ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುತಿಮ್ಮನ ಕಗ್ಗ | ಗಾಳಿ ಸುದ್ದಿ

Last Updated 12 ಮೇ 2020, 3:00 IST
ಅಕ್ಷರ ಗಾತ್ರ

ಆಳನೀಳಗಳ ಕಾಣಲ್ಕಾಗಿಸದೆ ಮೊರೆವ |

ಬಾಳಕಡಲೊಳು ಮುಳುಗಿ ತಳದಿಂದಲೆದ್ದು ||
ಪೇಳುವರದಾರು ನ್ಯಾಯಾನ್ಯಾಯ ವಿವರಗಳ |
ಗಾಳಿಗಾಬರಿಯೆಲ್ಲ - ಮಂಕುತಿಮ್ಮ || 289 ||

ಪದ-ಅರ್ಥ: ಆಳನೀಳ=ಆಳ ಮತ್ತು ವಿಸ್ತಾರ, ಕಾಣಲ್ಕಾಗಿಸದೆ=ಕಾಣಲ್ಕೆ (ಕಾಣಲಿಕ್ಕೆ)+ಆಗಿಸದೆ, ಮೊರೆವ=ಭೋರ್ಗರೆಯುವ, ಪೇಳುವರದಾರು=ಪೇಳುವರು(ಹೇಳುವರು)+ಅದಾರು, ಗಾಳಿ ಗಾಬರಿ=ಗಾಬರಿ ಹುಟ್ಟಿಸುವ ಗಾಳಿಸುದ್ದಿಗಳು.

ವಾಚ್ಯಾರ್ಥ: ಆಳವಿಸ್ತಾರಗಳನ್ನು ಕಾಣಲಾಗದೆ ಬಾಳು ಎಂಬ ಮೊರೆಯುವ ಮಹಾ ಸಮುದ್ರದಲ್ಲಿ ಮುಳುಗಿ ತಳದಿಂದ ಅದನ್ನು ಕಂಡು ಮೇಲೆದ್ದು ನ್ಯಾಯ-ಅನ್ಯಾಯಗಳ ವಿವರಗಳನ್ನು ಹೇಳುವವರಾರು? ಉಳಿದದ್ದೆಲ್ಲ ಗಾಬರಿಯನ್ನುಂಟು ಮಾಡುವ ಗಾಳಿಸುದ್ದಿ.

ವಿವರಣೆ: ಪ್ರಪಂಚದಲ್ಲಿ ಬಾಳು ಎಂಬುದೊಂದು ಮಹಾಸಮುದ್ರ. ಅದರ ಆಳ ಮತ್ತು ವಿಸ್ತಾರಗಳನ್ನು ತಿಳಿಯುವುದು ಅಸಾಧ್ಯ. ಅದನ್ನು ಮಾತಿನಿಂದ ತಿಳಿಯಪಡಿಸುವುದು ಇನ್ನು ಕಷ್ಟ. ಇಲ್ಲಿರುವುದೆಲ್ಲವನ್ನು ತಿಳಿಯಬೇಕಾದರೆ ಮೊದಲು ಅದು ಅನುಭವಕ್ಕೆ ಬರಬೇಕು. ಆಗ ಮಾತ್ರ ಸತ್ಯಾಂಶ ದಕ್ಕುವುದು ಸಾಧ್ಯ. ಅದೇ ರಹಸ್ಯ. ಈ ರಹಸ್ಯವನ್ನು ಕಾಣಲು ಮನಃಪೂರ್ವಕವಾದ ಅನುಸಂಧಾನ ಒಂದೇ ಮಾರ್ಗ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಒಂದು ಅತ್ಯಂತ ಸುಂದರ ಪ್ರಸಂಗವಿದೆ. ಯಜ್ಞವಲ್ಕ್ಯರು ತಮ್ಮ ಪತ್ನಿ ಗಾರ್ಗಿಗೆ ಭೂಲೋಕದ ಸೃಷ್ಟಿ, ವ್ಯವಸ್ಥೆ ಮತ್ತು ವಿಧಾನಗಳ ಬಗ್ಗೆ ವಿವರಿಸುತ್ತಿದ್ದಾರೆ. ಆಕೆಯ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡುತ್ತಾರೆ. ನಂತರ ಆಕೆಗೆ ತಿಳಿಸುವುದಕ್ಕಾಗಿ ಹಂತ ಹಂತವಾಗಿ, ಉಳಿದ ಲೋಕಗಳ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ವಿವರಣೆ ನೀಡುತ್ತಾರೆ. ಆಗ ಗಾರ್ಗಿ ಬ್ರಹ್ಮಲೋಕದ ರಚನೆಯ ಬಗ್ಗೆ ಪ್ರಶ್ನೆ ಮಾಡುತ್ತಾಳೆ. ತಕ್ಷಣ ಯಜ್ಞವಲ್ಕ್ಯರು ‘ಮಾsತಿಪ್ರಾಕ್ಷೀಃ’ ಎನ್ನುತ್ತಾರೆ. ಹಾಗೆಂದರೆ ‘ಅತಿ ಪ್ರಶ್ನೆ ಮಾಡಬೇಡ’ ಎಂದು. ಅದು ಯಾಕೆ ಹಾಗೆ ಹೇಳಿದರು? ಪ್ರಶ್ನೆಗಳು, ಉತ್ತರಗಳು ಒಂದು ಹಂತದವರೆಗೆ ಸರಿ. ಆ ಮಿತಿಯನ್ನು ಮೀರಿದ ಮೇಲೆ ಪ್ರಶ್ನೆಗಳು ಅಸಂಗತ. ಮುಂದಿನ ಹಂತ ಮಾತನ್ನು ಮೀರಿದ್ದು, ಅನುಭವ ಒಂದೇ ಮಾರ್ಗ.

ಈ ಅನುಭವ ಎಲ್ಲರಿಗೂ ದೊರೆಯಲಾರದು. ಆದರೆ ಈ ವಿಶ್ವದ ಆಳ ಮತ್ತು ವಿಸ್ತಾರಗಳನ್ನು ತಿಳಿಯದೆ ನ್ಯಾಯಾನ್ಯಾಯಗಳ ಬಗ್ಗೆ ಮಾತನಾಡುವುದು ತುಂಬ ಹಾಸ್ಯಾಸ್ಪದ ಮಾತ್ರವಲ್ಲ, ಅಪಾಯಕಾರಿಯಾದ ಗಾಳಿಸುದ್ದಿ. ಯಾಕೆಂದರೆ ಅನೇಕ ಮುಗ್ಧಜನ ಈ ಅರ್ಧಮರ್ಧ ತಿಳಿದವರ ಮಾತುಗಳನ್ನೇ ಸತ್ಯ ಎಂದು ಭಾವಿಸುವ ಸಾಧ್ಯತೆ ಇದೆ. 1961 ರಲ್ಲಿ ಮೇ ತಿಂಗಳು ನಾಲ್ಕನೇ ತಾರೀಖಿನಂದು ಪ್ರಳಯವಾಗಿ ಬಿಡುತ್ತದೆ ಎಂದು ಯಾವುದೋ ವರದಿ ಹೇಳಿತು. ಅನೇಕ ಜ್ಯೋತಿಷಿಗಳು ಅದು ಆಗಿಯೇ ತೀರುತ್ತದೆಂದು ಭವಿಷ್ಯ ಹೇಳಿದರು. ಕೆಲವರು ಅದರ ಪರಿಹಾರಕ್ಕೆ ಹೆಚ್ಚು ಖರ್ಚಿನ ಪೂಜೆಗಳನ್ನು ಶಿಫಾರಸು ಮಾಡಿದರು! ಕಾಕತಾಳೀಯವೆಂಬಂತೆ ಮೇ ಮೂರನೇ ತಾರೀಖಿಗೆ ಜೋರಾಗಿ ಮಳೆ ಬಂತು.

ಜನರೆಲ್ಲ ಮಾಳಿಗೆಯ ಮೇಲೆ ಹತ್ತಿ ಕುಳಿತರು! ಪ್ರಪಂಚವೇ ಮುಳುಗುವುದಾದರೆ ಮಾಳಿಗೆಯ ಮೇಲೆ ಕುಳಿತವರು ಉಳಿಯುತ್ತಾರೆಯೇ? ಯಾವ ಪ್ರಳಯವೂ ಆಗಲಿಲ್ಲ, ಪುರೋಹಿತರು, ಜ್ಯೋತಿಷಿಗಳು ಹಣ ಮಾಡಿದರು. ಇದೇ ರೀತಿ ಗಾಳಿಸುದ್ದಿ 1986 ರಲ್ಲಿ ಬಂದಿತ್ತು. ಹ್ಯಾಲೇ ಧೂಮಕೇತು ಬಂದು ಅನಾಹುತ ಶತಸಿದ್ಧ ಎಂದು ತರತರಹದ ವಾರ್ತೆಗಳು ಬಂದವು. 2012 ರಲ್ಲಿ ಪ್ರಪಂಚ ಮುಳುಗಿ ಹೋಗುತ್ತದೆ ಎಂಬ ಸುದ್ದಿಯ ಜೊತೆಗೆ ಸೃಜನಶೀಲರು ಭಯಂಕರ ಸಿನಿಮಾ ಮಾಡಿ, ಜನರಲ್ಲಿ ಭಯ ತುಂಬಿಸಿ, ಜೇಬು ತುಂಬಿಸಿಕೊಂಡರು. ಈ ಮಾತನ್ನು ಕಗ್ಗ ಹೇಳುತ್ತದೆ. ನಿಜವಾದ ಅನುಭವವಿಲ್ಲದ, ಈ ಅಪಾರವಾದ ಬಾಳಕಡಲಿನ ಆಳ ವಿಸ್ತಾರಗಳನ್ನರಿಯದ ವ್ಯಕ್ತಿ ನ್ಯಾಯ, ಅನ್ಯಾಯಗಳ ಬಗ್ಗೆ ಮಾತನಾಡುವುದು ಗಾಬರಿ ಹುಟ್ಟಿಸುವ ಗಾಳಿಸುದ್ದಿ ಇದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT