ಗುರುವಾರ , ಅಕ್ಟೋಬರ್ 29, 2020
19 °C

ಬೆರಗಿನ ಬೆಳಕು | ವ್ರತದ ಉದ್ದೇಶ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಮೂರು ಪ್ರಬಲ ರಾಷ್ಟ್ರಗಳ ನಡುವೆ ಒಂದು ದಟ್ಟವಾದ ಕಾಡು ಇತ್ತು. ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿ, ಬೆಳೆದು, ತಕ್ಕಶಿಲೆಯಲ್ಲಿ ಸಕಲ ಜ್ಞಾನವನ್ನು ಪಡೆದ. ದೊಡ್ಡವನಾದ ಮೇಲೆ ಕಾಮಭೋಗಗಳನ್ನು ತಿರಸ್ಕರಿಸಿ ಕಾಡಿಗೆ ಹೋಗಿ, ಆಶ್ರಮ ಕಟ್ಟಿಕೊಂಡು ನೆಲೆಸಿದ. ಅವನ ಆಶ್ರಮದ ಹತ್ತಿರದಲ್ಲೇ ಒಂದು ಮರದ ಮೇಲೆ ಪಾರಿವಾಳ ದಂಪತಿ ವಾಸವಾಗಿತ್ತು. ಬಿದಿರಿನ ಹುತ್ತದಲ್ಲಿ ಒಂದು ನಾಗರಹಾವು, ಪೊದೆಯೊಂದರಲ್ಲಿ ಕರಡಿ ವಾಸವಾಗಿದ್ದವು. ಈ ಪಕ್ಷಿ, ಪ್ರಾಣಿಗಳು ಋಷಿಯ ಆಶ್ರಮದ ಹತ್ತಿರದಲ್ಲೇ ಇದ್ದುದರಿಂದ ಮತ್ತು ಅವನ ಮಾತುಗಳನ್ನು ಕೇಳುತ್ತಿದ್ದುದರಿಂದ ಸಾತ್ವಿಕವಾಗಿದ್ದವು.

ಒಂದು ದಿನ ಪಾರಿವಾಳ ದಂಪತಿಗಳು ಹಾರುತ್ತಿರುವಾಗ ಒಂದು ಭಾರೀ ಗಿಡುಗ ಹಿಂದಿನಿಂದ ಬಂದು ಹೆಣ್ಣು ಪಾರಿವಾಳವನ್ನು ಕಚ್ಚಿಕೊಂಡು ಹಾರಿ ಹೋಯಿತು. ಗಂಡು ಪಾರಿವಾಳ ಕಿರುಚಿಕೊಂಡು ಅದರ ಹಿಂದೆ ಹಾರಿ ಹೆಂಡತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಯಿತು. ನಂತರ ವಿಯೋಗದ ರಾಗದಲ್ಲಿ ಬೇಯುತ್ತ, ‘ಈ ರಾಗ ನನಗೆ ಹೆಚ್ಚು ದುಃಖವನ್ನು ಕೊಡುತ್ತಿದೆ, ಈ ರಾಗವನ್ನು ಕಳೆದುಕೊಳ್ಳಬೇಕು’ ಎಂದುಕೊಂಡು ಉಪೋಸಥ ವ್ರತವನ್ನು ಮಾಡುತ್ತ ಆಶ್ರಮದ ಬಳಿಯೇ ಉಳಿದುಬಿಟ್ಟಿತು.

ನಾಗರಹಾವು ಆಹಾರ ಹುಡುಕುತ್ತಾ ಸುತ್ತುತ್ತಿರುವಾಗ ಹಳ್ಳಿಯ ದನಗಳು ಅಲ್ಲಿಗೆ ಮೇಯಲು ಬಂದವು. ಅವುಗಳ ಶಬ್ದಕ್ಕೆ ಹೆದರಿ ಹಾವು ಹತ್ತಿರದ ಹುತ್ತದಲ್ಲಿ ಸೇರಲು ಪ್ರಯತ್ನಿಸಿತು. ಆಗ ಒಂದು ದೊಡ್ಡ ಬಿಳಿಯ ಎತ್ತು ಹುತ್ತದ ಮೇಲೆ ಕಾಲೂರಿ, ಕೊಂಬಿನಿಂದ ಹುತ್ತದ ಮಣ್ಣನ್ನು ಎರಚತೊಡಗಿತು. ಅದರ ಒಂದು ಕಾಲು ಹಾವಿನ ಬಾಲದ ಮೇಲೆ ಬಿತ್ತು. ಗಾಬರಿಯಾದ ಹಾವು ಎತ್ತಿನ ಕಾಲಿಗೆ ಕಚ್ಚಿತು. ಎತ್ತು ಅಲ್ಲಿಯೇ ಬಿದ್ದು ಸತ್ತು ಹೋಯಿತು. ಅದನ್ನು ಕಂಡು ಹಳ್ಳಿಯ ಜನರೆಲ್ಲ ಬಂದು ಸೇರಿ, ದುಃಖಪಟ್ಟು, ಎತ್ತಿಗೆ ಪೂಜೆ ಮಾಡಿ, ಮಣ್ಣು ಮಾಡಿ ಹೋದರು. ತನ್ನಿಂದಾಗಿ ಒಂದು ಎತ್ತು ಸಾವಿಗೆ ಈಡಾಯಿತಲ್ಲ, ನನ್ನ ಕೋಪವನ್ನು ದಮನ ಮಾಡಿಕೊಳ್ಳಬೇಕು ಎಂದು ಅದೂ ಉಪೋಸಥ ವೃತ ಮಾಡಿ ಆಶ್ರಮದ ಹತ್ತಿರವೇ ವಾಸ ಮಾಡಿತು.

ಕರಡಿಗೆ ಅತಿ ಅಸೆ. ಅದು ಹಳ್ಳಿಯ ಜನರ ತೋಟಕ್ಕೆ ನುಗ್ಗಿತು. ಜನರು ದೊಡ್ಡ ಗುಂಪಿನಲ್ಲಿ ಬಂದು ಅದನ್ನು ಕಲ್ಲಿನಿಂದ, ಕೋಲಿನಿಂದ ಹೊಡೆದರು. ರಕ್ತಸುರಿಯುತ್ತಿದ್ದ ಮೈಯನ್ನು ಹೊತ್ತು ಕರಡಿ ಆಶ್ರಮಕ್ಕೆ ಬಂದು, ತನ್ನ ಅತಿಯಾಸೆಯಿಂದ ಹೀಗಾಯಿತು, ಅದನ್ನು ನಿಗ್ರಹಿಸಬೇಕೆಂದು ಉಪೋಸಥ ವ್ರತ ಮಾಡಿ ಕುಳಿತುಕೊಂಡಿತು.

ಹೀಗೆ ವಿಯೋಗದಿಂದ, ಕೋಪದಿಂದ, ಅತಿಯಾಸೆಯಿಂದ ಪಾರಾಗಲು ವ್ರತ ಮಾಡುತ್ತಿದ್ದ ಜೀವಿಗಳನ್ನು ಕಂಡು ಬೋಧಿಸತ್ವ, ‘ನೀವು ನಿಮ್ಮ ದಿನನಿತ್ಯದ ಕರ್ಮಗಳನ್ನು ಬಿಟ್ಟು ಯಾಕಾಗಿ ವ್ರತ ಮಾಡುತ್ತಿದ್ದೀರಿ?’ ಎಂದು ಕೇಳಿದ. ಅವು ತಮ್ಮ ತಮ್ಮ ಕಥೆಗಳನ್ನು ಹೇಳಿಕೊಂಡವು. ಬೋಧಿಸತ್ವ ಹೇಳಿದ, ‘ನೀವು ಮಾಡುವ ವ್ರತವೂ ಒಂದು ಅಪೇಕ್ಷೆಯಿಂದಲೇ. ಅದೂ ಒಂದು ರಾಗವೇ. ಆದ್ದರಿಂದ ಏನನ್ನು ಅಪೇಕ್ಷಿಸದೆ ಬದುಕಿನ ಉದ್ದಾರಕ್ಕೆ ವೃತಮಾಡಿ, ಮನದಲ್ಲಿ ಅಪರಾಧಿ ಭಾವ, ಮತ್ತೊಬ್ಬರ ಬಗ್ಗೆ ಕೋಪ, ದುಃಖ ಬೇಡ’. ಅವು ಹಾಗೆಯೇ ಮಾಡಿ ಕರ್ಮಾನುಸಾರ ಸ್ವರ್ಗಲೋಕವನ್ನು ಪಡೆದವು.

ಯಾವ ವ್ರತವೂ ಅಪೇಕ್ಷೆಯನ್ನು ಈಡೇರಿಸಲು ಸಾಧನವಲ್ಲ. ಅದು ಮನದ ಪರಿಪಾಕಕ್ಕೆ ಮಾಡಿಕೊಂಡ ಕ್ರಿಯೆ. ಈ ಪರಿಪಾಕ ಜೀವನಕ್ಕೆ ಒಂದು ಸೊಗವನ್ನು ತರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.