ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಾಗಿದ ಬದುಕು

Last Updated 17 ಮಾರ್ಚ್ 2022, 20:30 IST
ಅಕ್ಷರ ಗಾತ್ರ

ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ |
ಕಹಿಯೊಗರು ಕಾಯಿ, ಮಿಡಿತನದೊಳದುಮುಗಿಯೆ ||
ಸಿಹಿಯಹುದು ಕಾಯಿ ಹಣ್ಣಾಗೆ, ಜೀವಿತವಂತು |
ಮಹಿಮೆಗೊಳುವುದು ಮಾಗೆ – ಮಂಕುತಿಮ್ಮ|| 587 ||

ಪದ-ಅರ್ಥ: ಭಂಡತನವಿಹದಿ=ಭಂಡತನವು+ಇಹದಿ, ಕಹಿಯೊಗರು=ಕಹಿ+ಒಗರು, ಮಿಡಿತನದೊಳದು=ಮಿಡಿತನದೊಳು (ಮಾಗದ ಹಂತದಲ್ಲಿ) + ಅದು, ಜೀವಿತವಂತು=ಜೀವತವು+ಅಂತು, ಮಾಗೆ=ಮಾಗಿದರೆ

ವಾಚ್ಯಾರ್ಥ: ಇಹಲೋಕದ ಬಾಳು ಯಾವ ಸಾಧನೆಯಿಲ್ಲದೆ ಮುಗಿದರೆ ಅದು ಭಂಡತನದ ಬಾಳೇ. ಮರದಲ್ಲಿಯ ಕಾಯಿ ಮಿಡಿತನದಲ್ಲೇ ಉದುರಿ ಹೋದರೆ ಅದು ಕೇವಲ ಕಹಿ ಮತ್ತು ಒಗರು. ಅದೇ ಕಾಯಿ ಹಣ್ಣಾದರೆ ಸಿಹಿಯಾಗುತ್ತದೆ. ಮನುಷ್ಯ ಜೀವನವೂ ಅಂತೆಯೇ. ಅದು ಮಾಗಿದಂತೆ ಅದರ ಮಹಿಮೆ ಹೆಚ್ಚಾಗುತ್ತದೆ.

ವಿವರಣೆ: ಎಷ್ಟು ಸುಂದರವಾದ ದೃಷ್ಟಾಂತದ ಮೂಲಕ ಬದುಕು ಹರಳುಗಟ್ಟುವುದನ್ನು ಈ ಚೌಪದಿ ವಿವರಿಸುತ್ತದೆ.

ಮೊರೊಕ್ಕೋದ ಕುಗ್ರಾಮದಲ್ಲಿ ಜನಿಸಿದವಳು ನಜತ್. ಆಕೆಯ ತಂದೆ-ತಾಯಿಯರಿಗೆ ಏಳು ಮಕ್ಕಳು. ಈಕೆ ಎರಡನೆಯವಳು. ಬಡತನ ಪರಿವಾರಕ್ಕೇ ಅಂಟಿತ್ತು. ಹುಡುಗಿ ಮಾಡುತ್ತಿದ್ದ ಕೆಲಸ ಒಂದೇ, ಅದು ಕುರಿ ಕಾಯುವುದು. ಕೆಲ ವರ್ಷಗಳ ನಂತರ ಬಡತನದ ಬವಣೆಯನ್ನು ತಡೆದುಕೊಳ್ಳಲಾರದೆ ಆಕೆಯ ತಂದೆ ಫ್ರಾನ್ಸ್‌ಗೆ ವಲಸೆ ಬಂದರು. ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ. ಇದು ಆಕೆಯ ಬಾಲ್ಯದ ಸ್ಥಿತಿ. ಅದು ಹಾಗೆಯೇ ಮುಂದುವರೆದಿದ್ದರೆ ಅದೊಂದು ಅಸಫಲ ಜೀವನವೆಂದೇ ಜನ ಭಾವಿಸುತ್ತಿದ್ದರು. ಅದನ್ನು ಕಗ್ಗ ಭಂಡತನದ ಬಾಳು ಎನ್ನುತ್ತದೆ. ಆದರೆ ನಜತ್‌ಳ ಜೀವನ ಅಲ್ಲಿಗೇ ನಿಲ್ಲಲಿಲ್ಲ.

ಫ್ರಾನ್ಸ್‌ನಲ್ಲಿ ಒಂದು ಶಾಲೆಗೆ ಸೇರಿದಳು. ಫ್ರೆಂಚ್ ಬಾರದೆ ಕಷ್ಟಪಡುತ್ತಿದ್ದ ಹುಡುಗಿ ಸತತ ಪ್ರಯತ್ನದಿಂದ ಫ್ರೆಂಚ್ ಭಾಷೆಯ ಮೇಲೆ ಪ್ರಭುತ್ವವನ್ನು ಪಡೆದಳು. ವಿಶೇಷ ವಿದ್ಯಾರ್ಥಿವೇತನವನ್ನು ಪಡೆದು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಳು. ವಲಸಿಗಳಾಗಿ ಫ್ರಾನ್ಸ್‌ಗೆ ಬಂದ ನಜತ್ ರಾಜಕೀಯದಿಂದಲೇ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ತೀರ್ಮಾನಿಸಿ ರಾಜಕೀಯದತ್ತ ವಾಲಿದಳು. ತನ್ನ ಸಹಪಾಠಿಯಾಗಿದ್ದ ಬೋರಿಸ್ ವ್ಯಾಲ್ಯೂಡ್‌ರನ್ನು ಮದುವೆಯಾದಳು. ಸೋಷಿಯಲಿಸ್ಟ್ ಪಕ್ಷದ ಸದಸ್ಯೆಯಾದಳು. ರಾಜಕೀಯ ಮೆಟ್ಟಿಲುಗಳನ್ನು ಏರುತ್ತ 2012ರಲ್ಲಿ ಮಹಿಳಾ ವ್ಯವಹಾರ ಸಚಿವೆಯಾಗಿ ಫ್ರೆಂಚ್ ಕ್ಯಾಬಿನೆಟ್‌ಗೆ ಆಯ್ಕೆಯಾದಳು. 2014ರಲ್ಲಿ ಕ್ಯಾಬಿನೆಟ್ ಪುನರ್‌ರಚನೆಯಾದಾಗ ಆಕೆ ದೇಶದ ಶಿಕ್ಷಣ ಸಚಿವೆಯಾದಳು. ಇದು ತೀರ ಕೆಳಸ್ತರದಿಂದ ವಲಸೆ ಹೊಂದಿ ಬಂದ ಬಾಲಕಿಯ ಯಶೋಗಾಥೆ.

ಬಾಲ್ಯದಲ್ಲಿದ್ದಂತೆಯೇ ಜೀವನ ಮುಂದುವರೆಯಲಿಲ್ಲ. ಅದು ಮಾಗುವಿಕೆಯನ್ನು ಕಂಡಿತು. ಅಂತೆಯೇ ಆಕೆಯ ಸಾಧನೆ, ಮಹಿಮೆ ಜಗತ್ತಿಗೆ ಸಾಬೀತಾಯಿತು. ಕಗ್ಗದ ಚಿಂತನೆ ಅದೇ. ಮರದಲ್ಲೊಂದು ಪೀಚು ಕಾಯಿ, ಅದನ್ನು ಕಿತ್ತಿದರೆ ಅದರ ಬದುಕು ಮುಗಿಯಿತು. ರುಚಿಯೋ ಓಗರು, ಕಹಿ. ಆದರೆ ಅದು ಮರದಲ್ಲೇ ಉಳಿದಿದ್ದರೆ, ಅದು ಮರದ ಸಾರಸರ್ವಸ್ವವನ್ನು ಹೀರಿಕೊಂಡು, ರಸದುಂಬಿ ಹಣ್ಣಾಗುತ್ತದೆ, ಸಿಹಿಯಾಗುತ್ತದೆ. ಮನುಷ್ಯನ ಬದುಕೂ ಹಾಗೆಯೇ. ಅದು ಮಾಗಬೇಕು. ಅನುಭವದಿಂದ, ಓದಿನಿಂದ, ಹಿರಿಯರ ಸಂಪರ್ಕದಿಂದ, ಲೋಕದರ್ಶನದಿಂದ. ಅದರಿಂದ ವ್ಯಕ್ತಿತ್ವ ದೊಡ್ಡದಾಗುತ್ತದೆ. ಅದರ ಮಹಿಮೆ ಪ್ರಪಂಚಕ್ಕೆ ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT