ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು-ಬುದ್ಧಿಯ ನಂಟು

Last Updated 27 ಜೂನ್ 2019, 19:45 IST
ಅಕ್ಷರ ಗಾತ್ರ

ಹಿಂದೆ ಜನಸಂಧ ವಾರಾಣಸಿಯ ರಾಜನಾಗಿದ್ದಾಗ ಬೋಧಿಸತ್ವ ಅವನ ಪಟ್ಟದ ರಾಣಿಯ ಗರ್ಭದಿಂದ ಹಿರಿಯ ಪುತ್ರನಾಗಿ ಜನಿಸಿದ. ಹುಟ್ಟಿದಾಗಲೇ ಅವನ ದೇಹ ಚರ್ಯೆ ಅದ್ಭುತವಾಗಿತ್ತು. ಅವನ ಇಡೀ ದೇಹ ಬಂಗಾರವರ್ಣದ ಗಾಜಿನಂತೆ ಹೊಳೆಯುತ್ತಿತ್ತು. ಆತನ ಬುದ್ಧಿಯೂ ಅಷ್ಟೇ ತೀಕ್ಷ್ಣ. ಏಳು ವರ್ಷಗಳಾಗುವುದರಲ್ಲಿ ಆತ ಸಕಲವಿದ್ಯೆಗಳಲ್ಲಿ ಪಾರಂಗತನಾಗಿದ್ದ. ಆದರೆ ಅದೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ. ಮಂತ್ರಿಗಳೆಲ್ಲ ಮುಂದಿನ ರಾಜ ಯಾರಾಗಬೇಕು ಎಂದು ಚಿಂತಿಸಿದರು. ಇಷ್ಟು ಚಿಕ್ಕ ವಯಸ್ಸಿನ ಹುಡುಗನನ್ನು ರಾಜನನ್ನಾಗಿ ಮಾಡುವುದು ಸರಿಯೆ? ಅವನಿಗೆ ಆ ಶಕ್ತಿ ಇದೆಯೆ? ಎಂದೆಲ್ಲ ಅವರ ಆಲೋಚನೆಯಾಗಿತ್ತು. ಆದರೆ ರಾಜಕುಮಾರನ ತಾಯಿ ಮಗನ ಪರವಾಗಿ ನಿಂತು, ಅವನ ಬುದ್ಧಿಮತ್ತೆ ಯಾವ ತರುಣನಿಗೂ ಕಮ್ಮಿ ಇಲ್ಲದ್ದು ಎಂದು ವಾದಿಸಿದಾಗ ಮಂತ್ರಿಗಳು ಅವನ ನಾಯಕತ್ವವನ್ನು ಪರೀಕ್ಷಿಸಲು ಕೆಲವು ಸಂದರ್ಭಗಳನ್ನು ಸೃಷ್ಟಿಸುತ್ತಾರೆ. ಅವೆಲ್ಲ ಪರೀಕ್ಷೆಗಳಲ್ಲಿ, ಮಂತ್ರಿಗಳ ನಿರೀಕ್ಷೆಯನ್ನು ಮೀರಿ ರಾಜಕುಮಾರ ಪ್ರಬುದ್ಧತೆಯನ್ನು ತೋರುತ್ತಾನೆ. ಆಗ ಅವನಿಗೆ ಪಟ್ಟಾಭಿಷೇಕವಾಗುತ್ತದೆ.

ರಾಜ ಜನಸಂಧನ ಮಂತ್ರಿಯಾಗಿದ್ದ ಗಾಮಣೀಚಂಡನಿಗೆ ಯಾಕೋ ಇದು ಸರಿ ಕಾಣುವುದಿಲ್ಲ. ಹಿರಿಯರಿಗೆ ಸೇವೆ ಸಲ್ಲಿಸಿದ ಅವನಿಗೆ ಈ ಬಾಲಕನ ಸೇವೆ ಮಾಡುವುದು ಹಿಡಿಸದೇ ರಾಜ್ಯ ಬಿಟ್ಟು ತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿ ಅವನದೇ ಆದ ಒಂದಷ್ಟು ಹೊಲವಿದೆ. ಆತ ಸಾಮಾನ್ಯರಂತೆ ಒಕ್ಕಲುತನ ಮಾಡಲು ತೀರ್ಮಾನಿಸುತ್ತಾನೆ. ಅವನ ಹತ್ತಿರ ಎತ್ತುಗಳಿಲ್ಲ, ಉತ್ತಿ, ಬಿತ್ತುವುದು ಹೇಗೆ? ಮಳೆಯಾಗಿ ಜಮೀನು ಹದವಾದಾಗ ಮತ್ತೊಬ್ಬ ರೈತನ ಕಡೆಗೆ ಹೋಗಿ ಅವನ ಎರಡು ಎತ್ತುಗಳನ್ನು ಎರವಲಾಗಿ ಪಡೆಯುತ್ತಾನೆ. ಎರಡು-ಮೂರು ದಿನ ಹೊಲವನ್ನು ಉತ್ತಿ, ಬಿತ್ತಿ ನಂತರ ಎತ್ತುಗಳನ್ನು ಮೇಯಿಸಿ ಅವುಗಳ ಮಾಲಿಕರ ಕಡೆಗೆ ಬಿಡಲು ಹೋಗುತ್ತಾನೆ. ಆಗ ಆ ರೈತ ಹೆಂಡತಿ-ಮಕ್ಕಳೊಡನೆ ಊಟ ಮಾಡುತ್ತಿರುವುದನ್ನು ಕಂಡು ಮನೆಯೊಳಗೆ ಹೋಗದೆ ಹೊರಗೇ ನಿಲ್ಲುತ್ತಾನೆ. ಆದರೆ ಎತ್ತುಗಳಿಗೆ ಅಭ್ಯಾಸವಾದ ಮನೆಯಾದ್ದರಿಂದ ನೇರವಾಗಿ ಗೋದಲೆಗೆ ಹೋಗಿ ನಿಲ್ಲುತ್ತವೆ. ರೈತ ದಂಪತಿಗಳಿಗೆ ತೊಂದರೆ ಕೊಡುವುದೇಕೆಂದು ಗಾಮಣೀಚಂಡ ಹೇಳದೇ ತನ್ನ ಮನೆಗೆ ಮರಳಿದ.

ಅಂದು ರಾತ್ರಿ ಕಳ್ಳರು ರೈತರ ಮನೆಗೆ ನುಗ್ಗಿ ಅವನ ಎತ್ತುಗಳನ್ನು ಹೊಡೆದುಕೊಂಡು ಹೋಗಿಬಿಟ್ಟರು. ರೈತನಿಗೆ ಆ ವಿಷಯ ಗೊತ್ತಿದ್ದರೂ ಅದರ ಆಪಾದನೆಯನ್ನು ಗಾಮಣೀಚಂಡನ ಮೇಲೆ ಹೊರಿಸಬೇಕೆಂದು ಮರುದಿನ ಅವನ ಮನೆಗೆ ಬಂದು ತನ್ನ ಎತ್ತುಗಳನ್ನು ಮರಳಿಸಬೇಕೆಂದು ಕೇಳುತ್ತಾನೆ. ‘ನಿನ್ನೆಯೇ ತಮ್ಮ ಮನೆಗೆ ತಂದು ಬಿಟ್ಟೆನಲ್ಲ!’ ಎಂದು ಗಾಮಣೀಚಂಡ ಹೇಳಿದಾಗ, ‘ನೀನು ನನಗೆ ಹೇಳಿ ಒಪ್ಪಿಸಿ ಹೋದೆಯಾ?’ ಎಂದು ಮರುಪ್ರಶ್ನೆ ಮಾಡುತ್ತಾನೆ. ಆತ, ‘ಇಲ್ಲ’ ಎಂದೊಡನೆ ‘ನೀನು ರಾಜದೂತ’ ಎನ್ನುತ್ತಾನೆ. ಆ ಕಾಲದಲ್ಲಿ ಯಾರಾದರೂ ಮತ್ತೊಬ್ಬರಿಗೆ ‘ರಾಜದೂತ’ ಎಂದರೆ ಆತ ಅಪರಾಧಿ ಎಂದೇ ಲೆಕ್ಕ. ಅದರ ತೀರ್ಮಾನವನ್ನು ರಾಜನೇ ಮಾಡಬೇಕಿತ್ತು. ಆಗ ರಾಜದೂತರು ಗಾಮಣೀಚಂಡನನ್ನು ರಾಜನ ಕಡೆಗೆ ಕರೆದೊಯ್ಯುತ್ತಾರೆ. ದಾರಿಯಲ್ಲಿ ಆತನಿಗೆ ಅನೇಕ ಘಟನೆಗಳು ಜರುಗಿ ಅದರಲ್ಲಿ ಭಾಗಿಯಾದವರೆಲ್ಲ ಒಂದೊಂದು ಪ್ರಶ್ನೆ ಕೇಳಿ ಅವುಗಳಿಗೆ ರಾಜನಿಂದ ಉತ್ತರ ಪಡೆಯಲು ಕೇಳುತ್ತಾರೆ. ಕೊನೆಗೆ ರಾಜ ಗಾಮಣೀಚಂಡ ಮತ್ತು ಎತ್ತುಗಳನ್ನು ಕಳೆದುಕೊಂಡ ರೈತ ಕುಟುಂಬವನ್ನು ಕರೆಸುತ್ತಾನೆ. ಆಗಲೂ ರೈತ ತನ್ನ ಎತ್ತುಗಳನ್ನು ಚಂಡ ಮರಳಿಕೊಡಲಿಲ್ಲವೆಂದೇ ವಾದಿಸುತ್ತಾನೆ. ಆಗ ರಾಜ, ‘ನಿನ್ನ ತೋಟದಲ್ಲಿ ಕೆಲಸ ಮಾಡುವ ಕೂಲಿಯವ ಎತ್ತುಗಳು ಮನೆಗ ಬಂದದ್ದನ್ನು ಹೇಳಿದ್ದಾನೆ. ಆದರೆ ನೀನು ಮತ್ತು ನಿನ್ನ ಹೆಂಡತಿ ಮಾತ್ರ ನೋಡಲಿಲ್ಲ ಎನ್ನುತ್ತೀರಿ. ಆದ್ದರಿಂದ ನಿಮಗಿಬ್ಬರಿಗೂ ಕಣ್ಣು ಕಾಣುವುದಿಲ್ಲ. ಅವು ಇದ್ದು ಪ್ರಯೋಜನವೇನು? ಗಾಮಣೀಚಂಡ, ಇವರಿಬ್ಬರ ಕಣ್ಣುಗಳನ್ನು ಕಿತ್ತುಬಿಡು. ನಂತರ ಎತ್ತುಗಳ ಬೆಲೆಯಾಗಿ ಇಪ್ಪತ್ನಾಲ್ಕು ಕಾರ್ಷಾಪಣಗಳನ್ನು ಕೊಟ್ಟು ಬಿಡು’ ಎಂದು ತೀರ್ಮಾನ ನೀಡಿದ. ರೈತ ರಾಜನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ನಂತರ ರಾಜ ಗಾಮಣೀಚಂಡ ತಂದಿದ್ದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ನೀಡಿದ. ಗಾಮಣೀಚಂಡ ರಾಜನನ್ನು ಪುಟ್ಟ ಬಾಲಕ ಎಂದುಕೊಂಡು ತೊರೆದದ್ದಕ್ಕೆ ಕ್ಷಮೆ ಕೇಳಿ ಮತ್ತೆ ಅವನ ಮಂತ್ರಿಯಾಗಿ ಸೇವೆ ಮಾಡಿದ.

ಜ್ಞಾನಕ್ಕೂ ವಯಸ್ಸಿಗೂ ನಂಟು ಹಾಕುವುದು ಬೇಡ. ಕೆಲವರು ಮುದುಕರಾದರೂ ಬುದ್ಧಿ ಬಲಿಯುವುದಿಲ್ಲ ಕೆಲವರಿಗೆ ಸಣ್ಣ ವಯಸ್ಸಿಗೇ ಬುದ್ಧಿ ಮಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT