ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯೋಮಾರ್ಗದ ದಾರಿ

Last Updated 30 ಅಕ್ಟೋಬರ್ 2019, 17:57 IST
ಅಕ್ಷರ ಗಾತ್ರ

ದೇವಾಂಶ ಪಶ್ಪಂಶಗಳ ಗಂಟು ಮಾನುಷತೆ |
ಧೀವಿಮರ್ಶೆಯಿನೊಂದ ಸತ್ಕರಿಸಿ ಬಲಿಸಿ ||
ಭಾವಪರಿಶೋಧನೆಯಿನಿನ್ನೊಂದ ದಂಡಿಪುದೆ |
ಜೀವಪ್ರಕರ್ಷಗತಿ – ಮಂಕುತಿಮ್ಮ || 204 ||

ಪದ-ಅರ್ಥ: ದೇವಾಂಶ=ದೇವತೆಗಳ ಅಂಶ, ಪಶ್ವಂಶ=ಪಶುಗಳ ಅಂಶ, ಧೀವಿಮರ್ಶೆಯಿನೊಂದ=ಧೀ(ಬುದ್ಧಿ)+ವಿಮರ್ಶೆಯಿನ್+ಒಂದ, ಭಾವಪರಿಶೋಧನೆಯಿನಿನ್ನೊಂದ =ಭಾವ(ಮನಸ್ಸು) +ಪರಿ
ಶೋಧನೆಯಿಂದ+ಒಂದ, ಜೀವಪ್ರಕರ್ಷಗತಿ=ಜೀವ(ಬದುಕಿನ)+
ಪ್ರಕರ್ಷಗತಿ(ಏಳಿಗೆಯ ದಾರಿ)

ವಾಚ್ಯಾರ್ಥ: ಮನುಷ್ಯನ ಬದುಕು ದೇವತೆಗಳ ಶ್ರೇಷ್ಠ ಅಂಶಗಳು ಹಾಗೂ ಪಶುಗಳ ಕೀಳಾದ ಅಂಶಗಳ ಮಿಶ್ರಣ. ಬುದ್ಧಿಯ ವಿಮರ್ಶೆಯಿಂದ ಒಳ್ಳೆಯ ಅಂಶಗಳನ್ನು ಸತ್ಕರಿಸಿ ಪೋಷಿಸಬೇಕು ಹಾಗೂ ಭಾವಶೋಧನೆಯಿಂದ ಕೀಳಾದ ಅಂಶಗಳನ್ನು ದಂಡಿಸಬೇಕು. ಅದರಿಂದಲೇ ಜೀವನದ ಏಳಿಗೆಯ ದಾರಿ ದೊರೆಯುತ್ತದೆ.

ವಿವರಣೆ: ಅವರೊಬ್ಬ ಜ್ಞಾನಿ, ಸರ್ವಸಂಗ ಪರಿತ್ಯಾಗಿ, ಮಹಾನ್ ವಾಗ್ಮಿ ಎಂದು ಹೆಸರಾಗಿದ್ದರು. ಅವರಿಗೆ ಲಕ್ಷಾಂತರ ಜನ ಶಿಷ್ಯಂದಿರು. ಅವರನ್ನು ಜನ ದೇವಮಾನವ ಎಂದು ಕರೆದರು. ತನು, ಮನ, ಧನಗಳಿಂದ ಅವರನ್ನು ಪೂಜಿಸಿದರು. ಆತ ಏನು ಹೇಳಿದರೂ ಅದೊಂದು ತರಹದ ಆಜ್ಞೆಯೆಂದೇ ಭಕ್ತರು ಪಾಲಿಸುತ್ತಿದ್ದರು. ಹತ್ತಾರು ವರ್ಷಗಳಲ್ಲಿ ದೇಶದ ಹಾಗೂ ಪರದೇಶದ ಅನೇಕ ಸ್ಥಳಗಳಲ್ಲಿ ಅವರ ಆಶ್ರಮಗಳು ತಲೆ ಎತ್ತಿದವು. ಏನು ಅಲ್ಲಿಯ ವ್ಯವಸ್ಥೆಗಳು! ಬಂದವರು, ನೋಡಿದವರು ದಂಗಾದರು. ಅಂಥ ಶ್ರೇಷ್ಠ ಗುರುಗಳಿಗೆ ಇದು ತಕ್ಕುದಾದದ್ದೇ ಎಂದು ಸಂತೋಷಪಟ್ಟರು, ಮತ್ತಷ್ಟು ಕಾಣಿಕೆಗಳನ್ನು ಕೊಟ್ಟರು. ಗುರುಗಳ ಪ್ರವಾಸ ದೇಶದಿಂದ ದೇಶಕ್ಕೆ ಸಾಗಬೇಕಾಯಿತು. ಪುರುಸೊತ್ತಿಲ್ಲದ ಪ್ರಯಾಣ ಪಾಪ ಗುರುಗಳಿಗೆ! ಆದರೆ ಒಂದು ದಿನ ಮಹಿಳೆಯೊಬ್ಬರು ಗುರುಗಳಿಂದ ತಮಗೆ ಅನ್ಯಾಯವಾಗಿದೆಯೆಂದು ದೂರಿದರು. ತಾವಷ್ಟೇ ಅಲ್ಲ ಅನೇಕ ಜನ ತರುಣಿಯರಿಗೆ ಆಗಿದೆ. ಆದರೆ ಅವರೆಲ್ಲರ ಧ್ವನಿಗಳನ್ನು ಹತ್ತಿಕ್ಕಲಾಗಿದೆ ಮತ್ತು ಕೆಲವರನ್ನು ನಿವಾರಿಸಲಾಗಿದೆ ಎಂದರು. ತನಿಖೆ ನಡೆಯಿತು. ಆಗ ಕಂಡದ್ದು ವಿಲಾಸದ, ಅನ್ಯಾಯದ, ಅತ್ಯಾಚಾರಗಳ ಘಟನೆಗಳ ಸರಮಾಲೆ. ಜಗತ್ತೇ ಬೆಚ್ಚಿತು. ಆ ಸನ್ಯಾಸಿಯ ಇನ್ನೊಂದು ರಾಕ್ಷಸೀ ಮುಖದ ಅನಾವರಣವಾಯಿತು. ಸನ್ಯಾಸಿ ಜೈಲಿಗೆ ನಡೆದರು. ಇಂಥವು ಬಹಳಷ್ಟನ್ನು ನಾವು ಕಂಡಿದ್ದೇವೆ. ಹಾಗಾದರೆ ಅವರು ನಿಜವಾಗಿಯೂ ಯಾರು? ದೇವತೆಯೇ, ರಾಕ್ಷಸನೇ? ಬಹುಶಃ ಎರಡೂ ಗುಣಗಳು ಅವರಲ್ಲಿ ಸೇರಿದ್ದವು. ಪೂಜೆ ಮಾಡುವಾಗ, ಭಕ್ತರಿಗೆ ಬೋಧನೆ ಮಾಡುವಾಗ ಅವರಲ್ಲಿದ್ದುದು ಬಹುಶಃ ಆ ಉತ್ತಮವಾದ ದೇವತೆಯ ಅಂಶವೇ. ಆದರೆ ನಂತರ ರಾಕ್ಷಸೀಭಾವ ತಲೆಎತ್ತಿ ನಿಂತು ಅನ್ಯಾಯಗಳನ್ನು ಮಾಡಿಸಿತ್ತು.

ಇದನ್ನೇ ಕಗ್ಗ ಹೇಳುತ್ತದೆ. ಮನುಷ್ಯನ ಮನಸ್ಸು ಈ ಎರಡೂ ತರಹದ ದೇವಾಂಶ ಹಾಗೂ ಪಶುಗಳ ಅಂಶದ ಮೂಟೆ. ಹಾಗಾದರೆ ಬದುಕಿನಲ್ಲಿ ಶ್ರೇಯೋಮಾರ್ಗಕ್ಕೆ ದಾರಿ ಯಾವುದು? ಪರಿಹಾರವನ್ನು ಕಗ್ಗ ನೀಡುತ್ತದೆ. ಬುದ್ಧಿಯನ್ನು ವ್ಯವಸ್ಥಿತಗೊಳಿಸಿ, ಸದಾಕಾಲದ ವಿಮರ್ಶೆಯಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ವೃದ್ಧಿಸಿಕೊಂಡು ಅವುಗಳನ್ನು ಸತ್ಕರಿಸಬೇಕು. ಅದೇ ರೀತಿ ಭಾವನೆಗಳನ್ನು ಸತತವಾಗಿ ಪರಿಶೋಧಿಸುತ್ತ ಆಗಾಗ ತಲೆಎತ್ತುವ ಪಶುಸ್ವಭಾವಗಳನ್ನು ಅಲ್ಲಿಯೇ ತಟ್ಟಿ, ನಿಗ್ರಹಿಸಿ ದಂಡಿಸಬೇಕು. ಇದೊಂದು ಎಣ್ಣೆ ಸವರಿದ ಜಾರುಬಂಡೆಯ ಮೇಲಿನ ಪ್ರಯಾಣ. ಸ್ವಲ್ಪ ಮೈಮರೆತರೂ ನಮ್ಮಲ್ಲಿರುವ ಪಶುವಿನ ಅಂಶ ಕೆಳಕ್ಕೆ ಸೆಳೆದುಬಿಡುತ್ತದೆ. ದೇವಾಂಶಗಳ ವೃದ್ಧಿ, ಪಶು ಅಂಶಗಳ ನಿಗ್ರಹ ಎರಡೇ ನಮ್ಮ ಸಾರ್ಥಕ ಬದುಕಿನ
ಸೂತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT