ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೇಹ-ಆತ್ಮಗಳ ಸಮತೋಲನ

Last Updated 21 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ - |
ವಾಯೆರಡುವೊಂದಾಗಲದು ಜೀವಲೀಲೆ ||
ತಾಯಿವೊಲು ನಿನಗಾತ್ಮ, ಮಡದಿಯೊಲು ಕಾಯವವ - |
ರಾಯವನು ಸರಿನೋಡು – ಮಂಕುತಿಮ್ಮ || 399 ||

ಪದ-ಅರ್ಥ: ಕಾಯಮಾತ್ರದುದಲ್ಲ = ಕಾಲ+
ಮಾತ್ರದದು+ಅಲ್ಲ, ಆತ್ಮಮಾತ್ರದುದಲ್ಲ=ಆತ್ಮ+ಮಾತ್ರದದು+ಅಲ್ಲ, ತಾಯಿವೊಲು=ತಾಯಿಯ ಹಾಗೆ, ನಿನಗಾತ್ಮ=ನಿನಗೆ+ಆತ್ಮ,
ಕಾಯವವರಾಯವನು=ಕಾಯ+
ಅವರ+ಆಯವನು(ವಿಸ್ತಾರವನ್ನು)

ವಾಚ್ಯಾರ್ಥ: ಬದುಕಿನ ಸಾಧನೆ ಕೇವಲ ದೇಹದಿಂದಾಗಲಿ, ಕೇವಲ ಆತ್ಮದಿಂದಾಗಲಿ ಸಾಧ್ಯವಿಲ್ಲ. ಅವೆರಡು ಒಂದಾದಾಗ ಜೀವಲೀಲೆ ಸಾಧ್ಯ. ಆತ್ಮ ನಿನಗೆ ತಾಯಿ ಇದ್ದಂತೆ, ದೇಹ ಮಡದಿ ಇದ್ದಂತೆ. ಅವರ ಪ್ರೀತಿ, ವಾತ್ಸಲ್ಯಗಳ ವಿಸ್ತಾರವನ್ನು ಕಂಡು ಬದುಕು.

ವಿವರಣೆ: ಈಗಾಗಲೇ ಅನೇಕ ಕಗ್ಗದ ಚೌಪದಿಗಳಲ್ಲಿ ಬಂದಂತೆ, ಇದರಲ್ಲೂ ಆತ್ಮ ಮತ್ತು ದೇಹಗಳ ಸಹಭಾಗಿತ್ವದ ಚಿಂತನೆ ಇದೆ. ದೇಹವಿಲ್ಲದೆ ಆತ್ಮಕ್ಕೆ ಸ್ಥಳವಿಲ್ಲ. ಆತ್ಮವಿಲ್ಲದ ದೇಹ ನಿರ್ಜೀವ. ಅವರೆಡರ ಹೊಂದಾಣಿಕೆಯೆ ಜೀವಲೀಲೆ.

ಆದಿಕಾಲದ ಮನುಷ್ಯ ಮನಸ್ಸನ್ನೇ ಆತ್ಮವೆಂದು ಭಾವಿಸುತ್ತಿದ್ದ. ಆತ್ಮದೇಹದೊಳಗಿರುತ್ತದೆಂದೂ, ಅದರಿಂದ ದೇಹಕ್ಕೆ ಯಾವ ಪ್ರಯೋಜನವಾಗಲೀ, ಅಪಕಾರವಾಗಲೀ ಇರುವುದಿಲ್ಲವೆಂದು ತಿಳಿದಿದ್ದ. ಆತ್ಮವೊಂದು ಪಂಜರದ ಗಿಳಿಯಂತೆ, ಪಂಜರದ ಬಾಗಿಲನ್ನು ತೆರೆದರೆ ಹಾರಿಹೋಗುವಂತೆ, ಸಾಯುವಾಗ ಅದು ದೇಹವನ್ನು ಬಿಟ್ಟು ಹೋಗುತ್ತದೆ ಎಂಬುದು ಕಲ್ಪನೆಯಾಗಿತ್ತು. ಗ್ರೀಕ್ ದಾರ್ಶನಿಕರು ಪ್ರಾಣ, ಪ್ರಜ್ಞೆ ಮತ್ತು ಆತ್ಮವನ್ನು ಸೈಕೀ ಎಂಬ ಪದದಿಂದ ಗುರುತಿಸುತ್ತಿದ್ದರು. ಅರಿಸ್ಟಾಟಲ್ ಆತ್ಮವೆಂಬುದು ಸಂತತ ಕಾರ್ಯಪ್ರವೃತ್ತವೂ, ಸೃಷ್ಟಿಶೀಲವೂ ಆದ ವಿವೇಕ ಮತ್ತು ಅದು ಸಾವಿಲ್ಲದ ದೈವೀ ಪ್ರಕೃತಿ ಎಂದು ಸಾಧಿಸಿದ್ದ. ಆಧುನಿಕ ಪಾಶ್ಚಾತ್ಯ ದರ್ಶನ ಪ್ರವರ್ತಕನಾದ ಡೇಕಾರ್ಟೆ ದೇಹ ಮತ್ತು ಆತ್ಮಗಳ ದ್ವೈತ ರೂಪವನ್ನು ಪ್ರತಿಪಾದಿಸಿದ.

ಭಗವದ್ಗೀತೆಯ ಎರಡನೆಯ ಅಧ್ಯಾಯದ ಮೂಲಚಿಂತನೆಯೇ ದೇಹ ಮತ್ತು ಆತ್ಮಗಳ ಗುಣಗಳದ್ದು. ಆತ್ಮ ಅವನಾಶಿಯಾದರೂ ಅದು ಕಾರ್ಯಪ್ರೇರಕವಾಗುವುದು ದೇಹದ ಮೂಲಕವೇ. ಆದ್ದರಿಂದ ಅದರ ಪೋಷಣೆ ಬಲು ಮುಖ್ಯ. ಬರೀ ದೇಹದಿಂದ ಏನೂ ಸಾಧ್ಯವಿಲ್ಲ. ಆತ್ಮಪ್ರಜ್ಞೆಯನ್ನು ಸದಾಕಾಲ ಜಾಗ್ರತವಾಗಿ ಇಟ್ಟುಕೊಳ್ಳುವುದೂ ಅಷ್ಟೇ ಮುಖ್ಯ.

ಅದಕ್ಕೇ ಈ ಕಗ್ಗ ಒಂದು ಸುಂದರವಾದ ಉಪಮೆಯನ್ನು ಕೊಡುತ್ತದೆ. ತಾಯಿ ಆತ್ಮವಿದ್ದಂತೆ ಮತ್ತು ದೇಹ ಹೆಂಡತಿಯಿದ್ದಂತೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಇವರಿಬ್ಬರ ಪಾತ್ರ ಬಹು ಮುಖ್ಯವಾದದ್ದು. ಅತ್ತೆ, ಸೊಸೆಯರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದಾಗ ಗಂಡನ ಪರಿಸ್ಥಿತಿಯ ಅರಿವು ನಮಗಿದೆ. ಆತ ತಾಯಿಯ ಮಾತು ಕೇಳಬೇಕೋ, ಹೆಂಡತಿಯ ಮಾತಿಗೆ ಒಪ್ಪಿಗೆ ಕೊಡಬೇಕೋ ತಿಳಿಯದೆ ಒದ್ದಾಡುತ್ತಾನೆ. ಅವನಿಗೆ ತಾಯಿಯ ವಾತ್ಸಲ್ಯ ಮತ್ತು ಹೆಂಡತಿಯ ಪ್ರೀತಿ ಎರಡೂ ಬೇಕು. ಎರಡನ್ನೂ ಸರಿಯಾಗಿ ತೂಗಿಸಿಕೊಂಡು ಹೋದಾಗ ಬದುಕು ಚೆಂದವಾಗುತ್ತದೆ. ಇವರಿಬ್ಬರಲ್ಲಿ ಯಾರೊಬ್ಬರ ಮೇಲೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರೆ, ಮನೆಯಲ್ಲಿ ಅಶಾಂತಿ ನೆಲೆಯಾಗುತ್ತದೆ. ಅವರಿಬ್ಬರಿಗೆ ಸಲ್ಲಬೇಕಾದ ಗೌರವ, ಪ್ರೀತಿಗಳನ್ನು ಸರಿಯಾಗಿ ನೀಡಬೇಕಾಗುತ್ತದೆ. ಅಂತೆಯೇ ದೇಹಕ್ಕೆ ಅತಿಯಾದ ಪ್ರಾಮುಖ್ಯತೆ ಕೊಟ್ಟರೆ ಜೀವನ ಭೋಗಮಯವಾಗುತ್ತದೆ, ದೇಹವನ್ನು ನಿರ್ಲಕ್ಷಿಸಿ, ಕೇವಲ ಆತ್ಮದ ಚಿಂತನೆ ಮಾಡಿದರೆ ಬದುಕು ರಸಹೀನವಾಗುತ್ತದೆ. ಅವುಗಳ ವಿಸ್ತಾರ, ವ್ಯಾಪ್ತಿಯನ್ನು ಸರಿಯಾಗಿ ತೂಗಿ ಬದುಕುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT