ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬದುಕು ಭಂಡ ಬಾಳೇ?

Last Updated 16 ಮಾರ್ಚ್ 2022, 21:49 IST
ಅಕ್ಷರ ಗಾತ್ರ

ಕೆಂಡಮುಸುಡಿಯ ದೈವವೆಲ್ಲವನು ದಹಿಸುತಿರೆ |
ದಂಡಧರನತ್ತಲೆಲ್ಲವನು ಕೆಡಹುತಿರೆ ||
ಮೊಂಡುಘಾಸಿಯ ಲಾಭ ಪಿಂಡಮಾತ್ರವು ತಾನೆ? |
ಭಂಡಬಾಳಲೆ ನಮದು? – ಮಂಕುತಿಮ್ಮ|| 586 ||

ಪದ-ಅರ್ಥ: ಕೆಂಡಮುಸುಡಿಯ=ಕೆಂಪುಮೋರೆಯ, ದಂಡಧರನತ್ತಲೆಲ್ಲವನು=ದಂಡಧರನು (ಯಮ)+ಅತ್ತಲು+ಎಲ್ಲವನು, ಮೊಂಡುಘಾಸಿಯ (ಮೊಂಡುತನ ಮಾಡಿ ಪೆಟ್ಟ ತಿಂದು ಗಾಸಿಯ), ಭಂಡಬಾಳಲೆ=ಭಂಡ+ಬಾಳು+ಎಲೆ.

ವಾಚ್ಯಾರ್ಥ: ಅಗ್ನಿಯಂತೆ ಮುಖ ಮಾಡಿದ ದೈವ ಎಲ್ಲವನ್ನೂ ಸುಡುತ್ತಿರಲು, ಅತ್ತ ಯಮಧರ್ಮ ಎಲ್ಲವನ್ನೂ ಹೊಡೆದು ಕೆಡಹುತ್ತಿದ್ದಾಗ, ನಮಗಾದ ಲಾಭವೇನು? ಮೊಂಡುತನದಿಂದ ಹೋರಾಡಿ, ಗಾಸಿಯಾಗಿ ಪಡೆದದ್ದು ಮುಷ್ಠಿ ಅನ್ನ ತಾನೇ? ನಮ್ಮದು ಭಂಡಬಾಳೇ?

ವಿವರಣೆ: ಮತ್ತೆ ಮತ್ತೆ ನಾನೊಂದು ಮಾತನ್ನು ಒತ್ತಿ ಹೇಳಬೇಕು. ಈ ಕಗ್ಗ ಮತ್ತೆ ನಿರಾಸೆಯನ್ನು, ಹತಾಶೆಯನ್ನು ಹೇಳುತ್ತಿಲ್ಲ. ಕೊನೆಯ ಸಾಲಿನಲ್ಲಿ, ನಮ್ಮದು ಭಂಡಬಾಳೇ? ಎಂದು ಪ್ರಶ್ನೆ ಕೇಳುತ್ತದೆ. ಅದು ಮೊದಲಿನ ಮೂರು ಸಾಲಿನಲ್ಲಿ ಕಂಡು ಬರುವ ಸಮಸ್ಯೆಗಳನ್ನು ನಿರಾಕರಿಸುತ್ತಿಲ್ಲ. ಅವುಗಳನ್ನು ಒಪ್ಪುತ್ತಲೇ ನಮ್ಮದು ಭಂಡ ಬಾಳಾಗಬೇಕೇ ಎಂದು ಪ್ರಶ್ನಿಸುತ್ತದೆ. ಉತ್ತರ ನಮ್ಮ ಕೈಯಲ್ಲಿದೆ. ನಿರಾಸೆಯಿಂದ ಕೈ ಚೆಲ್ಲಿ ಕುಳಿತರೆ ಅದು ಭಂಡಬಾಳೇ. ಆದರೆ ಇರುವ ಶಕ್ತಿಯನ್ನು ಪೂರ್ಣವಾಗಿ ಬಳಸಿಕೊಂಡು, ಸಾಧ್ಯವಿದ್ದಷ್ಟು ಹೋರಾಡಿದರೆ ಅದು ಭಂಡ ಬಾಳಾಗದೆ ಸಾಧನೆಯ ಬದುಕಾಗುತ್ತದೆ.

ದೈವದ ಪರೀಕ್ಷೆಯನ್ನು, ಸಾವಿನ ತಲ್ಲಣತೆಯನ್ನು, ಕಷ್ಟದ ಪರಿಯನ್ನು ಯಾರು ಕಂಡಿಲ್ಲ? ಅದಕ್ಕೆ ಹೆದರಿ ಶರಣಾದವರು ಹೆಸರಿಲ್ಲದೆ ಮಾಯವಾದರು. ಎದೆಗಟ್ಟಿ ಮಾಡಿಕೊಂಡು ಪ್ರಯತ್ನಿಸಿದವರು ನಾಯಕರಾದರು, ಲೋಕಕ್ಕೆ ಮಾದರಿಗಳಾದರು. ರಾಮನ ಬದುಕೇನು ಹೂವಿನ ಹಾಸಿಗೆಯಾಗಿತ್ತೇ? ರಾಜಕುಮಾರ, ತನ್ನ ತರುಣಿ ಹೆಂಡತಿ, ಮತ್ತು ತಮ್ಮನನ್ನು ಕಟ್ಟಿಕೊಂಡು ಕಾಡು-ಕಾಡು ಅಲೆದದ್ದು, ರಾಕ್ಷಸರೊಡನೆ ಸದಾ ಹೋರಾಟ, ಪತ್ನಿಯ ಅಪಹರಣ, ಅವಳ ಶೋಧಕ್ಕಾಗಿ ಅಲೆತ, ಮತ್ತೆ ಪ್ರಬಲ ಹೋರಾಟ. ಆಮೇಲಾದರೂ ಎಲ್ಲವೂ ಶಾಂತಿಯಾಯಿತೆ? ಕೊನೆಗೂ ಹೆಂಡತಿಯಿಂದ ದೂರಾಗಿ ಕೊನೆಯವರೆಗೂ ಅರಮನೆಯಲ್ಲಿ ಸನ್ಯಾಸಿ ಜೀವನ. ಇಷ್ಟಾದರೂ ಇಂದು ರಾಮ ದೇವರಾದದ್ದೇಕೆ? ಅವನು ದೈವವನ್ನು, ಸಮಸ್ಯೆಗಳನ್ನು ಎದುರಿಸಿದ ರೀತಿ, ಯಾವ ಕ್ಷಣದಲ್ಲೂ ಅಪಮೌಲ್ಯಗಳೊಂದಿಗೆ ರಾಜಿಮಾಡಿಕೊಳ್ಳದ ಛಲ ಅವನನ್ನು ಮರ್ಯಾದಾ ಪುರುಷೋತ್ತಮನನ್ನಾಗಿಸಿದವು.

ಕೃಷ್ಣ ಎದುರಿಸಿದ ಸಮಸ್ಯೆಗಳು ಸಣ್ಣವೆ? ಹುಟ್ಟಿದಾಕ್ಷಣ ತಾಯಿಯಿಂದ ಬೇರ್ಪಟ್ಟು, ಗೋಪಗೋಪಿಯರ ನಡುವೆ ಬೆಳೆದ ರಾಜಕುಮಾರ. ಯುದ್ಧಕಲೆ, ರಾಜನೀತಿಯನ್ನು ಕಲಿಯಲು ಗುರುಕುಲಕ್ಕೆ ಮೊದಲು ಹೋಗಲೇ ಇಲ್ಲ. ಸೋದರಮಾವನೇ ಅವನನ್ನು ಕೊಲ್ಲಲು ಏನೇನು ಹವಣಿಕೆ ಮಾಡಲಿಲ್ಲ? ಸದಾ ಸಾವಿನ ನೆರಳಲ್ಲೇ ಬದುಕಿದವನು. ಅವನನ್ನು ಕೊಲ್ಲಲು ಕಂಸ, ಜರಾಸಂಧ, ಕಾಲಯವನ, ನರಕಾಸುರ, ಶಿಶುಪಾಲ ಇವರೆಲ್ಲರ ದಂಡೇ ಕಾದಿತ್ತು. ಕೊನೆಗೆ ಕೂಡ ಮಾನವ ಇತಿಹಾಸ ಕಂಡರಿಯದ ಮಹಾಭೀಷಣ ದಾಯಾದಿ ಯುದ್ಧಕ್ಕೆ ಆತ ದೀಕ್ಷಿತನಾಗಬೇಕಾಯಿತು. ಇವೆಲ್ಲ ಬವಣೆಗಳು ಎಂದು ಆತ ಹೆದರಿದನೆ? ಕರ್ತವ್ಯ ವಿಮುಖನಾದನೆ? ಇಲ್ಲ. ಬದಲಾಗಿ ಭೀಕರ ಯುದ್ಧದ ನಡುವೆ ನಿಂತು ಭಗವದ್ಗೀತೆಯನ್ನು ಬೋಧಿಸಿದ. ದೇವರಾದ.

ದೇಹವಿದ್ದವರಿಗೆಲ್ಲ ಸಮಸ್ಯೆಗಳು ಇದ್ದದ್ದೇ. ಅವರಿಗೆಲ್ಲವೂ ದಕ್ಕಿದ್ದು ಪಿಂಡಮಾತ್ರದ ಅನ್ನ. ಆದರೆ ಯಾರು ದೇಹದ ಮಿತಿಗಳನ್ನು ದಾಟಿ ಸಾಗಿದರೋ ಅವರು ಶಾಶ್ವತರಾದರು. ಯಾರು ಹೆದರಿ ಕೊರಗಿದರೋ ಅವರು ತಮ್ಮ ಬದುಕನ್ನು ಭಂಡಬಾಳು ಎಂದು ಕರಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT