ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪರಸ್ಪರ ಪೂರಕವಾದ ವೈರುಧ್ಯಗಳು

Last Updated 13 ಮೇ 2021, 19:31 IST
ಅಕ್ಷರ ಗಾತ್ರ

ಹೇಮಕುಂಭದಿ ಕೊಳಚೆರೊಚ್ಚುನೀರ್ಗಳ ತುಂಬಿ |
ರಾಮಣಿಯಕದೊಳಿಟ್ಟಾಮಗಂಧವನು ||
ಪ್ರೇಮಪುಷ್ಪಕೆ ಮೊನಚು ಗರಗಸವನಂಚಿರಿಸಿ |
ಏಂ ಮಾಡಿದನೊ ಬೊಮ್ಮ! – ಮಂಕುತಿಮ್ಮ
|| 417 ||

ಪದ-ಅರ್ಥ: ಹೇಮಕುಂಭ=ಬಂಗಾರದ ಕೊಡ, ಕೊಳಚೆರೊಚ್ಚು ನೀರ್ಗಳ= ಕೊಳಚೆ+ರೊಚ್ಚು+ನೀರ್ಗಳ(ನೀರುಗಳನ್ನು), ರಾಮಣೀಯಕದೊಳಿಟ್ಟಾಮಗಂಧವನು= ರಾಮಣೀಯಕದೊಳು(ರಮಣೀಯವಾದ ಪಾತ್ರೆಯಲ್ಲಿ)+ಇಟ್ಟು+ಆಮಗಂಧವನು(ಹಸಿಮಾಂಸದ, ಕೀವಿನ, ಹೆಣದ ವಾಸನೆಯ), ಮೊನಚು=ಹರಿತವಾದ, ಗರಗಸವನಂಚಿರಿಸಿ=ಗರಗಸದಂತಹ ಅಂಚನ್ನು ಇರಿಸಿ.

ವಾಚ್ಯಾರ್ಥ: ಬಂಗಾರದ ಕೊಡದಲ್ಲಿ ಕೊಳಕು ರಾಡಿಯ ನೀರನ್ನು ತುಂಬಿ, ತುಂಬ ಆಕರ್ಷಕವಾದ ವಸ್ತುವಿನಲ್ಲಿ ಅಸಹನೀಯವಾದ ಕೊಳಕು ವಾಸನೆಯನ್ನಿಟ್ಟು, ಸೊಗಸಾದ ಹೂವಿಗೆ ಗರಗಸದಂತಹ ಮೊನಚಾದ ಅಂಚುಗಳನ್ನಿಟ್ಟು, ಪರಬ್ರಹ್ಮ ಅದೇನು ಸೃಷ್ಟಿ ಮಾಡಿದನೊ?

ವಿವರಣೆ: ಭಗವಂತನ ರೀತಿಯೇ ವಿಚಿತ್ರ. ಪರಸ್ಪರ ವಿರುದ್ಧವಾದ ವಸ್ತುಗಳನ್ನು ಜೊತೆಗೇ ಇಟ್ಟು ತಮಾಷೆ ನೋಡುತ್ತಾನೆ. ಬಂಗಾರದ ಕೊಡದಲ್ಲಿ ಕೊಳಚೆ ರೊಚ್ಚಿನ ರಾಡಿಯನ್ನು ತುಂಬುತ್ತಾನೆ, ಅತ್ಯಂತ ರಮಣೀಯವಾದ ವಸ್ತುವಿಗೆ ತಡೆದುಕೊಳ್ಳಲಾರದಂತಹ ಕೊಳಕುವಾಸನೆಯನ್ನು ಜೋಡಿಸುತ್ತಾನೆ. ಪ್ರೇಮದ ಪ್ರತೀಕವಾದ ಕೋಮಲವಾದ ಹೂವಿಗೆ ಗರಗಸದಂತಹ ಅಂಚನ್ನು ಇಟ್ಟು, ಮುಟ್ಟುವ ಕೈಯನ್ನು ಕೊರೆಯುವಂತೆ ಮಾಡುತ್ತಾನೆ. ಏನು ಅವನ ಯೋಜನೆಯೋ ತಿಳಿಯದು ಎನ್ನಿಸುತ್ತದೆ. ಸರಸ, ಸುಂದರವಾದವುಗಳನ್ನು ಅಸಹ್ಯ, ವಿಕಾರಗಳೊಡನೆ ಇಡುವುದರ ಉದ್ದೇಶವೇನಿರಬಹುದು? ಬಹುಶ: ಪ್ರಪಂಚದಲ್ಲಿ ಎಲ್ಲವೂ ಸುಂದರವಲ್ಲ, ಎಲ್ಲವೂ ಕೊಳಕಲ್ಲ, ಅವೆರಡೂ ನಮ್ಮಲ್ಲಿಯೇ ಇವೆ ಎಂಬ ಅರಿವು ನಮಗೆ ಇರುವುದು ಒಳ್ಳೆಯದು ಎಂದಿರಬಹುದು. ಒಳ್ಳೆಯದರ ಹಿಂದೆಯೇ ಕೆಟ್ಟದ್ದು ಇದೆ.

ಹದಿನಾರನೇ ಶತಮಾನದಲ್ಲಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಹುಟ್ಟಿ ಬೆಳೆದು ವಚನ ಸಂಸ್ಕೃತಿಯನ್ನು ಬೆಳೆಸಿದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಹೀಗಿದೆ.

ಹಾಲೋಗರವನುಂಡು ಬಾಲೆಯರ ತೋಳಮೇಲೊರಗಿದೊಡೆ. ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಿರಣ್ಣಾ. ಅಲ್ಲಿಯ ಆಲಿಂಗನ ವಿಷ, ಚುಂಬನ ನಂಜು, ನೋಟ ಸರಳು, ಸವಿನುಡಿ ಕಠಾರಿ ನೋಡಾ ಅಲ್ಲಿಯ ನೆನಹು ಅಜ್ಞಾನ ನೋಡಾ ಅದು ತನ್ನ ಹಿತಶತ್ರುತನದಿಂದ ಭ್ರಾಂತುಭಾವನೆಯ ಹುಟ್ಟಿಸಿ ಕೊಲುವುದಾಗಿ, ಈ ಸಂಸಾರ, ನಿನಗೆ ಹಗೆಯೆಂದು ತಿಳಿಯಾ, ಮರುಳುಮಾನವಾ

ಇದೇ ಪ್ರಪಂಚದ ಹಿತಶತ್ರುತನ. ಹಿತವೂ ಇದೆ, ಪಕ್ಕದಲ್ಲೇ ಶತೃತ್ವವೂ ಇದೆ. ಆಲಿಂಗನದ ಹಿತವಿದೆ. ಆದರೊಂದಿಗೇ ಕಠಿಣವಾದ ವಿಷವೂ ಇದೆ. ಚುಂಬನದೊಂದಿಗೆ ನಂಜು, ಪ್ರೀತಿಯ ನೋಟದಲ್ಲಿ ಬಿರುಸಾದ ಸರಳಿದೆ, ಸವಿನುಡಿಯ ಹಿಂದೆ ಹರಿತವಾದ ಕಠಾರಿಯಿದೆ. ಜ್ಞಾನವೆಂದು ತಿಳಿದಿದ್ದ ನೆನಪು, ಅಜ್ಞಾನವೂ ಆದೀತು. ಇದೇ ಪ್ರಪಂಚ ಹುಟ್ಟಿಸುವ ಭ್ರಾಂತಿಯ ಭಾವನೆ.

ಈ ಮಾತನ್ನೇ ಕಗ್ಗ ಹೇಳುತ್ತದೆ. ವೈರುಧ್ಯಗಳೆಂದು ತೋರುವವು, ನಿಜವಾಗಿ ನೋಡಿದರೆ, ಪರಸ್ಪರ ಪೂರಕವಾದವುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT