ಮಂಗಳವಾರ, ಮಾರ್ಚ್ 31, 2020
19 °C

ಬೆರಗಿನ ಬೆಳಕು | ನಾಯಕರ ಕರ್ತವ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೊಂದು ಜನ್ಮದಲ್ಲಿ ಬೋಧಿಸತ್ವ ಒಂದು ಬಲಶಾಲಿಯಾದ ಕಪಿಯಾಗಿ ಜನ್ಮವೆತ್ತಿದ್ದ. ಅವನಿಗೆ ಐದು ನೂರು ಕಪಿಗಳ ಬಲವಿತ್ತು. ಆತ ಎಂಬತ್ತು ಸಾವಿರ ಕಪಿಗಳಿಗೆ ನಾಯಕನಾಗಿ ಹಿಮಾಲಯದಲ್ಲಿ ನೆಲೆಸಿದ್ದ. ಗಂಗಾತಟದಲ್ಲಿ ಒಂದು ಪರ್ವತದ ಶಿಖರದ ಹಾಗೆ ಎತ್ತರವಾದ, ವಿಸ್ತಾರವಾದ ಮಾವಿನ ಮರವಿತ್ತು. ಅದರ ಹಣ್ಣುಗಳು ಅಪರೂಪವಾದವು, ಅವುಗಳ ರಸದ ರುಚಿ ವರ್ಣನಾತೀತವಾದದ್ದು. ಬೋಧಿಸತ್ವನ ಸೈನ್ಯ ಇಲ್ಲಿಗೆ ಬಂದು ಹಣ್ಣುಗಳನ್ನು ತಿನ್ನುತ್ತಿತ್ತು.

ಒಂದು ಬಾರಿ ಈ ಮರದ ಪುಟ್ಟಕೊಂಬೆ ಒಂದು ಹಣ್ಣಿನ ಸಹಿತ ನದಿಯ ನೀರಿನಲ್ಲಿ ಬಿತ್ತು. ಅದು ತೇಲುತ್ತ ಮುಂದೆ ಸಾಗಿ ವಾರಾಣಸಿಯ ತಟವನ್ನು ಸೇರಿತು. ಅಲ್ಲಿ ರಾಜ ಜಲಕ್ರೀಡೆಯನ್ನಾಡುತ್ತಿದ್ದ. ತೇಲಿ ಬಂದ ಹಣ್ಣನ್ನು ಹಿಡಿದು ಕಿತ್ತು ‘ಇದು ಯಾವ ಹಣ್ಣು?’ ಎಂದು ಸೇವಕರನ್ನು ಕೇಳಿದ. ಅವರು ಇದು ಕಾಡು ಮಾವಿನಹಣ್ಣು ಎಂದರು. ಅದನ್ನು ಅರಮನೆಗೆ ತಂದು ತಿಂದಾಗ ಅವನ ಮನಸ್ಸು ಸೂರೆಗೊಂಡಿತು. ಈ ಹಣ್ಣಿರುವ ಮರವನ್ನು ಹುಡುಕಿಯೇ ಬಿಡಬೇಕೆಂದು ತನ್ನ ಸೈನಿಕರನ್ನು, ಮಂತ್ರಿಗಳನ್ನು ಕರೆದುಕೊಂಡು, ಕೆಲವು ಕಾಡು ಜನರನ್ನು ಸೇರಿಸಿಕೊಂಡು ನೂರು ನಾವೆಗಳಲ್ಲಿ ನದಿಯ ಪ್ರವಾಹದ ವಿರುದ್ಧವಾಗಿ ಹೊರಟ. ಎರಡು ಮೂರು ದಿನದ ಪ್ರಯಾಣದ ನಂತರ ಕಾಡು ಜನರು ಈ ಮರವನ್ನು ಗುರುತಿಸಿದರು. ರಾಜ ತನ್ನ ಸೈನ್ಯದೊಂದಿಗೆ ಮರದ ಕೆಳಗೆ ವಿರಮಿಸಿದ, ಹಣ್ಣುಗಳನ್ನು ತಿಂದು ಸಂಭ್ರಮಿಸಿದ.

ರಾತ್ರಿ ಜನರೆಲ್ಲ ಮಲಗಿದಾಗ ಬೋಧಿಸತ್ವ ತನ್ನ ಸೈನ್ಯದೊಂದಿಗೆ ಮರಕ್ಕೆ ಬಂದ. ಎಲ್ಲರೂ ಹಣ್ಣುಗಳನ್ನು ತಿನ್ನುತ್ತಿದ್ದರು. ಅದನ್ನು ಕಂಡ ರಾಜ ಸೈನ್ಯಕ್ಕೆ ಆಜ್ಞೆ ಮಾಡಿದ, ‘ಈ ಮರವನ್ನು ಸುತ್ತುವರಿಯಿರಿ. ಒಂದು ಕೋತಿಯನ್ನೂ ಬಿಡದೆ ಕೊಂದುಬಿಡಿ. ಈ ಮರದ ಹಣ್ಣುಗಳು ನಮಗೆ ಮಾತ್ರ ಮೀಸಲಾಗಿರಲಿ’. ಸೈನಿಕರು ಬಿಲ್ಲು, ಬಾಣಗಳನ್ನು ಹಿಡಿದು ಮರದ ಸುತ್ತಲೂ ನಿಂತರು. ಕೋತಿಗಳು ಗಾಬರಿಯಾಗಿ ಬೋಧಿಸತ್ವನ ಕಡೆಗೆ ಬಂದವು. ಆತ ‘ಚಿಂತೆ ಮಾಡಬೇಡಿ’ ಎಂದು ಭರವಸೆ ಕೊಟ್ಟು, ಮರದ ಎತ್ತರದ ಕೊಂಬೆಯನ್ನೇರಿ ನದಿಯ ಇನ್ನೊಂದು ತೀರದ ಮರವನ್ನು ಕಂಡು ಚಂಗನೇ ಹಾರಿ ಅದನ್ನು ಸೇರಿದ. ಬಳ್ಳಿಗಳನ್ನು ಸೇರಿಸಿ ಒಂದು ಉದ್ದ ಹಗ್ಗವನ್ನು ಮಾಡಿದ. ಕಣ್ಣಳತೆಯಿಂದ ಈ ಮರಕ್ಕೂ, ಇನ್ನೊಂದು ತೀರದ ಮಾವಿನಮರಕ್ಕೂ ಇದ್ದ ಅಂತರವನ್ನು ಲೆಕ್ಕ ಹಾಕಿ ಹಗ್ಗವನ್ನು ಸಿದ್ಧಮಾಡಿ, ಒಂದು ತುದಿಯನ್ನು ಮರದ ಕಾಂಡಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡ. ಆಗೊಂದು ತಪ್ಪಾಯಿತು. ತನ್ನ ಸೊಂಟದಿಂದ ತಲೆಯವರೆಗಿನ ಅಳತೆಯನ್ನು ಗಮನಿಸಿರಲಿಲ್ಲ. ಮರದಿಂದ ಮತ್ತೆ ಚಂಗನೆ ಹಾರಿ ಮಾವಿನಮರವನ್ನು ತಲುಪಿದ. ಆದರೆ ಹಗ್ಗ ಕೊಂಚ ಕಡಿಮೆಯಾದ್ದರಿಂದ ಆತ ಮರವನ್ನು ತಲುಪಲಾಗದೆ ಕೈ ಚಾಚಿ ಕೊಂಬೆಯನ್ನು ಹಿಡಿದುಕೊಂಡ. ಅಂದರೆ ಆತ ತಾನು ನಿರ್ಮಿಸಿದ ಸೇತುವೆಯ ಕಡೆಯ ಭಾಗವೇ ಆದ. ತನ್ನ ಸೈನ್ಯದವರಿಗೆಲ್ಲ ತನ್ನ ಬೆನ್ನನ್ನೇರಿ ನಂತರ ಹಗ್ಗದ ಮೇಲೆ ಸಾಗಿ ಆ ತಟ ಸೇರಿಕೊಳ್ಳಲು ಹೇಳಿದ. ಅವರು ಅವನಿಗೆ ನಮಸ್ಕರಿಸಿ ಹಾಗೆಯೇ ದಾಟಿ ಹೋದರು. ಬೋಧಿಸತ್ವನ ಬೆನ್ನು ಮುರಿದಂತೆ ಆಯಿತು.

ಇದನ್ನು ಕಣ್ಣು ತೆರೆದು ನೋಡುತ್ತಿದ್ದ ರಾಜ ಕೋತಿಯ ಶಕ್ತಿಗೆ, ಯೋಚನೆಗೆ ಮೆಚ್ಚಿದ. ತನ್ನ ಸೈನಿಕರಿಂದ ನಿಧಾನವಾಗಿ ಕೋತಿಯನ್ನು ಕೆಳಗಿಳಿಸಿಕೊಂಡು ಆರೈಕೆ ಮಾಡಿದ. ‘ನಿನ್ನ ಜೀವವನ್ನು ಅಪಾಯಕ್ಕೆ ತಳ್ಳಿ ಹೀಗೇಕೆ ಮಾಡಿದೆ?’ ಎಂದು ಕೇಳಿದ. ಅದಕ್ಕೆ ಬೋಧಿಸತ್ವ, ‘ನಾನು ಆ ಕಪಿಗಳ ನಾಯಕ. ಅವುಗಳನ್ನು ಪಾರು ಮಾಡುವುದು ನನ್ನ ಕರ್ತವ್ಯ. ನನಗೆ ಸಾವೂ ಕಷ್ಟಕೊಡುವುದಿಲ್ಲ, ನಿನ್ನ ಬಂಧನವೂ ತೊಂದರೆಯಿಲ್ಲ, ಯಾಕೆಂದರೆ ಪಾರಾಗಿ ಹೋದ ನನ್ನವರ ಸಂತೋಷಕ್ಕೆ ನಾನು ಕಾರಣವಾಗಿದ್ದೇನೆ. ಬುದ್ಧಿವಂತ ರಾಜನಾದವನು ರಾಷ್ಟಕ್ಕೆ ತನ್ನನ್ನು ಅವಲಂಬಿಸಿದ ಪ್ರಜೆಗಳಿಗೆ ಸುಖವನ್ನುಂಟು ಮಾಡುವುದರಲ್ಲೇ ತನ್ನ ಕಷ್ಟವನ್ನು, ಪರಿಶ್ರಮವನ್ನು ಮರೆಯಬೇಕು’ ಎಂದು ಹೇಳಿದ. ಇದು ರಾಜನಿಗೆ ಮರೆಯಲಾರದ ಪಾಠವಾಯಿತು.

ಇದು ನಮ್ಮ ನಾಯಕರನ್ನೂ ತಲುಪಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)