ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎರಡು ಬೆಂಕಿಗಳು

Last Updated 7 ಜುಲೈ 2022, 19:30 IST
ಅಕ್ಷರ ಗಾತ್ರ

ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು|
ಮನವ ಸುಡುವುರಿಯಿಂದ ದೂರ ನೀಂ ನಿಲ್ಲು||
ತನುವಿಗುಪಕೃತಿಗೆಯ್ಪ ಭರದಿ ನೀನಾತುಮದ|
ಅನುನಯವ ಕೆಡಿಸದಿರು – ಮಂಕುತಿಮ್ಮ ||667||

ಪದ-ಅರ್ಥ: ಬೆಂಕಿಯುರಿಯನಾರಿಸೆ=ಬೆಂಕಿಯ+ಉರಿಯ+ಆರಿಸೆ(ಆರಿಸಲು), ಸುಡುವುರಿಯಿಂದ=ಸುಡುವ+ಉರಿಯಿಂದ, ತನುವಿಗುಪಕೃತಿಗೆಯ್ಪ=ತನುವಿಗೆ+ಉಪಕೃತಿ(ಉಪಕಾರ)+ಗೆಯ್ಪ(ಮಾಡುವ), ನೀನಾತುಮದ=ನೀನು+ಆತುಮದ(ಆತ್ಮದ), ಅನುನಯ=ಹೊಂದುವಿಕೆ, ಹದ.

ವಾಚ್ಯಾರ್ಥ: ಮನೆಗೆ ಹೊತ್ತಿದ ಬೆಂಕಿಯನ್ನು ಆರಿಸಲು ನೀನು ನುಗ್ಗು ಆದರೆ ಮನಸ್ಸನ್ನು ಸುಡುವ ಬೆಂಕಿಯಿAದ ದೂರ ನಿಲ್ಲು. ದೇಹಕ್ಕೆ ಉಪಕಾರ ಮಾಡುವ ಆತುರದಲ್ಲಿ ಆತ್ಮದ ಆದರಣೆಯನ್ನು, ಹದವನ್ನು ಮರೆಯಬೇಡ.

ವಿವರಣೆ: ಇದೊಂದು ಆಫ್ರಿಕನ್ ಕಥೆ. ಜೋ ಒಬ್ಬ ಅರಣ್ಯ ರಕ್ಷಕ. ಅವನು ಅಗ್ನಿಶಾಮಕ ದಳದ ನಾಯಕನೂ ಹೌದು. ಅವನು ಕಾಡನ್ನು ತನ್ನ ಮನೆಯಂಗಳದಂತೆ ಜೋಪಾನವಾಗಿ ಕಾಯ್ದುಕೊಂಡಿದ್ದಾನೆ. ಸತತವಾಗಿ ಕಾಡನ್ನು ಸುತ್ತಿ ಸುತ್ತಿ, ಅಲ್ಲಿದ್ದ ವನ್ಯಮೃಗಗಳಿಗೆ ಯಾವ ತೊಂದರೆಯೂ ಆಗದಂತೆ, ಅವುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ, ರೋಗ ರುಜಿನಗಳು ಹಬ್ಬದಂತೆ ಜಾಗರೂಕತೆ
ವಹಿಸಿದ್ದಾನೆ. ಅವನು ಸದಾಕಾಲ ಇರುವುದು ಕಾಡಿನಲ್ಲೇ. ಮನೆಗೆ ಹೋಗುವುದೇ ಅಪರೂಪ. ಇಷ್ಟಾದರೂ ಒಂದು ಸಲ ಕಾಡಿಗೆ ಬೆಂಕಿ ಬಿತ್ತು. ಜೋ ತಕ್ಷಣ ಕಾರ್ಯಪ್ರವೃತ್ತನಾದ. ನೀರು ತುಂಬಿದ ವಾಹನಗಳನ್ನು ತೆಗೆದುಕೊಂಡು ನುಗ್ಗಿದ. ಬೆಂಕಿ, ಗಾಳಿಯೊಂದಿಗೆ ಸೇರಿ ಭೋರಿಡುತ್ತಿದೆ. ಕಣ್ಣಮುಂದೆಯೇ ಕಾಡಿನ ಮರಗಳು ಸುಟ್ಟು ಬೂದಿಯಾಗುತ್ತಿವೆ.ಸ್ವಲ್ಪ ಮುಂದೆಯೇ ಆನೆಗಳ ವಾಸ. ಅದರ ಬಲಭಾಗದಲ್ಲಿ ಅನೇಕ ಕಾಡೆಮ್ಮೆಗಳಿವೆ. ಈ ಬೆಂಕಿಯಲ್ಲಿ ಅದೆಷ್ಟು ಪ್ರಾಣಿಗಳು, ಪಕ್ಷಿಗಳು ಬೆಂದುಹೋಗುತ್ತವೋ ಎಂಬ ಕಾಳಜಿಯೊಂದಿಗೆ ಜೋ ತನ್ನ ಸಹಚರರೊಂದಿಗೆ ವಾಹನಗಳೊಡನೆ ಬೆಂಕಿಯೊಳಗೆ ನುಗ್ಗುವುದರೊಂದಿಗೆ ಎರಡು ಹೆಲಿಕಾಪ್ಟರ್‌ಗಳನ್ನು ತರಿಸಿ ಮೇಲಿನಿಂದ ನೀರನ್ನು ಸುರಿಸುವಂತೆ ಮಾಡಿದ. ಐದು ತಾಸುಗಳ ಸತತ ಹೋರಾಟದ ನಂತರ ಬೆಂಕಿ ನಂದಿತು. ಜೋ ನಿರಾಳನಾದ. ಆದರೆ ಈ ಉತ್ಸಾಹದ ಕಾರ್ಯದಲ್ಲಿ ಅವನ ಕೈಗವಸುಗಳು ಸುಟ್ಟು ಹೋಗಿ ಅವನ ಎಡಗೈ ಬಹುಪಾಲು ಸುಟ್ಟುಹೋಗಿತ್ತು. ಆತ ಆಫೀಸಿಗೆ ಬಂದ. ಅವನಿಗೊಂದು ಫೋನ್ ಬಂತು. ಜೋ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವನ ಸಹೋದ್ಯೋಗಿಗಳು, ಅವನು ಕೈನೋವಿನಿಂದ ಅಳುತ್ತಿದಾನೆ ಎಂದುಕೊಂಡು ಸಾಂತ್ವನ ಹೇಳುತ್ತ ಕೈಗೆ ಮುಲಾಮು ಹಚ್ಚತೊಡಗಿದರು. ಆತ ಹೇಳಿದ, ‘ನನ್ನ ದೇಹಕ್ಕಾದದ್ದು ಏನೂ ಅಲ್ಲ, ಅದು ಒಂದು ವಾರದಲ್ಲಿ ಗುಣವಾದೀತು. ಆದರೆ ಹೃದಯ ಹೊತ್ತಿ ಉರಿಯುತ್ತಿದೆ. ನನ್ನ ಒಬ್ಬನೇ ಮಗ, ನಶೆಯ ಹಾದಿ ಹಿಡಿದು ತನ್ನ ತಾಯಿಯನ್ನು ಹೊಡೆದು, ತಾನೂ ಮಹಡಿಯ ಮೇಲಿಂದ ಹಾರಿ, ಆಸ್ಪತ್ರೆ ಸೇರಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಬೆಂಕಿಯನ್ನು ಹೇಗೆ ಆರಿಸಲಿ?’

ಕಗ್ಗದ ಚಿಂತನೆ ಇದೇ. ಮನೆಗೆ, ಭೌತಿಕ ವಸ್ತುಗಳಿಗೆ ಬೆಂಕಿ ಹೊತ್ತಿದರೆ ಅದನ್ನು ಆರಿಸಲು ಮುನ್ನುಗ್ಗು ಆದರೆ ಮನವನ್ನು ಸುಡುವಂಥ ಬೆಂಕಿಯಿಂದ ದೂರವಿರು. ಮನಸ್ಸನ್ನು ಸುಡುವ ಯಾವ ಕಾರ್ಯವನ್ನು ಮಾಡಬೇಡ. ದೇಹಕ್ಕೆ ಒಳ್ಳೆಯದನ್ನು ಮಾಡುವ ಆತುರದಲ್ಲಿ ಆತ್ಮಸುಖವನ್ನು, ಮನಸ್ಸಿನ ನೆಮ್ಮದಿಯನ್ನು ಮರೆಯಬೇಡ. ದೇಹ ಮತ್ತು ಆತ್ಮ ಇವೆರಡರ ತೃಪ್ತಿಯೇ ಬದುಕಿಗೆ ಹಿತವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT