ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆನಂದದ ನೆಲೆಗಳು

Last Updated 13 ಜುಲೈ 2021, 19:30 IST
ಅಕ್ಷರ ಗಾತ್ರ

ತಳಿರನಸುಕೆಂಪು, ಬಳುಕೆಲೆಯ ಹಸುರಿನ ಸೊಂಪು |
ತಿಳಿಮನದ ಯುವಜನದ ನಗುಗಣ್ಣ ಹೊಳಪು ||
ಬೆಳೆವರಿವು ಮಗುದುಟಿಯಿನ್ನುಣ್ಣಿಸುವ
ನುಡಿಚಿಗುರು |
ಇಳೆಯೊಳಿವನೊಲ್ಲರಾರ್ ? – ಮಂಕುತಿಮ್ಮ || 438 ||

ಪದ-ಅರ್ಥ: ತಳಿರ=ಚಿಗುರಿನ, ಬಳುಕೆಲೆಯ= ಬಳಕುವ ಎಲೆಯ, ಬೆಳವರಿವು= ಬೆಳೆವ+ ಅರಿವು, ಮಗುದುಟಿಯಿನುಣ್ಮಿಸುವ= ಮಗುದುಟಿಯಿನ್ (ಮಗುವಿನ ಎಳೆಯ ತುಟಿಗಳಿಂದ)+ ಉಣ್ಮಿಸುವ (ಉಕ್ಕಿಸುವ), ಇಳೆಯೊಳಿವನೊಲ್ಲರಾರ್= ಇಳೆಯೊಳು+ ಇವನ್ನು+ ಒಲ್ಲರಾರ್‌

ವಾಚ್ಯಾರ್ಥ: ಚಿಗುರಿನ ನಸುಕೆಂಪು, ಬಳಕುವ ಎಲೆಯ ಹಸುರಿನ ಸೌಂದರ್ಯ, ನಿರ್ಮಲ ಮನಸ್ಸಿನ ಯುವಜನರ ನಗೆಗಣ್ಣಿನ ಕಾಂತಿ, ಬೆಳೆಯುತ್ತಿರುವ ತಿಳಿವು, ಮಗುವಿನ ಎಳೆತುಟಿಗಳಿಂದ ಉಕ್ಕುವ ತೊದಲು ಮಾತುಗಳು ಇವನ್ನೆಲ್ಲ ಬೇಡವೆನ್ನುವರಾರು ಪ್ರಪಂಚದಲ್ಲಿ?

ವಿವರಣೆ: ಬದುಕಿನಲ್ಲಿ ಆನಂದವೇ ಮುಖ್ಯ. ಬದುಕಿನ ಮೂಲ ಉದ್ದೇಶವೇ ಆನಂದದ, ಶಾಶ್ವತ ಸಂತೋಷದ ಹುಡುಕಾಟ. ಎಲ್ಲ ಕ್ಷೇತ್ರಗಳಲ್ಲಿ ಮನುಷ್ಯನ ಸಾಧನೆಯ ಕ್ರಿಯೆಗಳೆಲ್ಲ ಆನಂದದ ಅನ್ವೇಷಣೆಯೇ. ಪ್ರತಿಯೊಬ್ಬ ಮನುಷ್ಯನಿಗೂ ಆತನ ಆನಂದದ ನೆಲೆ ಬೇರೆಯೇ ಆಗಿರುತ್ತದೆ. ಕೆಲವರಿಗೆ ಆನಂದ ಭೋಗಗಳಲ್ಲಿ ದೊರೆತರೆ ಕೆಲವರಿಗೆ ಭೋಗತ್ಯಾಗದಲ್ಲೇ ಆನಂದ. ನಾಯಕರುಗಳಿಗೆ ತಮ್ಮ ಸುತ್ತ ಸಹಸ್ರಾರು ಹಿಂಬಾಲಕರ ಉನ್ಮತ್ತ ಧ್ವನಿಗಳನ್ನು ಕೇಳಿದಾಗ ಆನಂದವಾದರೆ ಆಧ್ಯಾತ್ಮ ಚಿಂತಕನಿಗೆ ಹಿಮಾಲಯದ ಶಾಂತವಾದ ಗುಹೆಗಳಲ್ಲಿ ಅದು ದೊರೆತೀತು. ಕವಿ ಸುಂದರವಾದ ಹೂವನ್ನು ಕಂಡು ಆನಂದದಿಂದ ಕವಿತೆಯನ್ನು ರಚಿಸಿದರೆ ಒಬ್ಬ ಸಸ್ಯಶಾಸ್ತ್ರಜ್ಞ, ಆ ಹೂವನ್ನು ಕತ್ತರಿಸಿ ಬೇರೆ ಬೇರೆ ಭಾಗಗಳನ್ನಾಗಿ ಮಾಡಿ ಸಂಶೋಧನೆಯಲ್ಲಿ ಸಂತೋಷವನ್ನು ಪಡೆಯುತ್ತಾನೆ. ಒಬ್ಬ ಉಗ್ರನಾದವನು ಜೀವಹಾನಿಯಲ್ಲಿ ತೃಪ್ತಿಯನ್ನು ಪಡೆದರೆ ಒಬ್ಬ ಸೈನಿಕ ಜೀವರಕ್ಷಣೆಯಲ್ಲಿ ಕೃತಕೃತ್ಯತೆಯನ್ನು ಪಡೆಯುತ್ತಾನೆ. ಆದರೆ ಬದುಕಿನಲ್ಲಿ ಕೆಲವು ಸೊಗಸಿನ ನೆಲೆಗಳಿವೆ. ಅವುಗಳನ್ನು ಯಾವ ಮನುಷ್ಯನೂ ಇಷ್ಟಪಡದೆ ಇರಲು ಸಾಧ್ಯವಿಲ್ಲ. ನಮ್ಮ ಹಿನ್ನಲೆ, ಓದು, ಸಂಸ್ಕಾರಗಳು ಏನೇ ಇದ್ದರೂ ಕೆಲವು ಸಂಗತಿಗಳು ಮುದ ನೀಡುತ್ತವೆ. ಈ ಕಗ್ಗ ಅಂಥ ಕೆಲವು ನೆಲೆಗಳನ್ನು ಗುರುತಿಸಿ ಹೇಳುತ್ತದೆ.

ವಸಂತ ಮಾಸ ಕಾಲಿಡುತ್ತಿದ್ದಂತೆ ಮರಗಿಡಗಳಲ್ಲಿ ಸಂತೋಷದ ಹೊನಲು ಉಕ್ಕುತ್ತದೆ, ಮುಗುಳೊಡೆಯುತ್ತದೆ. ಚಳಿಗಾಲದಲ್ಲಿ ಎಲೆಗಳನ್ನೆಲ್ಲ ಉದುರಿಸಿಕೊಂಡು ಬೋಳಾದ ಗಿಡಬಳ್ಳಿಗಳು ಚಿಗುರಿನಿಂದ ಕಂಗೊಳಿಸುತ್ತವೆ ಆ ನಸುಗೆಂಪು ಬಣ್ಣದ ಚಿಗುರುಗಳನ್ನು ನೋಡುವ, ಮೃದುವಾಗಿ ತಟ್ಟುವ ಸಂತೋಷ ಅದ್ಭುತ. ಅದೆಷ್ಟು ಕವಿಗಳಿಗೆ ಈ ಹೊಸಚಿಗುರು ಪ್ರೇರಣೆಯಾಗಿದೆಯೋ? ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಒಂದು ಕವನದಲ್ಲಿ ‘ನೀ ಬರುವ ದಾರಿಯಲಿ ಹಗಲು ತಂಪಾಗಿ, ಬೇಲಿಗಳ ಸಾಲಿನಲಿ ಹಸಿರು ಕೆಂಪಾಗಿ’ ಎನ್ನುತ್ತಾರೆ. ಹಸಿರು ಚಿಗುರು ಕೆಂಪಾಗಿರುವ ಬಗೆ ಮನವನ್ನು ತಟ್ಟುತ್ತದೆ. ಅಂತೆಯೇ ಗಾಳಿಗೆ ತೊನೆಯುವ ಹಸುರೆಲೆಗಳ ಸೌಂದರ್ಯ ಯಾರಿಗೆ ಸಂತೋಷ ನೀಡದು? ಯುವ ತರುಣ-ತರುಣಿಯರು ನಿಷ್ಕಲ್ಮಷ ಮನದಿಂದ ಮಾತನಾಡುತ್ತಿರುವಾಗ, ಹೃದಯ ತುಂಬಿ ನಗುವಾಗ, ಅವರ ಕಣ್ಣುಗಳಿಂದುಕ್ಕುವ ಹೊಳಪು ಎಷ್ಟು ಆಕರ್ಷಕ! ಮನುಷ್ಯ ಬೆಳೆಯುವಾಗ ವಿವಿಧ ಹಂತಗಳಲ್ಲಿ ಹೊಳೆದ ಅರಿವು, ತಿಳುವಳಿಕೆ, ಆನಂದವನ್ನು ನೀಡುತ್ತದೆ. ಮುಗ್ಧ ಮಗುವಿನ ತುಟಿಗಳಿಂದ ಒಸರುವ ತೊದಲು ನುಡಿ ಅದೆಷ್ಟು ಹೃದಯಕ್ಕೆ ತಂಪು ನೀಡುತ್ತದೆ! ಭೂಮಿಯಲ್ಲಿರುವ ಯಾರಾದರೂ ಇಂಥ ಸುಲಭವಾಗಿ ಸಿಗುವ, ಅನಾಯಾಸವಾಗಿ ಸುಳಿಯುವ ಅವಕಾಶಗಳನ್ನು ತಪ್ಪಿಸಿಕೊಂಡಾರೆಯೇ? ಇಷ್ಟಪಡದಿರುವುದು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT