ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೃಶ್ಯದಿಂದ ಅದೃಶ್ಯದೆಡೆಗೆ

Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ದೃಶ್ಯವೆಲ್ಲವು ನಶ್ಯವಾದೊಡೇಂ ದೃಷ್ಟಿಗದು |
ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ||
ವಿಶ್ವಾನುಭಾವವೆ ವಿಶ್ವಾತ್ಮಾನುಭಾವಕೆ ಪಥ |
ನಶ್ಯದಿಂದವಿನಶ್ಯ – ಮಂಕುತಿಮ್ಮ || 400 ||

ಪದ-ಅರ್ಥ: ದೃಶ್ಯ= ಕಣ್ಣಿಗೆ ಕಾಣುವಂಥದ್ದು, ನಶ್ಯ= ಮರೆಯಾದದ್ದು, ವಶ್ಯವಿರುವನಕದನು= ವಶ್ಯ (ವಶವಾದದ್ದು), ಇರುವನಕ+ ಅದನು, ದೃಷ್ಟಿಪುದೆ= ನೋಡುವುದೆ, ವಿಶ್ವಾನುಭವವೆ= ವಿಶ್ಯ+ ಅನುಭವವೆ, ನಶ್ಯದಿಂದವಿನಶ್ಯ= ನಶ್ಯದಿಂದ (ನಾಶವಾಗುವದರಿಂದ)+ ಅವಿನಶ್ಯ (ನಾಶವಾಗದಿರುವುದು)

ವಾಚ್ಯಾರ್ಥ: ನಾವು ಕಾಣುವುದೆಲ್ಲವೂ ನಾಶವಾದರೂ, ನಮ್ಮ ದೃಷ್ಟಿಗೆ ಕಾಣುವವರೆಗಾದರೂ ಅದನ್ನು ನೋಡುವುದೇ ನಮ್ಮ ಕಾರ್ಯ. ಪ್ರಪಂಚದ ಅನುಭವವೇ ವಿಶ್ವಾತ್ಮದ ತಿಳುವಳಿಕೆಗೆ ದಾರಿ. ನಶ್ವರವಾದದ್ದರಿಂದ ಅವಿನಾಶಿಯ ದರ್ಶನ.

ವಿವರಣೆ: ನಮ್ಮ ಅಧ್ಯಾತ್ಮ ತಿಳಿಸುತ್ತದೆ, ಈ ಪ್ರಪಂಚ ನಶ್ವರವಾದದ್ದು. ನಿನ್ನೆ ಇದ್ದದ್ದು ಇಂದಿಗಿಲ್ಲ, ಇಂದಿಗೆ ಇರುವುದು ನಾಳೆಗೆ ಇರಲಾರದು. ಅದು ಸತ್ಯವೂ ಹೌದು. ಆದರೆ ಈ ಸತತವಾಗಿ ಕಂಡು ಮರೆಯಾಗುವ ವಿಶ್ವದಲ್ಲಿ ನಮ್ಮ ಜವಾಬ್ದಾರಿ ಏನು? ನಾವೂ ನಾಳೆ ಮರೆಯಾಗಿ, ಕರಗಿ ಹೋಗುವವರೇ. ಆದರೆ ಇರುವತನಕ, ನಮ್ಮ ಕಣ್ಣಿಗೆ ಕಾಣುವ ಪ್ರಪಂಚವನ್ನು ನೋಡುತ್ತಿರುವುದೇ ನಮ್ಮ ಕೆಲಸ. ನಾವು ಹಿಂದೆ ಆಗಿ ಹೋಗಿ, ಈಗ ಕಾಣದೆ ಇರುವದರ ಬಗ್ಗೆ ಚಿಂತಿಸಬೇಕೋ, ಮುಂದೇನಾಗುತ್ತದೆಂಬುದು ತಿಳಿಯದೇ ಹೋದರೂ ಅನಾಗತದ ಬಗ್ಗೆ ಯೋಚನೆ ಮಾಡಬೇಕೋ? ಕಗ್ಗ ತುಂಬ ಸಮಾಧಾನದ ಮಾತನ್ನು ಹೇಳುತ್ತದೆ.

ನೀನು ಇರುವವರೆಗೆ, ಇರುವ ಪ್ರಪಂಚವನ್ನು ಪ್ರೀತಿಯಿಂದ ಕಾಣು, ಅದರ ಸಂಭ್ರಮದಲ್ಲಿ ಪಾಲುಗೊಳ್ಳು, ಅದರ ಬೆಳವಣಿಗೆಗೆ ನಿನ್ನ ಭುಜದ ಶಕ್ತಿ ಕುಂದುವವರೆಗೆ ದುಡಿದು ಕಾಣಿಕೆ ನೀಡು. ಇದು ಯಾಕೆಂದರೆ ವಿಶ್ವಾತ್ಮದ ಅನುಭವವಾಗಲು ನನಗೆ ಈ ವಿಶ್ವದ ಅನುಭವವಾಗಬೇಕು. ಈ ಪ್ರಪಂಚದ ಅನುಭವ ಹೆಚ್ಚಾದಂತೆ, ಅದರ ಬದಲಾವಣೆಯ ಗತಿಯನ್ನು ತಿಳಿದಂತೆ, ಇಂಥ ಬದಲಾವಣೆಯ ಹಿಂದಿನ ಶಕ್ತಿಯ ಹುಡುಕಾಟ ಪ್ರಾರಂಭವಾದೀತು. ಅದು ಕಣ್ಣಿಗೆ ಕಾಣಲಾಗದ, ಆದರೆ ಪ್ರಪಂಚಕ್ಕೆ ಕಾರಣವಾದ ಶಕ್ತಿ. ಅದು ಅನುಭವಕ್ಕೆ ಬರುವುದು ಅದರದೇ ಸೃಷ್ಟಿಯಾದ ಪ್ರಪಂಚದ ಮೂಲಕ. ಬೆಂಕಿಯನ್ನು ಕಂಡವನಿಗೇ ಅದರ ಶಾಖದ ಅರಿವು. ಮನೆಯಲ್ಲಿ ಕುಳಿತು, ಕಿಟಕಿಗಳನ್ನು ಮುಚ್ಚಿಕೊಂಡು, ಅವುಗಳಿಗೆಲ್ಲ ಕರಿಯ ಬಟ್ಟೆಯನ್ನು ಹಾಕಿ ಕತ್ತಲೆಯಲ್ಲಿ ಇದ್ದವನಿಗೆ ಸೂರ್ಯನ ಅರಿವು ಹೇಗಾದೀತು? ಕಣ್ಣಿಗೆ ಕಾಣುವ ಸೂರ್ಯನಿಂದ ಅದರ ಹಿಂದಿರುವ ಶಕ್ತಿಯ ತಿಳಿವು ನಮಗೆ. ಅದಕ್ಕೇ ಕಗ್ಗ ಹೇಳುತ್ತದೆ ‘ವಿಶ್ವಾನುಭವವೆ ವಿಶ್ವಾತ್ಮ್ಮಾನುಭವಕೆ ಪಥ’. ಈ ಜಗತ್ತನ್ನು ನಾನು ಎಷ್ಟು ಗಮನವಿಟ್ಟು ನೋಡಿ, ಅದರ ಚಟುವಟಿಕೆಗಳಲ್ಲಿ ಭಾಗಿಯಾಗಿ, ಎಷ್ಟು ಆಳವಾಗಿ ಅನುಭವಿಸುತ್ತೇವೋ, ಅಷ್ಟು ಹತ್ತಿರವಾಗಿ ವಿಶ್ವಾತ್ವದ ಅನುಭವವನ್ನು ಪಡೆಯುತ್ತೇನೆ. ಈ ಪ್ರಕ್ರ್ರಿಯೆಯೇ ಕಾಣುವುದರಿಂದ ಕಾಣದಿರುವುದರೆಡೆಗೆ ಸಾಗುವುದು. ಅದೇ ನಶ್ಯದಿಂದ ಅವಿನಶ್ಯದ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT