರಳಿಮರದ ಕಡ್ಡಿಯನ್ನು ರಾಜಕುಮಾರನ ಮೈಮೇಲೆ ಆಡಿಸಿದಾಗ ಆತ ಬದುಕಿ, ಎದ್ದು ಕುಳಿತ.

ದೀಪಾಯನ ಹೇಳಿದ, ‘ಅಧಿಕಾರದಲ್ಲಿ ಕುಳಿತುಕೊಳ್ಳುವುದು ಸುಲಭ. ಆದರೆ ಪ್ರತಿಯೊಂದನ್ನೂ ಪರೀಕ್ಷಿಸಿ, ಯಾರಿಗೂ ಅನ್ಯಾಯವಾಗದಂತೆ ತೀರ್ಮಾನ ನೀಡುವುದು ಅವಶ್ಯ. ಹಾಗಾಗದಿದ್ದರೆ ಬಹುದೊಡ್ಡ ಶಾಪ ತಟ್ಟುತ್ತದೆ, ಅಧಿಕಾರವೇ ವಿನಾಶಕ್ಕೆ ದಾರಿಯಾಗುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT