ಮಂಗಳವಾರ, ಆಗಸ್ಟ್ 9, 2022
23 °C

ಬೆರಗಿನ ಬೆಳಕು: ಸಂಬಂಧಗಳಲ್ಲಿ ತಾರತಮ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನೂರಾರು ಸರಕುಗಳು ಜೀವಿತದ ಸಂತೆಯಲಿ |
ಊರಿನವು, ಕೇರಿಯವು, ಮನೆಯವಾತ್ಮದವು ||
ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ, ಬೇರೆ ಬೆಲೆ |
ತಾರತಮ್ಯವೆ ತತ್ವ – ಮಂಕುತಿಮ್ಮ || 666 ||

ಪದ-ಅರ್ಥ: ಮನೆಯವಾತ್ಮದವು=ಮನೆಯವು+ಆತ್ಮದವು, ಪುರುಳ್ಗೆ=ವಸ್ತುಗಳಿಗೆ, ಸತ್ವಕ್ಕೆ, ತಾರತಮ್ಯ=ವ್ಯತ್ಯಾಸ, ವೈವಿಧ್ಯತೆ

ವಾಚ್ಯಾರ್ಥ: ಬದುಕಿನ ಸಂತೆಯಲ್ಲಿ ನೂರಾರು ವಸ್ತುಗಳು, ಸಂಬಂಧಗಳು. ಅವು ಊರಿನವು, ಕೇರಿಯವು, ಮನೆಯವು ಮತ್ತು ಆತ್ಮದವು. ಈ ಎಲ್ಲ ಸರಕುಗಳ ನೆಲೆ ಬೇರೆ, ಬೆಲೆ ಬೇರೆ. ಈ ತಾರತಮ್ಯವೇ ಬದುಕಿನ ತತ್ವ.

ವಿವರಣೆ: ಸಂತೆಯಲ್ಲಿ ಸಾವಿರಾರು ಸಾಮಾನುಗಳಿವೆ. ಎಲ್ಲವೂ ಒಂದೇ ಬೆಲೆಯನ್ನು ಹೊಂದಿಲ್ಲ. ಅವು ದೊರೆಯುವ ರೀತಿ, ಪ್ರಮಾಣ, ಜನರ ಅವಶ್ಯಕತೆ ಅನುಸರಿಸಿ ಅವುಗಳ ಬೆಲೆ ತೀರ್ಮಾನವಾಗುತ್ತದೆ. ಒಂದು ಕಡೆಗೆ ಬೆಲ್ಲ ಎಂಭತ್ತು ರೂಪಾಯಿಗೆ ಕಿಲೋಗ್ರಾಂ. ಮುಂದೆ ಅಂಥದೇ ಬೆಲ್ಲಕ್ಕೆ ಇನ್ನೂರು ರೂಪಾಯಿ! ಯಾಕೆಂದು ಕೇಳಿದರೆ ಇದು ಆರ್ಗಾನಿಕ್ ಬೆಲ್ಲ, ತಯಾರಿಸುವ ಖರ್ಚು ಹೆಚ್ಚು, ಆದ್ದರಿಂದ ಹೆಚ್ಚಿನ ಬೆಲೆ ಎಂದರು.

ಇವು ಬಳಸುವ ವಸ್ತುಗಳು. ಇನ್ನು ಬದುಕಿನಲ್ಲಿ ಬರುವ ಸಂಬಂಧಗಳೂ ಹಾಗೆಯೇ. ಇವು ಮನೆಯಿಂದ ಪ್ರಾರಂಭವಾಗುತ್ತವೆ. ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ, ಸೋದರಮಾವ, ಅತ್ತೆ, ಹೆಂಡತಿ ಹೀಗಾಗಿ ನೂರಾರು ಸಂಬಂಧಗಳು. ಪ್ರತಿಯೊಂದು ಜೀವಕ್ಕೆ ಎಲ್ಲ ಸಂಬಂಧಗಳು ಒಂದೇ ರೀತಿಯಾಗಿವೆಯೇ? ಎಲ್ಲವೂ ಅಷ್ಟೇ ತೀವ್ರತೆಯ ಬಂಧಗಳೇ? ಇಲ್ಲ. ಹಾಗಿರುವುದೂ ಸಾಧ್ಯವಿಲ್ಲ. ಈ ವೃತ್ತದ ನಂತರ ಬರುವುವು ಕೇರಿಯ ಸಂಬಂಧಗಳು, ಆಮೇಲೆ ಊರಿನ ಜನರ ಸಂಬಂಧಗಳು, ಹಾಗೆಯೇ ನಮ್ಮ ದೇಶ, ನಮ್ಮ ಗ್ರಹ ಹೀಗೆ ಸಂಬಂಧಗಳ ಸರಪಳಿ ಬೆಳೆಯುತ್ತಲೇ ಹೋಗುತ್ತದೆ. ವಿಶ್ವದಲ್ಲಿ ಬದುಕಿದ ನನಗೆ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಸಂಬಂಧಗಳಿವೆ. ಕೆಲವು ಗಾಢವಾದವು, ಕೆಲವು ಅಳ್ಳಕವಾದವು.

ಸೀತಾ ದೇವಿಯನ್ನು ರಾಮ ಒಂದು ರೀತಿ ನೋಡಿದ, ಅವನಿಗೆ ಪ್ರಿಯಳಾದ ಪತ್ನಿ ಕಂಡಳು. ಲಕ್ಷ್ಮಣನೂ ಸೀತಾದೇವಿಯನ್ನು ಕಂಡ. ಅವನಿಗೆ ಆಕೆ ತಾಯಿಯಂತೆ ಕಂಡಳು. ದಶರಥ, ಕೌಸಲ್ಯೆ, ಜನಕರಾಜ, ಭರತ, ಶತ್ರುಘ್ನರು ಎಲ್ಲರೂ ಸೀತಾದೇವಿಯನ್ನು ಬೇರೆ ಬೇರೆ ರೀತಿಯಿಂದಲೇ ಕಂಡರು. ಹನುಮಂತನಿಗೆ ತಾಯಿಯನ್ನು ನೋಡಿದಂತೆ ಭಾಸವಾಯಿತು. ಲಕ್ಷ್ಮಣನಿಗೆ ಕಂಡ ಸೀತೆ ರಾಮನಿಗೆ ಕಾಣಲಿಲ್ಲ, ರಾಮನಿಗೆ ಕಂಡ ಸೀತೆ ರಾವಣನಿಗೆ ಕಾಣಲಿಲ್ಲ. ಆಕೆ ಎಲ್ಲರಿಗೂ ಬೇರೆ ಬೇರೆಯಾಗಿಯೇ ಕಂಡಳು. ನಮ್ಮ ಜೀವನದಲ್ಲಿಯೂ, ಪ್ರತಿಯೊಬ್ಬರೂ ಹೀಗೆ ಬೇರೆ ಬೇರೆಯವರಿಗೆ ಬೇರೆಯಾಗಿಯೇ ಕಾಣುತ್ತೇವೆ.

ಇವೆಲ್ಲ ಊರಿನ, ಕೇರಿಯ, ಮನೆಯ ಸಂಬಂಧಗಳಾದರೆ, ಇನ್ನೊಂದು ಆತ್ಮದ ಸಂಬಂಧವಿದೆ. ಅದು ಪರಮಾತ್ಮನೊಂದಿಗೆ. ಕರ್ಮಶೀಲನಾದ ವ್ಯಕ್ತಿಗೆ ದೇವರು ‘ಸರ್ವಕರ್ತ’. ಭಕ್ತನಿಗೆ ಅವನು ‘ರಸಸಾಗರ’. ಯೋಗಿಗೆ ಅವನು ‘ಕೇವಲ’. ಜ್ಞಾನಿಗೆ ದೇವರು ‘ಅನಂತ ಚೇತನ’. ಅವರವರಿಗೆ ಅವರವರ ಮಾರ್ಗಪ್ರಿಯ. ಮತ್ತೆ ಕೆಲವರಿಗೆ ದೇವರೆಂಬುದು ಮನುಷ್ಯನ ಕಲ್ಪನೆ. ಭಕ್ತನಿಗೆ ಭಗವಂತನ ರೂಪ, ಸಾಕಾರ ಬೇಕು. ಯೋಗಿಗೆ ನಿರ್ವಿಕಲ್ಪವೇ ಸರಿ. ಜ್ಞಾನಿಗೆ ಮಹಾಪ್ರಜ್ಞೆಯ ರೂಪ ಸರಿಹೊಂದುತ್ತದೆ. ಇವೆಲ್ಲ ದೇವನ ವಿಭಿನ್ನ ರೂಪಗಳೇ. ಆಯಾ ರೂಪಗಳಲ್ಲೇ ಅವರ ಸಾಧನೆ ಮುಂದುವರೆಯುತ್ತದೆ.

ಹೀಗೆ ಬದುಕಿನ ಸಂತೆಯಲ್ಲಿ ವಸ್ತುಗಳ, ಸಂಬಂಧಗಳ ಬೆಲೆಯಲ್ಲಿ, ನೆಲೆಯಲ್ಲಿ ವೈವಿಧ್ಯತೆ, ವ್ಯತ್ಯಾಸ ಕಾಣುತ್ತಲೇ ಹೋಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.