ಗುರುವಾರ , ಅಕ್ಟೋಬರ್ 29, 2020
19 °C

ಬೆರಗಿನ ಬೆಳಕು | ಗಂಜೀಫಿನ ಆಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜೀವಿಸಂಘವಿದೇನು? ಗಂಜೀಫಿನೆಲೆಕಟ್ಟು |
ದೈವ ಪೌರುಷ ಪೂರ್ವವಾಸನೆಗಳೆಂಬಾ ||
ಮೂವರದನಾಡುವರು, ಚದರಿಸುತೆ, ಬೆರಸಿಡುತೆ |
ನಾವೆಲ್ಲರಾಟದೆಲೆ – ಮಂಕುತಿಮ್ಮ || 327 ||

ಪದ-ಅರ್ಥ: ಜೀವಿಸಂಘವಿದೇನು=ಜೀವಿ(ಜೀವಗಳ)+ಸಂಘ+ಇದೇನು, ಗಂಜೀಫಿನೆಲಕಟ್ಟು=ಗಂಜೀಫಿನ (ಇಸ್ಪೀಟಿನ ತರಹದ ಆಟ)+ಎಲೆಕಟ್ಟು, ಮೂವರದನಾಡುವರು=ಮೂವರು+ಅದನು+ಆಡುವರು, ನಾವೆಲ್ಲರಾಟದೆಲೆ=ನಾವೆಲ್ಲರೂ+ಆಟದ+ಎಲೆ
ವಾಚ್ಯಾರ್ಥ: ಈ ಲೋಕದಲ್ಲಿ ಜೀವಿಗಳ ಗುಂಪು ಎಂದರೇನು? ಅದು ಗಂಜೀಫಿನ ಎಲೆಗಳ ಕಟ್ಟು ದೈವ, ಪೌರುಷ ಮತ್ತು ಪೂರ್ವಕರ್ಮಗಳ ವಾಸನೆ ಎನ್ನುವ ಮೂವರು ಅದನ್ನಾಡುತ್ತಾರೆ, ತಮಗೆ ಬೇಕಾದ ಹಾಗೆ ಎಲೆಗಳನ್ನು ಬೆರಸುತ್ತ, ಚದುರಿಸುತ್ತ. ನಾವೆಲ್ಲರೂ ಆ ಆಟದ ಎಲೆಗಳಿದ್ದಂತೆ

ವಿವರಣೆ: ಡಿ.ವಿ.ಜಿ ಈ ಕಗ್ಗದಲ್ಲಿ ಒಂದು ವಿಶೇಷವಾದ ಆಟವನ್ನು ಪರಿಚಯಿಸುತ್ತಾರೆ. ಗಂಜೀಫಾ ಎನ್ನುವುದು ಇಸ್ಪೀಟ್ ಆಟವನ್ನು ಹೋಲುವ ಭಾರತದ ಪ್ರಾಚೀನವಾದ ಆಟ. ಇದು ಮೂಲತಃ ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆಯಿತು ಎಂದು ಹೇಳುತ್ತಾರೆ. ಕರ್ನಾಟಕದ ಉತ್ತರಕನ್ನಡದ ಕುಮಠಾದಿಂದ ಗೋವಾದವರೆಗೆ ಅದು ಬಹಳ ಬಳಕೆಯಲ್ಲಿ ಇತ್ತಂತೆ. ಆ ಆಟದಲ್ಲಿ ಮೂರರಿಂದ ಮೂರೂವರೆ ಇಂಚು ವ್ಯಾಸವುಳ್ಳ ವೃತ್ತಾಕಾರದ ಎಲೆಗಳನ್ನು ಉಪಯೋಗಿಸುತ್ತಾರೆ. ಎಲೆಗಳ ಒಂದು ಬದಿಯಲ್ಲಿ ಸಾಂಕೇತಿಕವಾಗಿ ಬರೆದ ಸುಂದರ ಚಿತ್ರವಿರುತ್ತಿತ್ತು. ಇನ್ನೊಂದು ಬದಿ ಖಾಲಿ. ಈ ಗಂಜೀಫಾದಲ್ಲಿ 96 ರಿಂದ 360 ಎಲೆಗಳನ್ನು ಬಳಸಿ ಆಡುವ ವಿವಿಧ ಆಟಗಳಿದ್ದವು ಎಲೆಗಳ ಮೇಲೆ ಪೌರಾಣಿಕ ಪ್ರಸಂಗಗಳು, ಸಾಮಾಜಿಕ ಚಿತ್ರಣಗಳು, ಹೂಗಳು, ಪ್ರಾಣಿಗಳು, ಹೆಣ್ಣುಮಕ್ಕಳು ಇವುಗಳ ಚಿತ್ರವಿರುತ್ತಿದ್ದವು. ರಾಜರುಗಳು ದಂತದಿಂದ ಮಾಡಿದ ಎಲೆಗಳನ್ನು ಬಳಸುತ್ತಿದ್ದರಂತೆ. ಕನ್ನಡದ ರಘುಪತಿ ಭಟ್ ರವರು ಈ ಕಲೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಈ ಆಟವನ್ನು ಇಸ್ಪೀಟು ಆಟಕ್ಕೆ ಹೋಲಿಸಿಕೊಳ್ಳಬಹುದು. ಈ ಆಟವನ್ನು ಮೂವರು ಆಡುತ್ತಿದ್ದಾರೆ. ಒಟ್ಟಾಗಿದ್ದ ಎಲೆಗಳನ್ನು ಮೂವರಲ್ಲೂ ಹಂಚುತ್ತ ಹೋಗುತ್ತಾರೆ. ಆಟ ಮುಗಿಯುವ ಹೊತ್ತಿಗೆ ಯಾವ ಎಲೆ ಎಲ್ಲಿರುತ್ತದೋ? ಕೈಯಲ್ಲಿ ಇದ್ದ ಎಲೆಗೆ ತಾನು ಎಲ್ಲಿಗೆ ಹೋಗುತ್ತೇನೆ, ಯಾಕೆ ಹೋಗುತ್ತೇನೆ, ಮುಂದಿನ ನೆಲೆಯೆಲ್ಲಿ ಎಂಬುದು ತಿಳಿದಿಲ್ಲ. ಕಗ್ಗ, ಪ್ರಪಂಚದ ಜೀವಿಗಳ ಗುಂಪನ್ನು ಗಂಜೀಫಿನ ಎಲೆಗಳಿಗೆ ಹೋಲಿಸುತ್ತದೆ. ಮೂವರು ಆಟಗಾರರು–ದೈವ, ಪೌರುಷ ಮತ್ತು ಪೂರ್ವಾರ್ಜಿತ ಕರ್ಮಗಳು. ನಮ್ಮ ಪೂರ್ವಾರ್ಜಿತ ಕರ್ಮಗಳು ನಮ್ಮನ್ನು ಒಂದೆಡೆಗೆ ಸೆಳೆದರೆ, ಪೌರುಷ ಮತ್ತೊಂದೆಡೆಗೆ ಎಳೆಯುತ್ತದೆ. ಇವೆರಡರ ಆಟ ಇರುವಂತೆಯೇ, ದೈವ ಮತ್ತೊಂದು ತೀರ್ಮಾನ ಮಾಡುತ್ತದೆ. ಈ ಮೂರು ಶಕ್ತಿಗಳ ಏರಾಟ, ಎಳೆದಾಟಗಳಲ್ಲಿ ಎಲೆಗಳ ಪಾಡೇನು? ಅವುಗಳಿಗೇನಾದರೂ ತೀರ್ಮಾನ ಮಾಡುವ ಅವಕಾಶವಿದೆಯೆ? ಅವು ಎಲ್ಲಿರಬೇಕು, ಏಕಿರಬೇಕು ಎನ್ನುವುದನ್ನು ತೀರ್ಮಾನ ಮಾಡುವ ಶಕ್ತಿಗಳು ಅವು ಮೂರು. ಅವು ಎಲೆಗಳನ್ನು ಜೋಡಿಸುತ್ತ, ಚದುರಿಸುತ್ತ, ಸಂತೋಷ ಪಡುತ್ತವೆ. ಮನುಷ್ಯನ ಪೌರುಷ ಅವನನ್ನು ಎತ್ತರಕ್ಕೆ ಕರೆದೊಯ್ಯಬಹುದು, ಪೂರ್ವಾರ್ಜಿತ ಕರ್ಮ ಅವನನ್ನು ಮೇಲೆ, ಕೆಳಗೆ ಓಡಾಡಿಸುತ್ತದೆ. ಕೊನೆಗೆ ದೈವ ಅವನ ಜೀವನ ನಕಾಸೆಯನ್ನು ತೆರೆದಿಡುತ್ತದೆ. ಆ ಮೂವರ ಆಟದಲ್ಲಿ ಓಡಾಡುವ ಎಲೆ ಮನುಷ್ಯ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.