ಬುಧವಾರ, ಮೇ 18, 2022
23 °C

ಬೆರಗಿನ ಬೆಳಕು: ಪ್ರತ್ಯೇಕತೆಯಿಂದ ಹಾನಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ |
ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ - ||
ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ ? |
ಬತ್ತುವುದು ನಿನ್ನಾತ್ಮ– ಮಂಕುತಿಮ್ಮ

⇒|| 619 ||

ಪದ-ಅರ್ಥ: ಸಂಪದವನತ್ಯಾಶೆಯಿಂದರಸಿ= ಸಂಪದವನು+ಅತ್ಯಾಶೆಯಿಂದ+ಅರಸಿ, ಜಗವನೊತ್ತಟ್ಟಿಗಡುವೆನೆನೆ= ಜಗವನು+ಒತ್ತಟ್ಟಿಗೆ+ಇಡುವೆನು+ಎನೆ, ನಷ್ಟವಾರಿಗೊ= ನಷ್ಟವು+ಯಾರಿಗೊ, ಬತ್ತುವುದು= ಒಣಗಿಹೋಗುವುದು.

ವಾಚ್ಯಾರ್ಥ: ಎಲ್ಲವೂ ಪ್ರತ್ಯೇಕವಾಗಿ ಇರಬೇಕು ತನಗೆ, ಎಂದು ಅತಿ ಆಸೆಯಿಂದ ಸುಖ, ಸಂಪದಗಳನ್ನು ಹುಡುಕಾಡುತ್ತ, ಉಳಿದ ಜಗತ್ತನ್ನೆಲ್ಲ ಬದಿಗಿಟ್ಟುಬಿಡುವೆನು ಎಂದರೆ ನಷ್ಟ ಯಾರಿಗೆ? ಅದರಿಂದ ಬತ್ತುವುದು ನಿನ್ನ ಆತ್ಮ.

ವಿವರಣೆ: ನಾನು ಈ ತಿಂಗಳಿನ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯನ್ನು ಓದುತ್ತಿದ್ದೆ. ಅದರಲ್ಲಿ ‘How wealth reduces compassion’ ಎನ್ನುವ ಲೇಖನ ನನ್ನ ಮನಸ್ಸನ್ನು ಸೆಳೆಯಿತು.

ಬರ್ಕಲಿಯ ಮನಃಶಾಸ್ತ್ರಜ್ಞರಾದ ಪೌಲ್ ಪಿಫ್ ಮತ್ತು ಕೆಲ್ಟನ್ ಅವರು ಸಾಕಷ್ಟು ಸಂಶೋಧನೆ ಮಾಡಿ ಒಂದು ವಿಷಯವನ್ನು ಪ್ರಕಟಿಸಿದ್ದಾರೆ. ಅದರಂತೆ ಶ್ರೀಮಂತಿಕೆ ಹೆಚ್ಚಾದಂತೆ ಮತ್ತೊಬ್ಬರ ಬಗೆಗಿನ ಕರುಣೆ, ಅನುಕಂಪ ಕಡಿಮೆಯಾಗುತ್ತದಂತೆ. ಅದಕ್ಕೆ ಕಾರಣ ಅದ್ಭುತವಾಗಿದೆ. ಹಣ, ಅಧಿಕಾರ ಹೆಚ್ಚಾದಂತೆ ಇನ್ನಷ್ಟು ಪಡೆಯಬೇಕೆಂಬ ಆಸೆ ಬಲವತ್ತರವಾಗುತ್ತದೆ. ಅವರೊಂದು ಪುಟ್ಟ ಪ್ರಯೋಗ ಮಾಡುತ್ತಾರೆ.

ಒಂದು ಕೋಣೆಯಲ್ಲಿ ಕೆಲವು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಅವರಲ್ಲಿ ಕೆಲವು ಮಕ್ಕಳು ತುಂಬಾ ಶ್ರೀಮಂತ ಮನೆತನದವರು ಮತ್ತು ಕೆಲವರು ತುಂಬಾ ಬಡತನದಲ್ಲಿದ್ದವರು. ಎಲ್ಲರಿಗೂ ಒಂದೇ ತರಹದ ಯೂನಿಫಾರ್ಮ ಹಾಕಿದ್ದರಿಂದ ಅವರಿಗೆ ಆ ಅಂತರ ತಿಳಿಯುತ್ತಿದ್ದಿಲ್ಲ. ಮೇಜಿನ ಮೇಲೆ ಒಂದು ದೊಡ್ಡ ಗಾಜಿನ ಪಾತ್ರೆಯಲ್ಲಿ ಚಾಕೊಲೇಟ್‍ಗಳ ರಾಶಿ ಹಾಕಿ ಹೇಳಿದರಂತೆ, ‘ನಿಮಗೆ ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಿ. ಉಳಿದ ಚಾಕೊಲೇಟ್‍ಗಳನ್ನು ಹತ್ತಿರದ ಅನಾಥಾಶ್ರಮಕ್ಕೆ ಕೊಡುತ್ತೇವೆ’. ಎಲ್ಲರೂ ಹೊರಗೆ ಹೋಗಿ ಒಳಗೆ ನಡೆಯುತ್ತಿದ್ದುದನ್ನು ವಿಡಿಯೊ ಮೂಲಕ ಗಮನಿಸುತ್ತಿದ್ದರು. ಶ್ರೀಮಂತ ಮಕ್ಕಳು ಯಾರನ್ನೂ ಮಾತನಾಡಿಸದೆ, ತಮಗಿರುವ ಎಲ್ಲಾ ಜೇಬುಗಳಲ್ಲಿ ಚಾಕೊಲೇಟ್‌ಗಳನ್ನು ತುಂಬಿಕೊಂಡು ಹೊರಟರು. ಬಡಮಕ್ಕಳು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದವು. ಹೊರಡುವಾಗ ಈ ಹುಡುಗರು ಒಂದೋ ಎರಡೋ ಚಾಕೊಲೇಟ್ ತೆಗೆದುಕೊಂಡು ಸಂತೋಷದಿಂದ ಹೋದರಂತೆ. ಮನೋವಿಜ್ಞಾನಿಗಳು ಹೇಳುತ್ತಾರೆ, ಗಳಿಕೆಯ ಆಸೆ ಎನ್ನುವುದು ಒಂದು ರೋಗ, ಗಳಿಸಿದಷ್ಟೂ ಅದು ಉಲ್ಬಣವಾಗುತ್ತ ಹೋಗುವುದಲ್ಲದೆ, ಪರರ ಬಗ್ಗೆ ಚಿಂತೆ, ಕಾಳಜಿ ಕಡಿಮೆಯಾಗುತ್ತದೆ’. ಅಂದರೆ ಆ ತರಹದ ಜನ ತುಂಬಾ ಸ್ವಾರ್ಥಿಯಾಗುತ್ತಾರೆ.

ಕಗ್ಗ ಹೇಳುತ್ತದೆ, ನನಗೆ ಎಲ್ಲವೂ ವಿಶೇಷವಾಗಬೇಕು, ನಾನು ಎಲ್ಲರಿಗಿಂತ ಭಿನ್ನವಾಗಿರ ಬೇಕು ಎಂದು ಅತಿ ಆಸೆಯಿಂದ ಎಲ್ಲವನ್ನೂ ಬಾಚಿ ಕೊಳ್ಳುತ್ತ ಹೊರಟಾಗ, ಯಾರೂ ಆ ವ್ಯಕ್ತಿಯ ಹತ್ತಿರ ಸುಳಿಯಲಾರರು. ಅವನಿಗೆ ಗೊತ್ತಾಗದಂತೆ ಅವನೇ ಏಕಾಂಗಿಯಾಗಿ ಬಿಡುತ್ತಾನೆ. ಜಗತ್ತಿನಲ್ಲಿ ಎಲ್ಲವೂ ಇದೆ, ಹಂಚಿ ತಿಂದರೆ. ಎಲ್ಲವೂ ನನಗೇ ಇರಬೇಕು ಎಂದರೆ, ಉಳಿದವರು ಯಾರೂ ಬೇಡ ಎಂದಂತಾಯಿತಲ್ಲ. ಸ್ನೇಹದಿಂದ, ಸಹಬಾಳ್ವೆಯಿಂದ, ಸ್ವಾರ್ಥ ನಾಶ ವಾಗುತ್ತದೆ. ಲೋಕಸ್ನೇಹದಿಂದ ಆತ್ಮವಿಸ್ತರಣ. ಪ್ರತ್ಯೇಕತೆ ಲೋಕಜೀವನದ ಸೊಗಸನ್ನು ಕಳೆದು, ಆತ್ಮ ಸಂದರ್ಶನದ ಮೂಲ ಸ್ತ್ರೋತವನ್ನೇ ಒಣಗಿಸಿಬಿಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.