ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕೊನೆಯ ಪರೀಕ್ಷೆ

Last Updated 24 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಹೋಷಧಕುಮಾರ ಅಮರಾದೇವಿಯನ್ನು ಮನಸಾ ಒಪ್ಪಿಕೊಂಡ. ಆಕೆಯ ಮನೆಯಿಂದ ಹೊರಡುವ ಮೊದಲು ಒಂದು ವೀಳ್ಯೆದೆಲೆಯ ಚೀಲದಲ್ಲಿ ಸಾವಿರ ನಾಣ್ಯಗಳನ್ನು ಹಾಗೂ ಹೊಸಬಟ್ಟೆಗಳನ್ನು ಹಾಕಿ ಆಕೆಗೆ ಕೊಟ್ಟ. ‘ಭದ್ರೆ, ನೀನು ನನ್ನನ್ನು ಮದುವೆಯಾಗಲು ಇಷ್ಟಪಟ್ಟರೆ, ನನ್ನ ಜೊತೆ ಮಿಥೆಲೆಗೆ ಬಾ. ನಿನ್ನ ಗೆಳತಿಯರೊಡನೆ ಸ್ನಾನ ಮಾಡಿ, ಈ ಹೊಸಬಟ್ಟೆಗಳನ್ನುಟ್ಟುಕೊಂಡು
ಬಾ’ ಎಂದು ಹೇಳಿದ. ನಂತರ ಕುಮಾರ ಅಮರಾದೇವಿಯ ತಂದೆತಾಯಿಯರಿಗೆ ಸಾಕಷ್ಟು ಹಣವನ್ನು ಕೊಟ್ಟು ಅವರನ್ನು ಎಲ್ಲ ಋಣಗಳಿಂದ ನಿಶ್ಚಿಂತರನ್ನಾಗಿ ಮಾಡಿದ. ಆಕೆಯನ್ನು ಜೊತೆಯಲ್ಲಿ ಕರೆದುಕೊಂಡು ಮಿಥಿಲೆಗೆ ಬಂದ. ಅವಳನ್ನು ರಾಜಭವನಕ್ಕೆ ಕರೆದೊಯ್ಯದೆ ದ್ವಾರಪಾಲಕನ ಮನೆಯಲ್ಲಿ ಉಳಿಸಿದ. ದ್ವಾರಪಾಲಕನ ಹೆಂಡತಿಗೆ ಆಕೆಯನ್ನು ಗಮನಿಸಲು ಹೇಳಿ ತಾನು ಅರಮನೆಗೆ ಬಂದ. ಆಮೇಲೆ ತನ್ನ ಕೆಲವು ಸ್ನೇಹಿತರನ್ನು ಕರೆದು ಅವರಿಗೆ ಸಾವಿರ ಹೊನ್ನು ಕೊಟ್ಟು ದ್ವಾರಪಾಲಕನ ಮನೆಯಲ್ಲಿರುವ ಹುಡುಗಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದ. ಅವರು ಭರ್ಜರಿ ವೇಷಗಳನ್ನು ತೊಟ್ಟು ಶ್ರೀಮಂತರಂತೆ ದ್ವಾರಪಾಲಕನ ಮನೆಗೆ ಬಂದು ಆಕೆಗೆ ಹಣದಾಸೆ ತೋರಿಸಿ ಮದುವೆಯಾಗುವಂತೆ ಕೇಳಿದರು. ಆಕೆ ಅವರನ್ನು ತಿರಸ್ಕರಿಸಿ, ‘ನಿಮ್ಮ ಹಣ ನನ್ನ ಸ್ವಾಮಿಯ ಕಾಲಧೂಳಿಗೂ ಸಮನಲ್ಲ’ ಎಂದಳು. ಆನಂತರವೂ ಮತ್ತೆ ಬೇರೆಯವರನ್ನು ಮೂರು ಬಾರಿ ಕಳುಹಿಸಿದ. ಆಕೆ ಅವರನ್ನೆಲ್ಲ ತಿರಸ್ಕರಿಸಿಬಿಟ್ಟಳು. ನಾಲ್ಕನೆಯ ಬಾರಿ ಆಕೆಯ ಕೈಗಳನ್ನು ಕಟ್ಟಿ ಅರಮನೆಗೆ ಕರೆದುಕೊಂಡು ಬರಲು ಅಪ್ಪಣೆ ಮಾಡಿದ. ಅವಳನ್ನು ಸೇವಕರು ಎಳೆದುಕೊಂಡು ಬಂದರು.

ಮಹೋಷಧಕುಮಾರ ತನ್ನ ವೇಷವನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಅತುಲ ಐಶ್ವರ್ಯದ ಮಧ್ಯೆ, ಆಢ್ಯ ಜನರ ಮಧ್ಯೆ ಕುಳಿತಿದ್ದ. ಅವನನ್ನು ದರ್ಜಿ ಎಂದು ತಿಳಿದಿದ್ದ ಅಮರಾದೇವಿ ಅವನ ಗುರುತು ಹಿಡಿಯಲಿಲ್ಲ. ಅವನು ಕ್ರೂರವಾಗಿ ನೋಡಿ, ‘ನನ್ನನ್ನು ಮದುವೆಯಾಗಲೇಬೇಕು’ ಎಂದು ಕೇಳಿದಾಗ ಆಕೆ ಮೊದಲು ನಕ್ಕಳು ನಂತರ ಜೋರಾಗಿ ಅಳತೊಡಗಿದಳು. ಅತ್ತದ್ದು, ನಕ್ಕದ್ದು ಯಾಕೆ ಎಂದು ಕೇಳಿದಾಗ, ‘ನಿಮ್ಮ ಅತುಲ ಸಂಪತ್ತನ್ನು ಕಂಡಾಗ, ಈ ಸಂಪತ್ತು ನಿಮಗೆ ಹಾಗೆಯೇ ದೊರೆತಿಲ್ಲ. ಅದು ಹಿಂದಿನ ಜನ್ಮಗಳಲ್ಲಿ ನೀವು ಮಾಡಿದ ಪುಣ್ಯ ಕರ್ಮಗಳ ಫಲ ಎನ್ನಿಸಿತು. ಅಷ್ಟು ಒಳ್ಳೆಯ ಕರ್ಮಗಳನ್ನು ಮಾಡಿದ ವ್ಯಕ್ತಿಯನ್ನು ಕಂಡೆನಲ್ಲ ಎಂಬ ಸಂತೋಷದಿಂದ ನಕ್ಕೆ. ಆದರೆ ಈ ಜನ್ಮದಲ್ಲಿ ಬೇರೆಯವರಿಗೆ ಎಂದು ಮೀಸಲಾಗಿದ್ದ ಅಸಹಾಯಕ ಹೆಣ್ಣನ್ನು ಹೀಗೆ ಬಲತ್ಕಾರವಾಗಿ ಎಳೆದು ತಂದಿರಲ್ಲ, ಬೇರೆಯವರ ವಸ್ತುವನ್ನು ದೋಚುತ್ತಿದ್ದೀರಲ್ಲ, ಇದರಿಂದ ನಿಮ್ಮ ಪುಣ್ಯ ಕರಗಿ ನರಕಕ್ಕೆ ಹೋಗುವುದು ನಿಶ್ಚಯ. ಒಂದು ಒಳ್ಳೆಯ ಜೀವ ನರಕಕ್ಕೆ ಹೋಗುತ್ತದಲ್ಲ ಎಂದು ಚಿಂತಿಸಿ ಅತ್ತೆ’ ಎಂದಳು. ಆಕೆಯ ಮನಸ್ಸಿನ ಸ್ಥಿರತೆಗೆ ಮಹೋಷಧಕುಮಾರ ಮಾರುಹೋದ. ಮತ್ತೆ ಆಕೆಯನ್ನು ದ್ವಾರಪಾಲಕನ ಮನೆಗೆ ಕಳುಹಿಸಿದ. ನಂತರ ದರ್ಜಿ ವೇಷದಲ್ಲಿ ಹೋಗಿ ಆಕೆಯೊಡನೆ ಸಮಯ ಕಳೆದ. ಮರುದಿನ ತಾಯಿ ಉದುಂಬರಾದೇವಿಗೆ ತಾನು ಹುಡುಗಿಯನ್ನು ಆಯ್ಕೆ ಮಾಡಿದ್ದನ್ನು ತಿಳಿಸಿದ. ಆಕೆ ರಾಜನಿಗೆ ಹೇಳಿ, ಅಮರಾದೇವಿಯನ್ನು ಅರಮನೆಗೆ ಕರೆಯಿಸಿ ಸರ್ವಾಲಂಕಾರ ಭೂಷಿತೆಯನ್ನಾಗಿ ಮಾಡಿ, ನಗರದಲ್ಲಿ ಮೆರವಣಿಗೆ ಮಾಡಿಸಿ, ಸಂಭ್ರಮದಿಂದ ಸರ್ವಜನರ ಸಮ್ಮುಖದಲ್ಲಿ ಮದುವೆ ಮಾಡಿದಳು. ನಂತರ ಬೋಧಿಸತ್ವನಾದ ಮಹೋಷಧಕುಮಾರ ಮತ್ತು ಅಮರಾದೇವಿ ರಾಜನ ಅರ್ಥ ಮತ್ತು ಧರ್ಮದ ಅನುಶಾಸಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT