ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪಾಲಿಗೆ ಬಂದ ಕರ್ತವ್ಯ

Last Updated 14 ಮಾರ್ಚ್ 2022, 21:45 IST
ಅಕ್ಷರ ಗಾತ್ರ

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ |
ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ||
ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು |
ಒಲ್ಲನವನ್ ಅರೆನಚ್ಚ – ಮಂಕುತಿಮ್ಮ || 584 ||

ಪದ-ಅರ್ಥ: ಎಲ್ಲಕಂ=ಎಲ್ಲಕ್ಕೂ, ಇಲ್ಲದೆಯುಮಿಲ್ಲ=ಇಲ್ಲವೆಂದಲ್ಲ, ಸಲ್ಲಿಸಾದನಿತ=ಸಲ್ಲಿಸು+ಆದನಿತ (ಆದಷ್ಟು), ಪಾಲಿಗ=ಪಾಲಿಸುವವನ (ಭಗವಂತನ), ಒಲ್ಲನವನ್=ಒಲ್ಲನು (ಇಷ್ಟಪಡನು)+ಅವನ್ (ಅವನು), ಅರೆನಚ್ಚ=ಅರೆನಂಬಿಕೆ.

ವಾಚ್ಯಾರ್ಥ: ಎಲ್ಲ ಕೆಲಸಗಳಿಗೂ ನಿನಗೆ ಕರ್ತವ್ಯದ ಅಧಿಕಾರವಿಲ್ಲ. ನಿನಗೆ ಆ ಕರ್ತವ್ಯ ಭಾರದಲ್ಲಿ ಯಾವ ಜವಾಬ್ದಾರಿಯೂ ಇಲ್ಲವೆಂದಲ್ಲ. ನಿನ್ನಿಂದ ಆದಷ್ಟನ್ನು ಸಲ್ಲಿಸು ಉಳಿದದ್ದನ್ನು ಯಜಮಾನನ ತೀರ್ಮಾನಕ್ಕೆ ಬಿಡು. ಅವನು ಅರ್ಧನಂಬಿಕೆಯ ಕಾರ್ಯಗಳನ್ನು ಇಷ್ಟಪಡುವುದಿಲ್ಲ.

ವಿವರಣೆ: ಪ್ರಪಂಚದಲ್ಲಿ ನೂರಾರು ಕಾರ್ಯಗಳು ನಡೆಯುತ್ತವೆ. ಯಾರೊಬ್ಬರೂ ಎಲ್ಲ ಕೆಲಸಗಳನ್ನು ಮಾಡುವುದು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಕಣ್ಣಿಗೆ ಕಾಣುವಂಥ ದೊಡ್ಡ ಕೆಲಸಗಳಿವೆ, ಮತ್ತೆ ಕೆಲವು ಕಣ್ಣಿಗೆ ಕಾಣದಂಥ ಕೆಲಸಗಳೂ ಇವೆ. ಆದರೆ ಯಾವುದೂ ಚಿಕ್ಕದಲ್ಲ, ಯಾವುದೂ ದೊಡ್ಡದಲ್ಲ. ಪ್ರಧಾನಮಂತ್ರಿಗಳು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದು ಇಡೀ ಪ್ರಪಂಚಕ್ಕೆ ಕಾಣುತ್ತದೆ. ಅದೊಂದು ಗೌರವದ, ಮುಖ್ಯ ಕಾರ್ಯ. ಆದರೆ ಅವರು ಬರುವುದಕ್ಕಿಂತ ಮೊದಲು, ಯಾರೂ ನೋಡದಿದ್ದಾಗ ಆ ಧ್ವಜವನ್ನು ಸರಿಯಾಗಿ ಮಡಿಚಿ, ಅದರಲ್ಲಿ ಬಣ್ಣ ಬಣ್ಣದ ಹೂವುಗಳನ್ನು ತುಂಬಿ, ಅದರ ಮಡಿಕೆಗಳ ಮೇಲೆ ಹಗ್ಗದ ಹಗುರವಾದ ಗಂಟನ್ನು ಹಾಕಿ, ಮೇಲಕ್ಕೇರಿಸಿ, ಎಳೆಯಬೇಕಾದ ಹಗ್ಗ ಸುಲಭವಾಗಿ ಪ್ರಧಾನಮಂತ್ರಿಗಳ ಕೈಗೆ ಸಿಗುವಂತೆ ಮಾಡುವುದು ಸಣ್ಣ ಕೆಲಸವೇ? ಆ ವ್ಯಕ್ತಿ ಗಂಟನ್ನು ಸರಿಯಾಗಿ ಹಾಕದಿದ್ದರೆ, ಎಳೆದಾಗ ಬಿಚ್ಚಿಕೊಳ್ಳದಿದ್ದರೆ ಬಹುದೊಡ್ಡ ಆಭಾಸ. ಪ್ರಧಾನಮಂತ್ರಿಗಳಿಗೆ, ಇಡೀ ದೇಶಕ್ಕೆ ಮುಖಭಂಗ.

ಹಾಗಾದರೆ ಯಾವ ಕೆಲಸವನ್ನು ಚಿಕ್ಕದೆನ್ನುವುದು? ಧ್ವಜ ಹಾರಿಸುವ ಕೆಲಸದಲ್ಲಿ ಧ್ವಜ ಕಟ್ಟುವವನ ಕಾರ್ಯದ ಪಾಲೂ ಇದೆ. ಅದು ಜನರ ಕಣ್ಣಿಗೆ ಕಾಣಿಸಲಿಕ್ಕಿಲ್ಲ. ಆದರೆ ಸಣ್ಣದಲ್ಲ. ಯಾವುದೇ ಕೆಲಸದಲ್ಲಿ ನಮಗೆ ದೊಡ್ಡದೋ, ಸಣ್ಣದೋ ಕೆಲಸ ದೊರಕುತ್ತದೆ. ದೊಡ್ಡದೆಂದು ಹಿಗ್ಗುವುದಾಗಲಿ, ಸಣ್ಣದೆಂದು ಕುಗ್ಗುವುದಾಗಲೀ ಬೇಕಿಲ್ಲ. ಮದುವೆಯ ಮನೆಯಲ್ಲಿ ಸಾವಿರಾರು ಕೆಲಸಗಳು. ಮದುವೆಯ ಗಂಡು, ವಧು ಇಬ್ಬರೂ ಬಹಳ ಮುಖ್ಯ. ಪುರೋಹಿತರೇ ಮದುವೆಯ ಕಾರ್ಯವನ್ನು ನಡೆಸುವವರು. ಅವರೂ ಮುಖ್ಯ. ಅಡುಗೆಯವರು, ಅಲಂಕಾರದವರು, ಫೋಟೊ ತೆಗೆಯುವವರು ಎಲ್ಲರದೂ ಪ್ರಮುಖ ಕೆಲಸಗಳೇ. ಒಬ್ಬನಿಗೆ ಬಚ್ಚಲನ್ನು ಸಾಬೂನು ಹಾಕಿ ತೊಳೆಯುವ ಕೆಲಸ. ಅವನಿಗೆ ಇದು ಕೀಳು. ಅರೆಮನಸ್ಸಿನಿಂದ ತೊಳೆದ. ಮದುವೆಯ ಗಂಡು ಅಕ್ಷತೆಗಿಂತ ಮೊದಲು ಬಚ್ಚಲುಮನೆಗೆ ಬಂದ. ನೆಲಕ್ಕೆ ಹಾಕಿದ ಸಾಬೂನನ್ನು ಸರಿಯಾಗಿ ತೊಳೆದಿಲ್ಲ. ಹುಡುಗ ಜಾರಿ ಬಿದ್ದ. ತಲೆ ಒಡೆಯಿತು. ಎಚ್ಚರ ತಪ್ಪಿತು. ಅವನನ್ನು ಆಸ್ಪತ್ರೆಗೆ ದಾಖಲಿಸಿದರು. ಮದುವೆ ನಿಂತಿತು. ಯಾರ ಕೆಲಸ ಮುಖ್ಯವಾಯಿತು? ಇದೊಂದು ಅರೆಮನಸ್ಸಿನ ಕಾರ್ಯ ಮಾಡಿದ ಅನಾಹುತ.

ಕಗ್ಗ ಹೇಳುತ್ತದೆ, ನಿನಗೆ ಎಲ್ಲ ಕೆಲಸ ಮಾಡುವ ಅಧಿಕಾರವಿಲ್ಲ. ಮತ್ತೆ, ಯಾವ ಕೆಲಸವೂ ಇಲ್ಲವೆಂದಲ್ಲ. ನಿನಗೂ ಒಂದು ಕೆಲಸವಿದೆ. ಅದು ದೊಡ್ಡದೋ, ಸಣ್ಣದೋ ಎನ್ನುವುದು ನೀನು ನೊಡುವ ದೃಷ್ಟಿಯಲ್ಲಿದೆ. ನಿನ್ನ ಪಾಲಿಗೆ ಬಂದದ್ದನ್ನು ಶ್ರದ್ಧೆಯಿಂದ, ನಿನ್ನ ಶಕ್ತಿಯನ್ನು ಬಳಸಿ ಮಾಡು, ಉಳಿದದ್ದನ್ನು ಭಗವಂತನಿಗೆ ಬಿಡು, ಯಾವುದನ್ನೂ ಅರೆಮನಸ್ಸಿನಿಂದ ಮಾಡಬೇಡ. ಭಗವಂತ ಅರೆಮನಸ್ಸಿನ ಕಾರ್ಯವನ್ನು ಒಪ್ಪಲಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT