ಮಂಗಳವಾರ, ಮಾರ್ಚ್ 9, 2021
31 °C

ಧರ್ಮಾಚರಣೆಯ ಫಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಕಾಶಿದೇಶದಲ್ಲಿ ಧಮ್ಮಪಾಲ ಎಂಬ ಗ್ರಾಮವಿತ್ತು. ಅಲ್ಲಿ ಹತ್ತು ಕುಶಲಕರ್ಮಗಳನ್ನು ಪಾಲಿಸುವ ಧರ್ಮಪಾಲ ಎಂಬ ಬ್ರಾಹ್ಮಣನಿದ್ದ. ಅವನಿಂದಾಗಿಯೇ ಊರಿಗೆ ಆ ಹೆಸರು ಬಂದದ್ದು. ಅವನ ಗ್ರಾಮದಲಿ,್ಲ ಎಲ್ಲರು ಧರ್ಮದಲ್ಲಿಯೇ ಬದುಕುತ್ತಿದ್ದರು. ಕೂಲಿಯವರು ದಾನ ಮಾಡುತ್ತಿದ್ದರು, ಉಪೋಸಥ ವೃತ ಮಾಡುತ್ತಿದ್ದರು, ಧರ್ಮದಿಂದ ನಡೆಯುತ್ತಿದ್ದರು. ಬೋಧಿಸತ್ವ ಧರ್ಮಪಾಲನ ಮಗನಾಗಿ ಹುಟ್ಟದ. ಅವನಿಗೆ ಧರ್ಮಪಾಲಕುಮಾರ ಎಂದು ಹೆಸರಿಟ್ಟರು.

ಅವನು ಬೆಳೆದಂತೆ ಸಾವಿರ ಹಣ ಕೊಟ್ಟು ಅವನನ್ನು ತಕ್ಕಶಿಲೆಗೆ ಪ್ರಸಿದ್ಧ ಆಚಾರ್ಯರ ಬಳಿಗೆ ಕಲಿಯಲು ತಂದೆ ಕಳುಹಿಸಿದ. ಅಲ್ಲಿ ಆತ ವಿದ್ಯೆಯನ್ನು ಚೆನ್ನಾಗಿ ಕಲಿತು ಐದು ನೂರು ಶಿಷ್ಯರಿಗೆ ಆಚಾರ್ಯನಾದ. ಒಂದು ದಿನ ಪ್ರಧಾನ ಆಚಾರ್ಯನ ಮಗ ನಿಧನನಾದ. ಎಲ್ಲರಿಗೂ ಅಪಾರ ದು:ಖ. ತಂದೆ-ತಾಯಿ, ಎಲ್ಲ ಶಿಷ್ಯರು ಅಳುತಿದ್ದರು. ಧರ್ಮಪಾಲಕುಮಾರ ಮಾತ್ರ ಅಳದೆ ಶಾಂತವಾಗಿದ್ದ. ಕಾರಣ ಕೇಳಿದಾಗ ಹೇಳಿದ, “ಈ ಬಾಲಕ ತಾರುಣ್ಯದಲ್ಲಿ ಮೃತನಾಗಬಾರದಿತ್ತು. ಅದಕ್ಕೆ ಕಾರಣ ಹುಡುಕುತ್ತಿದ್ದೇನೆ”. ಗುರುಗಳೂ ಹೇಳದರು, “ಸಾವು ಯಾರ ಕೈಯಲ್ಲಿದೆ? ಯಾವಾಗ ಬೇಕಾದರೂ ಪ್ರಾಣ ಹೋಗಬಹುದು”. ಧರ್ಮಪಾಲಕುಮಾರ, “ಗುರುಗಳೇ ನಮ್ಮ ಊರಿನಲ್ಲಿ ಎಂದಿಗೂ ತರುಣರು ಸಾಯುವುದಿಲ್ಲ. ವಯಸ್ಸಾದ ಮೇಲೆ, ದೇಹ ಹಣ್ಣಾದ ಮೇಲೆ ಸಾಯುತ್ತಾರೆ. ಅದು ನಮ್ಮ ಕುಲಪರಂಪರೆ”. ಆಚಾರ್ಯರಿಗೆ ಅದನ್ನು ನಂಬುವುದು ಕಷ್ಟವಾಯಿತು.

ಒಂದು ವಾರದ ನಂತರ ಶಿಷ್ಯರಿಗೆ ಹೇಳಿ ಆಚಾರ್ಯರು ಪ್ರವಾಸಕ್ಕೆ ಎಂದು ನೆಪಮಾಡಿ ಹೊರಟರು. ತಮ್ಮ ಜೊತೆಗೆ ಒಂದಿಷ್ಟು ಕುರಿಯ ಮೂಳೆಗಳನ್ನು ಶುದ್ಧಪಡಿಸಿ ಇಟ್ಟುಕೊಂಡರು. ಪ್ರವಾಸ ಮಾಡಿ ನೇರವಾಗಿ ಧರ್ಮಪಾಲನ ಮನೆಗೆ ಬಂದರು. ಧರ್ಮಪಾಲನ ಸೇವಕನೊಬ್ಬ ಅವರನ್ನು ವಿನಯದಿಂದ ಬರಮಾಡಿಕೊಂಡ. ಮತ್ತೊಬ್ಬ ಸತ್ಕಾರಗಳನ್ನು ಮಾಡಿದ. ಅವರ ಸೇವೆಯನ್ನು ನೋಡಿ ಆಚಾರ್ಯರು ಬೆರಗಾದರು. ಸ್ವಲ್ಪ ಹೊತ್ತಿಗೆ ಧರ್ಮಪಾಲ ಮನೆಗೆ ಬಂದ. ಆಚಾರ್ಯರನ್ನು ಮಂಚದ ಮೇಲೆ ಕೂಡ್ರಿಸಿ, ಪಾದತೊಳೆದು ಗೌರವ ಸೂಚಿಸಿದ. ಊಟವಾದ ನಂತರ, ಗುರುಗಳು, “ಧರ್ಮಪಾಲ, ನಿನ್ನ ಮಗ ಬಹಳ ಬುದ್ಧಿವಂತ, ಎಲ್ಲ ವಿದ್ಯೆಗಳನ್ನು ಕಲಿತುಬಿಟ್ಟ. ಆದರೆ ದುರ್ದೈವದಿಂದ ಕಳೆದ ತಿಂಗಳು ತೀರಿ ಹೋಗಿಬಿಟ್ಟ” ಎಂದರು. ತಾವು ತಂದಿದ್ದ ಮೂಳೆಗಳನ್ನು ತೋರಿಸಿದರು. ಧರ್ಮಪಾಲ ದು:ಖಪಡಲಿಲ್ಲ. ಬದಲಾಗಿ ಜೋರಾಗಿ ನಕ್ಕ. ಆಚಾರ್ಯ ಕಾರಣ ಕೇಳಿದಾಗ, “ಸ್ವಾಮಿ, ನನ್ನ ಮಗ ಸಾಯುವುದು ಸಾಧ್ಯವಿಲ್ಲ. ನಮ್ಮ ಏಳು ವಂಶಗಳಲ್ಲೂ ತರುಣರು ಸತ್ತಿಲ್ಲ. ನೀವು ಯಾವ ಕಾರಣಕ್ಕೋ ಸುಳ್ಳು ಹೇಳುತ್ತಿದ್ದೀರಿ” ಎಂದ. ಈ ಮಾತನ್ನು ಊರಿನಲ್ಲಿಯ ಎಲ್ಲರೂ ಅನುಮೋದಿಸಿದರು. ಆಚಾರ್ಯರು ಆಶ್ಚರ್ಯದಿಂದ ಕೇಳಿದರು, “ನೀವು ಯಾವ ವೃತವನ್ನು ಮಾಡುತ್ತೀರಿ? ಯಾವ ಸುಕರ್ಮದ ಫಲವಾಗಿ ತರುಣರು ಸಾಯುವುದಿಲ್ಲ?”. ಧರ್ಮಪಾಲ ಹೇಳಿದ, “ಗುರುಗಳೇ, ನಾವು ಧರ್ಮಾನುಸಾರವೇ ನಡೆಯುತ್ತೇವೆ, ಸುಳ್ಳು ಹೇಳುವುದಿಲ್ಲ, ಅಸತ್ಪುರುಷರ ದಾರಿಯಯನ್ನು ತುಳಿಯುವುದಿಲ್ಲ. ದಾನ ಕೊಡುವ ಮೊದಲು, ಕೊಡುವಾಗ ಮತ್ತು ಕೊಟ್ಟ ಮೇಲೂ ಪ್ರಸನ್ನಚಿತ್ತರಾಗಿಯೇ ಇರುತ್ತೇವೆ. ಹಸಿದು ಬಂದವರನ್ನು ಯಾವ ಭೇದವೂ ಇಲ್ಲದೆ ಸಂತುಷ್ಟಪಡಿಸುತ್ತೇವೆ. ನಾವಾಗಲಿ, ನಮ್ಮ ಹೆಂಡತಿಯರಾಗಲಿ ಮಿಥ್ಯಾಚಾರ ಮಾಡುವುದಿಲ್ಲ. ನಾವು ಪರಲೋಕಕ್ಕಾಗಿ ಧರ್ಮಾಚರಣೆ ಮಾಡುತ್ತೇವೆ, ಸ್ವಾರ್ಥಕ್ಕಲ್ಲ. ಧರ್ಮ, ಧರ್ಮಾಚರಣೆ ಮಾಡುವವರನ್ನು ರಕ್ಷಿಸುತ್ತದೆ. ಅದಕ್ಕೇ ನಮ್ಮಲ್ಲಿ ಯಾರೂ ಅಕಾಲ ಮೃತ್ಯುವಿಗೆ ತುತ್ತಾಗುವುದಿಲ್ಲ”.

ಆಚಾರ್ಯ ಕಲಿಸಿದ್ದು ಬಹಳ ವರ್ಷ ಆದರೆ ಒಂದೇ ದಿನದಲ್ಲಿ ಕಲಿಸಿದ್ದಕ್ಕಿಂತ ಹೆಚ್ಚು ಕಲಿತು ಹೋದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು